ದೇವಸ್ಥಾನಗಳಲ್ಲಿ ‘ ಕಾಣಿಕೆ ಪೆಟ್ಟಿಗೆ’ ಗಳನ್ನು ಏಕೆ ಇಡುತ್ತಾರೆ ? ಮುಕ್ಕಣ್ಣ ಕರಿಗಾರ

ದೇವಸ್ಥಾನಗಳಲ್ಲಿ ‘ ಕಾಣಿಕೆ ಪೆಟ್ಟಿಗೆ’ ಗಳನ್ನು ಏಕೆ ಇಡುತ್ತಾರೆ ?

ಲೇಖಕರು: ಮುಕ್ಕಣ್ಣ ಕರಿಗಾರ

ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡುವುದು ಸಾಮಾನ್ಯ ಸಂಗತಿ.ಸಣ್ಣ ದೇವಸ್ಥಾನಗಳಲ್ಲಿ ಒಂದೋ ಎರಡೋ ಕಾಣಿಕೆ ಪೆಟ್ಟಿಗೆಗಳಿದ್ದರೆ ದೊಡ್ಡ ದೊಡ್ಡ ದೇವಸ್ಥಾನಗಳಲ್ಲಿ ಹತ್ತಾರು ಕಾಣಿಕೆ ಪೆಟ್ಟಿಗೆಗಳನ್ನಿಟ್ಟಿರುತ್ತಾರೆ.ದೇವಸ್ಥಾನಗಳ ಖ್ಯಾತಿಗೆ ತಕ್ಕಂತೆ ಬಗೆಬಗೆಯ ಕಾಣಿಕೆಪೆಟ್ಟಿಗೆಗಳನ್ನು ಅಳವಡಿಸಲಾಗುತ್ತದೆ.ಕೆಲವೊಂದು ದೇವಸ್ಥಾನಗಳಲ್ಲಿ ದೇವರ ದರ್ಶನವಾಗದಿದ್ದರೂ ಕಾಣಿಕೆ ಪೆಟ್ಟಿಗೆಗಳ ದರ್ಶನವಾಗುತ್ತದೆ ಹುಂಡಿಗಳ ಹೆಸರಿನಲ್ಲಿ!ದೇವಸ್ಥಾನಗಳಲ್ಲಿ ದೇವರುಗಳನ್ನು ಕಾಯದೆ ಇದ್ದರೂ ಈ ಹುಂಡಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಯುತ್ತಾರೆ.ಸಿ ಸಿ ಕ್ಯಾಮರಾಗಳು,ಭದ್ರತಾ ಪಡೆ,ದೇವಳಪಡೆಗಳು ಹುಂಡಿಕಾಯುವ ಕೆಲಸ ನಿರ್ವಹಿಸುತ್ತಿವೆ.

ದೇವಸ್ಥಾನಗಳಲ್ಲಿಟ್ಟ ಹುಂಡಿಗಳ ಬಗ್ಗೆ ಅಪಹಾಸ್ಯ ಮಾಡುವುದು,ಕೆಟ್ಟದ್ದನ್ನಾಗಿ ಮಾತನಾಡುವವರೂ ಉಂಟು.ದೇವಸ್ಥಾನಗಳಲ್ಲಿ ಹುಂಡಿಗಳನ್ನು ಇಡಬಾರದು ಎಂದು ವಾದಿಸುವವರೂ ಇದ್ದಾರೆ.ಅದೇನೇ ಇರಲಿ,ದೇವಸ್ಥಾನಗಳಲ್ಲಿ ಹುಂಡಿಗಳು ಇರದಿದ್ದರೂ ಸರಿ,ಕಾಣಿಕೆ ಪೆಟ್ಟಿಗೆಗಳಂತೂ ಇರಲೇಬೇಕು ! ಯಾಕೆ ಅನ್ನುತ್ತೀರಾ?

