ಶವರೂಪಿ ಶಿವನ ಮೇಲೆ ನಿಂತ ಕಾಳಿ ಏನನ್ನು ಸಂಕೇತಿಸುತ್ತಾಳೆ ?
ಲೇಖಕರು: ಮುಕ್ಕಣ್ಣ ಕರಿಗಾರ
ಮಹಾಕಾಳಿಯ ಒಂದು ಫೋಟೋದಲ್ಲಿ ಕಾಳಿಯು ಶಿವನ ಮೇಲೆ ಅಟ್ಟಹಾಸಬೀರುತ್ತ ರೌದ್ರರೂಪಿಣಿಯಾಗಿ ನಿಂತಿರುವಂತೆ ಹಾಗೂ ಅವಳ ಪಾದಾಘಾತಕ್ಕೆ ಸಿಕ್ಕ ಶಿವ ಶವವಾಗಿರುವಂತೆ ಚಿತ್ರಿಸಲಾಗಿದೆ.ಇದು ಫೋಟೋಗ್ರಾಫರ್ ನ ಕೈಚಳಕವಲ್ಲ; ಹಿಂದಿನ ಕಾಲದಲ್ಲಿ ಕೆಲವು ಶಿಲ್ಪಗಳಲ್ಲಿ ಹಾಗೆ ಕೆತ್ತಲಾಗಿದೆ.ಡಿ. ಡಿ ಕೋಸಾಂಬಿ ಅವರಂತಹ ಖ್ಯಾತ ಇತಿಹಾಸಕಾರರು ಇದನ್ನು ತಪ್ಪಾಗಿ ಅರ್ಥೈಸಿದ್ದಾರೆ.ಶಾಕ್ತಪಂಥವು ಶೈವಪಂಥದ ಮೇಲೆ ಸಾಧಿಸಿದ ದಿಗ್ವಿಜಯ ಎಂಬಂತೆ ಅರ್ಥೈಸಿರುವ ಕೋಸಾಂಬಿಯವರು ಮಾತೃಉಪಾಸನೆಯ ಸನಾತನೆಯನ್ನು ಸಾರುವಲ್ಲಿ ಯಶಸ್ವಿಯಾಗಿದ್ದಾರಾದರೂ ಕಾಳಿತತ್ತ್ವವನ್ನು ಅರ್ಥೈಸಿಕೊಳ್ಳುವಲ್ಲಿ ಸೋತಿದ್ದಾರೆ.ಕೋಸಾಂಬಿಯವರ ವಾದ ಸರಣಿಯನ್ನು ನಂಬಿ ಕೆಲವರು ಅರ್ಥಹೀನ ವಾದಗಳನ್ನು ಮಂಡಿಸಿದ್ದಾರೆ.
ಹಿಂದೆ ಈಗಿನಂತೆ ಮುದ್ರಣಮಾಧ್ಯಮ,ಪ್ರಸಾರ ಮಾಧ್ಯಮಗಳು ಇರಲಿಲ್ಲ. ಋಷಿಗಳು,ಕವಿ-ತತ್ತ್ವಜ್ಞಾನಿಗಳು ತಾಳೆಯೋಲೆಗಳಂತಹ ಬರವಣಿಗೆಯ ಸಾಧನಗಳನ್ನು ಉಪಯೋಗಿಸುತ್ತಿದ್ದರು.ಅಕ್ಷರ ಬಾರದ ಜನಸಾಮಾನ್ಯರಿಗೆ ಧರ್ಮ,ತತ್ತ್ವ- ಸಂದೇಶಗಳನ್ನು ಸಾರುವ ಉದ್ದೇಶದಿಂದ ಶಿಲ್ಪ ಮತ್ತು ಶಿಲ್ಪಕಲೆಯನ್ನು ಮಾಧ್ಯಮವನ್ನಾಗಿ ಕಂಡುಕೊಳ್ಳಲಾಯಿತು.ಹಾಗಾಗಿ ಪುರಾತನ ದೇವಸ್ಥಾನಗಳಲ್ಲಿ,ಗ್ರಾಮಗಳಲ್ಲಿ ವಿವಿಧ ದೇವ ದೇವಿಯರ ಶಿಲ್ಪಗಳನ್ನು ಕೆತ್ತುವ ಕೆಲಸ ಮೊದಲಾಯಿತು.