ಶರನ್ನವರಾತ್ರಿಯ ದುರ್ಗಾರಾಧನೆಯ ಮಹತ್ವ

.           ಲೇಖಕರು: ಮುಕ್ಕಣ್ಣ ಕರಿಗಾರ

ದುರ್ಗಾದೇವಿಯ ಪೂಜೆ,ಆರಾಧನೆಗಳ ಶರನ್ನವರಾತ್ರಿಯನ್ನು ದೇಶದಾದ್ಯಂತ ಸಡಗರೋತ್ಸಾಹಗಳಿಂದ ಆಚರಿಸುತ್ತಾರೆ.ಚೈತ್ರನವರಾತ್ರಿ ಮತ್ತು ಶರನ್ನವರಾತ್ರಿ ಎಂದು ವರ್ಷದಲ್ಲಿ ಎರಡು ನವರಾತ್ರಿಗಳಿವೆಯಾದರೂ ಶರನ್ನವರಾತ್ರಿಯಷ್ಟು ಜನಪ್ರಿಯವಾಗಿಲ್ಲ ಚೈತ್ರನವರಾತ್ರಿ.ಉತ್ತರಭಾರತದ ಕೆಲವೆಡೆ ಮಾತ್ರ ಚೈತ್ರನವರಾತ್ರಿಯನ್ನು ಆಚರಿಸಲಾಗುತ್ತದೆ.ಶರನ್ನವರಾತ್ರಿಯು ದುರ್ಗಾದೇವಿಯ ಹಬ್ಬ.ಒಂಬತ್ತುದಿನಗಳ ಕಾಲ ದೇವಿ ದುರ್ಗೆಯನ್ನು ಮನೆಗಳು,ಮಠ- ಮಂದಿರಗಳಲ್ಲಿ ಪೂಜಿಸಲಾಗುತ್ತದೆ.

ದುರ್ಗಾದೇವಿಯ ಆರಾಧನೆ ಶಿವನ ಆರಾಧನೆಯಷ್ಟೇ ಪ್ರಾಚೀನ ಉಪಾಸನಾ ಪದ್ಧತಿ.ವೇದದಲ್ಲಿ ದುರ್ಗಾಸೂಕ್ತವಿದೆ.ವೇದಪೂರ್ವದಿಂದಲೂ ದೇವಿ ದುರ್ಗೆಯ ಆರಾಧನೆ ನಡೆಯುತ್ತಿತ್ತು ಎನ್ನುವುದಕ್ಕೆ ಇದು ನಿದರ್ಶನ.ಋಷಿಗಳು,ರಾಜ ಮಹಾರಾಜರುಗಳು ದೇವಿ ದುರ್ಗೆಯನ್ನು ಆರಾಧಿಸುತ್ತಿದ್ದರು.’ದುರ್ಗಾ ‘ಎಂದರೆ ದುರಿತ ನಿವಾರಕಿ ಎಂದರ್ಥ.ಮನುಷ್ಯರಿಗೆ ಬಂದೊದಗುವ ದುಃಖ,ಅರಿಷ್ಟ ಮತ್ತು ಸಂಕಷ್ಟಗಳನ್ನು ಪರಿಹರಿಸುವ ದೇವಿಯಾದ್ದರಿಂದ ಆಕೆ ದುರ್ಗಾ.ಪ್ರಾಚೀನ ಕಾಲದ ಋಷಿಗಳಿಗೆ ಅರಣ್ಯದಲ್ಲಿ ಹಿಂಸ್ರಮೃಗಗಳಿಂದ ರಕ್ಷಣೆ ಬೇಕಾಗಿದ್ದರಿಂದ ಅವರು ದೇವಿದುರ್ಗೆಯನ್ನು ಉಪಾಸಿಸಿ ರಕ್ಷಣೆ ಪಡೆದುಕೊಂಡರು.ಋಷಿಗಳಿಂದ ಸಾಕ್ಷಾತ್ಕರಿಸಲ್ಪಟ್ಟ ದೇವಿಯೇ ದುರ್ಗಾಸೂಕ್ತದ ದೇವಿ.ದುರ್ಗಾಸೂಕ್ತದಲ್ಲಿ ದೇವಿಯನ್ನು ಅಗ್ನಿಸ್ವರೂಪದಲ್ಲಿ ದರ್ಶಿಸಲಾಗಿದೆ.ದೇವಿಯನ್ನು ಸಂಸಾರನೌಕೆಯನ್ನು ಸುರಕ್ಷಿತವಾಗಿ ದಡಮುಟ್ಟಿಸು ಎಂದು ಪ್ರಾರ್ಥಿಸಲಾಗಿದೆ.ಅಂದರೆ ದುರ್ಗಾದೇವಿಯು ರಕ್ಷಕ ದೇವಿ ಎಂದರ್ಥ.

