ಲೇಖಕ: ದೀಪಕ್ ಶಿಂಧೆ
ಮನುಷ್ಯನನ್ನ ಚಿಂತೆಗಳು ಚಿತೆಗೆ ಏರಿಸಿದರೆ ಚಿಂತನೆಗಳು ಸ್ವರ್ಗವನ್ನೇ ಭೂಮಿಗೆ ಇಳಿಸುತ್ತವೆ.
ಎ ಬಿಡ್ರಿ ಸರ್ ಅವ್ರಿಗೆನ್ ಕಮ್ಮಿ ಐತಿ??? ಕೋಟ್ಯಾಧೀಶರು ಲಕ್ಷದ ಕಾರು,ಮೈಮ್ಯಾಲ್ ಬಂಗಾರಾ….ಹಿಂಗ್ ಹೋಗಿ ಹಂಗ್ ಬಂದ್ರ ಆತು ಇಪತ್ ಮೂವತ್ ಸಾವಿರ ರೂಪಾಯಿ ಉಡಾಯಿಸಿ ಬಿಡತಾರಿ…ಎಲ್ಲಾ ಹಣೆಬರದಾಗ ಬೇಡಕೊಂಡ್ ಬರಬೆಕ್ರಿ ಪಾ…. ನಮ್ಮಂಥವರದ್ದ ಏನೈತಿ…ಹೀಗೆ ಮತ್ತೊಬ್ಬರ ರಂಗು ರಂಗಿನ ಜೀವನ ಶೈಲಿಯನ್ನು ನೋಡಿ ಆಡಿಕೊಳ್ಳುವ ನೂರಾರು ಜನರೇ ನಮ್ಮ ಎದುರು ದೊಡ್ಡ ಸವಾಲುಗಳಾಗಿ ಎದ್ದು ನಿಲ್ಲುತ್ತಾರೆ.ಹಾಗಾದರೆ ಅದೃಷ್ಟ ಅಂದರೆ ಎನೂ?? ಅದು ಯಾರಿಗೆ ಒಲಿಯುತ್ತೆ ಅನ್ನೋ ಪ್ರಶ್ನೆಗೆ ಉತ್ತರ ಹುಡುಕುತ್ತ ಕುಳಿತಾಗ ಹೊಳೆದ ಒಂದಷ್ಟು ಐಡಿಯಾಗಳನ್ನ ನಿಮ್ಮ ಜೊತೆಗೆ ಹಂಚಿಕೊಳ್ಳುತ್ತಿದ್ದೇನೆ. ಇಂದು ಕೋಟಿ ರೂಪಾಯಿ ಬೆಲೆಬಾಳುವ ಬಂಗಲೆಗಳಲ್ಲಿ ವಾಸಿಸುವ, ಆಡಿ, ಫೇರಾರಿ,ಲಾಂಬೋರ್ಗಿ,ಫಾರ್ಚೂನರ್,ರೋಲ್ಸ ರಾಯಲ್, ಬೆಂಜ್ ನಂತಹ ಲಗಜೂರಿ ಕಾರಿನಲ್ಲಿ ತಿರುಗುವ ಅಥವಾ ಬಿ ಎಮ್ ಡಬ್ಲೂ, ನಿಂಜಾ, ಹಯಾಬೂಸಾ, ಸುಜುಕಿ ಮತ್ತು ಯಮಹಾ ಕಂಪನಿಗಳ ಕಾಸ್ಟ್ಲಿ ಬೈಕಿನಲ್ಲಿ ಸ್ಪೀಡಾಗಿ ಹೋಗುವ ಹುಡುಗ ಹುಡುಗಿಯರನ್ನ ಕಂಡಾಗ ನನ್ನಲ್ಲಿಯೂ ಒಂದಷ್ಟು ಒಳ್ಳೆಯ ಅಸೂಯೆ ಖಂಡಿತ ಹುಟ್ಟಿಕೊಂಡಿದೆ. ಮತ್ತೊಬ್ಬರ ಮಾಲೀಕತ್ವದ ಟ್ರಾಕ್ಟರ್ ಅನ್ನು ತಿಂಗಳ ಸಂಬಳದ ಲೆಕ್ಕದಲ್ಲಿ ನಡೆಸುತ್ತಿದ್ದ ಚಾಲಕನೊಬ್ಬ ತನ್ನ ಒಂದಷ್ಟು ಉಳಿತಾಯದ ಹಣದಿಂದ ಸೆಕೆಂಡ್ ಹ್ಯಾಂಡ್ ಟ್ರಾಕ್ಟರ್ ಖರೀದಿಸಿ ಅದರಲ್ಲೇ ನಿಯತ್ತಾಗಿ ದುಡಿದು ಟಿಪ್ಪರ್,ಜೆಸಿಬಿ ಗಳನ್ನು ಖರೀದಿಸಿ ಬಾಡಿಗೆ ಮನೆಯಿಂದ ಸ್ವಂತದ ಮನೆಗೆ ಶಿಪ್ಟ್ ಆಗುವುದಕ್ಕೆ ಕನಿಷ್ಟವೆಂದರೂ ಹತ್ತಾರು ವರ್ಷಗಳ ನಿರಂತರ ಶ್ರಮ ಮತ್ತು ಅವಿರತ ಪ್ರಯತ್ನ ಅವರದ್ದಾಗಿರುತ್ತದೆ.
ಮನೆ ಮನೆಗೆ ಸೈಕಲ್ ಮೇಲೆ ತೆರಳಿ ಸಾಬೂನು ಮಾರುತ್ತಿದ್ದ ವ್ಯಕ್ತಿಯೊಬ್ಬ ದೊಡ್ಡ ಕಂಪನಿ ಹುಟ್ಟು ಹಾಕಿದ ರೋಚಕ ಕಥೆಗಳ ನಡುವೆ ಅಂಥಹದ್ದೇ ಕೋಟ್ಯಾಧೀಶರು ಕೊನೆಗೆ ಅವರ ಮಕ್ಕಳೇ ಮಾಡಿದ ಮೋಸಕ್ಕೆ ಬಲಿಯಾಗಿ ಅಪಾರ್ಟ್ಮೆಂಟಿನ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಜೀವಂತ ಉದಾಹರಣೆಗಳೂ ಕಣ್ಣ ಮುಂದೆಯೇ ಇವೆ.
ತನ್ನ ನೀಯತ್ತಿನ ದುಡಿಮೆಗೆ ತಿಂಗಳ ಆರಂಭದಲ್ಲಿ ಬರುವ ಎರಡಂಕಿ ದಾಟದ ಸರ್ಕಾರಿ ಸಂಬಳದಲ್ಲೆ ಒಂದಷ್ಟು ಉಳಿತಾಯ ಮಾಡುತ್ತ ಚೀಟಿ ದುಡ್ಡು ಕಟ್ಟಿಯೋ,ಷೇರ್ ಮಾರ್ಕೆಟ್ಟಿನಲ್ಲಿ ಒಂದಷ್ಟು ಹೂಡಿಕೆ ಮಾಡಿ ಲಾಭ ಗಳಿಸಿಯೋ ಗುಮಾಸ್ತನೊಬ್ಬ ಒಂದು ಕಾರು ಕೊಂಡರೆ ಅವನ ಉಳಿತಾಯದ ಮಾರ್ಗವನ್ನು ನಾವೆಲ್ಲ ಮೆಚ್ಚಬೇಕೆ ಹೊರತು ಕುಹಕದ ಮಾತನಾಡುತ್ತ ಅವರ ಇಲಾಖೆಯಲ್ಲಿ ಎನ್ ಕಮ್ಮಿ ಬಿಡಿ ಬ್ರಹ್ಮಾಂಡ ಭ್ರಷ್ಟಾಚಾರ ಅಲ್ವಾ?? ಅವರ ಸಾಹೇಬ್ರ ಮೇಲೆನೆ ಮೊನ್ನೆ ಎಸಿಬಿ ರೈಡ್ ಆಯ್ತು ಇವನು ಕೂಡ ಅದೇ ಕಛೇರಿಯ ಗುಮಾಸ್ತ ಅಲ್ವಾ ಅಂತ ಮಾತನಾಡುವ ಜನರೇ ಹೆಚ್ಚಾಗಿರುವ ಕಾಲವಿದು.