ಕೊಪ್ಪಳದ ಅಂಜನಾದ್ರಿಯೇ ಹನುಮನ ಜನ್ಮಸ್ಥಳ ಖಚಿತ ದಾಖಲೆಗಳಿವೆ:ಡಾ ಶರಣಬಸಪ್ಪ ಕೋಲ್ಕಾರ

ಕೊಪ್ಪಳ: ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕಿಷ್ಕಿಂದ ಪ್ರದೇಶದ ಅಂಜನಾದ್ರಿ ಪರ್ವತವೇ ರಾಮಾಯಣ ಕಾವ್ಯದ ಹನುಮಂತನ ಜನ್ಮಸ್ಥಳ. ಇದು ಅತ್ಯಂತ ಖಚಿತವಾದ ಚಾರಿತ್ರಿಕ ಸತ್ಯವೆಂದು ಡಾ.ಶರಣಬಸಪ್ಪ ಕೋಲ್ಕಾರವರು ಪ್ರತಿಪಾದಿಸಿದರು. ಅವರು ಭಾನುವಾರ ಕೊಪ್ಪಳ ನಗರದಲ್ಲಿ ಡಾ.ಸಿದ್ಧಲಿಂಗಪ್ಪ ಕೊಟ್ನೆಕಲ್‌ರವರು ರಚಿಸಿದ ‘ಕೊಪ್ಪಳದ ಕಿಷ್ಕಿಂದೆಯ ಅಂಜನಾದ್ರಿ ಪ್ರದೇಶವೇ ಹನುಮನ ಜನ್ಮಸ್ಥಳ; ಒಂದು ಸಮರ್ಥನೆ’ ಎಂಬ ಕಿರುಹೊತ್ತಿಗೆಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಮೂಲ ಸತ್ಯ ಘಟನೆಯನ್ನಾಧರಿಸಿ ಶ್ರೀ ವಾಲ್ಮೀಕಿ ಮಹರ್ಷಿಗಳು ರಾಮಾಯಣ ಕಾವ್ಯವನ್ನು ರಚಿಸಿದ್ದಾರೆ. ಹಾಗೆ ರಚಿಸುವಲ್ಲಿ ಕರ್ನಾಟಕದ ಹಂಪಿ-ಆನೆಗೊದಿ ಪ್ರದೇಶದಲ್ಲಿ ವಾಸವಿದ್ದ ವಾನರ ಎಂಬ ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿಕೊಂಡಿದ್ದಾರೆ. ವಾನರ ಸಮುದಾಯ ಕಬ್ಬಿಣಯುಗದ ಮೊರೆರೆಂಬ ಸಮುದಾಯವೇ ಆಗಿದೆ. ಇವರು ನಿರ್ಮಾಣ ತಂತ್ರಜ್ಞಾನದಲ್ಲಿ ನೈಪುಣ್ಯತೆಯನ್ನು ಹೊಂದಿದ್ದರು. ಹಾಗಾಗಿ ಸಮುದ್ರಕ್ಕೆ ಸೇತುವೆ ನಿರ್ಮಾಣದಲ್ಲಿ ಇವರ ಸಹಾಯವನ್ನು ರಾಮ-ಲಕ್ಷ್ಮಣರು ಬಳಸಿಕೊಂಡರು. ವಾನರ ವೀರರಲ್ಲಿ ಒಬ್ಬರಾದ ಹನುಮಂತನು ಅಂಜನಾದ್ರಿಯಲ್ಲಿಯೇ ಜನಿಸಿದ ಎನ್ನಲು ಕೆಲವು ಸಾಹಿತ್ಯಕ ಉಲ್ಲೇಖಗಳು, ಶಿಲಾಶಾಸನಗಳು, ಐತಿಹ್ಯಗಳು, ಗವಿಚಿತ್ರಗಳು, ಪ್ರಾಚ್ಯಾವಶೇಷಗಳು ಪುರಾವೆಗಳಾಗಿವೆ. ಅಂಜನಹಳ್ಳಿ, ಹನುಮನಹಳ್ಳಿ, ಆಂಜನೇಯ ದೇವಾಲಯಗಳು, ಅಪಾರ ಶಿಲ್ಪಗಳು ಇದಕ್ಕೆಲ್ಲಾ ಸಾಕ್ಷಿಯಾಗಿವೆ. ಹಾಗಾಗಿ ತಿರುಪತಿ-ತಿರುಮಲ ಬೆಟ್ಟವೇ ಅಂಜನಾದ್ರಿ ಎಂಬ ವಾದ ಅಸಂಬದ್ಧವಾದದ್ದು ಎಂದು ಡಾ.ಕೋಲ್ಕರ್‌ರವರು ಪ್ರತಿಪಾದಿಸಿದರು. ಕೇಂದ್ರ ಸರ್ಕಾರವೂ ಕೂಡಾ ಟಿಟಿಡಿಯ ವಾದವನ್ನು ಪುರಸ್ಕರಿಸಿಲ್ಲ ಎಂದರು.