ಈ ಶಿಲ್ಪಗಳು ಮೊದಮೊದಲು ಅಷ್ಟೇನು ನಯನಾಜೂಕಿನ ಕೆತ್ತನೆ,ಕೌಶಲ್ಯಹೊಂದಿರುತ್ತಿರಲಿಲ್ಲ.ಅಲ್ಪ ಸ್ವಲ್ಪ ಕಲಾನೈಪುಣ್ಯದೊಂದಿಗೆ ಕೆತ್ತಲ್ಪಡುತ್ತಿದ್ದವು.ಕಲೆ ಮುಖ್ಯವಾಗಿರಲಿಲ್ಲ ಆ ಕಾಲದಲ್ಲಿ ಆ ಶಿಲ್ಪವು ಸಾರುವ ತತ್ತ್ವ- ಸಂದೇಶ ಮುಖ್ಯವಾಗಿತ್ತು.ಆಳರಸರ ಮತ,ದೈವನಿಷ್ಠೆಗಳು ಇಂತಹ ಮೂರ್ತಿಶಿಲ್ಪಗಳ ಹಿಂದೆ ಕೆಲಸ ಮಾಡುತ್ತಿದ್ದವು.ಋಷಿಗಳು,ತಪಸ್ವಿಗಳು,ಸಿದ್ಧರುಗಳು ಪ್ರಭುತ್ವದ ಮೇಲೆ ಹಿಡಿತ ಸಾಧಿಸಿ ತಮ್ಮ ತತ್ತ್ವ- ಆಲೋಚನೆಗಳನ್ನು ಪ್ರತಿಪಾದಿಸುವಲ್ಲಿ ಯಶಸ್ವಿಯಾಗಿದ್ದರು.ಅಂತಹ ಸಿದ್ಧರುಗಳು,ತಪಸ್ವಿಗಳ ಚಿಂತನೆಯು ಮೂರ್ತಿಶಿಲ್ಪಗಳಲ್ಲಿ ಅಲ್ಲಲ್ಲಿ ಕಂಡುಬಂದಿದೆ.ಶವರೂಪಿ ಶಿವನ ಮೇಲೆ ನಿಂತಿರುವ ಕಾಳಿಯ ಮೂರ್ತಿಶಿಲ್ಪವು ಕೂಡ ಅಂತಹದೆ ಒಂದು ದರ್ಶನದ ಫಲ.ಇದನ್ನು ಅರ್ಥೈಸಿಕೊಳ್ಳಲು ವಿಫಲರಾದ ಇತಿಹಾಸಕಾರರು ಬೇರೆ ಏನನ್ನೋ ಕಲ್ಪಿಸಿದರು!’ ಇತಿಹಾಸಕಾರರು ಹೇಳುವುದೆಲ್ಲ ಸತ್ಯವಲ್ಲ’ ಎನ್ನುವ ಮಾತು ಇಂತಹ ಪ್ರಸಂಗಗಳನ್ನೇ ಹೇಳುತ್ತದೆ.ಇತಿಹಾಸಕಾರ ತನ್ನ ಕಲ್ಪನೆ- ಊಹೆಗಳ ಆಧಾರದ ಮೇಲೆ ಅಂದಿನ ಸಮಾಜದ ಒಂದು ರೇಖಾಚಿತ್ರ, ಊಹೆಯನ್ನು ಮುಂದಿಡುತ್ತಾನಷ್ಟೆ.ಅದು ನಿಖರವಾದುದು,ಸತ್ಯವಾದುದು ಎಂದು ಹೇಳಲಾಗದು.ಇತಿಹಾಸಕಾರ ನ ಊಹೆಯು ಕಲ್ಪನೆ,ಸತ್ಯವಲ್ಲ.ಕಾಲ್ಪನಿಕ ಸಂಗತಿಗಳು ಸತ್ಯ ಎಂದು ಒಪ್ಪಬೇಕಿಲ್ಲ.