ಅರೆ ಬಿಟ್ಹಾಕು ಗುರು… ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ
ಲೇಖಕ: ದೀಪಕ್ ಶಿಂಧೆ
ಬದುಕಿನ ಉದ್ದಕ್ಕೂ ಹೀಗೆ ಬಂದು ಹಾಗೆ ಹೋದ ನೂರಾರು ಜನರ ನಡುವೆ ನನ್ನವರು ಯಾರು ಅಂತ ಹುಡುಕುವ ಸಣ್ಣ ಪ್ರಯತ್ನ ಮಾಡುತ್ತಿರುವ ನನಗೆ ಪುಟ್ಟದೊಂದು ಅಚ್ಚರಿ ಯಾವತ್ತಿಗೂ ಕಾಡುತ್ತದೆ.ಬೆನ್ನ ಹಿಂದೆ ಆಡಿಕೊಂಡು ನಕ್ಕವರಿಂದ ಹಿಡಿದು ಎದುರಲ್ಲಿ ನಿಂತು ನಿನ್ನ ಹಾಗೆ ಬಿಡಲ್ಲಾ ನೋಡ್ತಾ ಇರು ಎನೆನ್ ಮಾಡ್ತಿನಿ ಅಂದವರ ತನಕ ಎಲ್ಲರನ್ನೂ ನನ್ನವರು ಅಂದುಕೊಂಡದ್ದು ನನ್ನತನವೋ ಅಥವಾ ಸಣ್ಣತನವೋ ನನಗೇ ತಿಳಿಯದಷ್ಟು ಕಲಸುಮೇಲೋಗರವಾದ ಹಲವು ಅನುಭವಗಳ ನೆನಪಿನ ಮೂಟೆಯನ್ನು ಬದುಕಿನ ಉದ್ದಕ್ಕೂ ಹೊತ್ತು ತಿರುಗುವ ಭಾವನಾ ಜೀವಿ ನಾನು.ಎ ದೋಸ್ತ ಕಭಿ ಅಕೆಲೆ ಹೋ ಔರ್ ಆಂಕೇ ಭರ ಆಯೇ ತೋ ಮುಝೆ ಯಾದ ಕರನಾ…ಅಂದ ಎಷ್ಟೋ ಜನ ಜೊತೆಗಿರುತ್ತೆನೆ ಅಂತ ಬಂದಿದ್ದವರೇ… ಆದರೆ ಅವರವರ ಅನಿವಾರ್ಯತೆಗೆ ಅಥವಾ ಕೆಲಸ ಮುಗಿದ ಬಳಿಕ ಯಾರೂ ಜೊತೆಗೆ ಉಳಿಯದೆ ಮತ್ತೆ ನನ್ನನ್ನು ಕಾಡಿದ್ದು ಅದೇ ಒಂಟಿತನ ಹತಾಸೆ ಮತ್ತು ನೋವುಗಳಷ್ಟೇ.ತೀರಾ ಇತ್ತೀಚೆಗೆ ಏಳು ವರ್ಷಗಳ ಹಿಂದೆ ಅಪ್ಪನನ್ನ ಮತ್ತು ನಾಲ್ಕಾರು ತಿಂಗಳ ಹಿಂದೆ ಅಮ್ಮನನ್ನ ಕಳೆದುಕೊಂಡ ಅಬ್ಬೇಪಾರಿ ನಾನು.ಎನೋ ಒಂದನ್ನ ಸಾಧಿಸ್ತೀನಿ ಅಂತ ಹೊರಟಾಗೆಲ್ಲ ಎದುರಾದ ಅಡ್ಡಿ ಆತಂಕಗಳನ್ನ ಮೆಟ್ಟಿ ನಿಲ್ಲುವ ಛಲ ನನ್ನೊಳಗೆ ಮನೆ ಮಾಡಿದ್ದರೂ ಕೂಡ ನಾನು ಹೀಗೆ ಏನನ್ನೂ ಸಾಧಿಸದೆ ಉಳಿಯಲು ಕಾರಣವೇ ನನ್ನೊಳಗಿನ ಹಿಂಜರಿಕೆ.