ಪ್ರಾರಂಭದಲ್ಲಿ ಕಿರು ಹೊತ್ತಿಗೆಯ ಲೇಖಕರಾದ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಡಾಯ ಸಾಹಿತಿಗಳಾದ ಪ್ರೊ. ಅಲ್ಲಮಪ್ರಭು ಬೆಟ್ಟದೂರುರವರು ರಾಮಾಯಣ ಮತ್ತು ಮಹಾಭಾರತಗಳು ನಡೆದ ಕಥೆಗಳು ಎನ್ನುವುದಕ್ಕಿಂತ ವಾಸ್ತವಿಕವಾಗಿ ನಡೆಯುತ್ತಿರುವ ಘಟನೆಗಳೇ ಎಂದರೆ ತಪ್ಪಾಗಲಾರದೆಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಜಿ.ಎಸ್ ಗೋನಾಳ, ಸಿಂಡಿಕೇಟ್ ಸದಸ್ಯರಾದ ಡಾ.ಬಸವರಾಜ ಪೂಜಾರ ಹಾಗೂ ಹಿರಿಯ ಸಾಹಿತಿಗಳಾದ ಎ.ಎಂ ಮದರಿಯವರು ಮಾತನಾಡಿದರು. ಕಿರು ಹೊತ್ತಿಗೆಯ ಪ್ರಕಟಣಾ ದಾನಿಗಳಾದ ಡಾ.ಮಹಾಂತೇಶ ಮಲ್ಲನಗೌಡರು ಉಪಸ್ಥಿತರಿದ್ದರು. ವೇದಿಕೆಯ ಮೇಲೆ ಜಿಲ್ಲಾ ಪ.ಪೂ ಕಾಲೇಜುಗಳ ಉಪನ್ಯಾಸಕರ ಸಂಘದ ಅಧ್ಯಕ್ಷರಾದ ಸೋಮನಗೌಡ ಪಾಟೀಲ, ಜಿಲ್ಲಾ ಚು.ಸಾ.ಪದ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ, ನಿವೃತ್ತ ಪ್ರಾಚಾರ್ಯರಾದ ಬಿ.ಜಿ ಕರಿಗಾರ, ಕಲಾವಿದರಾದ ಲಕ್ಷ್ಮಣ ಪೀರಗಾರ, ಹಾಗೂ ಪ್ರಾಚಾರ್ಯರಾದ ರಾಚಪ್ಪ ಕೇಸರಬಾವಿಯವರು ಉಪಸ್ಥಿತರಿದ್ದರು.
ಕುಮಾರಿ ಅನನ್ಯ ದೇಸಾಯಿಯವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಶಿವನಗೌಡ ಪೋಲಿಸ ಪಾಟೀಲ್ ಸ್ವಾಗತಿಸಿದರೆ ಕೊನೆಗೆ ಕವಿ ಮಹೇಶ ಬಳ್ಳಾರಿ ವಂದಿಸಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಅಶೋಕ ಓಜಿನಹಳ್ಳಿ ನೆರವೇರಿಸಿದರು.