
ಪ್ರಯತ್ನಕ್ಕೆ ಫಲ ಕೊಡದೆ ಜೀವನ ಯಾರನ್ನೂ ಕಳಿಸದು!
ಲೇಖಕ: ರವಿ ಜಾನೇಕಲ್
ಒಬ್ಬ ಹುಡುಗನಿದ್ದ. ಸಾಮಾನ್ಯ ಹುಡುಗ. ಅವನು ಒಂದು ವಿಷಯದಲ್ಲೂ ಪಾಸಾಗುತ್ತಿರಲಿಲ್ಲ. ಕ್ರಿಕೆಟ್‌ನಲ್ಲಿ ಅವನ ಕಳಪೆ ಪ್ರದರ್ಶನದಿಂದಲೇ ತಂಡ ಸೋತುಹೋಗುತ್ತಿತ್ತು. ತಂಡವಾಗಿ ಹೋದರೂ ಅವನು ಉತ್ತಮ ಎನಿಸಿಕೊಳ್ಳಲಿಲ್ಲ. ವೈಯಕ್ತಿಕವಾಗಿ ಕೂಡ ಅಷ್ಟಕ್ಕಷ್ಟೆ. ಇನ್ನು ಶಾಲೆಯಲ್ಲಂತೂ ಯಾವ ಶಿಕ್ಷಕರೂ ಅವನನ್ನು ಅಷ್ಟಾಗಿ ಗಮನಿಸುತ್ತಿರಲಿಲ್ಲ. ಈ ಹುಡುಗನ ಬುದ್ಧಿಯೇ ಇಷ್ಟು. ಇವನನ್ನು ಸುಧಾರಿಸಲು ಸಾಧ್ಯವಿಲ್ಲ ಎಂದು ಕೈ ಚೆಲ್ಲಿದ್ದರು. ಆಟ, ಪಾಠ, ಓದು ಯಾವುದರಲ್ಲೂ ಉತ್ತಮವಿಲ್ಲದ ಅವನನ್ನು ಸ್ನೇಹಿತರೂ ಹತ್ತಿರ ಸೇರಿಸುತ್ತಿರಲಿಲ್ಲ. ಯಾರಾದರೂ ಅವನನ್ನು ಮಾತನಾಡಿಸಿಬಿಟ್ಟರೆ ಅವನಿಗೇ ಆಶ್ಚರ್ಯವಾಗಿ ಬಿಡುತ್ತಿತ್ತು. ತಾನು ಯಾವತ್ತಿದ್ದರೂ ಹೀಗೆಯೇ, ತಾನೊಬ್ಬ ಕೈಲಾಗದವ, ತನ್ನನ್ನ ಯಾರೂ ಇಷ್ಟಪಡುವುದಿಲ್ಲ. ಇರಲಿ; ನಾನಿರುವುದೇ ಹೀಗೆ ಅಂದುಕೊಂಡು ಆತ ಕಾಲೇಜು ತಲುಪಿದ. ಅಲ್ಲಿಯೂ ಯಾವ ಹುಡುಗಿಯರೂ ಅವನನ್ನು ಇಷ್ಟಪಡಲಿಲ್ಲ. ಅವನೂ ಪ್ರಯತ್ನಿಸಲಿಲ್ಲ. ಅಲ್ಲಿಯೂ ಫೇಲ್ ಆಗುತ್ತಿದ್ದ. ಅವನು ಒಂದೇ ಒಂದು ಹುಡುಗಿಯ ಹತ್ತಿರವೂ ನಗುತ್ತಿರಲಿಲ್ಲ. ಯಾವಾಗಲೂ ತನ್ನ ಲೋಕದಲ್ಲಿ ತಾನಿದ್ದು ಬಿಡುತ್ತಿದ್ದ. ಯಾರನ್ನೂ ಇಂಪ್ರೆಸ್ ಮಾಡಲೂ ಹೋಗುತ್ತಿರಲಿಲ್ಲ. ತನ್ನ ಬಗ್ಗೆಯೂ ಬೇಸರಪಟ್ಟುಕೊಳ್ಳುತ್ತಿರಲಿಲ್ಲ. ನಾನಿರುವುದೇ ಹೀಗೆ ಎಂದು ಒಪ್ಪಿಕೊಂಡಿದ್ದುಬಿಟ್ಟ.
