ನಿಗ್ರಹಾನುಗ್ರಹ ಸಮರ್ಥರು : ಮುಕ್ಕಣ್ಣ ಕರಿಗಾರ

ನಿಗ್ರಹಾನುಗ್ರಹ ಸಮರ್ಥರು

ಲೇಖಕರು: ಮುಕ್ಕಣ್ಣ ಕರಿಗಾರ

ದಸರಾ ಹಬ್ಬದ ರಜೆ ಮುಗಿಸಿಕೊಂಡು ಇಂದು ಮರಳಿ ಯಾದಗಿರಿಗೆ ಬಂದಿದ್ದೆ.ಸಂಜೆ ‘ ವಿಂಧ್ಯಾದ್ರಿ’ ಯ ಅಂಗಳದಲ್ಲಿ ಓದುತ್ತ ಕುಳಿತಿದ್ದೆ.ಹತ್ತುದಿನಗಳ ಕಾಲ ಆಫೀಸಿಗೆ ಬರದೆ ಇದ್ದುದರಿಂದ ಮತ್ತು ನವರಾತ್ರಿಯಲ್ಲಿ ದೇವಿ ಸಾನ್ನಿಧ್ಯದಲ್ಲಿದ್ದ ನನ್ನನ್ನು ಕಾಣಲು ನನ್ನ ಆತ್ಮೀಯರಾಗಿರುವ ಕೆಲವು ಜನ ನೌಕರ ಮಿತ್ರರುಗಳು ಬಂದಿದ್ದರು.ಮಾತನಾಡುತ್ತ ಮಾತಿನ ನಡುವೆ ಒಬ್ಬರು ‘ ಸರ್,ನೀವು ನಿಗ್ರಹಾನುಗ್ರಹ ಸಮರ್ಥರು.ಈಗಿನ ಕಾಲದಲ್ಲಿ ನಿಮ್ಮಂತಹವರು ಅಪರೂಪ’ ಅಂದರು.ಮರುಕ್ಷಣವೆ ನಾನು ಪ್ರಶ್ನಿಸಿದೆ ‘ ಹೌದಾ? ನಿಗ್ರಹಾನುಗ್ರಹ ಸಮರ್ಥರು ಎಂದರೆ ಏನು? ಕೇಳಿದೆ ಅವರನ್ನು. ‘ಅದು ಸರ್..ಅದು’ ಎಂದು ತೊದಲಿದರಾದರೂ ಅದರ ಅರ್ಥ ಏನೆಂದು ಹೇಳುವುದು ಅವರಿಂದ ಸಾಧ್ಯವಾಗಲಿಲ್ಲ.ನನ್ನನ್ನು ಕಾಣಲೆಂದೇ ಬಂದ ನಮ್ಮ ನೌಕರಮಿತ್ರರೊಬ್ಬರನ್ನು ಹೆಚ್ಚು ಪ್ರಶ್ನಿಸುವುದು ಸೂಕ್ತವಲ್ಲವೆಂದು ಸುಮ್ಮನಾದೆ.ನಿಜಕ್ಕೂ ಅವರಿಗೆ ಆ ಶಬ್ದದ ಅರ್ಥ ಗೊತ್ತಿರಲಿಲ್ಲ.ಅಲ್ಲಿ ಇಲ್ಲಿ ಕೇಳಿದ್ದನ್ನು ಇಲ್ಲಿ ನನಗೆ ಅನ್ವಯಿಸಿ ಹೇಳಿದರು.

