ಯಾವ ಲಿಸ್ಟಿಗೆ ನಿಮ್ಮ ಹೆಸರು….?-ದೀಪಕ್ ಶಿಂಧೆ

ಯಾವ ಲಿಸ್ಟಿಗೆ ನಿಮ್ಮ ಹೆಸರು….?

ಲೇಖಕ: ದೀಪಕ್ ಶಿಂಧೆ

ಮೊನ್ನೆ ಮೊನ್ನೆ ವೋಟರ್ಸ ಲಿಸ್ಟ್ ಆಯ್ತು,ಕೃಷ್ಣಾ ನದಿಯ ಪ್ರವಾಹಕ್ಕೆ ಮನೆ ಬಿದ್ದ ಫಲಾನುಭವಿಗಳ ಲಿಸ್ಟ್ ಕೂಡ ಆಯ್ತು, ಅಷ್ಟೆ ಯಾಕೆ?? ಪುರಸಭೆಯ ಟಿಕೆಟ್ ಆಕಾಂಕ್ಷಿಗಳ ಲಿಸ್ಟ್ ಕೂಡ ರೆಡಿ ಆಯಿತು.ಆದರೆ ಒಂದಷ್ಟು ಗೆಳೆಯರನ್ನ,ಹಿತೈಷಿಗಳನ್ನ ಮತ್ತು ಮುಂದೆ ಇದ್ದಾಗ ಒಂದು ರೀತಿ,ಹಿಂದೆ ಇನ್ನೊಂದು ರೀತಿ ಇರುವ ಜನರನ್ನ ನನ್ನ ಪುಟ್ಟ ಡೈರಿಯಲ್ಲಿ ನಾನು ಲಿಸ್ಟ್ ಮಾಡ್ತಾ ಇದೀನಿ.ಇಟ್ ಇಜ್ ನಾಥಿಂಗ್ ಬಟ್ ಪ್ರಿಕಾಶನರಿ ಸ್ಟೆಪ್ ಆಫ್ ಲೈಫ್….ಅಷ್ಟೇ.
ನನ್ನ ಬದುಕಿನ ಮೂವತ್ತಾರು ವರ್ಷಗಳಲ್ಲಿ ಈ ಪರಮ ಪಾಪಿ ಪಡೆದುಕೊಂಡಿದ್ದಕ್ಕಿಂತ ಕಳೆದುಕೊಂಡಿದ್ದೆ ಹೆಚ್ಚಾಗಿರುವದರಿಂದ ಮುಂದೊಂದು ದಿನ ನೀವು ಕೂಡ ಮನಸಿನ ಅಂಗಳದಿಂದ ಹೊರಟು ಹೋದಮೇಲೆ ನಾನು ಎಲ್ಲವನ್ನೂ ಕಳೆದುಕೊಂಡ ಹಾಗೆ ಯಾಕೆ ಅನ್ನಿಸುವದೋ ತಿಳಿಯಲಿಲ್ಲ.ನೀವು ಬರುವ ಮೊದಲು ಮತ್ತು ಬಂದ ಮೇಲೂ ನನಗೆ ನನ್ನದೆ ಆದ ವಿವಿಧ ವೆರೈಟಿಯ ಗೆಳೆಯರ ಬಳಗ ಇತ್ತು.ಬದುಕಿನ ಉದ್ದಕ್ಕೂ ಜೊತೆಗಿದ್ದು ಬದುಕು ಕಲಿಸಿದ ಗೆಳೆಯರು ನನಗೆ ಇದ್ದರು.ನಾನು ಮೊದಲಿನಿಂದಲೂ ಭಾವುಕ ಆದ್ದರಿಂದಲೇ ನನಗೆ ಎಲ್ಲರೂ ಸಿಕ್ಕರು ಅಂದುಕೊಳ್ಳುತ್ತೇನೆ.ಮತ್ತು ಅಂತದ್ದೇ ಕೆಲವರಿಂದ ಆದ ಮೋಸ ಇಂದಿಗೂ ಮಾಸಿಲ್ಲ.ಬಹುಶಃ ಅದಕ್ಕಾಗಿಯೇ ನಗುಮುಖದ ಗೆಳತಿ ರೇಷ್ಮಾಳ ಮುಖದಿಂದ ಮಾಸಿಹೋದ ನಗು ನನ್ನನ್ನು ಇಂದಿಗೂ ಕಾಡುತ್ತದೆ.