ಕಾಳಿಯ ಮೂರ್ತಿಶಿಲ್ಪದ ಹಿಂದಣ ಸತ್ಯದರ್ಶನ ಮಾಡಿಕೊಳ್ಳದ ಇತಿಹಾಸಕಾರ ಅದನ್ನು ಶೈವ -ಶಾಕ್ತರ ನಡುವಿನ ಹೋರಾಟ ಎಂದು ಬಿಂಬಿಸಿದ! ಒಂದುವೇಳೆ ಶೈವ ಶಾಕ್ತರ ನಡುವೆ ಸಂಘರ್ಷ ಏರ್ಪಟ್ಟಿದ್ದರೂ ನಮ್ಮ ಜನಪದರು ಹೇಳುವಂತೆ ಅದು ‘ ಗಂಡ ಹೆಂಡಿರ ಜಗಳ ಉಂಡು ಮಲಗುವವರೆಗೆ’ ಮಾತ್ರ ಘಟಿಸಿರಬಹುದಾದ ಅತ್ಯಲ್ಪ ಅವಧಿಯದು.ಕಾಳಿ ಪಾರ್ವತಿಯ ಉಗ್ರರೂಪ ಎನ್ನುವುದನ್ನು ಲಕ್ಷಿಸಬೇಕು.ಪತಿಯನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ,ಗಂಡನ ಅರ್ಧದೇಹವನ್ನೇ ಹೊಂದಿದ ಶಿವಸತಿ ಪಾರ್ವತಿಯು ಎಂದಾದರೂ ತನ್ನ ಗಂಡ ಶಿವನ ವಿರುದ್ಧ ಸೆಣಸಿ,ಶಿವನನ್ನು ಕೊಲ್ಲಲು ಸಾಧ್ಯವೆ? ದಕ್ಷನ ಪುತ್ರಿಯಾಗಿಯೂ ಯಜ್ಞಸಂದರ್ಭದಲ್ಲಿ ತನ್ನ ಪತಿ ಶಿವನ ಅವಮಾನ ಸಹಿಸದೆ ದಕ್ಷನ ಯಜ್ಞಕುಂಡದಲ್ಲಿ ಆತ್ಮಾರ್ಪಣೆಮಾಡಿಕೊಂಡ ಶಿವನ ಸತಿಯು ಶಿವನನ್ನು ಕೊಲ್ಲಬಹುದೆ? ತನ್ನ ಸತಿ ದಕ್ಷನಯಜ್ಞಕುಂಡದಲ್ಲಿ ದೇಹತ್ಯಾಗ ಮಾಡಿದ ಸುದ್ದಿ ತಿಳಿದ ಶಿವನು ಸತಿಯ ಕಳೆಬರವನ್ನು ಹೊತ್ತುಕೊಂಡು ದುಃಖಿಸುತ್ತ ಭೂಮಂಡಲವನ್ನೆಲ್ಲ ಸುತ್ತುತ್ತಾನೆ.ಶಿವನನ್ನು ದುಃಖವಿಮುಖನನ್ನಾಗಿಸಲು ವಿಷ್ಣುವು ತನ್ನ ಸುದರ್ಶನ ಚಕ್ರದಿಂದ ಸತಿಯ ಕಳೆಬರದ ಅವಯವಗಳನ್ನು ತುಂಡರಿಸುವನು.ಸತಿಯ ದೇಹದ ಅಂಗವು ಬಿದ್ದ ನೆಲವು ಒಂದು ಶಕ್ತಿಕ್ಷೇತ್ರವಾಯಿತು.ಹೀಗೆ ವಿಷ್ಣುವು ಸತಿಯ ದೇಹವನ್ನು ಹದಿನೆಂಟು ತುಂಡುಗಳನ್ನಾಗಿ ಕತ್ತರಿಸಿದ ಸ್ಥಳಗಳೇ ಇಂದು ಅಷ್ಟಾದಶ ಶಕ್ತಿಪೀಠಗಳಾಗಿ ಪ್ರಸಿದ್ಧವಾಗಿವೆ.ವಸ್ತುಸ್ಥಿತಿ ಹೀಗಿರುವಾಗ ಕಾಳಿಯು ತನ್ನ ಗಂಡ ಶಿವನನ್ನು ಕೊಂದಳು ಎನ್ನುವುದು ತಪ್ಪಲ್ಲವೆ?
