ವಾರದ ಗಜಲ್ ಘಮಲು – ಮಂಡಲಗಿರಿ ಪ್ರಸನ್ನ

ನೋವು ಸಂಕಟಗಳೆಂದಾದರೆ ಪರಿಹಾರಕ್ಕೆ ಗಜಲ್ ಬರೆದುಬಿಡು

ಸುಖ ಸಂತಸಗಳೆಂದಾದರೆ ಖುಷಿಪಡಲಿಕ್ಕೆ ಗಜಲ್ ಬರೆದುಬಿಡು

ಜೀವನದಲಿ ಕೆಲಸಂಗತಿಗಳು ಗೊತ್ತಾಗದೆ ಹೇಗೋ ಬರುತ್ತವೆ
ಕಷ್ಟ ನಷ್ಟಗಳೆಂದಾದರೆ ಲೆಕ್ಕಾಚಾರಕ್ಕೆ ಗಜಲ್ ಬರೆದುಬಿಡು

ಪ್ರಪಂಚವನು ಯಾವಾಗಲೂ ಹಳದಿ ಕಣ್ಣಿಂದ ನೋಡದಿರು
ಹಸಿವು ಸಂಘರ್ಷಗಳೆಂದಾದರೆ ತಿಳಿಯಲಿಕ್ಕೆ ಗಜಲ್ ಬರೆದುಬಿಡು

ಮಹಾಭಾರತ ಕಥೆಯೆ ಕಣ್ಣಮುಂದಿದೆ ಇನ್ನೇನು ಬೇಕು
ರಾಗ ದ್ವೇಷಗಳೆಂದಾದರೆ ವಿವರಿಸಲಿಕ್ಕೆ ಗಜಲ್ ಬರೆದುಬಿಡು

ಬದುಕೊಂದು ವಿಸ್ಮಯದ್ದು `ಗಿರಿ’ ಯಾರಿಗುಂಟು ಯಾರಿಗಿಲ್ಲ
ಮಾನವೀಯ ತುಡಿತಗಳೆಂದಾದರೆ ಮಿಡಿಯಲಿಕ್ಕೆ ಗಜಲ್ ಬರೆದುಬಿಡು

ಮಂಡಲಗಿರಿ ಪ್ರಸನ್ನ, ರಾಯಚೂರು.(ಮೊ:9449140580)