ಬೆಳೆಯುವ ಸಿರಿ; ಕುಮಾರಿ ಅನನ್ಯ ದೇಸಾಯಿ

ಲೇಖಕರು:ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಸಂಗೀತಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಸಂಗೀತ ಇದೇ ಸಂದರ್ಭದಲ್ಲಿ ಉಗಮವಾಯಿತೆಂದು ಸ್ಪಷ್ಟವಾಗಿ ಹೇಳುವುದು ಕಷ್ಟದ ಕೆಲಸ. ಪ್ರಾಚೀನ ಕಾಲದಲ್ಲಿ ಜನಪದರ ಹಾಡು, ಕುಣಿತ, ನೃತ್ಯ ಅವರ ಸಂಗೀತದ ವಾದ್ಯಗಳನ್ನು ಗಮನಿಸಿದಾಗ ಈ ಸಂಗೀತಕ್ಕೆ ಎಷ್ಟು ಸಾವಿರ ವರ್ಷಗಳ ಇತಿಹಾಸವಿದೆ ಎಂದು ನಿಖರವಾಗಿ ಸಾಧ್ಯವಿಲ್ಲ. ಆದರೂ ಕೆಲ ಗ್ರಂಥಗಳ ಆಧಾರದಿಂದ ಊಹೆಮಾಡಲು ಸಾಧ್ಯವಿದೆ. ಸಾಮವೇದದಲ್ಲಿ ಸಂಗೀತದ ಕುರುಹುಗಳನ್ನು ಕಾಣಬಹುದಾಗಿದೆ. ಭರತನ ನಾಟ್ಯಶಾಸ್ತ್ರ, ಮಾತಂಗ ಮುನಿಯ ಬೃಹದ್ಧೇಶೀ ಹೀಗೆ ಮುಂತಾದ ಗ್ರಂಥಗಳಲ್ಲಿ ಅದರ ಕುರುಹುಗಳಿವೆ. ಸಂಗೀತವು ಮೊದಲು ದೇವತೆಗಳ ಮೇಲೆ ಕುರಿತ ಸ್ತೋತ್ರಗಳಾಗಿದ್ದವು. ಕ್ರಿ.ಶ.ಸು. ೧೨ ಮತ್ತು ೧೩ ನೇ ಶತಮಾನಗಳಲ್ಲಿ ಮೊಘಲರು ಉತ್ತರ ಭಾರತವನ್ನು ಆಳಲು ಪ್ರಾರಂಭಿಸಿದ ನಂತರ, ಭಾರತೀಯ ಸಂಗೀತದಲ್ಲಿ ಎರಡು ಬೇರೆ ಬೇರೆ ಪದ್ಧತಿಗಳು ಹುಟ್ಟಿಕೊಂಡವು. ಅವು ಕರ್ನಾಟಕ ಶಾಸ್ತ್ರೀಯ ಸಂಗೀತ ಮತ್ತು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವಾಗಿ ರೂಪಪಡೆದು ದೇಶದ ಎಲ್ಲೆಡೆಯೂ ಪಸರಿಸ ಹತ್ತಿದವು. ಸಪ್ತ ಸ್ವರಗಳು, ರಾಗಗಳು, ತಾಳಗಳು ಇವೆಲ್ಲ ಸಂಗೀತದ ಶಾಸ್ತ್ರಗಳು ಇದ್ದಂತೆ. ರಾಗ, ಆಲಾಪನೆ, ಕಲ್ಪನಾಸ್ವರ, ತಾನ, ರಾಗತಾನ ಪಲ್ಲವಿಯನ್ನು ಮನೋಧರ್ಮ ಸಂಗೀತವೆನ್ನುತ್ತಾರೆ.