ಅಷ್ಟಾದಶ ಶಕ್ತಿಪೀಠಗಳಲ್ಲಿ ಮಹಾಕಾಳಿಯ ಪೀಠವಾದ ಉಜ್ಜಯನಿಯೂ ಒಂದು.ಅಲ್ಲಿ ಶಿವನು ಮಹಾಕಾಲೇಶ್ವರ ಲಿಂಗರೂದಲ್ಲಿದ್ದರೆ ಪಾರ್ವತಿಯು ಮಹಾಕಾಲಿಯ ರೂಪದಲ್ಲಿದ್ದಾಳೆ.ಜೊತೆಗೆ ಶಿವನ ದ್ವಾದಶ ಜ್ಯೋತಿರ್ಲಿಂಗಕ್ಷೇತ್ರಗಳಲ್ಲಿ ಶಿವನು ಸತಿಸಮೇತನಾಗಿಯೇ ಇದ್ದಾನೆ ಎನ್ನುವುದನ್ನು ಗಮನಿಸಬೇಕು.ಶಿವ ಶಕ್ತಿಯರು ಪರಸ್ಪರ ಅನೋನ್ಯರು,ಅಭಿನ್ನರು.ಅವರು ಒಬ್ಬರನ್ನು ಬಿಟ್ಟು ಮತ್ತೊಬ್ಬರು ಇರುವುದಿಲ್ಲವೆಂತಲೆ ‘ ಅರ್ಧನಾರೀಶ್ವರ ಶಿವತತ್ತ್ವ’ವು ಇಂದಿಗೂ ಪ್ರಚಾರದಲ್ಲಿದೆ.ಕವಿಕುಲಗುರು ಕಾಳಿದಾಸ ‘ ಶಿವ ಶಕ್ತಿಯರು ಶಬ್ದ ಮತ್ತು ಅರ್ಥಗಳಂತೆ ಪರಸ್ಪರ ಅಭಿನ್ನರು’ ಎಂದು ಶಿವಶಕ್ತಿಯರ ಅನ್ಯೋನ್ಯತೆಯನ್ನು ಬಣ್ಣಿಸಿದ್ದಾನೆ.ಕಾಳಿದಾಸನಂತಹ ದಾರ್ಶನಿಕ ಮಹಾಕವಿಗಳಿಗೆ ಹೊಳೆಯುವ ತತ್ತ್ವ,ದರ್ಶನಗಳು ಇತಿಹಾಸಕಾರರಿಗೆ ಹೊಳೆಯುವುದಿಲ್ಲವಾಗಿ ಅವರು ತಮಗೆ ತಿಳಿದಂತೆ ತರ್ಕಿಸುತ್ತಾರೆ.ಅಂತಹ ಅರೆತಿಳಿವಿನ ಊಹೆಯೇ ಕಾಳಿಯು ಶಿವನನ್ನು ಕೊಂದಳು ಎನ್ನುವುದು.
ದಕ್ಷನ ಯಜ್ಞ ಪ್ರಸಂಗ ಮತ್ತು ಕಾಳಿಯ ಈ ಶಿಲ್ಪ ಚಿತ್ರಗಳು ಪುರಾಣಗಳ ಕಾಲದ ಸೃಷ್ಟಿ.ವೇದದಲ್ಲಿ ರುದ್ರ- ಶಿವನಿದ್ದಾನೆ,ದುರ್ಗೆ ಇದ್ದಾಳೆ ಆದರೆ ಕಾಳಿ ಇಲ್ಲ! ಅಂದರೆ ಮಹಾಕಾಳಿಯು ವೇದೋಕ್ತ ದೇವತೆಯಲ್ಲ.ಇತಿಹಾಸಕಾರ ಇದನ್ನು ಗಮನಿಸಿಲ್ಲ.ವೇದದಲ್ಲಿ ಗಣಪತಿ,ಬ್ರಹ್ಮಣಸ್ಪತಿ,ವಾಗಾಂಭೃಣಿ,ದುರ್ಗಾ ಮೊದಲಾದ ಶಿವನ ಪರಿವಾರ ದೇವತೆಗಳು,ರುದ್ರಪುತ್ರರಾದ ಮರುತ್ ದೇವತೆಗಳು ಇದ್ದಾರಾಗಲಿ ಕಾಳಿ ಅಥವಾ ಮಹಾಕಾಳಿ ಇಲ್ಲ.ಕಾಳಿಯು ಶವರೂಪಿಶಿವನ ಮೇಲೆ ನಿಂತಿದ್ದು ಪುರಾತನ ಕಲ್ಪನೆ ಅಲ್ಲ ಎಂದು ಭಾವಿಸಬಹುದು.