ಋಷಿಗಳಿಂದ ಅನುಗ್ರಹಿಸಲ್ಪಟ್ಟ ರಾಜ ಮಹಾರಾಜರುಗಳು ತಮ್ಮ ರಾಜ್ಯ- ಸಾಮ್ರಾಜ್ಯಗಳ ರಕ್ಷಣೆ,ಸಮೃದ್ಧಿಗಳಿಗಾಗಿ ದೇವಿದುರ್ಗೆಯನ್ನು ಮೊರೆಹೊಕ್ಕರು.ಕೋಟೆಯೋಪಾದಿಯಲ್ಲಿ ತನ್ನನ್ನು ಮೊರೆಹೊಕ್ಕ ಅರಸುರುಗಳನ್ನು ರಕ್ಷಿಸಿದ್ದರಿಂದ ದುರ್ಗಾ ಶಬ್ದಕ್ಕೆ ಕೋಟೆ ಎನ್ನುವ ಅರ್ಥವೂ ಪ್ರಾಪ್ತಿಯಾಯಿತು.ಹಿಂದೆ ರಾಜ ಮಹಾರಾಜರುಗಳು ತಮ್ಮ ಕೋಟೆಯಲ್ಲಿ ದುರ್ಗಾದೇವಿಯ ದೇವಸ್ಥಾನಗಳನ್ನು ಕಟ್ಟಿ ಪೂಜಿಸುತ್ತಿದ್ದರು.ಋಷಿಗಳು,ರಾಜ- ಮಹಾರಾಜರುಗಳಿಂದ ರಕ್ಷಣೆಗಾಗಿ ಪೂಜಿಸಲ್ಪಟ್ಟ ದೇವಿದುರ್ಗೆಯು ಜನಪದರಿಂದಲೂ ಪೂಜಿಸಲ್ಪಡುವ ಜನಪದರ ದೇವಿಯಾಗಿಯೂ ತನ್ನ ಲೀಲಾಮಹಿಮೆಯನ್ನು ವಿಸ್ತರಿಸಿಕೊಂಡಳು.ಭಾರತದಲ್ಲಿ ಯಾವುದೇ ಹಳ್ಳಿಗೂ ಹೋದರೂ ಅಲ್ಲಿ ಒಂದು ಶಿವಾಲಯ ಇರುವಂತೆಯೇ ದುರ್ಗಾದೇವಿಯ ಒಂದು ಗುಡಿಯೂ ಇರುತ್ತದೆ.ಶಿವ ಮತ್ತು ದುರ್ಗೆಯರಷ್ಟು ಸರ್ವವ್ಯಾಪಕತ್ವ ಪಡೆದ ದೇವತೆಗಳಿಲ್ಲ ಭಾರತದಲ್ಲಿ.ಶಿವನು ಮಂಗಲಮಯ,ಕಲ್ಯಾಣಕಾರಕನಾದರೆ ದುರ್ಗೆಯು ದುರಿತಗಳನ್ನು ನಿವಾರಿಸಿ ಪೊರೆಯುತ್ತಾಳೆ.ಜನಪದರ ದುರುಗಮ್ಮನೇ ಶಿಷ್ಟಭಾಷೆಯ ದುರ್ಗಾದೇವಿ.
ಮೂಲತಃ ರಕ್ಷಕ ದೇವಿಯಾಗಿದ್ದ ದುರ್ಗೆಯನ್ನು ಮಾರ್ಕಂಡೇಯ ಋಷಿಗಳು ತ್ರಿಗುಣಾತ್ಮಿಕೆಯಾಗಿ ದರ್ಶಿಸುತ್ತಾರೆ.ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರೆಂಬ ತ್ರಿದೇವಿಯರ ರೂಪದಲ್ಲಿ ದೇವಿ ದುರ್ಗೆಯನ್ನು ಮಾರ್ಕಂಡೇಯ ಋಷಿಗಳು ಸಾಕ್ಷಾತ್ಕರಿಸಿಕೊಂಡ ದರ್ಶನವೇ ‘ ದುರ್ಗಾ ಸಪ್ತಶತಿ’ ಎನ್ನುವ ಏಳು ನೂರು ಶ್ಲೋಕಗಳ ಅನುಷ್ಟಪ್ ಛಂದಸ್ಸಿನ ದುರ್ಗಾಮಹಿಮಾ ಗೀತೆ.ಋಷಿ ಮಾರ್ಕಂಡೇಯರು ಪ್ರಕೃತಿಯಲ್ಲಿ ಮತ್ತು ಪ್ರಪಂಚದಲ್ಲಿ ಶಕ್ತಿಯು ಎಸಗುತ್ತಿರುವ ಹತ್ತು ಹಲವು ಲೀಲೆಗಳಲ್ಲಿ ಪ್ರಧಾನವಾದ ಮೂರು ಶಕ್ತಿಗಳನ್ನು ಇಚ್ಛಾಶಕ್ತಿ,ಜ್ಞಾನಶಕ್ತಿ ಮತ್ತು ಕ್ರಿಯಾಶಕ್ತಿಗಳೆಂದು ಗುರುತಿಸಿದರು.ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರು ಇಚ್ಛಾ ,ಜ್ಞಾನ ಮತ್ತು ಕ್ರಿಯಾಶಕ್ತಿಗಳ ಸ್ವರೂಪರು.ಈ ಮೂರುಶಕ್ತಿಗಳನ್ನುಳ್ಳ ದೇವಿಯೇ ದುರ್ಗಾದೇವಿ.

