ದೇಶ ಕಟ್ಟೋದಕ್ಕೆ ಪ್ರಾಣಾನೆ ಬಿಡಬೇಕು ಅಂತೇನೂ ಇಲ್ಲಾರಿ…… : ದೀಪಕ್ ಶಿಂಧೆ

ದೇಶ ಕಟ್ಟೋದಕ್ಕೆ ಪ್ರಾಣಾನೆ ಬಿಡಬೇಕು ಅಂತೇನೂ ಇಲ್ಲಾರಿ……

ಲೇಖಕ: ದೀಪಕ್ ಶಿಂಧೆ

ಅಪನೆ ಗಲಿ ಮೇ ತೋ ಕುತ್ತಾ ಭೀ ಷೇರ್ ಹೋತಾ ಹೇ ಸಾಬ್ ಹಮಾರಾ ಕ್ಯಾ ಹೆ?? ಚಲೇ ಆಯೇ ಕಾಮ ಧೂಂಡತೆ…ಧೂಂಡತೆ… ಹೀಗೆ ಆತನೊಂದಿಗೆ ಕಂಹಾಕೆ ರಹನೆವಾಲೆ ಹೋ ಅಂದಾಗ ಮಾತಿಗಿಳಿದು ಮೈ… ರಾಜಸ್ಥಾನಸೇ! ಅಂದವನಿಗೆ ಕನ್ನಡ ಬರಲ್ವೇನೋ ತಮ್ಮ ಅಂದಾಗ ಸೀಖುಂಗಾ ನಾ ಸಾಬ್ ಅಂದವನ ಜೊತೆಗೆ ಮಾತಿಗೆ ಇಳಿದಾಗ ತಾನು ಸಾವಿರಾರು ಕಿಲೋಮೀಟರ್ ದೂರದಲ್ಲಿ ಬಿಟ್ಟು ಬಂದ ಅಪ್ಪ ಅಮ್ಮ ಮತ್ತು ತಂಗಿಯ ನೆನಪು ಮಾಡಿಕೊಂಡು ವಿನಾಕಾರಣ ನಕ್ಕ ಹುಡುಗನಿಗೆ ಅದೆಂಥಾ ಸ್ವಾಭಿಮಾನಾ ಅಂತೀರಿ?? ಅಗರ್ ಎ ಲಾಕ್ ಡೌನ್ ನಹಿ ಹೋತಾ ತೋ ಹಮ್ ಭಿ ದಿವಾಲಿಕೋ ಗಾಂವ್ ಚಲೆ ಜಾತೆ ಸಾಬ್ ಪರ್ ಕ್ಯಾ ಕರೆ?? ಅಂದು ಕಣ್ಣು ತುಂಬಿಕೊಂಡವನ ಹೆಸರು ಕನ್ಹಯ್ಯಾ…

ಪ್ರತಿದಿನವೂ ನಮ್ಮ ಮನೆಯ ಓಣಿಗೆ ಗಂಟೆ ಬಾರಿಸುತ್ತ ತಳ್ಳುವ ಗಾಡಿಯಲ್ಲಿ ಪಾನಿಪೂರಿ ಮಾರುವ ಹುಡುಗನ ಜೊತೆಗೆ ಆಡಿದ ಒಂದಷ್ಟು ಮಾತುಗಳಿವು.ಬದುಕು ಕಟ್ಟುವ ಅನಿವಾರ್ಯತೆಗೆ ಮನೆಯಲ್ಲಿನ ಬಡತನಕ್ಕೆ ದುಡಿದು ಬದುಕುವ ಛಲಕ್ಕೆ ಹೀಗೆ ರಾಜ್ಯ ಬಿಟ್ಟು ರಾಜ್ಯಕ್ಕೆ ಬಂದು ಮತ್ತೊಬ್ಬರ ಕೈಯಲ್ಲಿ ಆಳಾಗಿ ದುಡಿಯುವ ಸಾವಿರಾರು ಜನ ನಮ್ಮದೆ ದೇಶದ ಯಾವದೋ ಮೂಲೆಯಿಂದ ಇನ್ನೆಲ್ಲಿಗೋ ಬಂದು ಬದುಕುವ ಪ್ರಯತ್ನ ಮಾಡುವದನ್ನ ಕಾಣುವ ನಮಗೆ ನಮ್ಮದೇ ರಾಜ್ಯದ ಗುಲಬರ್ಗಾ,ವಿಜಯಪುರ,ದೇವಣಗಾಂವ, ಸಿಂದಗಿ,ಅಫಜಲಪುರ, ಹುಮನಾಬಾದಿನ ಜನರು ದುಡಿಯುವದಕ್ಕೆ ಅಂತಲೇ ಗೋವಾ ಮುಂಬೈ ಪೂನಾದಂತಹ ನಗರಗಳ ಕಡೆಗೆ ಗುಳೆ ಹೋಗುವದನ್ನ ನೋಡಿದ ನನಗೆ ಅವರ ಬದುಕಿನ ಅನಿವಾರ್ಯತೆಯ ಅರಿವಾಗುತ್ತದೆ.