ಇದು ಇಂದು ನಮ್ಮ ದೇಶದ ಧಾರ್ಮಿಕ ಕ್ಷೇತ್ರದಲ್ಲಿ ವ್ಯಕ್ತಿಪೂಜೆಯ ಹೆಸರಿನಲ್ಲಿ ನಡೆಯುತ್ತಿರುವ ಅರ್ಥಹೀನ ಪ್ರಶಂಸಾಪರಂಪರೆಗೆ ಒಂದು ಸಣ್ಣ ನಿದರ್ಶನ.ನಮ್ಮ ಮಠ- ಪೀಠಗಳ ಸ್ವಾಮಿಗಳು,ಗುರುಗಳು ಹೊಗಳಿಕೆ ಪ್ರಿಯರುಗಳೇ ಆಗಿರುತ್ತಾರಾದ್ದರಿಂದ ಅವರನ್ನು ಹೊಗಳಿ,ಓಲೈಸುವ ಹೊಗಳುಭಟ್ಟರು ,ವಂದಿಮಾಗದಿರ ಪಡೆಯೇ ಹುಟ್ಟಿಕೊಂಡಿದೆ.ಹೊಸ ಹೊಸ ಬಗೆಯ ಅತ್ಯಾಧುನಿಕ ಬಿರುದುಗಳನ್ನು ಸೃಷ್ಟಿಸಿ ತಮ್ಮ ಸ್ವಾಮಿಗಳನ್ನು,ಗುರುಗಳನ್ನು ಹೊಗಳಿ ಕೃತಾರ್ಥರಾಗುತ್ತಿದ್ದಾರೆ ಶಿಷ್ಯ ಮಹಾನುಭಾವರುಗಳು.ಶಿಷ್ಯ ಮಹಾನುಭಾವರುಗಳ ಹೊಗಳಿಕೆಗಳಿಗೆ ಬಲೂನಿನಂತೆ ಉಬ್ಬುತ್ತಾರೆ ಸ್ವಾಮಿಗಳು,ಗುರುಗಳು ಎನ್ನಿಸಿಕೊಂಡವರು ! ನಮ್ಮ ನೌಕರ ಮಿತ್ರರ ಉದಾಹರಣೆಯನ್ನೇ ತೆಗೆದುಕೊಳ್ಳಿ ಅವರಿಗೆ ‘ ನಿಗ್ರಹಾನುಗ್ರಹ’ ಶಬ್ದದ,ವಿಶೇಷಣದ ಅರ್ಥ ಗೊತ್ತಿಲ್ಲ.ಆದರೂ ನನ್ನನ್ನು ಹೊಗಳಲು ಬಳಸಿದರು.( ಅವರು ಮುಗ್ಧರು ಪಾಪ) ಇದನ್ನು ಇಲ್ಲಿ ಪ್ರಸ್ತಾಪಿಸುತ್ತಿರುವ ಕಾರಣ ಧಾರ್ಮಿಕ ಕ್ಷೇತ್ರದಲ್ಲಿ ದಡ್ಡರು,ಮುಗ್ಧರು ಆದ ಭಕ್ತರುಗಳನ್ನು ಬಳಸಿಕೊಂಡು ಹೇಗೆ ವ್ಯಕ್ತಿಪ್ರತಿಷ್ಠೆಯ ಹುತ್ತಕಟ್ಟಲಾಗುತ್ತಿದೆ ಮಠ- ಪೀಠಾಧೀಶರುಗಳ ಸುತ್ತ ಎನ್ನುವುದನ್ನು ವಿವರಿಸಲು.ಯಾರೋ ಪುಣ್ಯಾತ್ಮರು ಏನೋ ಹುಸಿ ಬಿರುದಾವಳಿಗಳನ್ನು ಸೃಷ್ಟಿಸುತ್ತಾರೆ,ಮುಗ್ಧರು ಅದರ ಅರ್ಥ,ಸತ್ಯ ವಿಚಾರಿಸದೆ ಒಪ್ಪಿಕೊಳ್ಳುತ್ತಾರೆ.ಮಠ ಪೀಠಾಧೀಶರ ಬಂಧು ಸಂಬಂಧಿಯೋ ಆದ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಅಥವಾ ಆ ಧಾರ್ಮಿಕ ವ್ಯಕ್ತಿಯ ಇಚ್ಛೆಯಂತೆ ರಚಿಸಿದ ಹುಸಿಪ್ರಭಾವಳಿಯ ಪ್ರಭಾವಲಯಕ್ಕೆ ಸಿಕ್ಕು ಮುಗ್ಧರು,ಅಮಾಯಕರು ಬಲಿಯಾಗುತ್ತಾರೆ.ಸತ್ಯ ಮರೆಯಾಗಿ ಅಸತ್ಯ ವಿಜೃಂಭಿಸುತ್ತದೆ.ತತ್ತ್ವ ಮರೆಯಾಗಿ ಕಥೆ- ಪುರಾಣಗಳು ಹುಟ್ಟುತ್ತವೆ.

