ಹೊಸ ಓದು: ಸವಿತಾ ಆರ್ ಇನಾಮದಾರ ಅವರ “ಅನನ್ಯ ನಿನಾದ” ಕುರಿತು ರಾಮಕೃಷ್ಣ ಕಟ್ಕಾವಲಿ ಬರಹ

ಕಾವ್ಯೋನ್ಮತ್ತರಾಗಿಸುವ ಸವಿತಾ ಆರ್ . ಇನಾಮದಾರ ಅವರ  ಕವಿತೆಗಳು..

ಲೇಖಕರು: ರಾಮಕೃಷ್ಣ ಕಟ್ಕಾವಲಿ

ಹೊರಗಿನ ಅಬ್ಬರದಲ್ಲಿ ಒಳಗಿನ ದನಿ ಕೇಳಿಸದಂತಾದಾಗ ಆ ದನಿ ಕೇಳಿಸುವ ಹಾಗೆ ಮಾಡುವುದೇ ಕವಿತೆ.

ಸವಿತಾ ಆರ್ ಇನಾಮದಾರ ಅವರ “ಅನನ್ಯ ನಿನಾದ” ಮೊದಲ ಕವನ ಸಂಕಲನ ಓದಿದಾಗ ಹಾಗೆಯೇ ಅನಿಸದೆ ಇರಲು ಸಾಧ್ಯವಿಲ್ಲ.

ಅವರ ಸಂಕಲನದಲ್ಲಿ ಅಂತರಂಗದ ಪಿಸುಮಾತು, ಕನವರಿಕೆ, ಚಡಪಡಿಕೆ, ವಿಷಾದ, ಮತ್ತೆ ಮತ್ತೆ ಕಾಡುವ ನೆನಪುಗಳಿವೆ.

ಅವರ ಕವನಗಳಲ್ಲಿ ಸಂವೇದನೆಯ ಆರ್ದ್ರತೆಯು ಎದ್ದು ಕಾಣುತ್ತದೆ. ಝುಮ್ಮೆನಿಸುವ ಚಳಿಗೆ ಎದೆಯೊಳಗೆ ಎದ್ದು ಕೂರುವ ಬೆಚ್ಚನೆಯ ನೆನಪಿನಂತೆ, ಆಗತಾನೇ ತಲೆಸ್ನಾನ ಮಾಡಿ ಎಳೆ ಬಿಸಿಲಿಗೆ ಮೈಯೊಡ್ಡಿದ ಯುವತಿಯಂತೆ ಕಣ್ಣ ಮುಂದೆ ಬಂದು ನಿಲ್ಲುತ್ತವೆ. ತೇವವುಂಡು ಮೊಳಕೆಯೊಡೆಯುವ ಪುಟ್ಟ ಸಸಿಯಂತೆ ಕಾಣುತ್ತವೆ.

ಅವರ ಕವನ ಸಂಕಲನಲ್ಲಿ
ಒಟ್ಟು ೬೫ ಕವಿತೆಗಳು ಹಾಗೂ ಹೈಕುಗಳಿವೆ. ಒಂದೇ ಉಸಿರಿನಲ್ಲಿ ಓದಿಬಿಟ್ಟೆ. ಕಾವ್ಯಯಾನದಲ್ಲಿ ಕೆಲವು ಕವಿತೆಗಳು ನನ್ನನ್ನು ಮರವನಪ್ಪಿದ ಬಳ್ಳಿಯಂತೆ ಅಪ್ಪಿಕೊಂಡುಬಿಟ್ಟವು.

ಪಟಪಟಿಸಬೇಕೆಂದಾಗಲೆಲ್ಲ
ಎಳೆದೆಳೆದು ಕೂಡಿಸಿ, ಕುಕ್ಕರಿಸಿ
ಕಣ್ಣಗಲಿ ಸುಮ್ಮನಿರಿಸಿಯೂ
ಸುಮ್ಮನಿರಲಾಗದ ಮನಸನು
ಹೊತ್ತ ಓಟ ಬೇಕಿದ್ದೀತೆ?
(ಮುಖವಾಡ)

ಕವಿತ್ರಿಯ ಪ್ರಶ್ನೆಗಳಿಗೆ ನಮ್ಮೊಂದಿಗೆ ನಾವು ಅನುಸಂಧಾನಗೊಳಿಸುತ್ತದೆ.

