ಮಾನ್ವಿ: ಕ್ರಿಮಿನಾಶಕ ಮಾರಾಟ ಮಳಿಗೆಗಳಿಗೆ ಅಧಿಕಾರಿಗಳ ದಿಢೀರ್ ಭೇಟಿ

ಮಾನ್ವಿ ಅ.7: ಪಟ್ಟಣದ ರಸಗೊಬ್ಬರ ಹಾಗೂ ಕ್ರಿಮಿನಾಶಕ ಮಾರಾಟ ಅಂಗಡಿಗಳಿಗೆ ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ್ ಸಾಹೇಬ್ ನೇತೃತ್ವದಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಗುರುವಾರ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅನಧಿಕೃತ ಕೀಟನಾಶಕ ಹಾಗೂ ಜೈವಿಕ ಪೀಡೆನಾಶಕಗಳ ಮಾರಾಟದ ಕುರಿತು ಅವರು ಪರಿಶೀಲಿಸಿದರು. ಸಂಶಯಾಸ್ಪದ ಕೀಟನಾಶಕಗಳ ಗುಣಮಟ್ಟದ ಪರೀಕ್ಷೆಗಾಗಿ ಅವುಗಳ ಮಾದರಿಗಳನ್ನು ಪಡೆದುಕೊಂಡರು. ರಸಗೊಬ್ಬರ ಮಾರಾಟಗಾರರು ತಾವು ರಸಗೊಬ್ಬರ ಮಾರಾಟ ಮಾಡಿರುವ ಕುರಿತು ಪಿಒಎಸ್ ಯಂತ್ರದಲ್ಲಿ ವಹಿವಾಟು ವಿವರ ತೋರಿಸಬೇಕು. ಮಾನ್ವಿ ಪಟ್ಟಣದಲ್ಲಿ ಯೂರಿಯಾ ಮತ್ತು ಡಿಎಪಿಯ ರಸಗೊಬ್ಬರ ಮಾರಾಟದ ವಹಿವಾಟಿನ ಬಗ್ಗೆ ಪಿಒಎಸ್ ಯಂತ್ರದಲ್ಲಿ ನಮೂದು ಮಾಡದ ಮಾರಾಟಗಾರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಕೃಷಿ ನಿರ್ದೇಶಕ ಬಿ.ಹುಸೇನ್ ಸಾಹೇಬ್ ಎಚ್ಚರಿಕೆ ನೀಡಿದರು. ರೈತರು ಖರೀದಿಸಿದ ಪರಿಕರಗಳಿಗೆ ಕಡ್ಡಾಯವಾಗಿ ರಶೀದಿಗಳನ್ನು ನೀಡಬೇಕು. ಅಂಗಡಿಗಳಲ್ಲಿ ಬೀಜ , ರಸಗೊಬ್ಬರ ಮತ್ತು ಕೀಟನಾಶಕಗಳ ಮಾರಾಟ ದರಗಳ ಪಟ್ಟಿ ಪ್ರದರ್ಶಿಸಬೇಕು ಎಂದು ಅವರು ಸೂಚಿಸಿದರ. ಕೃಷಿ ಅಧಿಕಾರಿಗಳಾದ ನಿಯಾಜ್ ಮೊಹ್ಮದ್ , ಮತ್ತು ನರಸಮ್ಮ ಇದ್ದರು. ಪಟ್ಟಣದಲ್ಲಿ ಒಟ್ಟು ‍16 ರಸಗೊಬ್ಬರ ಹಾಗೂ ಕ್ರಿಮಿನಾಶಕಗಳ ಮಾರಾಟ ಅಂಗಡಿಗಳನ್ನು ಪರಿಶೀಲಿಸಲಾಯಿತು.