ಈಗಲೂ ಹೊಟ್ಟೆ ಹೊರೆಯುವದಕ್ಕೆಂದು ದೂರದ ಗೋವಾ,ಮುಂಬೈ ಅಂತಹ ನಗರಗಳಿಗೆ ಒಕ್ಕಲೆದ್ದು ಹೋದ ಗೆಳೆಯರು ನನಗೆ ನೆನಪಾಗುತ್ತಾರೆ.ಯಾವುದೋ ಹೋಟೆಲಿನಲ್ಲಿ ಸಪ್ಲೈಯರ್ ಆಗಿ ಎದುರು ನಿಂತ ಬಾಲ್ಯದ ಗೆಳೆಯ ಹಳೆಯ ನೆನಪುಗಳನ್ನ ಕೆದಕಿ ಬಿಡುತ್ತಾನೆ.ನನ್ನ ಹಾಗೆ ಸಂಬಂಧಗಳನ್ನು ಕಾಪಾಡಿಕೊಳ್ಳಲು ಅಸಹಾಯಕರಾದ ಗೆಳೆಯರು ನನ್ನದೆ ಗುಂಪಿಗೆ ಸೇರುತ್ತಾರೆ.ಇನ್ನೇನು ಈಜು ಕಲಿತೆ ಅನ್ನುವಷ್ಟರಲ್ಲೇ ನಡು ನೀರಿನಲ್ಲಿ ಮುಳುಗಿಸಿದ ಗೆಳೆಯರಿಂದ ನಾನೀಗ ಬಹಳ ದೂರ.ಅವರೆಲ್ಲ ನನ್ನ ಹಗಲುಗಳ ಕನವರಿಕೆಯಾದರೆ ಹೊರತು ಸುಂದರ ಕನಸಾಗಲಿಲ್ಲ.ಇನ್ನೂ ಕೆಲವು ಗೆಳೆತನಗಳು ಮೌನದಲ್ಲೇ ಮಾತಾದವು,ಕಣ್ಣುಗಳೆ ಪರಸ್ಪರ ಮಾತನಾಡಿಕೊಂಡವು ಆದರೆ ಅದು ಯಾಕೆ ಅಂತಹ ಭವ್ಯ ಸಂಭಂದಗಳು ಕರಗಿಹೋದವೋ ನನಗೆ ಇಂದಿಗೂ ತಿಳಿದಿಲ್ಲ.ಬಹಳಷ್ಟು ಗೆಳೆತನಗಳು ಕೇವಲ ಬಣ್ಣದ ಕಾಗದದ ನೋಟುಗಳಿಗಾಗಿ ಬಿಗಡಾಯಿಸಿ ಹೋದವು.ನಾನು ದುಡ್ಡಿಗೆ ಬೆಲೆ ಕೊಡದೆ ಇದ್ದಾಗಲೂ ಚಪ್ಪಾಳೆ ಎರಡೂ ಕೈಯಿಂದ ಆಗಲೇ ಇಲ್ಲ.ಆದ್ದರಿಂದ ನಾನು ನನ್ನದೇ ಸಿದ್ಧಾಂತಗಳನ್ನು ಬದಲಿಸುವ ಅನಿವಾರ್ಯತೆ ಎದುರಾಯಿತು. ನನಗ್ಯಾಕೋ ಸೋಲು ತಂದ ನೋವುಗಳು,ಕೆಲವು ಗೆಳೆಯರ ಹಾಳು ಬಿದ್ದ ಮಡಿವಂತಿಕೆ,ಅವರ ಹಿರಿಯರ ಸಿದ್ಧಾಂತಗಳು,ಅವರಿಗಿದ್ದ ಕಟ್ಟುಪಾಡುಗಳು,ಅದರಿಂದ ಹೊರಬರಲಾಗದ ಅತಂತ್ರ ಗೆಳೆಯರು?? ಎಲ್ಲವೂ ಬೇಜಾರು ತಂದವು. ಅದೆಷ್ಟು ಸಲ ನಾನು ನಂಬಿದವರಿಂದಲೇ ನನ್ನವರಿಂದಲೇ ಮೋಸ ಹೋಗಿದ್ದೀನೋ ಆ ದೇವರಿಗೆ ಗೊತ್ತು..ಆದರೆ ನಿಮ್ಮಿಂದ ಮಾತ್ರ ಖಂಡಿತ ಅಲ್ಲ ಬಿಡಿ.