ದೇಶದಲ್ಲೇ ಹೆಸರು ಮಾಡಿದ ಪ್ರಮುಖ ಸಂಗೀತಗಾರರು ಬಹಳಷ್ಟಿದ್ದಾರೆ. ಅಂತರರಾಷ್ಟಿಯ ಮಟ್ಟದಲ್ಲೂ ಗುರತಿಸುಕೊಂಡವರಿದ್ದಾರೆ. ಕನಾರ್ಟಕದಲ್ಲಿ ಶ್ರೀ ಪುರಂದರದಾಸರನ್ನು ‘ಕರ್ನಾಟಕದ ಸಂಗೀತ ಪಿತಾಮಹ’ ಎಂದು ಕರೆಯುತ್ತಾರೆ. ಅವರು ಸುಮಾರು ಎರಡು ಲಕ್ಷಕ್ಕೂ ಅಧಿಕ ಹಾಡುಗಳನ್ನು ರಚಿಸಿದ್ದಾರೆಂದು ಹೇಳಲಾಗುತ್ತಿದೆ. ಶ್ರೀ ಪುರಂದರದಾಸರು, ಶ್ರೀಪಾದರಾಯರು, ಕನಕದಾಸರು, ಜಗನ್ನಾಥದಾಸರು, ವಿಜಯದಾಸರು ಮತ್ತು ಅನೇಕ ದಾಸ ಪರಂಪರೆಯವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದ ಪ್ರಮುಖರಾಗಿದ್ದಾರೆ. ನಂತರ ಕರ್ನಾಟಕದಲ್ಲಿ ಸಂಗೀತವನ್ನು ಒಂದು ಬಹುದೊಡ್ಡ ಕ್ಷೇತ್ರವಾಗಿ ಬೆಳೆಸಲಾಯಿತು.
ಕರ್ನಾಟಕದ ಸಂಗೀತ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಅನೇಕ ಹಿರಿಯ-ಕಿರಿಯ ಕಲಾವಿದರಿದ್ದಾರೆ. ಅದರಲ್ಲಿ ಕೊಪ್ಪಳ ಭಾಗದಲ್ಲಿ ಸದಾಶಿವ ಪಾಟಿಲ್, ಶಂಕರ ಬಿನ್ನಾಳ್, ರಾಮಚಂದ್ರಪ್ಪ ಉಪ್ಪಾರ, ಪರಶುರಾಮ ಬಣ್ಣದ, ಹುಚ್ಚಯ್ಯಸ್ವಾಮಿ ಕಟಿಗಿಹಳ್ಳಿ, ಗೋವಿಂದರಾಜ್ ಬೊಮ್ಲಾಪುರ, ಅಂಬಣ್ಣ ಕೊಪ್ಪರದ, ಹನ್ಮಂತರಾವ್ ಬಂಡಿ ಮುಂತಾದ ಹಿರಿಯರು ಸೇವೆ ಸಲ್ಲಿಸಿರುವುದನ್ನು ನಾವು ಕಾಣಬಹುದಾಗಿದೆ. ಅವರ ಆಶೀರ್ವಾದದಿಂದ ಬೆಳೆಯುತ್ತಿರುವ ಮತ್ತು ಯುವ ಕಲಾವಿದೆಯಾಗಿ ಗುರುತಿಸಿಕೊಳ್ಳುತ್ತಿರುವ ಕುಮಾರಿ ಅನನ್ಯ ದೇಸಯಿಯವರು ಬೆಳೆಯುತ್ತಿರುವ ಸಿರಿ ಎಂದೇ ಹೇಳಬಹುದು.