ಆದರೆ ದುರಂತವೆಂದರೆ ಅಪ್ಪ ಹಾಕಿದ ಆಲದ ಮರ ಅಂತ ಮಡಿಕೆ,ಕುಡಿಕೆಗಳ ಮಾಡುವ ಕುಂಬಾರರು,ಹೆಚ್ಚಿನ ಬಂಡವಾಳ ತೊಡಗಿಸಲಾಗದೆ ಇತ್ತ ಊರು ಬಿಟ್ಟು ಬೇರೆ ಊರಿಗೆ ದುಡಿಯುವದಕ್ಕೆ ಹೋಗಲು ಅಡ್ಡಿಯಾಗುವ ಪರಭಾಷೆಯ ಭಾರಕ್ಕೆ,ಅಥವಾ ತಮ್ಮದೆ ಆದ ಒಂದಷ್ಟು ಬಲಹೀನತೆಗಳಿಂದಾಗಿ ಊರಲ್ಲೆ ಉಳಿದು ಹೋದ ಮತ್ತು ಬೀದಿಬದಿಯ ವ್ಯಾಪಾರ ನಂಬಿದ ಜನರ ಬಗ್ಗೆ ಸ್ವಲ್ಪ ಮಟ್ಟಿಗಿನ ಕನಿಕರ ಹುಟ್ಟಿಬಿಡುತ್ತದೆ. “ವಿಷಯ ಗೊತ್ತೇನ್ರಿ ರಾಜಮ್ಮ ಅಮೇಜಾನ್ ಅಲ್ಲಿ ಫೆಸ್ಟಿವಲ್ ಸೇಲ್ ಇದೆ ಟಿವಿ,ವಾಷಿಂಗ್ ಮಷೀನು,ಪ್ರಿಡ್ಜು ಎಲ್ಲದರ ಮೇಲೂ ಭಾರೀ ಡಿಸ್ಕೌಂಟ್ ಅಂತೆ ಅಯ್ಯೋ ಮೊನ್ನೆ ನಾವು ನಮ್ ಫ್ಯಾಮಿಲಿ ಝೊಮ್ಯಾಟೋಲಿ ಆರ್ಡರ್ ಮಾಡಿದ್ವಿ ಹತ್ತೆ ನಿಮಿಷದಲ್ಲಿ ಮನೆಗೆ ಊಟಾ ಬಂತು,ಕೆಎಫ್ ಸಿ ಯಲ್ಲಿ ಅದೇನ್ ಟೇಸ್ಟು ಅಂತೀರಾ…? ಪುಟ್ಟ ಮಗಳು ಹಠಾ ಮಾಡ್ತಾಳೆ ಅಂತ ಬರೋವಾಗ ಫಿಜ್ಜಾ ಕಾರ್ನರ್ ಅಲ್ಲಿ ಪಾರ್ಸಲ್ ಕೂಡಾ ತಂದ್ವಿ” ಅನ್ನುತ್ತ ಸ್ಲಿವ್ ಲೆಸ್ ತೊಟ್ಟುಕೊಂಡು ಪಕ್ಕದ ಮನೆಯವಳೊಂದಿಗೆ ಮಾತನಾಡುವ ಹೆಣ್ಣುಮಕ್ಕಳನ್ನ ಕಂಡಾಗ ನನ್ನ ಹೊಟ್ಟೆಯಲ್ಲಿ ಬೆಂಕಿ ಹೊತ್ತಿಕೊಂಡು ಅಗ್ಗಿಷ್ಟಿಕೆ ಉರಿದಂತಾಗುತ್ತದೆ.ಅರೆ ಅವ್ರ ದುಡ್ಡು ಅವರ್ ಮಾತು ಇವರ್ ಕರ್ಮಕ್ಕೆ ನೀವ್ಯಾಕ್ರಿ ಕೊರಗ್ತೀರಾ ಅಂತ ಯಾರ್ ಬೇಕಾದ್ರು ಈಜಿಯಾಗಿ ಅಂದು ಬಿಡಬಹುದು.
ನಿತ್ಯವೂ ಕೂಡ ಸಾವಿರಾರು ಕೋಟಿ ದುಡಿಯುವ,ನಿಮ್ಮ ಜೇಬಿಗೆ ಧಾರಾಳವಾಗಿ ಸಾವಿರಾರು ರೂಪಾಯಿ ಕತ್ತರಿ ಹಾಕುವ ವಿದೇಶೀ ಕಂಪನಿಗಳ ಕಲರ್ ಪುಡ್ ತಿನ್ನುವ ನಾಲಿಗೆ ಮಾತ್ರ ಈ ರೀತಿ ಮಾತಾಡೋಕೆ ಸಾಧ್ಯ.