ಇಂದು ನಾವು ಕಾಣುತ್ತಿರುವ ಬಹುತೇಕ ಕಾವಿಧಾರಿಗಳು ,ಮಠ- ಪೀಠಗಳ ಗುರುಗಳು ಎನ್ನಿಸಿಕೊಂಡವರು ತಮ್ಮ ಸುತ್ತ ವ್ಯವಸ್ಥಿತವಾದ ‘ ಹುಸಿ ಪ್ರಭಾವಳಿ’ ಯನ್ನು ಸೃಷ್ಟಿಸಿಕೊಂಡೇ ದೊಡ್ಡವರಾಗಿದ್ದಾರೆ.ಅವರ ಹುಸಿ ಪ್ರಭಾವಳಿ ಹಿಗ್ಗಿದಷ್ಟೂ ವಿಸ್ತಾರವಾಗುತ್ತದೆ ಅವರ ಪ್ರಭಾವಲಯ.ಈ ಪ್ರಭಾವಲಯದ ಏಳುಸುತ್ತಿನ ಕೋಟೆಯಲ್ಲಿ ತಮ್ಮೆಲ್ಲ ದೋಷ ದೌರ್ಬಲ್ಯಗಳನ್ನು ಮುಚ್ಚಿಕೊಂಡು ‘ ಭುವಿಗಿಳಿದ ಭಗವಂತರಂತೆ’ ಪೋಸು ಕೊಡುತ್ತಾರೆ ಧಾರ್ಮಿಕ ಕ್ಷೇತ್ರಗಳ ಮುಖಂಡರುಗಳಾದ ಮಹಾನುಭಾವರುಗಳು.ಇದು ಆತ್ಮವಂಚನೆ! ಆಧ್ಯಾತ್ಮಿಕ ಕ್ಷೇತ್ರಕ್ಕೆ ಸಲ್ಲದ ನಡೆ! ಆದರೆ ಯಾರಿಗೆ ಬೇಕು ಆತ್ಮಚಿಂತನೆ? ಯಾರಿಗೆ ಬೇಕು ಆಧ್ಯಾತ್ಮಿಕ ಸಾಧನೆ? ಗುರುಗಳಾದವರಿಗೆ ಯೋಗ- ಆಧ್ಯಾತ್ಮ ಸಾಧನೆಗಳು ಎಂದರೆ ಏನೆಂದು ಗೊತ್ತಿಲ್ಲ; ಶಿಷ್ಯರಿಗೆ ತಮ್ಮ ಗುರುಗಳನ್ನು ವೈಭವೀಕರಿಸುವುದು ಒಂದನ್ನು ಬಿಟ್ಟು ಮತ್ತೊಂದು ಗೊತ್ತಿಲ್ಲ.ಆದರೆ ಗುರು ಶಿಷ್ಯ ಇಬ್ಬರಲ್ಲೂ ಸ್ವಾರ್ಥ ಇದೆ.ಆ ಗುರುವಿಗೆ ತಾನು ಪ್ರಸಿದ್ಧ ಸ್ವಾಮಿ ಎನ್ನಿಸಿಕೊಳ್ಳಬೇಕು ಎನ್ನುವ ಚಪಲ; ಶಿಷ್ಯನಿಗೆ ಆ ಸ್ವಾಮಿ ಬೆಳೆದಂತೆ ತಾನೂ ಬೆಳೆಯಬಹುದು ಎನ್ನುವ ದುರಾಲೋಚನೆ.ಪರಸ್ಪರರ ಸ್ವಾರ್ಥ,ದುರಾಲೋಚನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳುಮಾಡುತ್ತಾರೆ ಹೊಗಳಿಕೆ ಬಯಸುವ ಗುರು,ಹೊಗಳು ಭಟ್ಟ ಶಿಷ್ಯ.ಅವರಿಬ್ಬರನ್ನು ನಂಬಿದ ಭಕ್ತಸಮೂಹ ‘ ಹಬ್ಬಕ್ಕೆ ತಂದ ಹರಕೆಯ ಕುರಿ’ ಗಳಾಗುತ್ತಾರೆ.