ದುರ್ಗಾಸಪ್ತಶತಿಯಲ್ಲಿ ತ್ರಿಗುಣಾತ್ಮಿಕೆಯಾಗಿ ಪ್ರಕಟಗೊಂಡ ವಿರಾಟ್ ರೂಪಿಣಿಯಾದ ದೇವಿ ದುರ್ಗೆಯು ಸಪ್ತಮಾತೃಕೆಯರ ರೂಪದಲ್ಲಿ,ಅಷ್ಟಾದಶ ರೂಪಗಳಲ್ಲಿ ಹದಿನೆಂಟು ಶಕ್ತಿಪೀಠಗಳಲ್ಲಿ ಹಾಗೂ ಹತ್ತುಲೀಲೆಗಳಲ್ಲಿ ದಶಮಹಾವಿದ್ಯೆಯರ ರೂಪಗಳಲ್ಲಿ ಹೀಗೆ ತನ್ನ ವಿರಾಟ್ ಶಕ್ತಿಯ ಲೀಲೆಯನ್ನು ತೋರಿದ್ದಾಳೆ.ಎಲ್ಲ ಲಿಂಗಗಳ ಪೂಜೆಯು ಶಿವಪೂಜೆಯಾಗಿರುವಂತೆ ಎಲ್ಲ ಶಕ್ತಿಯರ ಪೂಜೆಯು ದೇವಿದುರ್ಗೆಯ ಪೂಜೆಯಾಗುತ್ತದೆ.

ನಾಡ ಜನಪದರು ನವರಾತ್ರಿಯ ದಿನಗಳಲ್ಲಿ ದೇವಿಯನ್ನು ಜ್ಯೋತಿರೂಪದಲ್ಲಿ ಆಹ್ವಾನಿಸಿ,ದೀಪದುರ್ಗಾ ಪೂಜೆ ಮಾಡುತ್ತಾರೆ.ಕತ್ತಲೆ,ಅಂಧಕಾರ ಮತ್ತು ಅಜ್ಞಾನಗಳನ್ನು ಕಳೆಯುವ ದೇವಿಯನ್ನು ದೀಪದುರ್ಗೆಯ ರೂಪದಲ್ಲಿ ಪೂಜಿಸಲಾಗುತ್ತಿದೆ.