ಆದರೆ ಒನ್ಸ ಅಗೇನ್ ಐ ಯಾಮ್ ಟಾಕಿಂಗ್ ಅಬೌಟ್ ಬೀದಿ ಬದಿಯ ವ್ಯಾಪಾರಿಳು ಮತ್ತವರ ಬದುಕಿನ ಬಗ್ಗೆ.
ರಸ್ತೆಯ ಮಗ್ಗುಲಲ್ಲಿ ಪುಟ್ಟದೊಂದು ಟೀ ಅಂಗಡಿ,ಚಿಕ್ಕದೊಂದು ಹೋಟೆಲ್,ಚಿಕನ್ ಕಬಾಬ್ ಸೆಂಟರ್ ಇಟ್ಟುಕೊಂಡವರು,ಅದೆ ರಸ್ತೆಯ ಕೊನೆಯ ತಿರುವಿನಲ್ಲಿ ಕೈಯ್ಯಲ್ಲಿ ಹೂಮಾಲೆಗಳನ್ನ ಹಿಡಿದು ವ್ಯಾಪಾರಕ್ಕೆ ನಿಂತವರು,ಎರಡು ಮೂರು ದಿನಗಳಿಂದ ಗಿರಾಕಿಗಳೆ ಬರದೆ ವ್ಯಾಪಾರದ ನಿರೀಕ್ಷೆಯಲ್ಲಿ ಮಣ್ಣಿನ ಕಲಾಕೃತಿಗಳನ್ನು ಇಟ್ಟುಕೊಂಡು ಬಿಸಿಲಿನ ಝಳಕ್ಕೆ ಹರಿದ ಸೀರೆಯ ಸೆರಗನ್ನೆ ತಲೆಯ ಮೇಲೆ ಹೊತ್ತು ಕುಳಿತ ಕುಂಬಾರರ ಹೆಣ್ಣುಮಕ್ಕಳು ಹೀಗೆ ನಾನು ಒಂದಷ್ಟು ಸುತ್ತಲೂ ಕಣ್ಣುಗಳನ್ನ ನೆಟ್ಟು ಬಿಡ್ತೀನಿ.ಮನೆಯಲ್ಲೆ ಕುಳಿತು ಬೇಕಾದ ವೆರೈಟಿ ಬಟ್ಟೆ,ಬರೆ,ಯಾಂಡ್ರಾಯ್ಡ ಮೊಬೈಲಿಂದ ಹಿಡಿದು ಗ್ಯಾಸ್ ಹೊತ್ತಿಸುವ ಲೈಟರ್ ತನಕ ಎಲ್ಲವನ್ನೂ ಆರ್ಡರ್ ಮಾಡುವ ಜನರಿಗೆ ಯಾವ ವಿದೇಶಿ ಕಂಪನಿಕೂಡ ಉಚಿತವಾಗಿ ಏನನ್ನೂ ಕೊಟ್ಟಿಲ್ಲ ಯಾರ ಬದುಕನ್ನೂ ಕಟ್ಟಿಕೊಟ್ಟಿಲ್ಲ ಅನ್ನುವದು ನಿಮಗೆ ನೆನಪಿರಲಿ.ಕಂಪನಿಯಲ್ಲಿ ಒಬ್ಬ ಕೆಲಸ ಬಿಟ್ಟರೆ ಸಾವಿರಾರು ಜನ ಅದೆ ಕೆಲಸಕ್ಕೆ ತುದಿಗಾಲ ಮೇಲೆ ನಿಂತಿರುವ ದಿನಗಳಲ್ಲೇ ಬೀದಿ ವ್ಯಾಪಾರಸ್ಥನೊಬ್ಬ ಜೀವ ಬಿಟ್ಟರೆ ಅವನದೆ ಕುಟುಂಬ ಅದೇ ಕೆಲಸವನ್ನ ಮಾಡುತ್ತದೆ ಅನ್ನುವದಕ್ಕೆ ಯಾವ ಗ್ಯಾರಂಟಿಯೂ ಇಲ್ಲದ ಪ್ರಪಂಚ ಇದು.ಜಸ್ಟ ಚಿಲ್ ಅನ್ನುತ್ತ ಯಾವದೋ ಗುಂಗಿನಲ್ಲಿ ಅವರತ್ತ ತಿರುಗಿಯೂ ನೋಡದೆ ಬರುವ ಬಹಳಷ್ಟು ಜನರಿಗೆ,ಕಾರು ಬೈಕಿನಲ್ಲಿ ಅಲೆಯುವ ಮತ್ತು ಬಾಯಿ ರುಚಿಗೆ ತಿನ್ನುವ ಜನರಿಗೆ ಕೊನೆಗೆ ಉಳಿಯುವದು ಬಿಪಿ,ಶುಗರ್ ಮತ್ತು ಹೃದಯದ ಕಾಯಿಲೆಗಳೆ ಹೊರತು ಅವರನ್ನ ಶತಾಯುಷಿಗಳನ್ನಾಗಿಸುವ ಆರೋಗ್ಯವಂತೂ ಖಂಡಿತ ಅಲ್ಲ…ಆದರೆ ಇದ್ದಷ್ಟು ದಿನ ಬಡ ವ್ಯಾಪಾರಸ್ಥರ ಹತ್ತಿರ ಎನೋ ಒಂದನ್ನು ಖರೀದಿಸಿ,ಅವರ ಹೊಟ್ಟೆ ಹೊರೆಯುವದಕ್ಕೆ ಅವರ ಕುಟುಂಬ ಸಲಹುವದಕ್ಕೆ ಮಾಡುವ ಪರೋಕ್ಷ ಉಪಕಾರ,ಅರೆ ಜಸ್ಟ ಹಂಡ್ರೆಡ್ ಫೀಟ್ ಅಲ್ವಾ ಡಿಯರ್ ಅಂತ ಕುಟುಂಬದವರ ಜೊತೆಗೆ ಮನೆ ಹತ್ತಿರದ ಪುಟ್ಟ ಹೋಟೆಲ್ಲಿಗೆ ಹೋಗಿ ಕಾಮನ್ ಆಗಿ ಸಿಗುವ ಊಟಾ ತಿಂಡಿಯನ್ನೇ ಬಾಯಿ ಚಪ್ಪರಿಸುತ್ತ ಹೊಟ್ಟೆತುಂಬ ಉಂಡುಬರುವ ಸರಳತೆಗಳು ಒಂದಷ್ಟು ಉಲ್ಲಾಸವನ್ನ ನೀಡುವದರ ಜೊತೆಗೆ ಒಂದಷ್ಟು ಆರೋಗ್ಯವನ್ನ ನಮಗೆ ಖಂಡಿತ ಕೊಡುತ್ತೆ.ಅಂದಹಾಗೆ ಇದೆ ಬೀದಿ ಬದಿಯ ಪುಟ್ಟ ವ್ಯಾಪಾರಿಗಳೆ ಲಾಕ್ ಡೌನ್ ಸಮಯದಲ್ಲಿ ಹಸಿದು ಬಂದ ಸಾವಿರಾರು ಜನರಿಗೆ ಪುಡ್ ಪ್ಯಾಕೆಟುಗಳನ್ನ ಮತ್ತು ಕುಡಿಯುವ ನೀರಿನ ಬಾಟಲಿಗಳನ್ನ ಉಚಿತವಾಗಿ ಹಂಚಿದ್ದು….ಮತ್ತು ಇದೇ ಬೀದಿ ವ್ಯಾಪಾರಿಗಳೆ ಬೀದಿ ಗಣೇಶನ ಪ್ರತಿಷ್ಠಾಪನೆ ಮಾಡಲು ಜಾತಿಗಳ ಹಂಗಿಲ್ಲದೆ ದೇಣಿಗೆ ಕೊಟ್ಟು ನಮ್ಮ ಹಬ್ಬಗಳನ್ನು ಅದ್ದೂರಿಯಾಗಿಸಿದ್ದು ಅನ್ನೋದು ನಿಮಗೆ ನೆನಪಿರಲಿ.ಅಂದ ಹಾಗೆ ದೇಶ ಕಟ್ಟೋದಕ್ಕೆ ಪ್ರಾಣಾನೆ ಬಿಡಬೇಕು ಅಂತೇನೂ ಇಲ್ಲ ಒಂದಷ್ಟು ವಿದೇಶಿ ಕಂಪನಿಗಳ ವಸ್ತುಗಳ ಖರೀದಿ ನಿಲ್ಲಿಸಿ ದೇಶಿ ವಸ್ತುಗಳನ್ನ ತಮ್ಮ ಬೆವರು ಸುರಿಸಿ ದುಡಿಯುವ ದೇಶದ ಜನರ ಕರಕುಶಲ ವಸ್ತುಗಳನ್ನ ಖರೀದಿಸುವದರ ಮೂಲಕ ಅವರ ಆರ್ಥಿಕತೆಯನ್ನ ಸುಧಾರಿಸಿ ಬಡವರು ಮತ್ತು ಹಸಿದವರಿಲ್ಲದ ದೇಶ ಕಟ್ಟೋಣ ಅಲ್ವಾ ಏನಂತೀರಿ…?

ದೀಪಕ್ ಶಿಂಧೆ
ಪತ್ರಕರ್ತ, ಅಥಣಿ
ಮೊ:9482766018