ಆಧ್ಯಾತ್ಮಿಕ ಸಾಧನೆಯಿಂದ ಒಬ್ಬ ವ್ಯಕ್ತಿ ದೊಡ್ಡವನು,ಪೂಜ್ಯನೂ ಆಗುತ್ತಾನೆಯೇ ಹೊರತು ಹುಸಿ ಹೊಗಳಿಕೆ ಮಾತುಗಳಿಗೆ ಉಬ್ಬಿ ಅಲ್ಲ.ಪ್ರತಿಯೊಬ್ಬ ಆಧ್ಯಾತ್ಮ ಸಾಧಕನ ಗುರಿ ಪರಮಾತ್ಮನ ಅನುಗ್ರಹ ಪಡೆಯುವುದೇ ಆಗಿರಬೇಕು.ನಾವು ಮೆಚ್ಚಿಸಬೇಕಾದದ್ದು ಮಂದಿಯನ್ನಲ್ಲ,ಮಹಾದೇವ ಶಿವನನ್ನು.ಈ ಅರಿವು,ಈ ಪ್ರಜ್ಞೆ ಇದ್ದ ಯಾರೂ ಹುಸಿ ಪ್ರಭಾವಳಿಯ ಪ್ರಭಾವಲಯ ಸೃಷ್ಟಿಸಿಕೊಳ್ಳಲು ಪ್ರಯತ್ನಿಸಲಾರರು.ನಾವು ಇತರರಿಗಿಂತ ಭಿನ್ನರು,ಶ್ರೇಷ್ಠರು ಎಂದು ಕೊಚ್ಚಿಕೊಳ್ಳುವ ಜನ ತಮ್ಮ ಸಾಧನೆ- ಸಿದ್ಧಿಗಳಿಂದ ತಮ್ಮ ಭಿನ್ನತೆಯ ಹಿರಿಮೆಯನ್ನು ಸಾರಬೇಕೇ ಹೊರತು ಸುಳ್ಳು ಕಥೆ ಪುರಾಣಗಳ ಪುಸ್ತಕಗಳನ್ನು ಬರೆಯಿಸಿ,ಕ್ಯಾಸೆಟ್ಟುಗಳನ್ನು ರಚಿಸಿಕೊಂಡು ಅಲ್ಲ.ಧಾರ್ಮಿಕ ಕ್ಷೇತ್ರ ಪ್ರವೇಶಿಸಿದ್ದು ಪರಮಾತ್ಮನನ್ನು ಮೆಚ್ಚಿಸಲು ಎನ್ನುವ ಕನಿಷ್ಟಪ್ರಜ್ಞೆಯೂ ಇಲ್ಲದವರಿಂದ ಏನನ್ನು ತಾನೆ ನಿರೀಕ್ಷಿಸಲು ಸಾಧ್ಯ? ವೈರಾಗ್ಯದ ಸಂಕೇತವಾದ ಕಾವಿಯನ್ನು ಧರಿಸಿದ್ದೇವೆ ಎನ್ನುವ ಪರಿವೆಯೂ ಇಲ್ಲದೆ ಹಣ,ಅನುದಾನದ ಆಸೆಗಾಗಿ ರಾಜಕಾರಣಿಗಳ ಮನೆಗೆ ಸುತ್ತುವ,ವಿಧಾನಸೌಧಕ್ಕೆ ಪ್ರದಕ್ಷಿಣೆ ಹಾಕುವ,ರಾಜಕಾರಣಿಗಳ ಪರ ವಕಾಲತ್ತು ವಹಿಸುವ ಕಾವಿಧಾರಿಗಳು ಕಾವಿಯ ತತ್ತ್ವ ಮತ್ತು ಸಂನ್ಯಾಸ ಧರ್ಮಕ್ಕೆ ಅಪಚಾರವೆಸಗುವ ಮಹಾನುಭಾವರುಗಳು.ಇವರು ಇತ್ತ ಸಂನ್ಯಾಸಕ್ಕೂ ಸಲ್ಲರು,ಅತ್ತ ಸತ್ಪಥಕ್ಕೂ ಸಲ್ಲರು.ಆತ್ಮಾನುಭಾವಶೂನ್ಯರಿಂದ ಪರಮಾನುಭವ ನಿರೀಕ್ಷಿಸುವುದೆಂತು?