ಕೊಪ್ಪಳದ ಶ್ರೀ ಜಯತೀರ್ಥ ದೇಸಾಯಿ ಮತ್ತು ಶ್ರೀಮತಿ ಸಹನಾ ದೇಸಾಯಿ ಇವರ ಹಿರಿಯ ಮಗಳಾದ ಕುಮಾರಿ ಅನನ್ಯ ದೇಸಾಯಿ ಇವರು ದಿನಾಂಕ:೦೩-೦೪-೨೦೦೪ ರಂದು ಜನಿಸಿದರು. ದೇಸಾಯಿಯವರು ಮೂಲತಃ ಯಲಬುರ್ಗಾ ತಲ್ಲೂಕಿನ ಜರಗುಂಟಿ ಗ್ರಾಮದವರು. ಕುಮಾರಿ ಅನನ್ಯ ಸುಮಾರು ಒಂದುವರೆ ವರ್ಷ ವಯಸ್ಸಿನಲ್ಲಿರುವಾಗಲೇ “ಉಲ್ಲಾಸದ ಹೂ ಮಳೆ” ಎಂಬ ಚೆಲುವಿನ ಚಿತ್ತಾರದ ಚಿತ್ರ ಗೀತೆಯನ್ನು ರಾಗಬದ್ಧವಾಗಿ ಹಾಡುವುವದನ್ನು ಕೇಳಿದ ಪಾಲಕರು, ಅವಳ ಸಂಗೀತ ಆಸಕ್ತಿಯನ್ನು ಗುರುತಿಸಿದರು. ೩ನೇ ತರಗತಿ ಓದುತ್ತಿರುವಾಗಲೇ ಶ್ರೀ ಅಭಿನವ ಗವಿಸಿದ್ಧೇಶ್ವರ ಸ್ವಾಮಿಗಳರವರ ಕೃಪಾಶೀರ್ವಾದದಿಂದ ಕೊಪ್ಪಳದ ‘ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠ’ದಲ್ಲಿ ಸಂಗೀತಭ್ಯಾಸಕ್ಕೆ ಬಿಟ್ಟರು. ಅಲ್ಲಿ ಶ್ರೀ ವಿರೇಶ ಹಿಟ್ನಾಳ ಗುರುಗಳ ಮಾರ್ಗದರ್ಶನದಲ್ಲಿ ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ ಅಭ್ಯಾಸ ಪ್ರಾರಂಭಿಸಿದರು.
ಕುಮಾರಿ ಅನನ್ಯ ದೇಸಾಯಿಯವರು ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಕೊಪ್ಪಳದ ಶ್ರೀ ಶಿವಶಾಂತವೀರ ಪಬ್ಲಿಕ್ ಶಾಲೆಯಲ್ಲಿ ಅಭ್ಯಾಸ ಮಾಡಿದ್ದಾರೆ. ಪ್ರಸ್ತುತ ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಭಾಗ ತೆಗೆದುಕೊಂಡು ದ್ವಿತೀಯ ಪಿ.ಯು.ಸಿ.ಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಅಭ್ಯಾಸದ ಜೊತೆ-ಜೊತೆಗೆ ಸಂಗೀತ ಅಭ್ಯಾಸದಲ್ಲಿಯೂ ತೊಡಗಿಸಿಕೊಂಡಿದ್ದಾಳೆ. ಕುಮಾರಿ ಅನನ್ಯಳು ಪ್ರಾಥಮಿಕ ಸಂಗೀತವನ್ನು ಶ್ರೀ ವೀರೇಶ ಹಿಟ್ನಾಳರ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ್ದಾಳೆ. ಸಂಗೀತದ ಜ್ಯೂನಿಯರ ಪರೀಕ್ಷೆಯಲ್ಲಿ ಶೇಕಡಾ ೯೨% ಕ್ಕಿಂತ ಹೆಚ್ಚಿನ ಅಂಕ ಪಡೆದು ಉತ್ತೀರ್ಣರಾದದ್ದು ಸಾಮಾನ್ಯ ಸಂಗತಿಯಲ್ಲ. ಪ್ರಸ್ತುತ ಸಂಗೀತದ ಮತ್ತೊಂದು ಹಂತ ಸಿನೀಯರ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಅವರ ಸಂಗೀತ ಗುರುಗಳಾದ. ಪಂ. ಶ್ರೀ ಕೃಷ್ಣೇಂದ್ರ ವಾಡೀಕರ ಇವರ ಮಾರ್ಗದರ್ಶನದಲ್ಲಿ ಸೀನಿಯರ್ ಪರೀಕ್ಷೆಗೆ ತಯಾರಿಯಲ್ಲಿದ್ದಾರೆ.
