ಮಹಿಷ ಮರ್ಧಿನಿ– ಕೆಲವು ವಿಚಾರಗಳು

ಲೇಖಕರು: ಮುಕ್ಕಣ್ಣ ಕರಿಗಾರ

ನಾಡಹಬ್ಬ ಮೈಸೂರು ದಸರಾ ಉತ್ಸವದ ಸಂದರ್ಭದಲ್ಲಿ ಇತ್ತೀಚೆಗೆ ಕೆಲವರು ‘ ಮಹಿಷ ದಸರಾ’ ಆಚರಣೆಗೆ ಅನುಮತಿ ಕೇಳುತ್ತಿರುವುದು ಮತ್ತು ಆ ಕುರಿತು ಗೊಂದಲ ಉಂಟು ಮಾಡುತ್ತಿರುವುದು ನಡೆಯುತ್ತಿದೆ.ಮಹಿಷಾಸುರ ರಾಕ್ಷಸ,ಬುಡಕಟ್ಟು ಜನಾಂಗದವನು,ನೆಲಮೂಲ ಸಂಸ್ಕೃತಿಯವನು ಅವನನ್ನು ಕೊಂದ ದೇವಿ ಆರ್ಯಸಂಸ್ಕೃತಿಯ ಪ್ರತಿನಿಧಿ ಎಂದೆಲ್ಲ ಕಟ್ಟುಕಥೆಗಳನ್ನು ಕಟ್ಟಿ ಜನರ ಮನಸ್ಸುಗಳಲ್ಲಿ ದ್ವೇಷಾಸೂಯೆಯ ಬೀಜಗಳನ್ನು ಬಿತ್ತಲು ಪ್ರಯತ್ನಿಸುತ್ತಾರೆ.ವಾಸ್ತವಿಕವಾಗಿ ಇದು ಭಾರತೀಯ ಸಂಸ್ಕೃತಿಯನ್ನು ವಿರೋಧಿಸುವ ಮನಸ್ಸುಗಳ ಹುನ್ನಾರವೇ ಹೊರತು ಸತ್ಯವಲ್ಲ.ಈ ದೇಶದ ಇತಿಹಾಸವನ್ನು ಗಮನಿಸಿದರೆ ಹೆಣ್ಣುದೇವತೆಗಳ ಆರಾಧನೆಯ ‘ಮಾತೃಪೂಜೆ’ ಯೇ ಅತ್ಯಂತ ಪುರಾತನ ಉಪಾಸನಾ ಪದ್ಧತಿಯಾಗಿತ್ತು ಎನ್ನುವುದು ದೃಢಪಡುತ್ತದೆ.ಶೈವ,ವೈಷ್ಣವಾದಿ ಇತರ ದೇವತೆಗಳ ಉಪಾಸನೆಯು ಮಾತೃದೇವಿಯರ ಉಪಾಸನೆಯ ನಂತರದ ಬೆಳವಣಿಗೆ.ಶಿವನನ್ನು ಶಿಶ್ನದೇವನ ರೂಪದಲ್ಲಿ ಪೂಜಿಸುವ ಮುಂಚೆಯೇ ದೇವಿಯನ್ನು ಯೋನಿರೂಪದಲ್ಲಿ ಪೂಜಿಸುವ ಪದ್ಧತಿ ರೂಢಿಯಲ್ಲಿತ್ತು.ಅಸ್ಸಾಂನ ಕಾಮರೂಪದಲ್ಲಿ ಯೋನಿರೂಪದ ದೇವಿಗೆ ಪೂಜೆ ನಡೆಯುತ್ತಿರುವುದಲ್ಲದೆ ದೇಶದ ಅಲ್ಲಲ್ಲಿ ಲಜ್ಜಾಗೌರಿಯನ್ನು ಪೂಜಿಸಲಾಗುತ್ತಿದೆ.