ಇರಲಿ,ಈಗ ನಿಗ್ರಹಾನುಗ್ರಹ ಸಮರ್ಥರ ಬಗ್ಗೆ ಹೇಳಿ ಮುಗಿಸುವೆ ಈ ಚಿಂತನೆಯನ್ನು. ಹಿಂದೆ ಭಾರತದಲ್ಲಿ ರಾಜಧರ್ಮದ ಲಕ್ಷಣ ‘ ದುಷ್ಟ ಶಿಕ್ಷಣ,ಶಿಷ್ಟ ರಕ್ಷಣ’ ಆಗಿತ್ತು.ಇದೇ ತತ್ತ್ವವು ಗುರುಗಳು ,ಮಠ- ಪೀಠಗಳಲ್ಲಿ ‘ ನಿಗ್ರಹಾನುಗ್ರಹ ಸಾಮರ್ಥ್ಯದ ಸ್ವರೂಪ ಪಡೆದಿದೆ.’ ಶಾಪಾನುಗ್ರಹ ಸಮರ್ಥರು’ ಮತ್ತು ‘ ನಿಗ್ರಹಾನುಗ್ರಹ ಸಮರ್ಥರು’ ಎನ್ನುವ ಎರಡು ವಿಶೇಷಣಗಳ ಅರ್ಥವೂ ಒಂದೇ. ನಿಗ್ರಹ + ಅನುಗ್ರಹ ಶಬ್ದಗಳೆರಡು ಸೇರಿ ‘ ನಿಗ್ರಹಾನುಗ್ರಹ’ ವೆಂಬ ವಿಶೇಷಣ ಹುಟ್ಟಿದೆ.ಋಷಿಗಳು ,ತಪಸ್ವಿಗಳು ಆದವರಲ್ಲಿ ಸಮಾಜ ಕಂಟಕರು ಆದ ದುಷ್ಟರನ್ನು ತಮ್ಮ ತಪೋಸಾಮರ್ಥ್ಯದಿಂದ ದಂಡಿಸಿ,ನಿಗ್ರಹಿಸುವ ಸಾಮರ್ಥ್ಯ ಇರುತ್ತದೆ.ದುಷ್ಟರು,ಸಮಾಜ ಕಂಟಕರುಗಳಾದವರನ್ನು ನಿಗ್ರಹಿಸುವ ತಪೋ ಸಾಮರ್ಥ್ಯವು ‘ ನಿಗ್ರಹ’ ವಾದರೆ ತಮ್ಮನ್ನು ಆಶ್ರಯಿಸಿ ಬಂದವರನ್ನು ಉದ್ಧರಿಸುವ ಸಿದ್ಧಿ ಸಾಮರ್ಥವು ‘ ಅನುಗ್ರಹ’.ಹುಸಿಪ್ರಭಾವಳಿಯ ಮೂಲಕ ಜನರನ್ನು ತಮ್ಮ ವಿರುದ್ಧ ಮಾತನಾಡದಂತೆ ಭಯಗ್ರಸ್ತರನ್ನಾಗಿಸುವ ‘ ನಿಗ್ರಹ ಸಮರ್ಥರುಗಳು’ ನಮ್ಮ ನಡುವೆ ಸಾಕಷ್ಟು ಜನರು ಇದ್ದಾರೆ; ಆದರೆ ಉದ್ಧಾರದ ಅಭಯವನ್ನಿತ್ತು ಆಶ್ರಿತರನ್ನು ಅನುಗ್ರಹಿಸುವವರು ಎಲ್ಲೋ ಒಬ್ಬಿಬ್ಬರು ಮಾತ್ರ.