ಕು||ಅನನ್ಯ ಅವರು ಹಿಂದೂಸ್ಥಾನಿ ಶಾಸ್ತ್ರಿಯ ಸಂಗೀತ, ಭಾವಗೀತೆ, ಸುಗಮ ಸಂಗೀತ, ಜಾನಪದ, ತತ್ವಪದ, ವಚನ ಗಾಯನ ಹೀಗೆ ಸಂಗೀತದ ಹಲವು ಪ್ರಕಾರಗಳನ್ನು ಅಭ್ಯಾಸ ಮಾಡುತ್ತಿದ್ದಾರೆ. ಅಭಿನವ ಶ್ರೀ ಗವಿಸಿದ್ಧೇಶ್ವರರ ಸ್ವಾಮಿಗಳ ಅಪ್ಪಣೆಯ ಮೇರೆಗೆ ಸಂಗೀತವನ್ನು ಹಳ್ಳಿ-ಹಳ್ಳಿಗಳಿಗೆ ತಲುಪಿಸುವ ನಿಟ್ಟಿನಲ್ಲಿ, ಶ್ರೀ ಗವಿಸಿದ್ಧೇಶ್ವರ ಸಂಗೀತ ವಿದ್ಯಾಪೀಠದಿಂದ ‘ಸ್ವರಸಂಚಾರ ಕಲಾತಂಡ’ ಎಂಬ ತಂಡವನ್ನು ರಚಿಸಿಕೊಂಡು ಕರ್ನಾಟಕದ ಮೂಲೆ ಮೂಲೆಗಳಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಸುಮಾರು ಹತ್ತು ವರ್ಷಗಳಿಗೂ ಅಧಿಕ ಕಾಲ ೫೦೦ಕ್ಕೂ ಹೆಚ್ಚು ಸಂಗೀತ ಕಛೇರಿಗಳನ್ನು ನಡೆಸಿದ್ದಾರೆ. ಹಳ್ಳಿ_ಹಳ್ಳಿಗಳಲ್ಲಿ ಸಂಗೀತದ ಸವಿಯನ್ನು ಉಣಬಡಿಸಿದ್ದಾರೆ. ರಾಜ್ಯದ ಕೊಪ್ಪಳ ಜಿಲ್ಲೆಯ ಜೊತೆಗೆ ರಾಯಚೂರು, ಬಳ್ಳಾರಿ, ಬಾಗಲಕೋಟೆ, ಗದಗ, ದಾವಣಗೇರೆ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಸಂಗೀತದ ಕಛೇರಿಗಳನ್ನು ನಡೆಸಿರುವುದು ಅಸಮಾನ್ಯ ಕೆಲಸವೆ ಎಂದು ಹೇಳಬಹುದು. ಆ ಕಲಾ ತಂಡದಲ್ಲಿ ಕುಮಾರಿ ಅನನ್ಯ ದೇಸಾಯಿರವರು ಹಲವು ವರ್ಷಗಳ ಕಾಲ ಸಂಗೀತದ ಸೇವೆ ಸಲ್ಲಿಸಿದ್ದಾರೆ. ಸುಗಮ ಸಂಗೀತ, ಭಕ್ತಿಗೀತೆ, ಭಾವಗೀತೆ, ಹಿಂದೂಸ್ತಾನಿ ಶಾಸ್ತ್ರಿಯ ಸಂಗೀತ ಹೀಗೆ ಹತ್ತು ಹಲವು ಗೀತೆಗಳನ್ನು ಹಾಡಿ ಮೆಚ್ಚಿಸಿಕೊಡಿದ್ದಾರೆ. ಅದರಲ್ಲಿ ಯವುದೇ ಪ್ರಾಕಾರದ ಗೀತೆ ಕೊಟ್ಟರೂ ಅದನ್ನು ಸಮರ್ಪಕವಾಗಿ ಹಾಡಿ ಅಲ್ಲಿನ ಸಭಿಕರಿಂದ ಮೆಚ್ಚಿಸಿಕೊಳ್ಳುತ್ತಿದ್ದರು. ಅಷ್ಟೇ ಅಲ್ಲ ಅಚ್ಚುಕಟ್ಟಾದ ನಿರೂಪಣೆಯಲ್ಲೂ ಅನನ್ಯಳನ್ನು ಅವರ ಗುರು ಶ್ರೀ ವೀರೇಶ್ ಹಿಟ್ನಾಳ್ ಅವರು ಕೊಂಡಾಡಿರುವುದನ್ನು ಮೆಚ್ಚಲೇಬೇಕು. ಈ ಸ್ವರ ಸಂಚಾರ ಕಲಾತಂಡವು ಸಂಕರ ಟಿ.ವಿಯವರು ನಡೆಸಿದ ‘ಭಜನ್ ಸಾಮ್ರಾಟ್’ ಜ್ಯೂನಿಯರ ಸೀಜನ-೨ರಲ್ಲಿ ಭಾಗವಹಿಸಿ ಫೈನಲ್ ಹಂತದವರೆಗೆ ತಲುಪಿದೆ. ಅದರಲ್ಲಿ ಕು||ಅನನ್ಯ ಹಾಡಿ ಮೆಚ್ಚಿಸಿಕೊಂಡಿದ್ದಾರೆ.