ಅಬ್ಬಾ ಏನ್ರಿ ನಿಮ್ ರೈಟಿಂಗು ಥೇಟ್ ರವಿ ಬೆಳಗೆರೆ ಥರ ಅಂತ ನನ್ನ ಪರಮ ಆಪ್ತ ಗುರುವಿನ ಜೊತೆಗೆ ನನ್ನನ್ನ ಹೋಲಿಸಿ ಮಾತನಾಡುವ ಜನರ ಮಾತು ನನಗೆ ಆಗಾಗ ಇಷ್ಟವಾಗುತ್ತದೆ ಆದರೂ ಪಲ್ಲಕ್ಕಿ ಎಷ್ಟೇ ಸುಂದರವಾಗಿದ್ದರೂ ಕೂಡ ಜನರು ಕೈ ಮುಗಿಯುವದು ಅದರೊಳಗಿನ ದೇವರ ಮೂರ್ತಿಗೆ ಅಷ್ಟೇ ಅನ್ನುವ ಒಂದಷ್ಟು ಪುಟ್ಟ ಪರಿಜ್ಞಾನ ನನಗೆ ಯಾವತ್ತಿಗೂ ಇದೆ.ಅವನು ಬಿಡ್ರಿ ಸಾರ್ ಯಾರನ್ನೂ ನಂಬಲ್ಲ ಅನ್ನುವವರ ನಡುವೆಯೆ ಅವನಿಂದ ಸ್ವಲ್ಪ ಹುಷಾರು ಅಂತ ಮತ್ತೊಬ್ಬರ ಕಿವಿ ಚುಚ್ಚುವ ನನ್ನದೆ ಬಳಗವನ್ನ ಕೂಡ ನಾನು ಅಷ್ಟೇ ಪ್ರಮಾಣದಲ್ಲಿ ಎಂಜಾಯ್ ಮಾಡ್ತೀನಿ.ಬರುವಾಗ ಒಂಟಿಯಾಗಿ ಬಂದು ಯಾಕೆ ಬಂದೆ ಈ ಜಗತ್ತಿಗೆ ಅಂತ ಅಳುವ ಕಾಲಕ್ಕೆ ನಕ್ಕು ಸಂತೈಸಿದ ಅಮ್ಮ ನನ್ನ ಪಾಲಿಗೆ ಯಾವತ್ತಿಗೂ ಗ್ರೇಟ್…ದಿನಗೂಲಿ ಮಾಡುತ್ತ ಸರ್ಕಾರಿ ನೌಕರಿ ಖಾಯಮ್ಮಾಗಿ ಸರ್ಕಾರಿ ಕಚೇರಿ ಒಂದರ ಜವಾನನಾಗಿ ನಮ್ಮನ್ನು ತಿದ್ದುತ್ತ ತನ್ನ ಬದುಕನ್ನೆ ಮೇಣದಂತೆ ತೇಯ್ದ ಅಪ್ಪ ನನ್ನ ಪಾಲಿನ ರಿಯಲ್ ಹೀರೊ..ಲೇ ಒದಿತಿನಿ ನೋಡು ಅನ್ನುತ್ತಲೆ ಸರಿದಾರಿಗೆ ತರುವ ಪ್ರಯತ್ನ ಮಾಡಿದ ಅಣ್ಣ ನನ್ನ ಬೆಸ್ಟ ಗೈಡ್ ಫಾರೆವರ್…ಇನ್ನು ಪ್ರೀತಿಯಿಂದ ಎತ್ತಿ ಆಡಿಸುತ್ತ ಬೆಳೆಸಿದ ಅಕ್ಕಂದಿರ ಪ್ರೀತಿಗೆ ನಾನು ಋಣಿ.ಇದೆಲ್ಲಕ್ಕಿಂತ ಮಿಗಿಲಾದ ಪಾಠವನ್ನು ಬದುಕು ನನಗೆ ಕಲಿಸುತ್ತ ಸಾಗುತ್ತಿದ್ದರೆ ನನ್ನ ಕೊನೆಯ ಉಸಿರಿನವರೆಗೆ ನಾನೊಬ್ಬ ಸ್ಟುಡೆಂಟ್ ಅಷ್ಟೇ……ಇದೆಲ್ಲದರ ನಡುವೆ ಅರೇ ಬಾಬಾ…. ಯು ಆರ್ ಒನ್ ಆಫ್ ಮೈ ಬೆಸ್ಟ ಫ್ರೆಂಡ್ ಅಂದ ಆತ್ಮಸಖಿಯೊಬ್ಬಳಿಂದ ಹಿಡಿದು ಸಾರ್….. ನಾನು ನಿಮ್ಮ ಬರವಣಿಗೆಯ ಅಭಿಮಾನಿ ಅಂದ ಚಿಗುರು ಮೀಸೆಯ ಹುಡುಗನ ತನಕ ಒಂದಲ್ಲ ಒಂದು ಹಂತದಲ್ಲಿ ಎಲ್ಲರಿಂದಲೂ ಏನಾದರೂ ಒಂದನ್ನ ಕಲಿಯುವ ನನ್ನ ಪ್ರಯತ್ನ ಮಾತ್ರ ನಿರಂತರ…..ವೃತ್ತಿಯಿಂದ ನಾನೊಬ್ಬ ಪತ್ರಕರ್ತ,ಒಂದಷ್ಟು ಮಾತಿನ ಮೋಡಿ ನಡು ನಡುವೆ ಹಾಸ್ಯ ಚಟಾಕಿ ಹಾರಿಸುವ ನಾನು ಒಬ್ಬ ಹವ್ಯಾಸಿ ಬರಹಗಾರ,ಅನ್ಯಾಯವನ್ನು ಪ್ರತಿಭಟಿಸುವ…ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ನಿಮ್ಮ ನಡುವೆಯೆ ಇರುವ ಒಬ್ಬ ಜನಸಾಮಾನ್ಯ.
ಯಾವತ್ತೋ ಒಂದು ದಿನ ಮಾಡಿದ ತಪ್ಪನ್ನೆ ನನ್ನ ಹೃದಯಕ್ಕೆ ಚುಚ್ಚುವ ಹಾಗೆ ಆಡಿಕೊಳ್ಳುವ ಜನರ ಬಗ್ಗೆಯೋ, ಎಲ್ಲಾ ಗಿಮಿಕ್ ಬಿಡಿ ಸಾರ್,ಅವನೊಬ್ಬ ಪ್ರಚಾರ ಪ್ರಿಯ ಅಂತ ಕಾಲೆಳೆದ ನನ್ನದೆ ಸಂಗಾತಿಗಳ ನಡುವೆಯೋ,ಇವನಿಗ್ಯಾಕೆ ಬೇಕು ಇಲ್ಲದ ಉಸಾಬರಿ ಅಂತ ಒಂದಷ್ಟು ಕಾಳಜಿ ಮಾಡಿದವರ ಜೊತೆಯೋ ಇಲ್ಲಾ…. ಯು ಆರ್ ಗ್ರೇಟ್ ಬ್ರದರ್ ಕೀಪ್ ಇಟ್ ಅಪ್ ಅಂದ ಹಿತೈಷಿಗಳ ಜೊತೆಗೋ ನಾನೊಬ್ಬ ಕಾಮನ್ ಪ್ಯೂಪಲ್…ನನಗಿರುವ ಅತ್ಯಂತ ಸಮಾಧಾನದ ವಿಷಯವೆಂದರೆ ನನಗೆ ಇರುವ ನಂಬಲಸಾಧ್ಯವಾದ ಮರೆವು!!