ಮಹಾಕಾಳಿಯು ಶವರೂಪಿ ಶಿವನ ಮೇಲೆ ನಿಂತಿರುವ ಚಿತ್ರವು ಒಂದು ತತ್ತ್ವದರ್ಶನದ ಪ್ರತೀಕ.ಜಗನ್ನಿಯಾಮಕನಾದ ಶಿವನು ಕರುಣಾಮಯನು .ಅವನು ಯಾರನ್ನೂ ಕೊಲ್ಲಲಾರ.ಪೂರ್ಣಬ್ರಹ್ಮನಾದ ಪರಶಿವನು ತನ್ನದೆ ನಿರ್ಮಿತಿಯಾದ ಸೃಷ್ಟಿಯಲ್ಲಿ ದೋಷವನ್ನೆಣಿಸಲಾರ.ಆದರೆ ಪರಶಿವನ ಸಂಕಲ್ಪದಂತೆಯೇ ಕಾರ್ಯನಿರ್ವಹಿಸುತ್ತಿರುವ ಮಾಯೆಯ ಪಾತ್ರವೂ ಇದೆಯಲ್ಲ! ರಾಗ- ದ್ವೇಷಗಳು,ಮೋಹ- ಮಮಕಾರಗಳು ಮಾಯೆಯ ಕಾರ್ಯ.ಪ್ರಕೃತಿಯ ಪ್ರೇರಣಾನುಸಾರ ಹುಟ್ಟಿದ ರಾಕ್ಷಸರು ಲೋಕಕಂಟಕರಾದಾಗ ಅವರನ್ನು ನಿಗ್ರಹಿಸಲೇಬೇಕು.ಸಂಹಾರಕಾರ್ಯ ಶಿವನು ಮಾಡಲಾರ.ಆದ್ದರಿಂದ ಆ ಕೆಲಸವನ್ನು ನಿರ್ವಹಿಸುವ ಹೊಣೆಯು ಶಿವನ ಸತಿಯಾದ ಶಕ್ತಿಯದಾಯಿತು.ಅದೇ ಕಾಳಿತತ್ತ್ವದ ದರ್ಶನ.
ಶಿವನು ಸದಾ ತನ್ನ ಆನಂದದ ಮೂಲನೆಲೆಯಾದ ಸಮಾಧಿಯಲ್ಲೇ ಇರುತ್ತಾನೆ.ಶಿವನು ಸಮಾಧಿಯಲ್ಲಿದ್ದಾಗ ಬಹಿರ್ ಪ್ರಪಂಚ ವ್ಯವಹಾರದಲ್ಲಿ ಪಾಲ್ಗೊಳ್ಳಲಾರ.ಅಂತಹ ಸಂದರ್ಭದಲ್ಲಿ ಲೋಕಕಂಟಕರಾದ ರಾಕ್ಷಸರನ್ನು ನಿಗ್ರಹಿಸುವವಳು ಶಕ್ತಿ.ಇಂತಹದೆ ಪ್ರಸಂಗದ ಒಂದು ಚಿತ್ರ ಮಹಾಕಾಳಿಯು ಶಿವನ ದೇಹದಿಂದ ಎದ್ದುಬರುವುದು.ಶಿವನು ತಪೋನಿರತನಾಗಿದ್ದಾನೆ,ಆಗ ರಾಕ್ಷಸರ ಉಪಟಳದಿಂದ ದೇವತೆಗಳು ಕಂಗೆಟ್ಟು ಕೈಲಾಸಕ್ಕೆ ಬಂದಿದ್ದಾರೆ.ತಪೋನಿರತ ಶಿವನನ್ನು ಪ್ರಾರ್ಥಿಸುತ್ತಾರೆ.ಸಮಾಧಿಯೊಳಿದ್ದರೂ ಶಿವನಿಗೆ ಲೋಕವ್ಯವಹಾರದ ಅನುಭವ ಇರುತ್ತದೆ.