ಕು||ಅನನ್ಯ ಅವರು ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹಲವಾರು ಕಾರ್ಯಕ್ರಮ, ಹೊಸಪೇಟೆಯ ಆಕಾಶವಾಣಿಯ ಹಾಡು ಕೋಗಿಲೆ, ಇನ್ನಿತರ ಕಾರ್ಯಕ್ರಮಗಳಲ್ಲಿ ತನ್ನ ಸಂಗೀತ ಸುಧೆಯನ್ನು ಹರಿಸಿದ್ದಾಳೆ. ಅಲ್ಲದೇ ‘ಅನನ್ಯ ದೇಸಾಯಿ’ ಎಂಬ ಯ್ಯೂವ್‌ಟ್ಯೂಬ್ ಚಾನೆಲ್ ತೆಗೆದು ಆ ಮೂಲಕ ತಮ್ಮ ಸಂಗೀತದ ಸುಧೆಯನ್ನು ಹರಿಸುತ್ತಿದ್ದಾರೆ. ಅದರಲ್ಲಿ ಸುಗಮ ಸಂಗೀತ, ಭಾವಗೀತೆ, ಭಕ್ತಿಗೀತೆಯ ಹಾಡುಗಳನ್ನು ನಿರಂತರವಾಗಿ ಹಾಡಿ ಅಪಲೋಡ್ ಮಾಡುತ್ತಿದ್ದಾರೆ. ಅಲ್ಲದೇ ಹಬ್ಬ-ಹರಿದಿನ ಮತ್ತು ವಿಶೇಷ ದಿನಗಳಲ್ಲಿ ಫೇಸಬುಕ್ ಲೈವ್ ಮೂಲಕ ಆ ದಿನದ ಅಥವಾ ಆ ಹಬ್ಬದ ಮಹತ್ವ ಸಾರುವ ವಿಶೇಷ ಹಾಡುಗಳನ್ನು ಹಾಡಿ ರಸಿಕರ ಮನ ಗೆದ್ದಿದ್ದಾರೆ. ಆ ಮೂಲಕ ತಮ್ಮ ಸಂಗೀತದ ಸೇವೆಯನ್ನು ಆಮೂಲಕ ಸಲ್ಲಿಸುತ್ತಿರುವುದು ಬೆಳವಣಿಗೆಯ ಸಂಕೇತವೆನ್ನಬಹುದು.
೨೦೧೫-೧೬ ಮತ್ತು ೨೦೧೬-೧೭ರಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಡೆದ ಪ್ರತಿಭಾ ಕಾರಂಜಿಯ ಗಾಯನ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ಪ್ರಥಮ ಬಹುಮಾನ ಪಡೆದುಕೊಂಡಿದ್ದಾರೆ. ಅಲ್ಲದೆ ವಿಶೇಷವಾಗಿ ೨೦೧೯-೨೦ರಲ್ಲಿ ಜಿಲ್ಲಾಮಟ್ಟದಿಂದ ಆಯ್ಕೆಯಾಗಿ ಕೋಲಾರದಲ್ಲಿ ನಡೆದ ರಾಜ್ಯಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಅನನ್ಯ ದೇಸಾಯಿಯವರ ಪ್ರತಿಭೆಗೆ ಸಾಕ್ಷಿಯೆನ್ನುವಂತಿದೆ.
