‘ಹೈಕು’ ಜಪಾನಿನ ಜನಪ್ರಿಯ ಕಾವ್ಯ ಶೈಲಿ. ನನಗೂ ಬಲು ಇಷ್ಟವಾದ ಕಾವ್ಯ ಪ್ರಕಾರ ಈ ಹೈಕುಗಳ ಬರವಣಿಗೆ.
ಮೂರು ಸಾಲುಗಳ 17ಅಕ್ಷರ ಅಥವಾ ಉಚ್ಛಾರಾಂಶಗಳನ್ನು ಹೊಂದಿದ ಚುಟುಕು ಪದ್ಯಗಳನ್ನು ಹೈಕುಗಳು ಎಂದು ಕರೆಯಲಾಗುತ್ತದೆ. ಜಪಾನ್ ದೇಶದ ಕವಿಗಳು ಪ್ರಕೃತಿ ಮತ್ತು ಆಧ್ಯಾತ್ಮಿಕ ಸಂಗತಿಗಳ ಅಭಿವ್ಯಕ್ತಿಗೆ ‘ಹೈಕು’ ಕಾವ್ಯಶೈಲಿಯನ್ನು ಬಳಸುವ ಬಗ್ಗೆ ತಿಳಿದುಬರುತ್ತದೆ. ನಮ್ಮ ದೇಶದ ಬರಹಗಾರರು ಕೂಡ ಸ್ಥಳೀಯ ಭಾಷೆಯಲ್ಲಿ ಪ್ರೀತಿ, ಪ್ರೇಮ, ವಿರಹ, ರಾಜಕೀಯ ಹಾಗೂ ಸಾಮಾಜಿಕ ಸಂಗತಿಗಳ ವಿಡಂಬನೆ ಮುಂತಾದ ವಿಷಯಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡಲು ಈ ಹೈಕು ಕಾವ್ಯ ಪ್ರಕಾರದಲ್ಲಿ ಪದ್ಯಗಳನ್ನು ಬರೆದಿದ್ದಾರೆ. ಚುಟುಕಾದ ಈ ಹೈಕು ಪದ್ಯಗಳು ಓದುಗರಿಗೆ ಗೂಢಾರ್ಥದೊಂದಿಗೆ ಕಚಗುಳಿ ಇಡುವ, ಖುಷಿ ತರುವ ಪುಟ್ಟ ಕವನಗಳಾಗಿವೆ. ಹೈಕುಗಳ ರಚನೆ ಬರಹಗಾರನ ಶಬ್ದಗಳ ಜ್ಞಾನ, ರೂಪಕಗಳ ಬಳಕೆಯಲ್ಲಿ ಹೊಂದಿರುವ ಪ್ರತಿಭೆಯನ್ನು ತೋರಿಸುತ್ತವೆ. ವಿಶಾಲವಾದ ಅರ್ಥವನ್ನು ಹೊಂದಿದ ಪುಟ್ಟ ಸಾಲುಗಳು ಮತ್ತೆ ಮತ್ತೆ ಓದಿಸುತ್ತವೆ.
ನಾನು ಆಗಾಗ ಬರೆದ ಹೈಕು ಪದ್ಯಗಳ ಪೈಕಿ ಕೆಲವು ಪದ್ಯಗಳನ್ನು ಈ ದಿನ ನಮ್ಮ ಓದುಗರ ಮುಂದೆ ಪ್ರಸ್ತುತಪಡಿಸುತ್ತಿರುವೆ. ಓದುಗರ ಅಭಿಪ್ರಾಯ, ಸಲಹೆ, ವಿಮರ್ಶೆಗಳಿಗೆ ಮುಕ್ತ ಸ್ವಾಗತ.
ಬಸವರಾಜ ಭೋಗಾವತಿ
ಹೈಕುಗಳು
1
ಸ್ನೇಹ ಕಡಲ
ಒಡಲು, ಸಿಹಿ-ಕಹಿ
ಕಾಣದಿಡಲು.
2
ಕಷ್ಟದ ದಿನ
ಎಂದಿಗೂ ಬರದಿರೆ,
ನಷ್ಟವೇ ಹೆಚ್ಚು.
3
ಭರವಸೆಯ
ಬಿತ್ತನೆಗೆ ಆಧಾರ
ಈ ‘ಮತ’ದಾರ.
4
ಕನ್ನಡಿಯಲಿ
ಸನ್ನಡತೆಯ ಬಿಂಬ,
ಈಗ ನಾಣ್ಣುಡಿ.
5
ಆಳುಮಗನ
ದಿನ, ಆಳರಸಂಗೆ
ಅಳುವ ದಿನ.
6
ಮಾಲು ಸಮೇತ
ಸಿಕ್ಕಿಬಿದ್ದರೂ ಪಾಲು,
ಬೇಲು, ಮಾಮೂಲು !
7
ಸಮ್ಮಿಲನದ
ಮಧುಚಂದ್ರಕೆ, ಮಳೆ
ತೂಗು ತೊಟ್ಟಿಲು.
8
ಹದಿಹರೆಯ
ಪ್ರಾಯಕೆ, ಪ್ರಣಯದ
ಗಾಯ ಅಪಾಯ.
9
ಹೊಗಳಿಕೆಯ
ಕಾಯ, ಕೆಲಸದಲಿ
ಕಾಣದೆ ಮಾಯ.
10
ಆಶಾ ಗಮನ
ಸೆಳೆದಳು ದೇಶಾನ,
ಕಾರಣ ಕೊರೊನಾ.
11.
ಹೋದಳವಳು
ತವರಿಗೆ, ಬಂದನಿ-
ವನು ಬಾರಿಗೆ.
12
ಮತಕ್ಕೆ ಮಾತ್ರ
ಶಿಕಾರಿ, ನಂತ್ರ ಬೆಲೆ
ಇಲ್ದೆ ಭಿಕಾರಿ.
13
ಮಳೆ ಇಲ್ಲದೆ
ಸೋತವ ,ಬೆಲೆ ಸಿಗದೆ
ಸತ್ತವ ಇಲ್ಲೇ.
14
ಜೀವನ ಕಲೆ,
ಜೀವ ನಿರ್ಜೀವಗಳ
ಬೆಸೆವ ಬಲೆ.
15
ಅಡಿಯೇ ನೋಡಿ
ಹುಸಿ ನುಡಿ, ದಿನವಿ-
ಡೀ ಗಡಿಬಿಡಿ
16
ಮನವೆಂಬುದು
ಮಂದಿರ, ಸದ್ವಿಚಾರ
ಕಾಯಿ ಕರ್ಪೂರ
17
ಕೇಳುವವರು
ಇರದಿರೆ, ಕಳ್ಳರ-
ದೇ ಕಾರುಬಾರು
18
ಸಾಹಿತ್ಯದಲ್ಲೂ
ರಾಜಕಾರಣ, ಸ್ವಾರ್ಥ
ಇಲ್ಲೂ ಕಾರಣ.
19
ಅಲ್ಪಾವಧಿಯ.
ಸುಖ, ಹಾದಿ ತಪ್ಪಿದ
ಸಖ ‘ವಂಚಕ’
20
ಮೋಡ ಕವಿದ
ರಾತ್ರಿ, ತಾರೆಗಿಲ್ಲದ
ಹೊಳೆವ ಖಾತ್ರಿ.
21
ಅಪರಾಧದ
ತೋರಣ, ಆಪತ್ತಿಗೆ
ಸದಾ ಕಾರಣ.
22
ಮೂರು ದಿನದ
ಸಂತೆಗೆ, ಕಂತುಗಳ
ಕರಾರು ಜೋರು!
23
ಅಂಧ ಭಕ್ತರ.
ಕಂಡರು, ಉಳ್ಳವರ
ಜತೆ ಉಂಡರು.
24
ಕಾರ್ಮೋಡಕೆ
ಮಳೆ ಗತ್ತು, ಕವಿಗೆ
ಮುತ್ತಿನ ಹೊತ್ತು.
25
ಹುಸಿ ಭಾವನೆ
ಗಳ ಬೆತ್ತಲೆ, ಬೆಳ-
ಕಲ್ಲೂ ಕತ್ತಲೆ.
26
ಮಳೆ ಗುಳೆಗೆ
ಪರಿಹಾರ, ಕಾಣದ
ಕೈಗೆ ಆಹಾರ.
27
ಅನುದಿನವೂ
ಕತ್ತಲು, ಹೊಳೆಯಲು
ಸಾಲು ಸವಾಲು.
28
ಅಡಂಬರದ
ಅಲಂಕಾರಕೆ, ಅಹಂ-
ಕಾರ ಆಧಾರ.
29
ಶಾಸಕರಿಗೆ
ಆಮಿಷ, ಶಾಸನಕ್ಕೆ
ಹಾಕುವ ವಿಷ.
30
ಮತದಾರರ
ದರ ನಿಗದಿ, ಮತ
ದಾನಕ್ಕೆ ನಾಂದಿ.
31
ಆಳುವವರ
ಒಳಜಗಳ, ಆಳ್ವಿಕೆ-
ಗೆ ತಳಮಳ.
32
ಗಡಿನಾಡಲಿ
ಶೋಷಣೆ, ಗಡಿ ಬಿಡಿ
ಬರೀ ಘೋಷಣೆ.
33
ಮಾತಿನ ಮೋಡಿ
ನೋಡಿಯೇ , ನಮೋ ಎಂದ
ಇಡೀ ಇಂಡಿಯಾ.
34
ಗಾಂಧಿ ಮರೆತ
ಇಂಡಿಯಾ, ಕಾಣದಾಯ್ತು
ಕಪ್ಪು ಮಂದಿಯ.
35
ಮೋಡಿಯ ಮಾಡಿ
ಗೆದ್ದವ, ಎಂದೆಂದಿಗೂ
ಅಂಗಡಿಯವ.
36
ಲೋಕ ವಿಹಾರಿ,
ಉಳ್ಳವರಿಗೆ ಆದೆ
ನೀ ಉಪಕಾರಿ.
37
ನೆರೆ ಬರದ
ಗಾಯ, ಪರಿಹಾರವೂ
ಸಿಗದೆ ಮಾಯ.
38
ಕುಲ ಎಂಬುದು
ಬಲ ಕಂಡ ಕಾಲವೇ
ಈ ಕಲಿಗಾಲ.
39
ಬೆವರ ಬೆಲೆ,
ಉಳ್ಳವರ ನೆಲೆಗೆ
ಸದಾ ಉಯ್ಯಾಲೆ.
40
ಪ್ರೀತಿ ಪ್ರೇಮದ
ಶಿಖರ, ವಿರಹ ವೇ-
ದನೆಗೆ ಬರ.