ಮಾನ್ವಿ ಅ.7: ತಾಲ್ಲೂಕಿನ ವಿವಿಧೆಡೆ ಒಣಗುತ್ತಿರುವ ಬೇವಿನ ಮರಗಳಿಗೆ ಗುರುವಾರ ಅರಣ್ಯ ಇಲಾಖೆಯವತಿಯಿಂದ ಸಿಬ್ಬಂದಿ ಕೀಟನಾಶಕ ಹಾಗೂ ಫಂಗಿಸೈಡ್ ಔಷಧ ಮಿಶ್ರಣ ಮಾಡಿ ಸಿಂಪಡಿಸಲಾಯಿತು. ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ ಹಾಗೂ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಶಂಕರಮೂರ್ತಿ ಎಂ ಮತ್ತು ಅರಣ್ಯ ಇಲಾಖೆಯ ಸಿಬ್ಬಂದಿ ತಾಲ್ಲೂಕಿನ ಕಪಗಲ್ ಕ್ರಾಸ್, ಪೋತ್ನಾಳ, ಸಿಂಧನೂರು ಹಾಗೂ ಮಸ್ಕಿ ರಸ್ತೆಗಳ ಬದಿಯಲ್ಲಿ ಒಣ ಸಿಬ್ಬಂದಿ ಬೇವಿನ ಮರಗಳ ಒಣಗುತ್ತಿರುವ ಎಲೆಗಳನ್ನು ಪರಿಶೀಲಿಸಿದರು.
ನಂತರ ಪ್ರಾಧ್ಯಾಪಕ ಶಂಕರಮೂರ್ತಿ ಎಂ ಮಾತನಾಡಿ, ಬೇವಿನ ಮರಗಳು ಒಣಗಲು ಟೀ ಮಾಸ್ಕಿಟೋ ಬಗ್ ಎಂಬ ಕೀಟವು ಕಾರಣವಾಗಿದೆ. ಸದರಿ ಕೀಟವು ಬೇವಿನ ಮರದ ರೆಂಬೆಯ ಚಿಗುರಿಗೆ ದಾಳಿ ಮಾಡಿ ರಸ ಹೀರುವುದರಿಂದ ಫಂಗಸ್ ಉಂಟಾಗಿ ಬೇವಿನ ಮರದ ರೆಂಬೆಯು ಹಿಮ್ಮುಖವಾಗಿ ಒಣಗುತ್ತಿದೆ’ ಎಂದು ತಿಳಿಸಿದರು. ವಲಯ ಅರಣ್ಯಾಧಿಕಾರಿ ರಾಜೇಶನಾಯಕ ಮಾತನಾಡಿ, ಮಾನ್ವಿ, ಸಿಂಧನೂರು ಹಾಗೂ ಸಿರವಾರ ತಾಲ್ಲೂಕುಗಳಲ್ಲಿರುವ ಅರಣ್ಯ ಇಲಾಖೆ ನರ್ಸರಿಗಳಲ್ಲಿ ಹಾಗೂ ಅರಣ್ಯ ಇಲಾಖೆ ವತಿಯಿಂದ ನೆಟ್ಟ ಬೆವಿನ ಗಿಡಗಳಿಗೆ ಮುಂಜಾಗ್ರತಾ ಕ್ರಮವಾಗಿ ಕೀಟನಾಶಕ ಹಾಗೂ ಫಂಗಿಸೈಡ್ ಮಿಶ್ರಣ ಮಾಡಿ ಸಿಂಪಡಿಸಲಾಗುತ್ತಿದೆ’ ಎಂದು ತಿಳಿಸಿದರು.