ಮೇಲು ನೋಟಕ್ಕೆ ದೇವಸ್ಥಾನಗಳ ನಿರ್ವಹಣೆಗಾಗಿ ಕಾಣಿಕೆ ಪೆಟ್ಟಿಗೆಗಳನ್ನು ಇಡುತ್ತಾರೆ ಎಂದು ಅನ್ನಿಸಿದರೂ ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆಗಳನ್ನು ಇಡುವ ಕಾರಣ ಬೇರೆಯದೆ ಇದೆ.ದೇವಸ್ಥಾನಗಳನ್ನು ಯಾರೇ ಕಟ್ಟಿಸಿರಲಿ,ಅವುಗಳನ್ನು ಯಾರೇ ನಿರ್ವಹಿಸುತ್ತಿರಲಿ ಅವು ಖಾಸಗಿ ಆಸ್ತಿಗಳಲ್ಲ ;ಸಾರ್ವಜನಿಕರ ಆಸ್ತಿ.ದೇವರು,ಧರ್ಮ ಮತ್ತು ದೇವಸ್ಥಾನಗಳ ವಿಷಯದಲ್ಲಿ ಯಾರೊಬ್ಬರ ಒಡೆತನ ಸಲ್ಲದು,ಯಾರೊಬ್ಬರ ಏಕಸ್ವಾಮ್ಯಕ್ಕೂ ದೇವಸ್ಥಾನಗಳು ಒಳಪಡಬಾರದು .ಈ ಕಾರಣಕ್ಕಾಗಿಯೇ ನಮ್ಮ ಹಿರಿಯರು ದೇವಸ್ಥಾನಗಳಿಗೆ ಗ್ರಾಮಸ್ಥರು,ಭಕ್ತಾದಿಗಳಿಂದ ಕಾಣಿಕೆ- ಕೊಡುಗೆಗಳನ್ನು ಸಂಗ್ರಹಿಸುವ ವ್ಯವಸ್ಥೆ ಮಾಡಿದರು.ಉಳ್ಳವರು ಬಂಗಾರ- ಬೆಳ್ಳಿ,ರತ್ನಾಭರಣಗಳ ರೂಪದಲ್ಲಿ ಕಾಣಿಕೆ ನೀಡಿದರೆ ಕೆಲವರು ಹಣದ ರೂಪದಲ್ಲಿ ಮತ್ತೆ ಕೆಲವರು ದವಸ- ಧಾನ್ಯಗಳ ರೂಪದಲ್ಲಿ ದೇವಸ್ಥಾನಗಳಿಗೆ ಕಾಣಿಕೆ,ಕೊಡುಗೆಗಳನ್ನು ಸಮರ್ಪಿಸುತ್ತಿದ್ದರು.ದೇವಸ್ಥಾನ ಮಂಡಲಿಗಳು ಸುಗ್ಗಿಯ ಕಾಲದಲ್ಲಿ ವರ್ಷಕ್ಕೊಮ್ಮೆ ಕಾಣಿಕೆಯನ್ನು ಸಂಗ್ರಹಿಸುವ ಪದ್ಧತಿಯೂ ಇತ್ತು ಕೆಲವು ಕಡೆ.ಈಗ ಅಂತಹ ಪದ್ಧತಿ ಬಹುತೇಕ ಕಣ್ಮರೆಯಾಗಿ ಕಾಣಿಕೆ ಪೆಟ್ಟಿಗೆ,ಹುಂಡಿಗಳ ಮೂಲಕ ಕಾಣಿಕೆ ಸಂಗ್ರಹಿಸಲಾಗುತ್ತಿದೆ.ಈ ಕಾಣಿಕೆ- ಕೊಡುಗೆಗಳ ಮೂಲಕ ದೇವರುಗಳ ನಿತ್ಯ,ನೈಮಿತ್ತಿಕ ಪೂಜೆ,ಉತ್ಸವಾದಿ ಧಾರ್ಮಿಕ ಕ್ರಿಯೆಗಳನ್ನು ಆಚರಿಸಲಾಗುತ್ತದೆ.ದೇವರುಗಳ ಪೂಜೆ ನಿರಂತರವಾಗಿ ನಡೆಯಬೇಕಾದರೆ ಪೂಜಾ ಸಾಮಗ್ರಿಗಳು,ದೇವೋಪಚಾರದ ಸಾಧನ- ಸಾಮಗ್ರಿಗಳು ಬೇಕಾಗುತ್ತವೆ.ಇವುಗಳನ್ನು ಖರೀದಿಸಲು ಹಣಬೇಕು.ದೇವಸ್ಥಾನಗಳಿಗೆ ಬರುವ ಭಕ್ತರಿಗೆ ದಾಸೋಹದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.