ದುಷ್ಟರನ್ನು ದಂಡಿಸುವ ,ಶಿಷ್ಟರು,ಮುಗ್ಧರೂ ಆದ ಭಕ್ತರನ್ನು ಉದ್ಧರಿಸುವ ಗುರುವಿನ ಸಾಮರ್ಥ್ಯವೇ ನಿಗ್ರಹಾನುಗ್ರಹ ಸಾಮರ್ಥ್ಯ.ಅತ್ಯುಗ್ರ ಯೋಗ ಸಾಧನೆ ಮಾಡಿದವರಲ್ಲಿ ಮಾತ್ರ ಈ ಶಕ್ತಿವಿಶೇಷವು ಜಾಗೃತವಾಗಿರುತ್ತದೆ.ನಿಗ್ರಹಾನುಗ್ರಹ ಸಾಮರ್ಥ್ಯವೆನ್ನುವುದು ಸಿದ್ಧರು,ತಪಸ್ವಿಗಳಿಗೆ ಸಾಧ್ಯವಾಗಬಹುದಾದ ಮಹಿಮೆ,ಮಹತ್ತು.ಹಣೆಪಟ್ಟಿಗಳು,ಹುಸಿ ಬಿರುದು ಬಾವಲಿಗಳನ್ನು ಅಂಟಿಸಿಕೊಂಡವರಿಗೆ ಅಸಾಧ್ಯವಾದ ಆಧ್ಯಾತ್ಮಿಕ ಸಾಧನೆಯ ಫಲಸಾಮರ್ಥ್ಯ ಇದು.ಯೋಗಿಯು ತನ್ನ ಯೋಗಸಾಮರ್ಥ್ಯದಿಂದ ಪ್ರಕೃತಿಯ ಮೇಲೆ ಪ್ರಭುತ್ವ ಸಾಧಿಸುತ್ತಾನಾದ್ದರಿಂದ ಆತ ನಿಗ್ರಹಾನುಗ್ರಹ ಸಮರ್ಥನಿರುತ್ತಾನೆ.ನಿಗ್ರಹಾನುಗ್ರಹ ಸಾಮರ್ಥ್ಯವೆಂದರೆ ಪ್ರಕೃತಿ ಶಕ್ತಿ- ತತ್ತ್ವಗಳನ್ನು ತನ್ನಿಷ್ಟದಂತೆ ಬಳಸಿಕೊಳ್ಳುವ ಶಕ್ತಿ, ಮಾರ್ಪಡಿಸಿಕೊಳ್ಳುವ ಸಾಮರ್ಥ್ಯ.ದುಷ್ಟರನ್ನು ನಿಗ್ರಹಿಸಬೇಕಾದರೆ ಅವರನ್ನು ಶಪಿಸಬೇಕಾಗುತ್ತದೆ.ಆ ಶಾಪವಾಕ್ಯವು ಪರಿಣಾಮಕಾರಿಯಾಗಬೇಕಾದರೆ ವಾಕ್ಸಿದ್ಧಿ ಸಾಮರ್ಥ್ಯ ಪಡೆದಿರಬೇಕು.ವಾಕ್ಸಿದ್ಧಿ ಸಂಪಾದಿಸಬೇಕು ಎಂದರೆ ಕನಿಷ್ಟ ಎಂಬತ್ನಾಲ್ಕು ಲಕ್ಷ ತನಗೆ ಉಪದೇಶಿಸಿದ ಮಂತ್ರ ಜಪಿಸಿರಬೇಕು.