ರಾಯಚೂರು ಜಿಲ್ಲಾ ಮಟ್ಟದ ಕಟ್ಟಡ ನಿರ್ಮಾಣ ಕಾರ್ಮಿಕರ  ವಿಸ್ತೃತ ಸಭೆ

ಮಾನ್ವಿ ಅ.17:’ಕಟ್ಟಡ ನಿರ್ಮಾಣ ಕಾರ್ಮಿಕರ ಮೂಲಭೂತ ಹಕ್ಕುಗಳಿಗಾಗಿ ಹಾಗೂ ಕಟ್ಟಡ ಕಾರ್ಮಿಕರ ಬದುಕಿಗೆ ಆಸರೆಯಾಗಿರುವ ಕಟ್ಟಡ ನಿರ್ಮಾಣ ಕಲ್ಯಾಣ ಮಂಡಳಿ ಮುಚ್ಚುವ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ನಡೆಸಿರುವ ಹುನ್ನಾರದ ವಿರುದ್ದ ಸಂಘಟಿತ ಹೋರಾಟ ಅಗತ್ಯ’ಎಂದು ಕಟ್ಟಡ ಕಾರ್ಮಿಕರ ಸಂಘಟನೆಯ ರಾಜ್ಯ ಮುಖಂಡ ಕೆ.ಮಹಾಂತೇಶ ಹೇಳಿದರು.

ಭಾನುವಾರ ಮಾನ್ವಿ ಪಟ್ಟಣದ ತಾಲ್ಲೂಕು ಪಂಚಾಯಿ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ (ಸಿಐಟಿಯು ಸಂಯೋಜಿತ) ವತಿಯಿಂದ ಆಯೋಜಿಸಲಾಗಿದ್ದ ರಾಯಚೂರು ಜಿಲ್ಲಾ ಮಟ್ಟದ ಕಟ್ಟಡ ನಿರ್ಮಾಣ ಕಾರ್ಮಿಕರ  ವಿಸ್ತೃತ ಸಭೆಯನ್ನು ಉದ್ಘಾಟಿಸಿ  ಅವರು ಮಾತನಾಡಿದರು. ‘ಡಿ.2, 3 ರಂದು ನಡೆಯುವ ಕಾರ್ಮಿಕರ ಮುಷ್ಕರದಲ್ಲಿ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮುಂದುವರೆಸುವುದು ಹಾಗೂ ಕಟ್ಟಡ ಸಾಮಗ್ರಿ, ಜಿಎಸ್‌ಟಿ ಬೆಲೆ ಇಳಿಕೆ ಹಾಗೂ ಕೋವಿಡ್-19 ನಿಂದಾಗಿ ಅತಿ ಹೆಚ್ಚಿನ ರೀತಿಯ ಸಂಕಷ್ಠಕ್ಕೆ ಗುರಿಯಾಗಿರುವ ಕಾರ್ಮಿಕರಿಗೆ ಸೂಕ್ತ ಪರಿಹಾರ, 2ಸಾವಿರ ಕೋಟಿ ವೆಚ್ಚದ ಕಿಟ್ ವಿತರಣೆಯಲ್ಲಿ ನಡೆದಿರುವ ಆವ್ಯವಹಾರದ ಬಗ್ಗೆ ತನಿಖೆ ಸೇರಿದಂತೆ ಪ್ರಮುಖ 5 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಗುತ್ತದೆ. ಈ ಹೋರಾಟದಲ್ಲಿ ಎಲ್ಲಾ ಕಟ್ಟಡ ಕಾರ್ಮಿಕರು ತಮ್ಮ ಕೆಲಸಗಳನ್ನು ಸ್ಥಗಿತಗೊಳಿಸಿ ಭಾಗವಹಿಸಬೇಕು’ ಎಂದು ಅವರು ಮನವಿ ಮಾಡಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿಐಟಿಯು ಸಂಘಟನೆಯ ತಾಲ್ಲೂಕು ಘಟಕದ ಅಧ್ಯಕ್ಷ ಎಚ್.ಶರ್ಪುದ್ದೀನ್ ಪೋತ್ನಾಳ್, ಜಿಲ್ಲಾ ಘಟಕದ ಕಾರ್ಯದರ್ಶಿ ಶೇಕ್ಷಾಖಾದ್ರಿ, ಡಿ.ಎಸ್.ಶರಣಬಸವ ಮಾತನಾಡಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷೆ ವರಲಕ್ಷ್ಮೀ, ಕಾರ್ಮಿಕ ಮುಖಂಡರಾದ ಆನ್ವರ್‌ಪಾಷ, ರುದ್ರಪ್ಪನಾಯಕ, ಶಬ್ಬೀರ್, ಮಹ್ಮದ್ ನೀರಮಾನ್ವಿ, ರಮೇಶ ನೀರಮಾನ್ವಿ, ಸಿದ್ದಲಿಂಗಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಎಲ್ಲಾ ತಾಲ್ಲೂಕುಗಳ ಕಾರ್ಮಿಕ ಮುಖಂಡರು, ಕಟ್ಟಡ ನಿರ್ಮಾಣ ಕಾರ್ಮಿಕರು ಸಭೆಯಲ್ಲಿ ಭಾಗವಹಿಸಿದ್ದರು.