ಅದಕ್ಕೆ ಹಣ,ದವಸ- ಧಾನ್ಯಗಳು ಬೇಕಾಗುತ್ತವೆ.ಅದಕ್ಕಾಗಿ ಕಾಣಿಕೆ ಬೇಕು.ದೇವರುಗಳ ಪೂಜೆ- ಸೇವೆಗಳಿಗಾಗಿ ನಿಯುಕ್ತರಾದ ಅರ್ಚಕರು,ಪೂಜಾರಿಗಳು,ದೇವಸ್ಥಾನದ ಪೂಜಾ ಸಮಯದ ವಾದ್ಯ- ಸಂಗೀತ ಮೇಳ ಮತ್ತು ಕಸಗುಡಿಸುವವರ ಜೀವನ ನಿರ್ವಹಣೆಗಾಗಿ ಅಷ್ಟಿಷ್ಟು ಸಂಬಳ ನೀಡಬೇಕಾಗುತ್ತದೆ.ಅದಕ್ಕೂ ಕಾಣಿಕೆ ಬೇಕು.ದೇವಸ್ಥಾನಗಳನ್ನು ವಾರ್ಷಿಕ ಹಬ್ಬ,ಜಾತ್ರೆ- ಉತ್ಸವಗಳಿಗಾಗಿ ಸ್ವಚ್ಛಗೊಳಿಸಿ,ಸುಣ್ಣ ಬಣ್ಣ,ತಳಿರು- ತೋರಣಗಳಿಂದ ಅಲಂಕರಿಸಬೇಕಾಗುತ್ತದೆ.ಇದಕ್ಕೂ ಖರ್ಚು ತಗಲುತ್ತದೆ.ಹಾಗಾಗಿ ಕಾಣಿಕೆ ಬೇಕು.ಇವು ದೇವಸ್ಥಾನಗಳಲ್ಲಿ ಕಾಣಿಕೆ ಪೆಟ್ಟಿಗೆಗಳನ್ನಿಡುವ ಕೆಲವು ಪ್ರಮುಖ ಕಾರಣಗಳು.

ನಾನು ಈ ಮೊದಲೇ ಪ್ರಸ್ತಾಪಿಸಿದಂತೆ ದೇವಸ್ಥಾನಗಳು ಸಾರ್ವಜನಿಕ ಆಸ್ತಿಯಾಗಿದ್ದರಿಂದ ದೇವಸ್ಥಾನಗಳ ನಿರ್ವಹಣೆ,ಉಸ್ತುವಾರಿಗಳ ಜವಾಬ್ದಾರಿಯೂ ಸಾರ್ವಜನಿಕರದ್ದೆ.ಯಾರೋ ಒಬ್ಬರು ಶ್ರೀಮಂತರು ದೇವಸ್ಥಾನದ ನಿಗಾ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಿಕೊಂಡರೆ ಅವರಲ್ಲಿ ಅಹಂಕಾರ ಮೊಳೆವುದಲ್ಲದೆ ಅವರು ದೇವಸ್ಥಾನವನ್ನು ತಮ್ಮ ಅಂಕೆಗೆ ತೆಗೆದುಕೊಂಡು ತಮ್ಮ ಅಧಿಕಾರ ಚಲಾಯಿಸುತ್ತಾರಲ್ಲದೆ ಅವರದೆ ಆದ ನೀತಿ- ನಿಯಮಾವಳಿಗಳನ್ನು ರೂಪಿಸಿಕೊಂಡು ದೇವಸ್ಥಾನದ ಸೇವೆ,ಪೂಜೆ- ಉತ್ಸವಗಳ ಗತಿ ನಿರ್ದೇಶಿಸುವ ಮಟ್ಟಿಗೆ ಬೆಳೆಯುತ್ತಾರೆ.ಇದು ಆಗಬಾರದು.ಅದಕ್ಕೆಂದೇ ದೇವಸ್ಥಾನಗಳಲ್ಲಿ ಕಾಣಿಕೆ ಪಡೆಯುವ ವ್ಯವಸ್ಥೆ.ಒಂದು ರೂಪಾಯಿ ಕಾಣಿಕೆ ಸಲ್ಲಿಸಿದವನೂ ದೇವರ ಭಕ್ತನೆ,ಒಂದು ಕೋಟಿ ರೂಪಾಯಿ ಕಾಣಿಕೆ ಕೊಟ್ಟವನೂ ದೇವರ ಭಕ್ತನೆ.ಆ ಇಬ್ಬರಲ್ಲಿ ಭೇದವಿಲ್ಲ ದೇವರೆದುರು.