ಇನ್ನು ಯೋಗಿಗಳು ಈ ದೇಹವೆಂಬ ದುರ್ಗವನ್ನು ಕಾಯುವ ದೇವಿಯನ್ನು ದೇಹದ ಒಂಬತ್ತು ಶಕ್ತಿಕೇಂದ್ರಗಳಲ್ಲಿ ಜಾಗೃತಗೊಳಿಸಿಕೊಳ್ಳುತ್ತಾರೆ.ದೇವಿಪುರಾಣವೆಂದರೆ ಅದು ದೇಹದ ಪುರಾಣ.ದೇವತೆಗಳು ಮತ್ತು ರಾಕ್ಷಸರು ಹೊರಗೆ ಇಲ್ಲ,ನಮ್ಮ ಒಳಗೆ ಇದ್ದಾರೆ.ನಮ್ಮೊಳಗಣ ರಿಪುಗಳಾದ ರಕ್ಕಸರನ್ನು ನಿಗ್ರಹಿಸಿಕೊಂಡು ನಮ್ಮ ಕಲ್ಯಾಣಕಾರಕರಾದ ದೇವತೆಗಳ ಒಲುಮೆ ಪಡೆದು ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆನ್ನುವುದು ‘ ದುರ್ಗಾಸಪ್ತಶತಿ’ , ‘ ದೇವಿ ಪುರಾಣ’ ಮೊದಲಾದ ಶಾಕ್ತಕೃತಿಗಳ ಸಂದೇಶ.ಸತ್ತ್ವ,ರಜಸ್ ಮತ್ತು ತಮಸ್ಸುಗಳೆಂಬ ಮೂರು ಗುಣಗಳಿವೆ.ಕಾಮ,ಕ್ರೋಧ,ಲೋಭ,ಮೋಹ,ಮದ,ಮತ್ಸರಗಳೆಂಬ ಅರಿಷಡ್ವರ್ಗಗಳಿವೆ.ಇವುಗಳು ಸಾಲದೆಂಬಂತೆ ಅಷ್ಟಮದಗಳೂ ಇವೆ ಕೋಣನಂತೆ ತಿವಿದು,ತಿನ್ನಲು.ತಾಮಸಗುಣಗಳನ್ನಳಿದುಕೊಂಡು ಸಾತ್ತ್ವಿಕ ಗುಣಗಳನ್ನು ಸಂಪಾದಿಸಿಕೊಂಡು ದೇವಿಯ ಅನುಗ್ರಹ ಪಡೆಯಲು ಉಪದೇಶಿಸುವ ರಹಸ್ಯವೇ ‘ ದೇವಿಪುರಾಣ’. ಈ ಅರ್ಥದಲ್ಲಿ ದೇವಿಪುರಾಣವನ್ನು ಗ್ರಹಿಸಿದಾಗ ನಮ್ಮಲ್ಲಿ ಪ್ರತಿಯೊಬ್ಬರಲ್ಲಿಯೂ ಮಧು- ಕೈಟಭರಿದ್ದಾರೆ,ಚಂಡ- ಮುಂಡರಿದ್ದಾರೆ,ಮಹಿಷಾಸುರನಿದ್ದಾನೆ,ರಕ್ತಬೀಜ,ಶುಂಭ- ನಿಶುಂಭರೂ ಇದ್ದಾರೆ.

ಅವಗುಣಗಳನ್ನು ಶಿವಗುಣಗಳನ್ನಾಗಿ ಪರಿವರ್ತಿಸಿಕೊಳ್ಳುವುದೇ ದುರ್ಗಾ ಉಪಾಸನೆಯ ರಹಸ್ಯ,ಫಲ.ದುಷ್ಟಗುಣಗಳನ್ನು ಒಂದೊಂದಾಗಿ ದೇವಿಗೆ ಸಮರ್ಪಿಸುವುದೇ ಬಲಿ.ಬಲಿ ಎಂದರೆ ಪ್ರಾಣಿ ಬಲಿಯಲ್ಲ,ನಮ್ಮ ಅವಗುಣಗಳನ್ನೇ ದೇವಿಯ ಸನ್ನಿಧಿಯಲ್ಲಿ ಸಮರ್ಪಿಸಿಕೊಳ್ಳುವುದು.ಭಕ್ತ ತನ್ನನ್ನು ತಾನು ಸಂಪೂರ್ಣವಾಗಿ ದೇವಿ ದುರ್ಗೆಯಲ್ಲಿ ಸಮರ್ಪಿಸಿಕೊಳ್ಳುವುದೇ ನೈವೇದ್ಯ.ನವರಾತ್ರಿಯ ದಿನಗಳಲ್ಲಿ ಸದಾ ದೇವಿಯ ಸನ್ನಿಧಿಯಲ್ಲಿ ಇರುವುದೇ ಉಪವಾಸ.ಇಂತು ಅರಿತು ಆರಾಧಿಸೆ ಅಂತಹ ಭಕ್ತನನ್ನು ಒಲಿದು,ಉದ್ಧರಿಸುತ್ತಾಳೆ ವಿಶ್ವೇಶ್ವರಿ ದುರ್ಗಾದೇವಿಯು.

ಮುಕ್ಕಣ್ಣ ಕರಿಗಾರ
ಮೊ;94808 79501

06.10.2021