ಮಾನ್ವಿ ಅ.22: ‘ಹಾವುಗಳ ಸಂತತಿ ರಕ್ಷಣೆ ಕುರಿತು ಜನಜಾಗೃತಿ ಮೂಡಿಸುವುದು ಅಗತ್ಯ’ ಎಂದು ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ ಹೇಳಿದರು.
ಶುಕ್ರವಾರ ಪಟ್ಟಣದ ಪ್ರಗತಿ ಪಿಯು ಕಾಲೇಜಿನಲ್ಲಿ ಹಾವುಗಳ ಸಂರಕ್ಷಣೆ ಕುರಿತು ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಸಾರ್ವಜನಿಕರು ಜೀವಭಯದಿಂದ ಹಾವುಗಳನ್ನು ಕೊಲ್ಲುವ ಬದಲಿಗೆ ಅರಣ್ಯ ಇಲಾಖೆ ಹಾಗೂ ಉರಗ ತಜ್ಞರನ್ನು ಸಂಪರ್ಕಿಸುವ ಮೂಲಕ ಸಂರಕ್ಷಣೆ ಎಮಾಡಬೇಕು’ ಎಂದು ಅವರು ಸಲಹೆ ನೀಡಿದರು. ಸ್ಥಳೀಯ ವನ್ಯಜೀವಿ ತಜ್ಞ ಸಲಾವುದ್ದೀನ್ ಹಾಗೂ ಉರಗ ತಜ್ಞ ರಮೇಶ ಮಾನ್ವಿ ಹಿಡಿದಿದ್ದ ವಿಷರಹಿತ ಹಾವುಗಳನ್ನು ಪ್ರದರ್ಶಿಸಲಾಯಿತು. ಹಾವುಗಳ ಸಂರಕ್ಷಣಾ ಕ್ರಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಯಿತು. ನಂತರ ಸಮೀಪದ ಅರಣ್ಯ ಪ್ರದೇಶಕ್ಕೆ ಹಾವುಗಳನ್ನು ಬಿಡಲಾಯಿತು. ಕಾಲೇಜಿನ ಮುಖ್ಯಸ್ಥ ತಿಪ್ಪಣ್ಣ ಎಂ.ಹೊಸಮನಿ ಬಲ್ಲಟಗಿ, ಪ್ರಾಂಶುಪಾಲ ಬಸವರಾಜ ಭೋಗಾವತಿ, ಉಪನ್ಯಾಸಕರಾದ ಸುಮಾಟಿ. ಹೊಸಮನಿ, ಮಲ್ಲಮ್ಮ ಪೋತ್ನಾಳ, ಶರಣುಕುಮಾರ ಮುದ್ದನಗುಡ್ಡಿ, ನಾಗರಾಜ ಚಿಮ್ಲಾಪುರ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.