ದೇವಸ್ಥಾನಗಳು ಸಾರ್ವಜನಿಕರ ನಿರ್ವಹಣೆಯಲ್ಲಿದ್ದರೆ ಸಮಾಜದ ಕಾಳಜಿ- ಕಳಕಳಿಗಳು ಆ ದೇವಸ್ಥಾನದ ಮೇಲೆ ಇರುತ್ತದೆ.ಸಾಮೂಹಿಕ ಆಸ್ತಿಯಾಗುವುದರಿಂದ ಸಮುದಾಯವು ಆ ದೇವಸ್ಥಾನದ ಮೇಲೆ ಮುತುವರ್ಜಿವಹಿಸುತ್ತದೆ.ದೇವರು ಎಲ್ಲರಿಗೂ ಸೇರಿದವನು ಆದ್ದರಿಂದ ದೇವಸ್ಥಾನಗಳು ಸಮಾಜದ,ಸಾರ್ವಜನಿಕರ ಆಸ್ತಿ.ದೇವಸ್ಥಾನವು ಖಾಸಗಿ ಆಸ್ತಿ ಆದರೆ ಸಾರ್ವಜನಿಕರು ಆ ದೇವಸ್ಥಾನದಿಂದ ದೂರ ಉಳಿಯುತ್ತಾರೆ. ದೇವರಿಗೆ ಒಂದು ರೂಪಾಯಿ ಕಾಣಿಕೆ ಕೊಟ್ಟರೂ ಆ ದೇವಸ್ಥಾನ ನನ್ನದು ಎನ್ನುವ ಭಾವನೆ ಮೂಡುತ್ತದೆ ಭಕ್ತನಲ್ಲಿ.ಹೀಗೆ ಕಾಣಿಕೆ ಕೊಟ್ಟವರೆಲ್ಲರಲ್ಲಿಯೂ ದೇವಸ್ಥಾನಕ್ಕೆ ನನ್ನ ಕೊಡುಗೆಯೂ ಇದೆ,ಈ ದೇವಸ್ಥಾನ ನಮಗೆ ಸೇರಿದ್ದು ಇದನ್ನು ರಕ್ಷಿಸಬೇಕು ಎನ್ನುವ ಭಾವನೆ ಮೂಡುತ್ತದೆ.ಇದು ಕಾಣಿಕೆ ಪಡೆಯುವ ರಹಸ್ಯ! ದೇವರು ಜನರ ಬಳಿಗೆ,ಜನರು ದೇವರ ಬಳಿಗೆ ಬರುತ್ತಿರಬೇಕು ಎನ್ನುವ ಕಾರಣದಿಂದ ಭಕ್ತಾದಿಗಳಿಂದ ಕಾಣಿಕೆ ಸಂಗ್ರಹಿಸುವುದು.