ಒಳ ತುಡಿತ ಜೀವ ತಂತುವಾಗಿ ಸಂಕಲನದುದ್ದಕ್ಕೂ ಹರಿದಿವೆ.
ಇಲ್ಲಿನ ಕವಿತೆಗಳು ಸರಳವಾಗಿವೆ ಎನಿಸಿದರೂ ಗಂಭೀರವಾದ ಓದನ್ನು ಬಯಸುವಂತಿವೆ.

ಸುಮ್ಮನೇ ನಡೆಯುತ್ತಿದೆ
ಕವಿತೆ ಕಾಲಿಗಡರಿತ್ತು
ಮುನ್ನಡೆಯಲಾರೆನೆಂದು ನಿಂತು ಬಿಟ್ಟು
ಅದು ನನ್ನ ದಾಟಿ ನಕ್ಕಿತ್ತು.
(ಕವಿತೆ ಮತ್ತು ನಾನು)

ಈ ಸಾಲುಗಳು ಅವರು ಕವಯಿತ್ರಿಯಾಗುವ ಸಮಯವನ್ನು ಪ್ರತಿಬಿಂಬಿಸುತ್ತವೆ.

ಉಸಿರು ಚೆಲ್ಲಿದ ದೇಹ
ಕಸವಡಗಿದ ಭಾವ
ಬದುಕಬಲ್ಲ ಶಕ್ತಿ ತುಂಬಬಹುದಿತ್ತು
ಕಣ್ಣ ಹನಿಗೆ ಆಸರೆಯಾಗಿ
ಕುಸಿದುಬಿದ್ದ ಬಾಳಿಗೊಂದು
ಜೀವ ಕೊಡಬಹುದಿತ್ತು.
(ಆಗಬಹುದಿತ್ತು)

ಈ ಸಾಲುಗಳಲ್ಲಿ ಕವಿತ್ವದ ಗಂಭೀರತೆಯನ್ನು ಪ್ರದರ್ಶಿಸುತ್ತವೆ.

ಅವರನ್ನು ಹೆಚ್ಚು ಕಾಡಿದ್ದು ಅವರಪ್ಪನೊಂದಿಗಿ ಆಪ್ತತೆ ಅನಿಸುತ್ತದೆ. ಅದಕ್ಕಾಗಿಯೆ ಅಪ್ಪನ ಕುರಿತು ನಾಲ್ಕು ಕವಿಗಳನ್ನು ಬರೆದಿದ್ದಾರೆ.

ತಾಯಿತನವನ್ನು ಅವರು ಕವಿತೆಯಲ್ಲಿ ಬೆಳಕು ಚೆಲ್ಲುತ್ತಾ ಆರ್ದ್ರತೆಯಲ್ಲಿ ಈಜಾಡಿದ್ದಾರೆ.

ಕಣ್ಣ ದೃಷ್ಟಿಗಿಂತ ಒಳದೃಷ್ಟಿ ಅರಳಲಿ
ನಿನ್ನ ಜಗತ್ತು ದೇವರುಗಳಿಂದಾಚೆಗೂ ಹರಡಲಿ
(ದಾಟು)

ಈ ಕವಿಯ ಸಾಲು ಅವರಲ್ಲಿಯ ಆಧ್ಯಾತ್ಮಿಕ ಚಿಂತನೆ ಅನಾವರಣಗೊಳಿಸುತ್ತಿದೆ.

ಕಾಲ ನಿಶ್ಚಲ ಕೆಲವೊಮ್ಮೆ
ಸರಯುವುದೇ ಇಲ್ಲ
ಕಾಲೂರಿ ನಿಲ್ಲುತ್ತದೆ
ಕದಲುವುದೇ ಇಲ್ಲ.
(ಕಾಲ-ಕದಲಿಕೆ)

ಕವಯಿತ್ರಿ ಇಲ್ಲಿ ಮನಸ್ಸಿನ ಜಿಡ್ಡುತನದ ಬಗ್ಗೆ ವ್ಯಕ್ತಪಡಿಸುತ್ತಾ, ಬದುಕಿನ ಪಯಣದಲ್ಲಿ ಒಮ್ಮೊಮ್ಮೆ ಸ್ತಬ್ಧವಾಗಿ ನಿಲ್ಲುವುದ ಸಹಜ ಕ್ರಿಯೆ. ಅದು ಜೀವನದ ಅವಿಭಾಜ್ಯ ಅಂಗ ಎಂದು ಹೇಳಿದ್ದಾರೆ.