ಪಂಚಾಕ್ಷರಿ,ಷಡಕ್ಷರಿ,ಅಷ್ಟಾಕ್ಷರಿಗಳು ಎಂದು ವಿವಿಧ ಬಗೆಯಲ್ಲಿ ಇರುವ ಮಂತ್ರಗಳನ್ನು ಎಂಬತ್ನಾಲ್ಕು ಲಕ್ಷಗಳಷ್ಟು ಜಪಿಸಬೇಕು ಎಂದರೆ ಎಷ್ಟು ವರ್ಷಗಳ ಸಾಧನೆ ಮಾಡಿರಬೇಕು ? ಗಾಯತ್ರಿ ಮಂತ್ರೋಪಾಸಕರು ಆ ಮಂತ್ರವನ್ನು ಒಂದು ಲಕ್ಷ ಬಾರಿ ಜಪಿಸಿದರೆ ನಿಗ್ರಹಾನುಗ್ರಹ ಸಾಮರ್ಥ್ಯ ಸಂಪಾದಿಸುತ್ತಾರೆ.ಇಪ್ಪತ್ನಾಲ್ಕು ಅಕ್ಷರಗಳ ಗಾಯತ್ರಿ ಮಂತ್ರವನ್ನು ಒಂದು ಸಾವಿರ ಸಾರೆ ಜಪಿಸಬೇಕು ಎಂದರೆ ಎರಡುವರೆಯಿಂದ ಮೂರು ಘಂಟೆಗಳು ಬೇಕು.ಹೀಗೆ ಎಷ್ಟುದಿನಗಳ ಸಾಧನೆ ಮಾಡಬೇಕು ಒಂದು ಲಕ್ಷ ಗಾಯತ್ರಿ ಜಪಕ್ಕೆ? ದಿನಕ್ಕೆ ಹನ್ನೊಂದೊ,ಇಪ್ಪತ್ನಾಲ್ಕೊ ಅಥವಾ ಬಹಳ ಎಂದರೆ ಒಂದುನೂರಾ ಎಂಟುಸಾರೆ ಗಾಯತ್ರಿಮಂತ್ರ ಜಪಿಸುವವರು ನಿಗ್ರಹಾನುಗ್ರಹ ಸಮರ್ಥರಾಗಬಲ್ಲರೆ?ಕೆಲವರು ವಾಕ್ಸಿದ್ಧಿಗಾಗಿ ತಾಂತ್ರಿಕ ಆಚರಣೆಗಳನ್ನು ಕೈಗೊಳ್ಳುತ್ತಾರಾದರೂ ಆ ತಾಂತ್ರಿಕ ಸಿದ್ಧಿಗಳು ಪೂರ್ಣ ಫಲಕೊಡುವುದಿಲ್ಲ ಎನ್ನುವುದನ್ನು ಮರೆಯಬಾರದು.ಯೋಗ ಮತ್ತು ಆಧ್ಯಾತ್ಮಿಕ ಸಾಧನೆಯಿಂದ ದೊರಕುವ ಸಿದ್ಧಿಗಳೇ ನಿಜವಾದ ಸಿದ್ಧಿಗಳು.ಇನ್ನು ‘ಅನುಗ್ರಹ ಸಾಮರ್ಥ್ಯ’ವು ಸಿದ್ಧಿಸಬೇಕಾದರೆ ಮೂರುಕೋಟಿಗಳಷ್ಟು ಸಂಖ್ಯೆಯ ಮಂತ್ರಜಪ ಇಲ್ಲವೆ ಅನುಷ್ಠಾನ ಮಾಡಿರಬೇಕು.ಇದು ಸರ್ವರಿಗೂ ಸುಲಭ ಸಾಧ್ಯವಲ್ಲ.ಅನುಗ್ರಹ ಸಾಮರ್ಥ್ಯವೆಂದರೆ ಹಣೆಬರಹವನ್ನು ಬದಲಿಸುವ ಸಾಮರ್ಥ್ಯ.