ಕಾವ್ಯಲೋಕ: ಡಾ.ಶರೀಫ್ ಹಸಮಕಲ್ ಅವರ ಗಜಲ್ ‘ಯಾರೂ ತುಟಿ ಬಿಚ್ಚುತ್ತಿಲ್ಲ’

ಗಜಲ್

ಯಾರೂ ತುಟಿ ಬಿಚ್ಚುತ್ತಿಲ್ಲ

              ‌  ‌‌*ಡಾ. ಶರೀಫ್ ಹಸಮಕಲ್

ಹಾಲು ಕುಡಿದ ತುಟಿ ನಂಜೇರುತ್ತಿದೆ ಯಾರೂ ತುಟಿ ಬಿಚ್ಚುತ್ತಿಲ್ಲ
ನೀರು ಕುಡಿದ ನೆಲ ಕೆಂಪೇರಿತ್ತಿದೆ ಯಾರೂ ತುಟಿ ಬಿಚ್ಚುತ್ತಿಲ್ಲ

ಷರತ್ತಿನ ಮೇರಿಗೆ ಡಂಗುರ ಹೊಡೆಸಲಾಗಿದೆ ದೊರೆಯ ಮಾತಿಗೆ
ಕಾವಲಿನ ಮಧ್ಯ ಜೀವ ಸುಡಲಾಗುತ್ತಿದೆ ಯಾರೂ ತುಟಿ ಬಿಚ್ಚುತ್ತಿಲ್ಲ

ಮರದಲ್ಲಿ ಗುಬ್ಬಚ್ಚಿ ಗೂಡುಗಳಂತೆ ನೇತಾಡುತ್ತಿವೆ ಬೆನ್ನೆಲುಬುಗಳು
ಬಿತ್ತಿ ತಿನ್ನುವ ನೆಲ ಕಸಿಯಲಾಗುತ್ತಿದೆ ಯಾರೂ ತುಟಿ ಬಿಚ್ಚುತ್ತಿಲ್ಲ.

ಹೊಟ್ಟೆಗೆ ತಿನ್ನುವುದೆಲ್ಲವನ್ನು ತೂಕ ಮಾಡಿ ಕೊಡಲಾಗುತ್ತಿದೆ
ಕೊಳ್ಳಲಾರದ ಜೀವ ಮಿಡುಕಾಡುತ್ತಿದೆ ಯಾರೂ ತುಟಿ ಬಿಚ್ಚುತ್ತಿಲ್ಲ

ಶರೀಫನ ಊರಲ್ಲಿ ಅನ್ನಕ್ಕಾಗಿ ಜನರು ಇರುವೆ ಸಾಲಿಟ್ಟಿದ್ದಾರೆ
ಅವ್ವನ ಸೆರಗಲ್ಲಿ ಕೂಸಿನ ಉಸಿರುಗಟ್ಟುತ್ತಿದೆ ಯಾರೂ ತುಟಿ ಬಿಚ್ಚುತ್ತಿಲ್ಲ.

ಡಾ. ಶರೀಫ್ ಹಸಮಕಲ್
ಊರು ; ಹಸಮಕಲ್
ತಾಲೂಕು : ಮಸ್ಕಿ
ಜಿಲ್ಲೆ : ರಾಯಚೂರು
ಪೋನ್ ; 9480605552