ಕೊಪ್ಪಳ, ಹುನಗುಂದ, ಹಾವೇರಿ, ಬೆಂಗಳೂರು, ಮೊಳಕಾಲ್ಮೂರು, ಸಿಂಧನೂರು, ಮುರಡಿ, ಕುಕನೂರು, ರಾಯಚೂರು, ಭೈರಾಪುರ, ಕಲಬುರಗಿ, ಬಳ್ಳಾರಿ, ವಿಜಯಪುರ ಮುಂತಾದ ಹೀಗೆ ಅನೇಕ ಕಡೆಗಳಲ್ಲಿ ವೈಯಕ್ತಿಕ ಸಂಗೀತ ಕಛೇರಿಗಳನ್ನು ನೀಡಿದ್ದಾರೆ. ತನ್ನ ವಿದ್ಯಾಭ್ಯಾಸದ ಜೊತೆ ಜೊತೆಗೆ ಹೆಚ್ಚಿನ ಸಂಗೀತ ಅಭ್ಯಾಸಕ್ಕಾಗಿ ಕಳೆದ ಎರಡು ವರ್ಷಗಳಿಂದ ಹುಬ್ಬಳ್ಳಿಯ ಪಂ. ಶ್ರೀ ಕೃ಼಼಼ಷ್ಣೇಂದ್ರ ವಾಡೀಕರ್ ಅವರಲ್ಲಿ ಸಂಗೀತ ಅಭ್ಯಾಸ ಮಾಡುತ್ತಿದ್ದಾರೆ. ಮತ್ತೋರ್ವ ಸಂಗೀತ ಕಲಾವಿದೆಯಾದ ಶ್ರೀಮತಿ ಕೌಶಿಕಿ ಚಕ್ರವರ್ತಿಯವರ ಕೃಪಾಶೀರ್ವಾದದ ಪ್ರೊತ್ಸಾಹದಿಂದಲೇ ಅನನ್ಯಳು ಇಂದು ಸಂಗೀತದ ಕಛೇರಿಗಳಲ್ಲಿ ನಿರ್ಭಯವಾಗಿ, ನಿರರ್ಗಳವಾಗಿ ಹಾಡುಗಳನ್ನು ಹಾಡಿ ಜನರ ಮನಸ್ಸನ್ನು ಗೆದ್ದಿದ್ದಾಳೆ.

.                ಚಿಕ್ಕ-ಚೊಕ್ಕದಾದ ಧ್ವನಿಯೊಂದಿಗೆ ಅನನ್ಯಳು ಇಂದು ಸಂಗೀತ ಕ್ಷೇತ್ರದ ಮಿನಗುತಾರೆ ಗಾಯಕಿಯಾಗಿ ಹೊರಹೊಮ್ಮುತ್ತಿದ್ದಾಳೆ. ಕೊಪ್ಪಳದ ಪ್ರಸಿದ್ಧ ಶ್ರೀ ಗವಿಸಿದ್ಧೇಶ್ವರರ ಜಾತ್ರೆಯಲ್ಲಿ ಪ್ರತಿ ವರ್ಷವೂ ಸಂಗೀತ ಸೇವೆ ಸಲ್ಲಿಸುತ್ತಾ ಬಂದಿದ್ದಾಳೆ. ಅಲ್ಲದೇ ಕೊಪ್ಪಳದ ಶ್ರೀ ರಾಘವೇಂದ್ರ ಮಠದಲ್ಲಿ ನಡೆಯುವ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮ ಗಾಯನದ ಮೂಲಕ ರಾಯರ ಸೇವೆ ಗೈಯುತ್ತಿದ್ದಾರೆ. ಗಾಯನವನ್ನು ಬಹುವಾಗಿ ಮೆಚ್ಚುವ ಅನನ್ಯ ಉತ್ತಮವಾಗಿ ಬೆಳೆದು ದೊಡ್ಡ ಗಾಯಕಿಯಾಗಿ ಬೆಳೆಯುವ ಆಶಾ ಮನೋಭಾವನೆಯನ್ನು ಹೊಂದಿರುವುದು ಸರಿಯಷ್ಟೆ.

ಲೇಖಕರು; ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್
ಹಿರಿಯ ಶ್ರೇಣಿ ಕನ್ನಡ ಉಪನ್ಯಾಸಕರು
ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯ,
ಕೊಪ್ಪಳ-೫೮೩೨೩೧
ಮೊ ಸಂ : ೯೪೪೮೫೭೦೩೪೦
Email:-skotnekal@gmail.com