ಕಾವ್ಯಲೋಕ; ಅಲ್ಲಮನ ಬಯಲು- ಡಾ.ಶರೀಫ್ ಹಸಮಕಲ್ ಅವರ ಗಜಲ್

ಅಲ್ಲಮನ ಬಯಲು

     *ಡಾ.ಶರೀಫ್ ಹಸಮಕಲ್

ಬಣ್ಣದೊಳಗೆ ಅದ್ದಿದ ಕುಂಚಕ್ಕಿರುವ ಧೈರ್ಯ ಕಲಾವಿದ‌ನಿಗೆ ಇಲ್ಲ
ಕೆಂಡಕಾರುವಂತಹ ಲೆಕ್ಕಣಿಕೆಯ ಮಸಿಗಿರುವ ಶಕ್ತಿ
ಸಾಹಿತಿಗೆ ಇಲ್ಲ

ತನ್ನ ಮಡಿಲಲ್ಲಿ ಮಲಗಿಸಿ ಜಗತ್ತಿಗೆ ಜೋಗುಳವಾಡುವುದು ಪ್ರೀತಿ
ಗೋಡೆ ಕೆಡವಿ ಒಂದಾಗಿಸುವ ಪ್ರೀತಿಗಿರುವ ತಾಳ್ಮೆ ಪ್ರೇಮಿಗೆ ಇಲ್ಲ.

ಸತ್ತ ಮೇಲೆ ಎಲ್ಲಾ ಧರ್ಮಗಳು
ಆತ್ಮಕ್ಕೆ ಶಾಂತಿ ಕೋರಲು ಮುಂದಾಗುತ್ತವೆ
ಎಷ್ಟು ಕೂಗಿದರು ಹೋದ ಜೀವವನ್ನು ಕರೆತರುವ ಶಕ್ತಿ ಪ್ರಾರ್ಥನೆಗೆ ಇಲ್ಲ

ಅಂಗಳದಲ್ಲಿ ಅರಳಿ‌ನಿಂತ ಹೂಗಳು ಒಂದಕ್ಕೊಂದು ನಲಿಯುತ್ತಿವೆ
ಚಲುವು ಚಲ್ಲುತ್ತಲೇ ಇವೆ ಹೂಗಳು ಆದರೆ ಸ್ಪರ್ಧೆ ಚಲುವಿಗೆ ಇಲ್ಲ

ಶರೀಫ, ಗುಟುಕು ನೀರಿನಿಂದ ಮುಕ್ತಿಗಾಗಿ ಬದುಕಿದ ದೇಹ ಇದು ಅಷ್ಟೆ
ಗುಡಿಗುಂಡಾರದ ದೇವರುಗಳ ಭ್ರಮೆಯ ಕಾಟ ಅಲ್ಲಮನ ದಾರಿಗೆ ಇಲ್ಲ.

ಡಾ. ಶರೀಫ್ ಹಸಮಕಲ್
ಊರು ; ಹಸಮಕಲ್
ತಾಲೂಕು : ಮಸ್ಕಿ
ಜಿಲ್ಲೆ : ರಾಯಚೂರು
ಪೋನ್ ; 9480605552