ಮನುಷ್ಯನ ಬುದ್ಧಿ ವಿಕಾಸವಾದಂತೆ ಅವನು ಮೊದಲು ಗ್ರಹಿಸಿದ ತತ್ತ್ವವೇ ತಾಯಿಯ ಗರ್ಭದಲ್ಲಿದ್ದ ತಾನು ಯೋನಿಮಾರ್ಗದ ಮೂಲಕ ಹೊರಬಂದಿದ್ದೇನೆ ಎನ್ನುವುದನ್ನು.ಮನುಷ್ಯರನ್ನು ‘ ಯೋನಿಜರು’ ಎನ್ನುತ್ತಾರೆ.ಪ್ರಪಂಚದಲ್ಲಿ ಹುಟ್ಟಿದವರೆಲ್ಲರೂ ಯೋನಿಜರೆ,ಅಯೋನಿಜರು ಯಾರೂ ಇಲ್ಲ.ಅಯೋನಿಜರ ಬಗ್ಗೆ ಹೇಳುವ ಕಥೆ- ಪುರಾಣಗಳು,ಸುಳ್ಳು, ಕಟ್ಟುಕಥೆಗಳು.ಅಯೋನಿಜರೆಂಬುದು ಅಸಂಬದ್ಧ ಮಾತು ಮಾತ್ರವಲ್ಲ ಸೃಷ್ಟಿನಿಯಮಗಳಂತೆ ಅಸಂಭವ ಕೂಡ. ಸೃಷ್ಟಿ ಆರಂಭವಾದಾಗಿನಿಂದ ಇಲ್ಲಿಯವರೆಗೆ ಹುಟ್ಟಿದವರೆಲ್ಲ ಯೋನಿಜರೆ,ಪ್ರಪಂಚ ಇರುವವರೆಗೂ ಹುಟ್ಟುವವರೆಲ್ಲ ಯೋನಿಜರೆ!.ನಾವು,ನಮ್ಮ ತಂದೆ- ತಾಯಿ,ಅವರ ಪೂರ್ವಿಕರು ಹೀಗೆ ಎಲ್ಲರೂ ಯೋನಿಜರಾಗಿಯೇ ಹುಟ್ಟಿದ್ದೇವೆ ಎನ್ನುವುದನ್ನು ಅನುಭವಿಸಿ ಬಲ್ಲ ನಾವು ಅಯೋನಿಜರೆಂಬ ಕಾಲ್ಪನಿಕ ವ್ಯಕ್ತಿಗಳ ಬಗ್ಗೆ ಸುಳ್ಳು ನಂಬಿಕೆಗಳಿಗೆ ಶರಣಾಗುತ್ತೇವೆ.ಯೋನಿಯನ್ನು ಪೂಜ್ಯಭಾವನೆಯಿಂದ ಕಂಡು ಪೂಜಿಸುವ ಪದ್ಧತಿಯೇ ‘ಲಜ್ಜಾಗೌರಿ ಆರಾಧನಾ ಸಂಪ್ರದಾಯ’.ಹೆಣ್ಣುದೇವತೆಗಳ ಆರಾಧನೆ ವೇದಗಳ ಪೂರ್ವದ ಸಾವಿರಾರು ವರ್ಷಗಳ ಹಿಂದಿನದು.ಅಂತೆಯೇ ವೇದದಲ್ಲಿ ದುರ್ಗಾ,ವಾಗಾಂಭೃಣಿ,ಶ್ರೀ ಸೂಕ್ತ,ಭೂಮಿ ಸೂಕ್ತ ಮೊದಲಾದ ಹೆಣ್ಣುದೇವತೆಗಳ ಸ್ತುತಿ ಮಂತ್ರ,ಸೂಕ್ತಗಳಿವೆ.ಇದನ್ನು ಅರ್ಥಮಾಡಿಕೊಳ್ಳದೆ ದುರ್ಗೆಯನ್ನು ಆರ್ಯರ ದೇವಿ ಎಂದು ಭಾವಿಸಿ,ಮಹಿಷನನ್ನು ಕೊಂದಕಾರಣದಿಂದ ದೇವಿ ನಮ್ಮವಳು ಅಲ್ಲ ಎನ್ನುವುದು ಎಳಸುಮತಿಗಳ ವಾದವಷ್ಟೆ.

ಇಲ್ಲಿ ಗಮನಿಸಬೇಕಾದ ಮಹತ್ವದ ಸಂಗತಿ ಎಂದರೆ ಮಹಿಷಮರ್ಧಿನಿಯು ಶಿವನ ಹೆಂಡತಿಯಾದ ಪಾರ್ವತಿ ಎನ್ನುವುದು.ಶಿವ ಪಾರ್ವತಿಯರು ಈ ದೇಶದ ಮೂಲ ದೇವ- ದೇವಿಯರು,ನೆಲಮೂಲ ಸಂಸ್ಕೃತಿಯ ದೇವರುಗಳು.ಆದಿಮಾನವ,ಬುಡಕಟ್ಟು ಜನಾಂಗ,ಶೂದ್ರರು- ದಲಿತರುಗಳಿಂದ ಆರಾಧಿಸಲ್ಪಟ್ಟ ದೇವ- ದೇವಿಯರು ಶಿವ ಪಾರ್ವತಿಯರು.ಶಿವನ ಹೆಂಡತಿ ಸತಿಯು ದಕ್ಷನ ಯಜ್ಞದಲ್ಲಿ ಆಹುತಿಯಾದಾಗ ಕೋಪೋದ್ರಿಕ್ತನಾದ ಶಿವನ ಜಟೆಯಿಂದ ಹುಟ್ಟಿದ ವೀರಭದ್ರನು ದಕ್ಷಯಜ್ಞಧ್ವಂಸ ಮಾಡುವ ಪ್ರಸಂಗವು ಆರ್ಯ ದ್ರಾವಿಡ ಸಂಘರ್ಷದ ಮೊದಲ ಲಿಖಿತ ಉಲ್ಲೇಖ,ಪೌರಾಣಿಕ ದಾಖಲೆ.ವೀರಭದ್ರನು ದಕ್ಷನ ಯಜ್ಞದಲ್ಲಿ ಪಾಲ್ಗೊಂಡಿದ್ದ ದೇವತೆಗಳೆಲ್ಲರನ್ನು ಒದೆದು ತುಳಿಯುತ್ತ,ಒದ್ದೋಡಿಸುತ್ತ ,ದಕ್ಷನ ಶಿರವನ್ನು ಹರಿದು, ಹೋಮಕುಂಡದಲ್ಲಿ ಕೆಡಹಿ ದಕ್ಷನ ಶಿರವನ್ನು ಸುಟ್ಟುಬೂದಿ ಮಾಡುವ ಮೂಲಕ ಆರ್ಯರ ವಿರುದ್ಧದ ವಿಜಯಕಹಳೆ ಮೊಳಗಿಸುತ್ತಾನೆ ದ್ರಾವಿಡ ಸಂಸ್ಕೃತಿಯನ್ನು ಎತ್ತಿಹಿಡಿಯುವ ಮೂಲಕ.ಈಗೀಗ ಕೆಲವರು ಆರ್ಯದ್ರಾವಿಡರು ಎನ್ನುವ ವಾದ ಸುಳ್ಳು,ಆರ್ಯರು ಹೊರಗಿನಿಂದ ಬಂದವರಲ್ಲ ಎಂದು ವಾದ ಮಂಡಿಸುತ್ತಿದ್ದಾರೆ.ದ್ರಾವಿಡರು ಭಾರತದ ಮೂಲನಿವಾಸಿಗಳು ಅಲ್ಲದಿದ್ದರೆ ದ್ರಾವಿಡ ಸಂಸ್ಕೃತಿಯ ದೇವರಾದ ಶಿವನ ಮಗ ವೀರಭದ್ರನು ದಕ್ಷಯಜ್ಞವನ್ನು ಏಕೆ ಧ್ವಂಸಮಾಡುತ್ತಿದ್ದ? ದಕ್ಷನು ಬ್ರಹ್ಮ,ವಿಷ್ಣು ಮೊದಲಾದ ದೇವತೆಗಳನ್ನು ಯಜ್ಞಕ್ಕೆ ಆಹ್ವಾನಿಸಿ ಶಿವನನ್ನು ಮಾತ್ರ ಏಕೆ ಆಹ್ವಾನಿಸಲಿಲ್ಲ?ಶಿವನಿಗೆ ಪ್ರತಿಯಾಗಿ ದಕ್ಷನು ವಿಷ್ಣುವನ್ನು ಯಜ್ಞೇಶ್ವರನನ್ನಾಗಿ ಮಾಡಿ,ಸರ್ವೇಶ್ವರನ ಪಟ್ಟವನ್ನು ಕಟ್ಟಲು ಪ್ರಯತ್ನಿಸಿದ್ದೇಕೆ? ಇಂತಹ ಪ್ರಶ್ನೆಗಳಿಗೆ ಉತ್ತರಿಸದೆ ಬರಿ ಪೌರಾಣಿಕ ಕಥೆ ಎಂದು ಹುಸಿವಾದ ಮಂಡಿಸುತ್ತ ಆರ್ಯದ್ರಾವಿಡ ಸಂಘರ್ಷ ಸುಳ್ಳು ಎನ್ನುವವರ ಅಪ್ರಬುದ್ಧವಾದವನ್ನು ಒಪ್ಪಲಾಗದು.ಇಂತಹ ದಕ್ಷಯಜ್ಞಧ್ವಂಸದ ಮೂಲಪುರುಷನಾದ ಶಿವನ ಸತಿಯೇ ಮಹಿಷಮರ್ಧಿನಿ,ಚಾಮುಂಡಿ.ಇದನ್ನು ಗಮನಿಸದೆ ಚಾಮುಂಡಿಯನ್ನು ಆರ್ಯರದೇವಿ ಎಂದು ವಾದಿಸುವುದು ಸರಿಯಲ್ಲ.ಮಹಿಷನೂ ಶಿವಭಕ್ತನೆ.ಮಹಿಷನನ್ನು ಕೊಂದವಳೂ ಶಿವನ ಹೆಂಡತಿಯೆ! ಹೀಗಿರುವಾಗ ಇಲ್ಲಿ ಮಹಿಷನ ಸಂಹಾರದಲ್ಲಿ ಹೊರಗಿನವರ ಕೈವಾಡ ಕಾಣುವ ಪ್ರಮೇಯವೇ ಬರುವುದಿಲ್ಲ.ಮಹಿಷಮರ್ಧಿನಿ ಚಾಮುಂಡಿ ನಾಡಜನಪದರ ದೇವಿ,ನೆಲಮೂಲ ಸಂಸ್ಕೃತಿಯ ದೇವಿ.

‘ದುರ್ಗಾಸಪ್ತಶತಿ’ಯು ಮಹಿಷಮರ್ಧಿನಿಯ ಅವತರಣದ ಪ್ರಸಂಗವನ್ನು ವಿವರಿಸುತ್ತದೆ.ಮಹಿಷ ಮತ್ತು ಅವನ ಪಡೆಯು ಲೋಕಕಂಟಕರಾಗಿ ವರ್ತಿಸಿದ್ದರಿಂದ ಪೀಡನೆಗೊಳಗಾದ ದೇವತೆಗಳು ಬ್ರಹ್ಮನ ಮೊರೆಹೋಗಲು,ಬ್ರಹ್ಮ ಮತ್ತು ಶಿವರು ವಿಷ್ಣುವಿನ ಬಳಿಬಂದು ಆ ಮೂವರು ಏಕವಾಗೆ ಅವರ ಶಕ್ತಿಯಿಂದ ಹುಟ್ಟಿದವಳೆ ಮಹಿಷಮರ್ಧಿನಿ .ಇಲ್ಲಿ ಬ್ರಹ್ಮ ವಿಷ್ಣು ಮತ್ತು ರುದ್ರರ ತಪೋಶಕ್ತಿಯೇ ದೇವಿ ಚಾಮುಂಡಿ ಎನ್ನುವುದು ಪ್ರಧಾನ ಅಂಶ.ತ್ರಿಮೂರ್ತಿಗಳ ತಪಃಶಕ್ತಿಯಿಂದ ಅವತರಿಸಿದ ದೇವಿಗೆ ಬ್ರಹ್ಮ ವಿಷ್ಣು ರುದ್ರರು ಸೇರಿದಂತೆ ದೇವತೆಗಳೆಲ್ಲರೂ ತಮ್ಮ ತಮ್ಮ ಶಕ್ತಿ ಮತ್ತು ಆಯುಧಗಳನ್ನು ಅರ್ಪಿಸುತ್ತಾರೆ.ಎಲ್ಲದೇವತೆಗಳ ಶಕ್ತಿಸ್ವರೂಪಿಣಿಯಾಗಿ ಚಾಮುಂಡಿ ಎದ್ದು ನಿಲ್ಲುತ್ತಾಳೆ.ಭಾರತದ ವಿಜಯ ಸೂತ್ರ ‘ ವಿವಿಧತೆಯಲ್ಲಿ ಏಕತೆ’ ಎನ್ನುವ ಮಂತ್ರದ ಮೂಲವೇ ಮಹಿಷಮರ್ಧಿನಿ ಅಥವಾ ಚಾಮುಂಡಿಯ ಅವತಾರ ಪ್ರಸಂಗ. ‘ಬಿಡಿ’ಯು ಸೋತಾಗ ‘ಇಡಿ’ಯು ಗೆಲ್ಲುತ್ತದೆ; ವ್ಯಷ್ಟಿಯು ಸೋತಾಗ ಸಮಷ್ಟಿಯು ಗೆಲ್ಲುತ್ತದೆ.ಚಾಮುಂಡಿಯು ತ್ರಿಮೂರ್ತಿಗಳು ಮತ್ತು ಎಲ್ಲ ದೇವತೆಗಳ ಅಂಶಸ್ವರೂಪಳು ಎಂದರೆ ಅವಳು ಅಖಂಡತೆಯ ಸಂಕೇತ,ಸಮಗ್ರತೆಯ ಸಂಕೇತ,ಸಮನ್ವಯದ ಪ್ರತೀಕ.ಭಾರತೀಯರಾದ ನಾವು ಎಲ್ಲರೂ ಒಂದೇ ಎನ್ನುವ ಸಮಷ್ಟಿ ಪ್ರಜ್ಞೆ ನಮ್ಮಲ್ಲಿ ಮೂಡಿದರೆ ಭಾರತ ಯಶಸ್ವಿಯಾಗುತ್ತದೆ.ಇದು ಮಹಿಷಮರ್ಧಿನಿ ತತ್ತ್ವದ ಸೂತ್ರ,ದರ್ಶನ.

ದೇವಿಯು ಮೂಲತಃ ನಿರಾಕಾರ ಪರಬ್ರಹ್ಮೆಯು.ಲೋಕೋದ್ಧಾರದ ಲೀಲೆ ನಟಿಸಲು ಬ್ರಹ್ಮ,ವಿಷ್ಣು- ರುದ್ರ ಮತ್ತು ದೇವತೆಗಳ ಪ್ರಾರ್ಥನೆಗೆ ಓಗೊಟ್ಟು ಸ್ತ್ರೀರೂಪ ಧರಿಸುತ್ತಾಳೆ.ಮಹಿಷನನ್ನು ಸಂಹರಿಸಿಯೂ ಮಹಿಷನನ್ನು ಉದ್ಧರಿಸಿದ್ದಾಳೆ ದೇವಿ.ಇದು ಜಡಮತಿಗಳಿಗೆ ಅರ್ಥವಾಗುವುದಿಲ್ಲ.ನಿರಾಕಾರ,ನಿರ್ಗುಣೆ ಮತ್ತು ನಿರಂಜನೆಯಾದ ದೇವಿಯು ಮಹಿಷನನ್ನು ಸಂಹರಿಸಿ ‘ ಮಹಿಷಮರ್ಧಿನಿ’ ಎಂದೇ ಪೂಜೆಗೊಳ್ಳುತ್ತಿದ್ದಾಳೆ.ಮಹಿಷಮರ್ಧಿನಿಯ ಪೂಜೆ ಎಂದರೆ ಮಹಿಷನ ಸ್ಮರಣೆಯೇ ಅಲ್ಲವೆ! ಮಹಿಷನನ್ನು ಸಂಹರಿಸಿದವಳು ಎನ್ನುವುದೇ ಮಹಿಷನ ಹೆಸರು ಚಿರಸ್ಥಾಯಿಯಾಗಲು ಕಾರಣವಾಗಿದೆ.ಮಹಿಷ ಎನ್ನುವುದೇ ಪೂರ್ವಪದ,ಮರ್ಧಿನಿ ಎನ್ನುವುದು ಉತ್ತರ ಪದ ವ್ಯಾಕರಣದಂತೆ.ಅಂದರೆ ಮಹಿಷ ಮರ್ಧಿನಿಯ ಪೂಜೆಯಲ್ಲಿ ಮೊದಲ ಪೂಜೆ ಮಹಿಷನಿಗೇ ಸಲ್ಲುತ್ತದೆ ! ಇದು ಪರಾಶಕ್ತಿಯು ಮಹಿಷನನ್ನು ನಿಗ್ರಹಿಸಿಯೂ ಅವನನ್ನು ಅನುಗ್ರಹಿಸಿದ ಕಥೆ.ದೇವತೆಗಳ ಮೊರೆಗೆ ಓಗೊಟ್ಟು ದೇವಿಯು ಮಹಿಷನನ್ನು ಸಂಹರಿಸಿದರೂ ತಾನು ