ನಗರ ಬೀದಿಯಲ್ಲಿ ಅರಳಿದ ಕುರಿಂಜಿ : ಅಮರೇಶ ಗಿಣಿವಾರ

.                   ನಗರ ಬೀದಿಯಲ್ಲಿ ಅರಳಿದ ಕುರಿಂಜಿ

ದಾದಾಪೀರ್ ಜೈಮನ್ Dadapeer Jyman ರ ಮೊದಲ ಕಥಾ ಸಂಕಲನ ನೀಲಕುರಿಂಜೆ ಓದಿದೆ. ಇನ್ನೂ ದಾದಾಪೀರ್ ಪರಿಚಯವಿಲ್ಲದಾಗ ನಾನು ಕುರಿಂಜಿ ಹೆಸರಿನಲ್ಲಿ ಪ್ರಕಟವಾದ ಕತೆ ಪ್ರಜಾವಾಣಿ ಸಾಪ್ತಾಹಿಕದಲ್ಲಿ ಓದಿದ್ದೆ. ಅವತ್ತೇ ನಾನು ಆತನಿಗೆ ಒಳಗೆ ಆಪ್ತನಾಗಿದ್ದೆ. ದಾದಾಪೀರ್ ಮೂಲತಃ ಬಳ್ಳಾರಿಯವರಾದರೂ ಕತೆಯಲ್ಲಿ ಬಳ್ಳಾರಿ ಪ್ರಾದೇಶಿಕ ಭಾಷೆ ಮತ್ತು ಚೆಲುವನ್ನು ಎಲ್ಲೂ ಉಪಯೋಗಿಸಿಲ್ಲ. ಅದು ಅವರ ವಿದ್ಯೆ ಮತ್ತು ಉದ್ಯೋಗ ಬೇರೆಬೇರೆ ಊರುಗಳಲ್ಲಿ ಆದ ಕಾರಣದಿಂದಿರಬಹುದು. ಆದರೆ ಹಳ್ಳಿಯವರಿಗೆ ನಗರದ ಬದುಕು ಅದೊಂದು ಅವಸರದ ಬದುಕು, ಅಲ್ಲಿನ ಬದುಕು ಸಪ್ಪೆ, ನೆರೆಹೊರೆಯ ಪ್ರೀತಿ ಯಾಂತ್ರಿಕ ಅಂತ ಅನ್ನಿಸುತ್ತಿರುವಾಗ, ದಾದಾಪೀರ್ ನಗರದ ಬದುಕಿನಲ್ಲಿ ಕತೆಗಾರನಾಗಿ ತನ್ನ ಬೆರಗುಗಣ್ಣುಗಳಿಂದ ನೋಡಿ ಒಂದು ಮಾನವೀಯ ಬದುಕಿಗಾಗಿ ಮಿಡಿಯುವದನ್ನ ಮತ್ತು ಕಂಡುಕೊಂಡಿದ್ದನ್ನ ನೀವು ನೀಲಕುಂರಿಜೆಯಲ್ಲಿನ ಕತೆಗಳನ್ನು ಓದಿ ತಿಳಿದುಕೊಳ್ಳಬಹುದು.
“ನೀಲಕುರಿಂಜಿ” ಎಂಬ ಕತೆ ಚಿಕ್ಕಮಂಗಳೂರಿನ ಹಸಿರುಬೆಟ್ಟದ ಮೇಲೆ ಕುರಿಂಜಿ ಹೂಗಳ ಘಮದೊಂದಿಗೆ ಒಂದು ನಿಗೂಢ ಸಾವನ್ನು ಪರಿಚಯಿಸುವ ಕತೆ. ಇಲ್ಲಿ ಕಲಂದರ್‌ನ ತಂದೆ ಸಿದ್ದಕಲಿಯ ಸಾವು ನಿಗೂಢವಾದದ್ದು. ಅದು ಕಲಂದರ್‌ನಿಗೆ ಅಜ್ಜಿ ಹನೀಫಾಳಿಂದಾಗಲಿ, ತಾಯಿ ಹಸೀನಾಳಿಂದಾಗಲಿ, ತಂದೆ ಸಿದ್ದಕಲಿ ಹೇಗೆ ಸತ್ತ? ಎಂಬುದು ತಿಳಿಯದೇ ಹೋಗುತ್ತದೆ. ಇದರ ನಡುವೆ ತಂದೆಯ ಸಾವು ಒಂದರಮಟ್ಟಿಗೆ ಕಲಂದರ್‌ನಿಗೆ ಮರೆಯಲು ಪ್ರಕೃತಿಯ ಭಾಗಗಳಾದ ಬೆಟ್ಟದ ಹಸಿರು ತಪ್ಪಲು, ಜಲಪಾತ, ಕುರಿಂಜಿ ಹೂ ಇವು ಸಹಾಯವಾಗುತ್ತವೆ. ಅಪ್ಪನ ಸಾವೆಂಬುದು ಅವನನ್ನು ಜಲಪಾತದ ಆಳಕ್ಕೂ ಚಿಂತಿಸುವಂತೆ ಮಾಡುವುದು.

ಈ ಸಂಕಲನದ ಮಹತ್ವದ ಕತೆ “ಜಾಲಗಾರ”. ಕತೆ ಮೇಲ್ನೋಟಕ್ಕೆ ವ್ಯವಸ್ಥಿತವಾಗಿ ಇಟ್ಟ ಪ್ರಾಣಿಗಳ ಶೀರ್ಷಿಕೆಯ ಅಡಿಯಲ್ಲಿ ಆ ಪ್ರಾಣಿಗಳಿಗೆ ಹೋಲುವಂತೆ ಮನುಷ್ಯನ ವರ್ತನೆಗಳನ್ನ ಚಿತ್ರಿಸಲಾಗಿದೆ ಅನ್ನಿಸುತ್ತದೆ. ಆದರೆ ಕತೆಯನ್ನ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಮಾರುಕಟ್ಟೆ ಹಾಗೂ ಬಂಡವಾಳಶಾಹಿಯ ಕುಹಕ ಜಾಲದಲ್ಲಿ ಸಿಲುಕಿರುವ ಮನುಷ್ಯ ಸಂಬಂಧದ ಬಗ್ಗೆ ಕಥಾನಾಯಕ ಪರಿತಪಿಸುವದು. ಇಲ್ಲಿ ಬಂಡವಾಳಿಗ ವೇಷದಲ್ಲಿರುವ ಕಥಾನಾಯಕ ಅಮೂರ್ತ ಪಾತ್ರವೆನಿಸುವ ಅವಳು ಎಂಬುವವಳ ಬಾಯಲ್ಲಿ ಕಾರ್ಪೊರೇಟ್ ಕಂಪನಿಗಳಿಂದಾಗಿ ಸಹಜವಾಗಿ ಹುಟ್ಟುವ ತನ್ನ ಶೋಷಿತಗುಣಗಳನ್ನು ಹೊರಹಾಕಿಸುತ್ತಾನೆ. ಏಕಕಾಲದಲ್ಲಿ ಸಂಬಂಧ ಮತ್ತು ವ್ಯವಹಾರದ ಜಾಲದ ನಡುವೆ ಸಿಕ್ಕು ಒದ್ದಾಡುವದು ಈ ಕತೆಯ ಮುಖ್ಯ ಯಶಸ್ಸು. ಈ ಕತೆಯ ಅವಳು ಎಂಬುವವಳಿಂದ ‘ಬೇರೆಯವರ ಶ್ರಮದಲ್ಲಿ ಬದುಕುವವನು, ಇನ್ನೊಬ್ಬರಿಗೆ ನಾಮ ಹಾಕುವವನು’ ಎಂಬಂರ್ಥದ ಮಾತು ಕೇಳಿದಾಗ, ಮಹಾಂತೇಶ ನವಲಕಲ್‌ರ “ಬುದ್ಧ ಗಂಟೆಯ ಸದ್ದು” ನೆನಪಾಗಿ ಕತೆಯಲ್ಲಿ ಆನಗಾಂಗ್ ಎಂಬುವವ ಹುಡುಗಿ ನೆನಪಾದಳು. ಅಲ್ಲಿ ಆನ್‌ಗಾಂಗ್ ಗೊಬ್ಬರದಂಗಡಿಯ ಕ್ರಿಮಿನಾಶಕ ಮಾರುವವನಿಗೆ ರೈತರಿಗೆ ಮಾಡುವ ಮೋಸದ ಬಗ್ಗೆ ಪಶ್ಚಾತ್ತಾಪ ಹುಟ್ಟಿಸುತ್ತಾಳೆ. ಇಬ್ಬರೂ ಮಾರುಕಟ್ಟೆಗೆ ಜಾಲಕ್ಕೆ ಸಿಲುಕಿದವರು. ‘ಜಾಲಗಾರ’ದ ಕಥಾನಾಯಕ `ಬುದ್ದಗಂಟೆಯ ಸದ್ದಿ’ನ ಕಥಾನಾಯಕ ಇಬ್ಬರು ಶೋಷಕರೇ ಆದರೆ ಶೋಷಣೆ ಮಾಡಲು ಆಯ್ದುಕೊಂಡ ಕ್ಷೇತ್ರಗಳು ಬೇರೆ, ಶೋಷಣೆಗೊಳಪಟ್ಟವರು ಬೇರೆ. ಇಲ್ಲಿ ಹೆಣ್ಣು, ಅಲ್ಲಿ ರೈತ.

ಇನ್ನೊಂದು ಬಹುಮಾನಿತ ಕತೆ “ಆವರಣ”. ವಿಷಾದದ ಛಾಯೆಯನ್ನೊಳಗೊಂಡಕತೆ. ಕತೆಯಲ್ಲಿ ಅನಂತು ಮನೆ ಬಿಟ್ಟು ಹೋಗಿ ‘ಅನು’ ಆಗುವದು. ಅನಂತು ಏನಾಗಿದ್ದಾನೆ? ಎಂಬ ಹೊಳಹು ಓದುಗರಿಗೆ ತಿಳಿಸಲು ಮಂಗಳಮುಖಿಯರಿಗೆ ಭಿಕ್ಷೆ ನೀಡುವ ಸನ್ನಿವೇಶ ಕತೆಗಾರ ಸೃಷ್ಟಿಸಿದ್ದಾನೆ. ಅದಾದ ನಂತರ ಒಂಭತ್ತನೇ ತರಗತಿಯಿದ್ದಾಗ `ಒಂಭತ್ತು’ ಎಂದಾಗ ಅನಂತು ತತ್ತರಿಸುವದು, ಪಿಟಿ ಮಾಸ್ಟರ್ ‘ಹೆಣ್ಣಿಗ’ ಅನ್ನುವದು ಈ ರೀತಿ ಶಾಲಾ ಮೈದಾನವೇ ಅನಂತನ ಭವಿಷ್ಯ ನಿರ್ಧರಿಸಿದಂತಿತ್ತು. ಕೊನೆಗೂ ತಮ್ಮ ಅನಂತು ಮನೆ ಸೇರಿ ಪ್ರಸಾದ್‌ನ ಆಸ್ತಿಯಲ್ಲಿ ಪಾಲು ಕೇಳುತ್ತಾನೆ… ಎಂದುಕೊಳ್ಳುವಾಗ ಕತೆಯ ಅಂತ್ಯ ಅನಂತು ಅಣ್ಣ ಪ್ರಸಾದ್‌ನನ್ನು ವಿಗ್ ಕೇಳುವದರೊಂದಿಗೆ ಸರಿಯಾದ ಅಂತ್ಯ ಕಾಣುತ್ತದೆ. ಈ ತರಹ ‘ಎಲ್‌ಜಿಬಿಟಿಕ್ಯೂ’ಗಳ ಬಗ್ಗೆ ಸಮಾಜ ನೋಡುವಂತಹ ಏಕಮುಖ ದೃಷ್ಟಿಕೋನದಿಂದಾಗಿ ಈ ರೀತಿಯ ಕಥಾವಸ್ತಗಳು ಓದುಗರನ್ನು ಆರ್ದ್ರವಾಗಿಸುತ್ತವೆ.

ನಗರದ ಧಾವಂತದ ಬದುಕನ್ನು ಬೇರೊಂದು ಆಯಾಮದಲ್ಲಿ ನೋಡುವವನಿಗೆ ಹುಟ್ಟಿದ ಕತೆಗಳು ಹೇಗಿರುತ್ತವೆ? ಅನ್ನಲು “ಪೇಟೆ ಸಮುದ್ರದ ದಾರಿ” ಎಂಬ ಕತೆಯನ್ನು ಓದಬಹುದು. ಶಿಕ್ಷಕ ಸಮುದ್ರನ ಗೆಳೆಯ ಚಿತ್ರ ನಿರ್ದೇಶಕ ಮಾನವ್. ಮಾನವ ಸಮುದ್ರನಿಗೆ ಸಿನಿಮಾ ಮಾಡಲು ಕತೆ ಹುಡುಕಲು ಹೇಳುತ್ತಾನೆ. ಅದರ ನೆಪದಲ್ಲಿ ಸಮುದ್ರ ಎಂಬ ಪಾತ್ರದೊಂದಿಗೆ ಪೇಟೆಯ ದಾರಿ ಆ ದಾರಿಯಲ್ಲಿ ರಾಜಸ್ಥಾನಿ ಮಕ್ಕಳ ಬದುಕು, ಮಕ್ಕಳು ಬಾಲಾಪರಾಧದಲ್ಲಿ ತೊಡುಗುವದು, ಒಂದಾದ ನಂತರ ಒಂದು ತಿಳಿಸುತ್ತಾ ಯಾವುದು ಸಿನಿಮಾ ಮಾಡಲು ಯೋಗ್ಯ? ಅನ್ನುವುದನ್ನು ಕತೆಗಾರ ಓದುಗರಿಗೆ ಬಿಡುತ್ತಾನೆ. ಪೇಟೆ ದಾರಿ ನಡುವೆ ಕ್ಷುಲ್ಲಕ ಎನಿಸುವ ಹುಡುಗರ ಬಾಲಿಶ ಬದುಕು ಅಲ್ಲಲ್ಲಿ ನಮಗೆ ದೊರುಕುತ್ತದೆ.

ಇಂದಿನ ವಿದ್ಯಮಾನಗಳನ್ನು ಗಮನಿಸಿದಾಗ ಜಾತ್ಯಾತೀತತೆ ಮತ್ತು ಧರ್ಮಸಾಮರಸ್ಯ ಎಂಬ ಆಶಯಗಳು ಅದರ ಕುರಿತು ಮಾತಾನಡುವವರನ್ನು ಇಂದು ಅಪಹಾಸ್ಯಕ್ಕೆ ಒಳಗಾಗುವಂತಹ ಸಂದರ್ಭವನ್ನು ಸೃಷ್ಟಿಮಾಡಿದ್ದಾರೆ. ಇಂತಹ ಮಾತಿನ ನಡುವೆ ಕತೆಗಳು ಬೇರೊಂದು ರೀತಿಯಲ್ಲಿ ಸಂದೇಶವನ್ನು ಮುಟ್ಟಿಸಬಹುದು ಎಂಬ ಭರವಸೆಯನ್ನು ಕಂಟಲಗೆರೆ, ದಾದಾಪೀರ್ ನಂತಹ ಬರಹಗಾರರು ಉಳಿಸಿಕೊಂಡಿದ್ದಾರೆ ಎಂಬುದಕ್ಕೆ ಈ ಸಂಕಲನದ “ತೇರು” ಕತೆ ಸಾಕ್ಷಿ. ತೇರು ಕತೆಯಲ್ಲಿ ಅಸಹಿಷ್ಣುತೆ ಮತ್ತು ಜಾತೀಯತೆ ನಡುವೆ ಬದುಕಿನ ತೇರನ್ನ ಎಳೆಯಬೇಕಾದಂತಹ ಅನಿವಾರ್ಯತೆ ತಿಳಿಸುತ್ತದೆ. ಇಲ್ಲಿ ತೇರುಗಾಲಿ ಮುರಿದು ಬೀಳಲು ಕೆಳಜಾತಿಯವರು ತೆಂಗಿನಕಾಯಿ ಹೊಡಿದಿದ್ದೇ ಕಾರಣ. ಹಳ್ಳಿಯಲ್ಲಿ ಮೌಢ್ಯದೊಂದಿಗೆ ಅಂಟಿಕೊಂಡ ಜಾತೀಯತೆ ಎಂಬ ಸ್ಪಷ್ಟತೆ ಈ ಕತೆಯಿಂದ ದೊರಕುತ್ತದೆ.

ದಾದಾಪೀರ್‌ನ ಇನ್ನೂ ಉಳಿದ ಕತೆಗಳಲ್ಲಿ ರೋಗ, ಅಸಹಾಯಕತೆ, ಪ್ರೀತಿ ಮುಂತಾದ ಹಲವು ವಸ್ತುಗಳನ್ನು ಅಲ್ಲಲ್ಲಿ ಬಳಸಿಕೊಂಡು ಕತೆಗಳನ್ನು ಯಶಸ್ವಿಗೊಳಿಸಿದ್ದಾರೆ. ಮೊದಲ ಕಥಾಸಂಕಲನ ಕಥಾಲೋಕಕ್ಕೆ ಕನ್ನಡದ ಓದುಗರು ಬಹಳ ಆತ್ಮೀಯದಿಂದ ಬರಮಾಡಿಕೊಳ್ಳುತ್ತಾರೆ ಎಂಬ ಭರವಸೆಯೊಂದಿಗೆ…

ಅಮರೇಶ ಗಿಣಿವಾರ
ಮೊ;9901942452