ಭಾರತೀಯರಿಗೆ ನಾಲ್ಕು ಪುರುಷಾರ್ಥಗಳಿವೆ– ಧರ್ಮ,ಅರ್ಥ,ಕಾಮ ಮತ್ತು ಮೋಕ್ಷಗಳೆಂದು.ಇವುಗಳಲ್ಲಿ ಧರ್ಮಕ್ಕೆ ಅಗ್ರಸ್ಥಾನ ನೀಡುವ ಮೂಲಕ ಭಾರತೀಯರು ತಮ್ಮ ಜೀವನದಲ್ಲಿ ಧರ್ಮವು ವಹಿಸುವ ಪಾತ್ರದ ಮಹತ್ವವನ್ನು ಮನಗಂಡಿದ್ದಾರೆ.’ಧರ್ಮವನ್ನು ತಾವು ರಕ್ಷಿಸಿದರೆ ಧರ್ಮವು ತಮ್ಮನ್ನು ರಕ್ಷಿಸುತ್ತದೆ’ ಎಂದು ನಂಬಿರುವ ಭಾರತೀಯರು ಧರ್ಮಕಾರ್ಯಗಳೆಂದು ದೇವಸ್ಥಾನಗಳ ನಿರ್ಮಾಣಗೈಯುತ್ತಾ ಬಂದಿದ್ದಾರೆ.ಹೀಗೆ ನಿರ್ಮಾಣಗೊಂಡ ದೇವಸ್ಥಾನಗಳಿಗೆ ಕಾಣಿಕೆ ನೀಡುವುದು ತಮ್ಮ ದೇವರ ಸೇವೆ ಎಂದು ಭಾವಿಸಿ,ಕೈಲಾದ ಮಟ್ಟಿಗೆ ಕಾಣಿಕೆ ನೀಡುತ್ತಾ ಬಂದಿದ್ದಾರೆ.ನಿರಾಕಾರ ದೇವರ ಕಲ್ಪನೆಯು ಎಲ್ಲರಿಗೂ ಹಿಡಿಸದಾದ್ದರಿಂದ ದೇವರ ರೂಪ- ಆಕಾರ ಮತ್ತು ಉಪಾದಿಗಳನ್ನು ಕಲ್ಪಿಸಿಕೊಂಡು ಸಾಕಾರ ರೂಪದಲ್ಲಿ ದೇವರನ್ನು ಪೂಜಿಸುತ್ತ ಬಂದಿದ್ದರಿಂದ ದೇವರಿಗಾಗಿ ದೇವಸ್ಥಾನಗಳನ್ನು ಕಟ್ಟಬೇಕಾಯಿತು.ಸಾಕಾರನಾಗಿ ಪ್ರಕಟಗೊಂಡ ದೇವರ ಸೇವೆಯ ಮೂಲಕ ಅವನ ಅನುಗ್ರಹ ಪಡೆಯಬಹುದೆನಿಸಿದ್ದರಿಂದ ಪೂಜಾದಿ ದೈವಕಾರ್ಯಗಳನ್ನು ನಿಯಮಿಸಲಾಯಿತು.ದೇವರಿಗೆ ಸಲ್ಲಿಸುವ ಸೇವೆ- ಕಾಣಿಕೆಗಳಿಂದ ಫಲ ಉಂಟು ಎನ್ನಿಸಿ ಕೈಲಾದ ಮಟ್ಟಿಗೆ ಕಾಣಿಕೆ ಸಲ್ಲಿಸುತ್ತ ಬಂದರು ಹಿರಿಯರು.ದೇವಸ್ಥಾನಗಳಿಗೆ ಅವರವರ ಶಕ್ತ್ಯಾನುಸಾರ ಕಾಣಿಕೆ ನೀಡಬೇಕು,ಇಷ್ಟೇ ಎಂದು ನಿಗದಿಪಡಿಸಬಾರದು.ದೇವಸ್ಥಾನಗಳಲ್ಲಿ ಕೊಡುವ ಕಾಣಿಕೆ ಕೊಟ್ಟ ಭಕ್ತ ಮತ್ತು ಪಡೆದ ಭಗವಂತ ಇಬ್ಬರಿಗೇ ಗೊತ್ತಿರಬೇಕು,ಮೂರನೆಯವರಿಗೆ ಗೊತ್ತಾಗಬಾರದು.