ತನ್ನನ್ನು ಆಶ್ರಯಿಸಿ ಬಂದ ಭಕ್ತನೊಬ್ಬನೊಬ್ಬನು ಅಲ್ಪಾಯು ಆಗಿದ್ದರೆ ಅವನನ್ನು ಆಶೀರ್ವದಿಸಿ ದೀರ್ಘಾಯುವಾಗುವಂತೆ ಮಾಡುವುದೇ ಅನುಗ್ರಹ.ತನ್ನನ್ನು ಆಶ್ರಯಿಸಿ ಬಂದ ಭಕ್ತ ಪ್ರಾರಬ್ಧಕರ್ಮದಿಂದ ಯಾವುದೋ ಭಯಂಕರ ಕಾಯಿಲೆಯಿಂದ ಬಳಲುತ್ತಿದ್ದರೆ ಆ ಕಾಯಿಲೆಯಿಂದ ಅವನನ್ನು ಮುಕ್ತನನ್ನಾಗಿಸುವುದೇ ಅನುಗ್ರಹ ಸಾಮರ್ಥ್ಯ.ಅಮವಾಸೆಯಲ್ಲಿ ಚಂದ್ರದರ್ಶನ ಮಾಡಿಸುವ,ಹುಣ್ಣಿಮೆಯನ್ನು ಅಮವಾಸೆಯ ರಾತ್ರಿಯನ್ನಾಗಿಸುವ,ಅಕಾಲದಲ್ಲಿ ಮಳೆ ತರಿಸಬಲ್ಲ ಸಾಮರ್ಥವೇ ನಿಗ್ರಹಾನುಗ್ರಹ ಸಾಮರ್ಥ್ಯ.ಸೂರ್ಯನ ಗತಿಯನ್ನೂ ಸ್ತಂಭಿಸಬಲ್ಲೆ ಎನ್ನುವ ಸಾಮರ್ಥ ಉಳ್ಳವರೇ ನಿಗ್ರಹಾನುಗ್ರಹ ಸಮರ್ಥರು.ಈಗ ಹೇಳಿ ಎಲ್ಲಿದ್ದಾರೆ ಅಂಥವರು?

ಈ ವಿವರಣೆ ಕೇಳಿ ತಬ್ಬಿಬ್ಬು ಆದ ನನ್ನ ನೌಕರ ಮಿತ್ರರು ‘ ಇಷ್ಟೊಂದು ಶಕ್ತಿ ಇದೆಯಾ ಸರ್ ಈ ಶಬ್ದದ ಹಿಂದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.’ ಇಷ್ಟೇ ಅಲ್ಲ,ಇದಕ್ಕೂ ಹೆಚ್ಚಿನ ಶಕ್ತಿ- ಸಾಮರ್ಥ್ಯಗಳಿರಬೇಕು ‘ ನಿಗ್ರಹಾನುಗ್ರಹ ಸಮರ್ಥರು’ ಎಂದು ಹೊಗಳಿಸಿಕೊಳ್ಳುವವರಿಗೆ ಎಂದು ಹೇಳಿ ‘ಇಂತಹ ಪದಗಳನ್ನು ಬಳಸಬೇಡಿ ಇನ್ನು ಮುಂದೆ’ ಎನ್ನುವ ಸಲಹೆಯನ್ನು ನೀಡಿ,ಕಳುಹಿಸಿದೆ ಆ ನೌಕರ ಮಿತ್ರರನ್ನು.

ಮುಕ್ಕಣ್ಣ ಕರಿಗಾರ
ಮೊ: 94808 79501

19.10.2021