ಹೀಗಾಗಿ…ಗೆಳೆಯರ ನಡುವಿನ ಒಂದಷ್ಟು ಕೋಪ,ಸಣ್ಣಪುಟ್ಟ ಮನಸ್ತಾಪ,ಯಾರೋ ಎದುರು ನಿಂತು ಮಾತನಾಡಿದ ಮಾತು,ತೀರಾ ಮೈಮೆಲೆ ಬೀಳುವ ಹಂತಕ್ಕೆ ಬಂದವರ ತನಕ ಎಲ್ಲವನ್ನೂ ನಾನು ಆ ಕ್ಷಣದ ಬಳಿಕ ಮರೆತು ಬಿಡ್ತೀನಿ ಮತ್ತೆ ಎದುರಾದವರಿಗೆ ನಮಸ್ಕಾರ ಅಣ್ಣಾ ಬನ್ನಿ ಟೀ ಕುಡಿಯೋಣ ಅನ್ನುವ ಸ್ವಭಾವ ಅದು ಯಾವಾಗಲೋ ನನಗೆ ರೂಢಿಯಾಗಿದೆ.ಯಾಕೆಂದರೆ ಮನುಷ್ಯ ದೈಹಿಕವಾಗಿ ಆರೋಗ್ಯದಿಂದ ಇರಬೇಕಾದರೆ ಮಾನಸಿಕ ಆರೋಗ್ಯವೂ ಕೂಡ ಅಷ್ಟೇ ಮುಖ್ಯ.ಕೆಲವೊಮ್ಮೆ ಮನೋ ವೈದ್ಯರ ಹತ್ತಿರ ಹೋಗಿ ತಮ್ಮ ಮೆದುಳಿನ ಮೆಮೊರಿಯನ್ನ ಆಗಾಗ ಫಾರ್ಮ್ಯಾಟ್ ಮಾಡುವ ಅಗತ್ಯ ಕೂಡ ಈ ಜಗತ್ತಿನ ಎಷ್ಟೋ ಜನರಿಗೆ ಇರುತ್ತೆ ಬಟ್ ಅದು ನನ್ನ ಪಾಲಿಗೆ ಆಟೋ ಈರೇಜಿಂಗ್ ಸಿಸ್ಟಮ್ಮಿಗೆ ಅಡ್ಜಸ್ಟ ಆಗಿದೆ.ಇಷ್ಟಕ್ಕೂ ಬರುವಾಗ ಖಾಲಿ ಹೋಗುವಾಗ ಖಾಲಿ ಅಂದಮೇಲೆ ಇದ್ದಾಗ ಜಾಲಿಯಾಗಿ ಖುಷಿ ಖುಷಿಯಾಗಿ ಇದ್ದುಬಿಡೋಣ ಅಲ್ಲವೆ?? ದುಡ್ಡಿಗಾಗಿ ಬಂದ ಸಂಭಂಧಗಳಿಂದ ಹಿಡಿದು ತಮ್ಮ ಕೆಲಸವಾದ ಮೇಲೆ ಮಾತನಾಡಿಸುವದನ್ನೂ ಕೂಡ ಮರೆತ ಜನರ ನಡುವೆ,
ಕಾಮಾಲೆ ಕಣ್ಣಿಗೆ ಜಗವೆಲ್ಲ ಹಳದಿ ಅನ್ನುವ ಹಾಗೆ ಅವರ ಸ್ವಭಾವನೆ ಅಂತದ್ದು ಬಿಡಿ ಅಂತ ಯಾರೋ ಆಡಿಕೊಂಡದ್ದನ್ನ ಅಥವಾ ನನ್ನದೆ ಆದ ಒಂದಷ್ಟು ಸಿದ್ದಾಂತಗಳಿಂದ ಉಂಟಾದ ಎಡವಟ್ಟುಗಳನ್ನ ಮನಸ್ಸಿಗೆ ಹಚ್ಚಿಕೊಳ್ಳದೆ ನನ್ನ ಪಾಡಿಗೆ ನಾನು ಮತ್ತೆ ಒಂಟಿಯಾಗಿ ಉಳಿದುಬಿಡುತ್ತೇನೆ.
ನಿಮ್ಮನ್ನ ಹೋರಾಟಗಾರ ಅನ್ನಬೇಕಾ?? ಪತ್ರಕರ್ತ, ಕವಿ,ಅಥವಾ ಸಮಾಜಸೇವಕ ಇಲ್ಲಾ ಅಡ್ವೋಕೆಟ್ ಅಂತ ಕರಿಬೇಕಾ??? ಅನ್ನುವ ನನ್ನ ಒಂದಷ್ಟು ಸಹೃದಯರಿಗೆ ನಾನು ಹೇಳೋದು ಯೂ ಕ್ಯಾನ್ ಕಾಲ್ ಮೀ ವಾಟೆವರ್ ಯು ಥಿಂಕ್…ಆದರೆ ಇಷ್ಟು ದಿನದ ಬದುಕಿನಲ್ಲಿ ಕಲೆತ ಒಂದು ಮಹತ್ವದ ಪಾಠವೆಂದರೆ ಸಾಧ್ಯವಾದರೆ ಒಳ್ಳೆಯದು ಮಾಡು ಇಲ್ಲವಾದರೆ ಸುಮ್ಮನೇ ಇದ್ದುಬಿಡು ಅನ್ನುವದಷ್ಟೇ…
ಮತ್ತೆ ಸಿಗೋಣಾ ಅಲ್ಲಿಯವರೆಗೂ ಟೇಕ್ ಕೇರ್….

ಮೊ:9482766018