ಅಂದರೆ ಮಾತ್ರ ಸಲ್ಲಿಸಿದ ಕಾಣಿಕೆಯು ದೇವರಿಗೆ ಸಮರ್ಪಣೆಯಾಗುತ್ತದೆ,ಫಲ ನೀಡುತ್ತದೆ.ಈ ಕಾರಣಕ್ಕಾಗಿ ಕಾಣಿಕೆ ಪೆಟ್ಟಿಗೆಗಳ ಏರ್ಪಾಟು.ಉಳ್ಳವರು ಸಾವಿರಾರು ರೂಪಾಯಿಗಳ ಕಾಣಿಕೆ ನೀಡಬಹುದು,ಆದರೆ ಬಡವರು? ಬಡವರು ನೀಡುವ ಒಂದು ರೂಪಾಯಿಯೂ ಪ್ರಿಯವೆ ದೇವರಿಗೆ.ಎಲ್ಲರಿಗೆ ಕಾಣುವಂತೆ ಕಾಣಿಕೆ ನೀಡಿದರೆ ಶ್ರೀಮಂತರ ಪ್ರತಿಷ್ಠೆ,ಬಡವರ ಮುಜುಗುರಕ್ಕೆ ಕಾರಣವಾಗುತ್ತದೆ.ಸಿರಿವಂತರ ದರ್ಪದ ಕಾರಣವಾಗುವ ಸಾವಿರಾರು ರೂಪಾಯಿಗಳ ಬಹಿರಂಗ ಕಾಣಿಕೆ ಬಡವರ ಅಪಮಾನದ ಕಾರಣವಾಗುತ್ತದೆ.ಇದು ಕೂಡದು. ಆದ್ದರಿಂದ ದೇವಸ್ಥಾನಗಳಲ್ಲಿ ಸಲ್ಲಿಸಲ್ಪಡುವ ಕಾಣಿಕೆಗಳು ಗುಪ್ತವಾಗಿರಲಿ ಎಂದು ಕಾಣಿಕೆ ಪೆಟ್ಟಿಗೆಗಳನ್ನಿಡಲಾಗುತ್ತದೆ.ದೇವರಿಗೆ ಕೊಟ್ಟೆ ಎನ್ನುವ ಅಹಂ ಮೂಡಬಾರದು ಭಕ್ತನಲ್ಲಿ.ಕೊಡುವವನು ಭಗವಂತ,ಪಡೆಯುವವನೂ ಭಗವಂತ ಎನ್ನುವ ಸರ್ವಸಮರ್ಪಣಾ ಭಾವದಿಂದ ಸಲ್ಲಿಸಬೇಕು ಕಾಣಿಕೆಯನ್ನು.’ ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಏಡಿಸಿ ಕಾಡಿತ್ತು ಶಿವನ ಡಂಗೂರ’ ಎನ್ನುವ ಬಸವಣ್ಣನವರ ಮಾತು ಭಕ್ತರು ಗುಪ್ತವಾಗಿ ಕಾಣಿಕೆಗಳಂತಹ ಸೇವೆ ಸಲ್ಲಿಸಬೇಕು ಎಂದು ನಿರ್ದೇಶಿಸುತ್ತದೆ.ದೇವರಿಗೆ ನೀಡುವ ಕಾಣಿಕೆ ಪರಮಾತ್ಮನಿಗೆ ಸಲ್ಲಿಸುವ ಅಳಿಲು ಸೇವೆ ಎನ್ನುವ ಸಮರ್ಪಣಾಭಾವದಿಂದ ಸಲ್ಲಿಸಿದರೆ ಮಹತ್ತರ ಫಲ ಸಿದ್ಧಿಗಳುಂಟು.ನಾನು ದೇವರಿಗೆ ಇಷ್ಟುಕೊಟ್ಟೆ ಎನ್ನುವ ಅಹಂಕಾರ ಹುಟ್ಟಿದರೆ ಅದು ಅನರ್ಥದ ಕಾರಣವಾಗುತ್ತದೆ.

ಮುಕ್ಕಣ್ಣ ಕರಿಗಾರ
ಮೊ;94808 79501

19.10.2021