ಆ ಹುಡುಗನ ಒಂದೇ ಒಂದು ಪ್ರತಿಭೆ ಏನೆಂದರೆ ಆತನಿಗೆ ತುಂಬ ಸುಂದರವಾಗಿ ಚಿತ್ರ ಬಿಡಿಸಲು ಬರುತ್ತಿತ್ತು. ಒಂದಿಷ್ಟು ಕಾರ್ಟೂನ್ ಬಿಡಿಸಿ ಶಾಲೆಯ ಮ್ಯಾಗಜಿನ್‌ಗೆ ಕೊಟ್ಟ. ದುರಾದೃಷ್ಟವೆಂದರೆ ಅಲ್ಲಿಯೂ ಕಾರ್ಟೂನ್‌ಗಳನ್ನು ನಿರಾಕರಿಸಲಾಯಿತು. ಆದರೆ ಈ ಬಾರಿ ಅವನು ಬಿಡಲಿಲ್ಲ. ಅವನಿಗೆ ತಾನು ಉಳಿದೆಲ್ಲಕ್ಕಿಂತ ಚೆನ್ನಾಗಿ ಚಿತ್ರ ಬಿಡಿಸಬಲ್ಲೆ ಎಂಬುದು ಗೊತ್ತಿತ್ತು. ವಾಲ್ಟ್ ಡಿಸ್ನಿ ಸ್ಟುಡಿಯೋಗೆ ಕಳಿಸಿದ. ಅವನಿಗೆ ಈ ಬಾರಿ ಬಹಳ ನಿರೀಕ್ಷೆಯಿತ್ತು. ಆದರೆ ಈ ಸಲವೂ ಅವರಿಂದ ತಿರಸ್ಕೃತನಾದ! ಅಲ್ಲಿಗೆ ಅವನೊಬ್ಬ ಕೈಲಾಗದವ ಎಂಬುದು ಸ್ಪಷ್ಟವಾಯಿತು. ಹುಡುಗ ಈಗ ತೀರ್ಮಾನಿಸಿದ. ಆಯಿತು. ಇನ್ನೂ ಏನಾಗುವುದಿದೆ? ಸೋತಾಯಿತಲ್ಲ. ಇನ್ನು ಪ್ರಯತ್ನ ಮಾಡುತ್ತಲೇ ಇರುತ್ತೇನೆ. ಈ ಸಲ ನನ್ನ ಕಥೆಯನ್ನೇ ಹೇಳುತ್ತೇನೆ. ನನ್ನ ಸೋಲಿನ ಕಥೆ ಹೇಳುತ್ತೇನೆ ಅಂದುಕೊಂಡು ತನ್ನದೇ ಚಿತ್ರ ಬಿಡಿಸಿ, ತನ್ನದೇ ತಳಮಳಗಳನ್ನು ಕಾಮಿಕ್ಸ್ ಮಾಡಿದ. ಜನರು ಆತನ ಸೋಲಿನ ಜತೆಗೆ ತಮ್ಮನ್ನು ಹೋಲಿಸಿ ನೋಡಿಕೊಳ್ಳತೊಡಗಿದರು. ನೋಡನೋಡುತ್ತಿದ್ದಂತೆ ಆತ ಜನಪ್ರಿಯತೆ ಗಳಿಸತೊಡಗಿದ. ಆತನೇ ಅಮೆರಿಕದ ಪ್ರಸಿದ್ಧ ಕಾರ್ಟೂನಿಸ್ಟ್ ಚಾರ್ಲ್ಸ್ ಸ್ಕಲ್ಸ್ ಅವನ “ಪೀನಟ್” ಪುಸ್ತಕವನ್ನು ನಾವು-ನೀವೆಲ್ಲ ನೋಡಿರುತ್ತೇವೆ, ಓದಿರುತ್ತೇವೆ.
ಜೀವನ ಎಲ್ಲರಿಗೂ ಒಂದೇ ಕಾಲಕ್ಕೆ ಒಳ್ಳೆಯ ಸಮಯವನ್ನು ಕೊಡುವುದಿಲ್ಲ. ಎಲ್ಲರಂತೆ ಯಶಸ್ಸು ಸಿಗಲಿಲ್ಲ ಎಂದರೆ ನಾವು ಯಾವಾಗಲೂ ಸೋಲುಣ್ಣುವವರು ಎಂದಲ್ಲ. ನಮ್ಮ ಸಮಯ ಬರುವವರೆಗೂ ಪ್ರಯತ್ನಿಸುತ್ತಲೇ ಇರಬೇಕು. ಪ್ರಯತ್ನಕ್ಕೆ ಫಲ ಕೊಡದೆ ಜೀವನ ಯಾರನ್ನೂ ಕಳುಹಿಸದು. ಸೋಲುಂಡರೂ ಪ್ರಯತ್ನಿಸುತ್ತಲೇ ಇರುವುದನ್ನು ಮರೆಯಬಾರದು. ಒಂದಲ್ಲ ಒಂದು ದಿನ ಫಲ ಸಿಕ್ಕೇ ಸಿಗುತ್ತದೆ. ಕಷ್ಟ, ಹತಾಶೆಗಳು ಎಲ್ಲರಿಗೂ ಕಟ್ಟಿಟ್ಟಿದ್ದೇ, ಆದರೆ ನಾವದನ್ನು ಹೇಗೆ ತೆಗೆದುಕೊಳ್ಳಬೇಕು ಎಂಬ ಆಯ್ಕೆ ಸದಾ ನಮಗಿರುತ್ತದೆ. ಕಷ್ಟ ಬಂದಾಗ, ಸೋಲುತ್ತಿದ್ದಾಗ ಅತ್ತು, ಕರೆದು ರಂಪ ಮಾಡಿ, ಅಸಹಾಯಕರಾಗಿ ಕೂರದೆ ಸಹನೆಯಿಂದಿದ್ದು ನಾವು ಮಾಡುವುದನ್ನು ಮಾಡುತ್ತ ಹೋದರೆ ನಮ್ಮ ಪಾಲಿನದು ನಮಗೆ ಸಿಕ್ಕೇ ಸಿಗುತ್ತದೆ. ಭಗವಂತ ಕೊಟ್ಟ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಸಮಯ ತೆಗೆದುಕೊಂಡಷ್ಟೂ ನಮ್ಮ ಯಶಸ್ಸಿನ ದಿನಗಳು ದೂರವಾಗುತ್ತ ಹೋಗುತ್ತವೆ.

ಮೊ:83102 71403