ಕ್ರಮೇಣ ಕೈಗೆ ಬಂದ ಮೊಬೈಲು,ಅಧುನಿಕತೆಯ ಹೆಸರಿನಲ್ಲಿ ನಾಡಿನ ಸಂಸ್ಕೃತಿಯ ಮೇಲೆ ದಾಳಿಯಿಟ್ಟ ಜಿನ್ಸ,ಟೀಷರ್ಟ ನನಗೆ ಇಷ್ಟವಾಗಲೇ ಇಲ್ಲ.ಅವಿದ್ದ ಗೆಳೆಯರೆಲ್ಲ ತಮ್ಮ ಪರಿಧಿ ದಾಟಿ ಹೊರಗೆ ಬರಲೇ ಇಲ್ಲ.ರೊಕ್ಕ ಇದ್ದಾಗ ಮಜಾ ಮಾಡಬೇಕಲೇ….ದೀಪ್ಯಾ ಅನ್ನುತ್ತಲೇ ನನ್ನ ಕಣ್ಣ ಎದುರಲ್ಲೇ ಹಾಳಾದ ಗೆಳೆಯರದೊಂದು ಕ್ರೌಡು ನನಗೂ ಇತ್ತು.ಅವರಿಗೆ ಹಣದ ಬೆಲೆ,ಮತ್ತು ಹಸಿವಿನ ಬೆಲೆ ತಿಳಿಯಲು ಆಗಲೇ ಇಲ್ಲ.ಆದರೆ ಮಜಾ ಮಾಡುವ ಹೆಸರಿನಲ್ಲಿ ದುಶ್ಚಟಗಳು ಕೂಡಿಕೊಂಡು ಆರೋಗ್ಯ, ಆಯುಷ್ಯ,ಘನತೆ ಮತ್ತು ನನ್ನೊಂದಿಗಿನ ಸ್ನೇಹ ಎಲ್ಲವೂ ಕಳೆದುಹೋದವು. ಈಗಲೂ ಇದ್ದಕ್ಕಿದ್ದಂತೆ ಅಂತಹ ಒಂದು ವಿಷವರ್ತುಲದಿಂದ ಎದ್ದು ಬಂದ ಗೆಳೆಯರು ನನ್ನೊಂದಿಗೆ ಇದ್ದಾರೆ.ಈಗ ಪರಿವರ್ತನೆಯೆ ಜಗದ ನಿಯಮ ಅನ್ನುವದು ಅವರ ವೇದವಾಕ್ಯ.
ನಿಜ ಹೇಳುತ್ತೇನೆ ಯಾವ್ದಯ್ಯಾ ಪ್ರೀತಿ?? ಕಂಡೀದಿನಿ ಬಿಡು ಅಂದ ಗೆಳೆಯರೆಲ್ಲ ಲವ್ ಮ್ಯಾರೇಜ್ ಮಾಡಿಕೊಂಡರು.ಆದರೆ ನಾನೊಬ್ಬ ಉಳಿದುಹೋದೆ.ಅಪ್ಪ ಅಮ್ಮನ್ನ ಚೆನ್ನಾಗಿಡಬೇಕು ಅಂತ ಕನಸುಕಂಡವರೆಲ್ಲ ವಯಸ್ಸಾದ ಅವರನ್ನ ಜಗುಲಿಕಟ್ಟೆಗೆ ಬಿಟ್ಟು ದೂರ ಹೋದರು.ಹೇಳಿದ ಸುಳ್ಳುಗಳಿಗೆ,ಮಾಡಿದ ಚಿಕ್ಕ ವಂಚನೆಗಳಿಗೆ ಕ್ಷಮೆ ಕೇಳಲಾಗದೆ ಮುಖಮರೆಸಿಕೊಂಡ ಗೆಳೆಯರು ಇಂದಿಗೂ ಎದುರಾಗಲೇ ಇಲ್ಲ.
ಮೈ ಡಿಯರ್ ದುಡ್ಡು ಒಂದೇ ಬದುಕಲ್ಲ ಅಂದವರೆಲ್ಲ ಚಹಾ ಕುಡಿಸುವದಕ್ಕೂ ಯೋಚಿಸುವ ಮಟ್ಟಿಗೆ ಬದಲಾಗಿಬಿಟ್ಟರು.ನಾನು ಮಾತ್ರ ಚೇಂಜ್ ಆಗಲ್ಲ ಹಿಂಗೇ ಇರ್ತೀನಿ ಅನ್ನುತ್ತಲೇ ಬದಲಾದ ಗೆಳೆಯರ ಪಾಲಿಗೆ ನನ್ನಲ್ಲಿ ಉಳಿದಿದ್ದು ಒಂದು ಕಿರುನಗೆಯಷ್ಟೇ….ದೊಡ್ಡ ದೊಡ್ಡ ಆಸೆಗಳನ್ನ ಇಟ್ಟುಕೊಂಡು ಸಾಧಿಸಲಾಗದೆ ಕಂಬಳಿ ಹೊದ್ದು ಮಖಾಡೆ‌ಮಲಗಿದ ಸರದಾರರು ಕೂಡ ನನ್ನದೇ ಗೆಳೆಯರು.ಈಗಲೂ ಅಧುನಿಕತೆಯ ಹೆಸರಿನಲ್ಲಿ ಬರ್ತಡೇ ಪಾರ್ಟಿ,ಮ್ಯಾರೇಜ್ ಯಾನಿವರ್ಸರಿಯಂತಹ ಪಾಶ್ಚಾತ್ಯ ಸಂಸ್ಕೃತಿಗಳಿಂದ ದೂರ ಉಳಿಯುತ್ತ ಈ ಸಮಾಜದ ಯಾವುದೋ ಮೂಲೆಯಲ್ಲಿ ನಾನು ಇಂದಿಗೂ ಬದುಕಿದ್ದೇನೆ.ಬಹುಶಃ ನಿಮ್ಮ ನಿರ್ಗಮನದ ಬಳಿಕವೂ ಬದುಕಿರತ್ತೇನೆ ಆದರೆ ಮೊದಲಿನಂತಲ್ಲ.