ಓದುತ್ತಾ ಸಾಗಿದಂತೆಲ್ಲ ಧ್ಯಾನಸ್ಥ ಸ್ಥಿತಿಗೆ ತಲುಪಿಸಿಬಿಡುತ್ತೇವೆ. ಬಹುತೇಕವಾಗಿ ಕವನಗಳು ನಮ್ಮೊಂದಿಗೆ ಅನುಸಂಧಾನಗೊಳ್ಳುತ್ತವೆ.

ಕವಯತ್ರಿಯೇ ಹೇಳಿಕೊಂಡಂತೆ
ಶಾಸ್ತ್ರೀಯ ಅಧ್ಯಯನ ಕೊರತೆಯ ಮಧ್ಯೆಯೂ ತನ್ನತನದ ಛಾಪು ಇದ್ದೇ ಇದೆ.

ಕೆಲವು ಕವಿತೆಗಳಲ್ಲಿ ಗಝಲ್ ನ ನೆರಳು ಗೋಚರಿಸುತ್ತದೆ.
ಕೆಲವೊಂದು ಕವಿತೆಗಳು ಚೌಕಟ್ಟಿನ ಹೊರಗೆ ನಿಂತು ಮಾತನಾಡುತ್ತವೆ. ಕವಿತೆಗೆ ಒತ್ತಾಯ ಪೂರ್ವಕವಾಗಿ ಪದವು ತೊಡಸಿದಂತೆ ಕಾಣಿಸುತ್ತದೆ.

ಕವಿತೆಗಳ ಮೂಲ ಬೇರು ಅವರ ಸೋದರಮಾವ ಡಾ: ಅರವಿಂದ ಮಾಲಗತ್ತಿಯವ ನೆರಳು ಸದ್ದಿಲ್ಲದೆ ಇಣುಕುತ್ತವೆ.

ಇದು ಪ್ರಥಮ ಸಂಕಲನವಾದರೂ ಎದೆಯೊಳಗೆ ಕೆಲವು ಸಾಲುಗಳು ಶಾಶ್ವತವಾಗಿ ಗೂಡುಕಟ್ಟಿಕೊಂಡು ಬಿಡುತ್ತವೆ.

ಸಾಹಿತ್ಯ ಲೋಕಕ್ಕೆ ಅಂಬೆಗಾಲಿಡುತ್ತಿರುವ ಸವಿತಾ ಇನಾಮದಾರ ಕವಿತೆಗಳು *ನಗು ನಿಲ್ಲಿಸಿ ಕಣ್ಣು ಮಿಟಿಕಿಸುವ ಮಗುವಿನಂತೆ ಕಾಣುತ್ತವೆ.*

ಓದುಗರಿಗಂತೂ ಅವರ ಕವಿತೆಗಳು *ಗೊತ್ತಿಲ್ಲದೆ ಎದೆಗೆ ಮೆತ್ತಗೆ ನಾಟಿಕೊಂಡು ಬಿಡುತ್ತವೆ.*

ಕವಯಿತ್ರಿ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದು. ಮೊದಲು ವೃತ್ತಿ ಶಿಕ್ಷಣ ಕ್ಷೇತ್ರದಲ್ಲಿ ಪ್ರಸ್ತುತ ವಾಣಿಜ್ಯ ತೆರಿಗೆಗಳ ಇಲಾಖೆಯಲ್ಲಿ ಸಹಾಯಕ ಆಯುಕ್ತರ ಹುದ್ದೆಯಲ್ಲಿದ್ದಾರೆ.
ವೃತ್ತಿ ಬದುಕಿನ ಒತ್ತಡದಲ್ಲಿಯೂ ಬರಹದಲ್ಲಿ ತೊಡಗಿದ್ದಾರೆ.

*ಅನನ್ಯ ತುಷಿರಾ* ಎನ್ನುವ ಪೆನ್ ನೇಮ್ ನಲ್ಲಿ ಬರೆಯುತ್ತದ್ದಾರೆ. ಇನ್ನೂ ಕೆಲವೆ ದಿನಗಳಲ್ಲಿ ಅವರದೇ ಕತೆಗಳ ಸಂಕಲನ ಹೊರಬರಲಿದೆ.

ಸಾಹಿತ್ಯ ಲೋಕದ ಅವರ ಪ್ರಥಮ ಹೆಜ್ಜೆ, ಸಾವಿರಾರು ಮೈಲುಗಳು ದಾಟಿ ಬರಲೆಂದು ಶುಭ ಕೊರುವೆ.

ರಾಮಕೃಷ್ಣ ಕಟ್ಕಾವಲಿ
ಮೊ: 96324 32713