ಅದನ್ನೇ ಯೋಗದ ಪರಿಭಾಷೆಯಲ್ಲಿ ಸವಿಕಲ್ಪ ಮತ್ತು ನಿರ್ವಿಕಲ್ಪ ಸಮಾಧಿ ಎಂದು ಎರಡು ಬಗೆಯ ಸಮಾಧಿಗಳೆಂದು ಹೇಳಲಾಗಿದೆ.ಶಿವನು ಮಹಾಪ್ರಳಯದ ನಂತರ ನಿರ್ವಿಕಲ್ಪ ಸಮಾಧಿಯಲ್ಲಿರುತ್ತಾನೆ.ಉಳಿದಂತೆ ತನ್ನಿಂದ ನಿರ್ಮಾಣಗೊಂಡ ವಿಶ್ವವ್ಯಾಪರದ ನಿರ್ವಹಣೆಗಾಗಿ ಸವಿಕಲ್ಪ ಸಮಾಧಿಯಲ್ಲಿರುತ್ತಾನೆ.ಒಂದಂಶ ಜಾಗೃತ ಚಿತ್ತ ಪ್ರಜ್ಞೆಯ ಮೂಲಕ ಜಗತ್ತನ್ನು ನಿರೀಕ್ಷಿಸುತ್ತಾನೆ.ದೇವತೆಗಳ ಪ್ರಾರ್ಥನೆಯನ್ನು ಆಲಿಸಿದ ಶಿವನು ರಾಕ್ಷಸರ ಸಂಹಾರಕ್ಕಾಗಿ ತನ್ನ ದೇಹದಿಂದ ಶಕ್ತಿಯನ್ನು ಹೊರಹೊಮ್ಮಿಸುವನು.ರಾಕ್ಷಸರ ಶಕ್ತಿ- ಸಾಮರ್ಥ್ಯವನ್ನರಿತು ಅವರನ್ನು ಸಂಹರಿಸಲು ಬೇಕಾದ ಶಕ್ತಿ ಸಾಮರ್ಥ್ಯಗಳಿಗನುಗುಣವಾಗಿ ಮಹಾಕಾಳಿಯ ರೂಪದಲ್ಲಿ ತನ್ನ ಆತ್ಮಶಕ್ತಿಯನ್ನು ಪ್ರಕಟಗೊಳಿಸುತ್ತಾನೆ ಶಿವ.ಉಗ್ರಭಯಂಕರಿಯಾಗಿ ನಾಲಗೆ ಚಾಚಿಕೊಂಡು ರುಂಡಮಾಲಾಧಾರಿಣಿಯಾಗಿ ಮಹಾಕಾಳಿಯು ಶಿವನ ಶರೀರದ ಪ್ರಕಟಗೊಳ್ಳುವಳು.ಮಹಾಕಾಳಿ ಎಂದರೆ ಯೋಗನಿದ್ದೆಯೊಳಿದ್ದ ಶಿವನ ದೇಹದಿಂದ ಲೋಕಕಲ್ಯಾಣಾರ್ಥವಾಗಿ ಪ್ರಕಟಗೊಂಡ ಶಿವಶಕ್ತಿಯೇ ಹೊರತು ಬೇರೇನೂ ಅಲ್ಲ.ಇದು ಮಹಾಕಾಳಿ ತತ್ತ್ವದರ್ಶನ.ಋಷಿಯೋ,ಸಿದ್ಧರೋ ಆದ ಯಾರೋ ಒಬ್ಬರು ತಮಗಾದ ಈ ಅಲೌಕಿಕ ದರ್ಶನ ತತ್ತ್ವವನ್ನು ಸಾರಲೆಂದೇ ಕೆತ್ತಿಸಿದ ಶಿಲ್ಪರೂಪಕವೇ ಶಿವನದೇಹದಿಂದ ಎದ್ದುಬರುವ ಮಹಾಕಾಳಿ.

ಮೊ: 94808 79501
22.10.2021