ನಿರ್ದಿಷ್ಟ ಗುರಿ ಇಲ್ಲದ್ದಕ್ಕೋ,ಮಾರ್ಗ ತೋರಿಸುವ ಗುರು ಇಲ್ಲದ್ದಕ್ಕೋ,ಅಥವಾ ಭವಿಷ್ಯದ ಯೋಚನೆಗೆ ಸರಿಯಾದ ಯೋಜನೆಗಳು ನಮ್ಮಲ್ಲಿ ಇಲ್ಲದ್ದಕ್ಕೋ ಮತ್ತು ಅದನ್ನೆಲ್ಲ ಮೀರಿದ ದುಡಿಯಲಾಗದ ನಮ್ಮೊಳಗಿನ ಮೈಗಳ್ಳತನಕ್ಕೋ ಮತ್ತೊಬ್ಬರ ಮನೆಯ ವಿಷಯಕ್ಕೆ ಕಿವಿಯಾಗುವ ಮತ್ತು ಮಸಾಲೆ ಬೆರೆಸಿದ ಮಾತಾಗುವ ಜನರ ನಡುವೆಯೇ ಇಂದು ನಾವು ಒಂದಷ್ಟು ವಿಭಿನ್ನವಾಗಿ ಯೋಚಿಸಬೇಕಿದೆ.ರಾನು ಮಂಡಲ್ ಅನ್ನುವ ಹೆಣ್ಣುಮಗಳು ಇಳಿವಯಸ್ಸಿನಲ್ಲಿ ತನ್ನ ಹಾಡಿನ ಮೂಲಕ ಹಿಟ್ ಆಗಿದ್ದು ನಿಮಗೆ ನೆನಪಿರಬಹುದು ಅದು ಅವಳಿಗೆ ಒಲಿದು ಬಂದ ಅವಕಾಶವೂ ಹೌದು.ಆದರೆ ಆಕೆ ಮಾಡಿದ ಸಣ್ಣತನಗಳಿಂದಾಗಿ ಅದೃಷ್ಟದ ಬಾಗಿಲು ಅವಳ ಪಾಲಿಗೆ ಶಾಶ್ವತವಾಗಿ ಮುಚ್ಚುವ ಮೂಲಕ ಮತ್ತೆ ತನ್ನ ಮೊದಲ ಸ್ಥಿತಿಗೆ ಬರುವಂತಾಗಿದ್ದು ಬಹುಶ ಎಲ್ಲರಿಗೂ ತಿಳಿದ ವಿಷಯವೇ…ಒಂದಷ್ಟು ರಿಸ್ಕ್ ಇಲ್ಲದೆ,ಅಥವಾ ಪರಿಶ್ರಮ ಇಲ್ಲದೆ ಈ ಜಗತ್ತಿನಲ್ಲಿ ಯಾರೂ ಕೂಡ ಒಂದೇ ರಾತ್ರಿಯಲ್ಲಿ ಶ್ರೀಮಂತರಾಗುವದಿಲ್ಲ.ಇಂದು ಕೋಟ್ಯಾಧೀಶರ ಮಗನೊಬ್ಬ ಡ್ರಗ್ಸ್ ವಿಷಯದಲ್ಲಿ ಬಂಧಿತನಾದರೆ ಅದನ್ನೆ ಗಂಟೆಗಟ್ಟಲೆ ಮಾತನಾಡುವ ನಾವು ನಮ್ಮ ಮನೆಯ ಮಕ್ಕಳು ಗೋವಾಕ್ಕೆ ಪ್ರವಾಸ ಹೋದರೆ ಅಲ್ಲಿ ಏನು ಮಾಡುತ್ತಾರೆ ಅಂತ ಕಾಳಜಿ ವಹಿಸುವದರಲ್ಲಿ ಬಹುತೇಕ ಎಡವಿ ಬಿಡುತ್ತೇವೆ.