ಪರೋಕ್ಷವಾಗಿ ನನ್ನ ಎತ್ತರಕ್ಕೆ ಏಣಿಯಾದವರು,ಕಡು ಬೇಸಗೆಯ ದಿನಗಳಲ್ಲಿ ನನ್ನ ಬರಿಗಾಲಿಗೆ ಚಪ್ಪಲಿ ತೊಡಿಸಿದವರು,ತಮ್ಮ ನೋವು ನುಂಗಿ ನನ್ನೊಂದಿಗೆ ನಗುವಾದವರು,ವಂಚನೆಗೆ ಒಳಗಾದ ಮಾತ್ರಕ್ಕೆ ಮತ್ತೊಬ್ಬರನ್ನ ವಂಚಿಸಲು ಶುರುವಿಟ್ಟವರು,ಸದಾ ಕಾಲ ಮತ್ತೊಬ್ಬರನ್ನು ಲೇವಡಿ ಮಾಡುತ್ತಲೇ ಏಳಲಾರದ ಕಣಿವೆಗಳಿಗೆ ಉರುಳಿ ಹೋದವರು,ನನ್ನಿಂದ ಪಡೆದ ಪ್ರೀತಿಗೆ ಪ್ರತಿಯಾಗಿ ತೆಕ್ಕೆ ತುಂಬುವಷ್ಟು ನೋವು ಕೊಟ್ಟವರು,ಕಾಲೇಜು ದಿನಗಳಲ್ಲಿ ಫಸ್ಟ ‌ರ‌್ಯಾಂಕ್ ಬರುತ್ತಿದ್ದವರು, ಬದುಕಿನ ಎಕ್ಜಾಮಿನಲ್ಲಿ ಫೇಲಾದವರು,ಫೇಲಾದವರಲ್ಲೇ ಚಾನ್ಸುಗಳಿಗೆ ಎದ್ದು ಬಂದವರು,ನನ್ನ ನೋವಿನಲ್ಲಿ ಭಾಗಿಯಾದವರು,ನಗು ಬಿಟ್ಟು ಹೊರಟು ಹೋದವರು,ಶಾಸ್ವತವಾಗಿ ನೋವು ಕೊಟ್ಟವರು ಎಂಥೆಂಥಾ ಗೆಳೆಯರು ನನಗೆ ಸಿಕ್ಕರು ಅಲ್ಲವಾ?? ಈಗ ನೀವು ಕೂಡ ಹೊರಟು ನಿಂತಿದ್ದೀರಿ.ನಿಮ್ಮ ಬದುಕಿನ ಅನಿವಾರ್ಯತೆಗೋ,ವೃತ್ತಿಯಲ್ಲಿ ಆಗುತ್ತಿರುವ ಬದಲಾವಣೆಗೋ,ಅಥವಾ ನಿಮ್ಮ ಸರ್ಕಾರಿ ನೌಕರಿಯ ವರ್ಗಾವಣೆಗೋ ದೂರವಾಗುತ್ತಿರುವ ನಿಮ್ಮ ಬಿಂಬಗಳು ನನ್ನ ಕನಸಿನ ಕನ್ನಡಿ ಒಡೆದು ನೂರಾಗುವ ಮುನ್ನ ಇದನ್ನು ಓದಿದ ಮೇಲೆ ನನ್ನನ್ನು ಒಂಟಿಯಾಗಿಸಬೇಡಿ ಅಂತ ನಾನು ನಿಮಗೆ ಖಂಡಿತ ಹೇಳೋದಿಲ್ಲ.ಆದರೆ ನನ್ನ ಬದುಕಿನ ಪುಟದಲ್ಲಿ ನಿಮ್ಮ ಹೆಸರನ್ನ ಅದು ಯಾವ ಲಿಸ್ಟಿಗೆ ಸೇರಿಸಬೇಕು ಅಂತ ಹೇಳಿಬಿಡಿ ಸಾಕು…..

ದೀಪಕ್ ಶಿಂಧೆ
ಮೊ:9482766018