ಯಾರೋ ನಮ್ಮ ಸಂಭಂದಿಕರಲ್ಲದ,ನಮ್ಮ ವೈರಿಯೂ ಅಲ್ಲದ ಒಂದಷ್ಟು ಹಣ ಉಳ್ಳವರ ಕೋಟಿ ರೂಪಾಯಿಗಳ ಬೆಲೆ ಬಾಳುವ ಬಂಗಲೆ, ಬ್ರಾಂಡೆಡ್ ಶೂ,ಬ್ರಾಂಡೆಡ್ ಬಟ್ಟೆ,ಮತ್ತು ಅವರ ಲಗಜೂರಿ ಬೈಕು, ಕಾರಿನ ಬಗ್ಗೆ ಯೋಚಿಸುವ ನಾವು… ಅವರ ಐಶಾರಾಮಿ ಜೀವನಕ್ಕೆ ಕಾರಣವಾದ ಅವರ ಹಿರಿಯರ ಪರಿಶ್ರಮದ ಬಗ್ಗೆ ಯಾಕೆ ಯೋಚಿಸುವದಿಲ್ಲ ಅನ್ನುವ ಪ್ರಶ್ನೆ ನನ್ನನ್ನು ಈಗಲೂ ಕಾಡುತ್ತದೆ.
ಡೈರೆಕ್ಟ ಮಾರ್ಕೆಟಿಂಗ್, ಜೀವವಿಮೆ,ಷೇರ್ ಮಾರ್ಕೆಟ್ ಅಂತಹ ಒಂದಷ್ಟು ರಿಸ್ಕ್ ಇರುವ ಕೆಲಸಗಳನ್ನು ಮಾಡಿದವರು,ಸರಳತೆ ಮತ್ತು ಸೌಜನ್ಯವನ್ನು ಮೈಗೂಡಿಸಿಕೊಂಡು,ನುಡಿದಂತೆ ನಡೆಯುತ್ತ,ನೊಂದವರ ಕಣ್ಣೀರು ಒರೆಸುತ್ತ,ತಮ್ಮ ಕೈಲಾದಷ್ಟು ಸಹಾಯ ಮಾಡುತ್ತ ಜನಮಾನಸದಲ್ಲಿ ಉಳಿಯುತ್ತಲೇ ರಾಜಕೀಯದಲ್ಲಿ ಉನ್ನತ ಸ್ಥಾನಕ್ಕೆ ಹೋದವರು ಅಥವಾ ಹತ್ತಾರು ವರ್ಷದ ಹಿಂದೆ ಒಂದಷ್ಟು ಪ್ಲಾಟು ಮತ್ತು ಮನೆಗಳನ್ನು ಮಾರಿಸುವ ದಲ್ಲಾಳಿಗಳಾಗಿ ಮತ್ತೊಬ್ಬರ ಆಳಾಗಿ ದುಡಿದು ಬಂದ ಕಮಿಷನ್ ಹಣವನ್ನು ಅದೇ ಉದ್ಯೋಗದಲ್ಲಿ ತೊಡಗಿಸಿ ಮತ್ತಷ್ಟು ಸೈಟುಗಳನ್ನ ಖರೀದಿಸಿ ಮಾರಾಟ ಮಾಡುತ್ತ ಇವತ್ತಿಗೆ ಲ್ಯಾಂಡ್ ಡೆವಲಪ್ಪರುಗಳಾಗಿ ಮೈ ಮೇಲೆ ಕೆಜಿ ಲೆಕ್ಕದಲ್ಲಿ ಚಿನ್ನ ಧರಿಸಿದವರನ್ನ ನೋಡಿ ನಾವು ಕೈಯ್ಯ ಲಟಿಗೆ ಮುರಿಯುತ್ತ ಕರಬುತ್ತ ಕುಳಿತರೆ……?? ಕಾಲವೆಂಬದು ಸದ್ದಿಲ್ಲದೆ ಸರಿಯುತ್ತ ಹೋಗಿ ನಮ್ಮ ಮೈಯ್ಯಲ್ಲಿನ ಕಸುವು ಮತ್ತು ಯೋಚಿಸುವ ಶಕ್ತಿ ಕೂ ಕಡಿಮೆಯಾಗುತ್ತ ಹೋಗುತ್ತದೆಯೇ ಹೊರತು ಕುಳಿತ ಜಾಗದಲ್ಲೇ ಯಾವ ದೇವರು ಕೂಡ ತುಂಡು ರೊಟ್ಟಿಯನ್ನೂ ನಮಗೆ ತಂದು ಕೊಡುವದಿಲ್ಲ.ಅಥವಾ ಇದ್ದಕ್ಕಿದ್ದಂತೆ ಯಾವ ಅದೃಷ್ಟದ ಬಾಗಿಲು ಕೂಡ ನಮಗಾಗಿ ತೆರಯುವದಿಲ್ಲ.ಕೆಲಸ ಮಾಡಬೇಕಾದ ವಯಸ್ಸಿನಲ್ಲಿ ಕುಳಿತು ಉಂಡವರು ಅವರ ಹಿರಿಯರ ಆಸ್ತಿಯನ್ನು ಮಾರಿಕೊಳ್ಳುವ ಸ್ಥಿತಿ ತಲುಪುತ್ತಾರೆಯೆ ಹೊರತು ಇರುವ ಒಂದೆರಡು ಎಕರೆ ಜಮೀನಿನಲ್ಲಿ ಪ್ರಾಮಾಣಿಕವಾಗಿ ದುಡಿದು ನೂರಾರು ಎಕರೆ ಜಮೀನು ಖರೀದಿಸುವಷ್ಟು ಎಂದಿಗೂ ದೊಡ್ಡವರಾಗುವದಿಲ್ಲ. ಇರುವದರಲ್ಲಿ ಸಂತೃಪ್ತಿಯ ಜೀವನ ನಡೆಸಿದವರು ಸಮಾಧಾನದ ಸಾವನ್ನಪ್ಪಿದರೆ ಇಲ್ಲದುದರ ಕಡೆಗೆ ತುಡಿಯುತ್ತ,ಆ ಕನಸನ್ನು ಸಾಕಾರಗೊಳಿಸಲು ನಿರಂತರವಾಗಿ ದುಡಿಯುತ್ತ ಒಂದು ಹಂತವನ್ನು ತಲುಪಿದವರು ನೆಮ್ಮದಿಯಿಂದ ಕಣ್ಣು ಮುಚ್ಚುತ್ತಾರೆ.ಇದು ಯಾವುದನ್ನೂ ಮಾಡದೆ ಮತ್ತೊಬ್ಬರ ಬಗ್ಗೆ ಆಡಿಕೊಳ್ಳುತ್ತ ಕುಳಿತವರು,ಹರೆಯವನ್ನ ಆಡಾಡುತ್ತ ಮೋಜು ಮಸ್ತಿಗಳಲ್ಲಿ ಕಳೆದವರು ಮಾತ್ರ ಕೊರಗುತ್ತ ಕಣ್ಣು ಮುಚ್ಚುತ್ತಾರೆ ಆದ್ದರಿಂದ ಆಯ್ಕೆ ನಿಮ್ಮದು.
ವಿಷ್ ಯೂ ಬೆಸ್ಟ ಆಪ್ ಲಕ್… ನೆನಪಿರಲಿ, ದುಡಿಮೆಯೇ ದುಡ್ಡಿನ ತಾಯಿ…

ಮೊ:9482766018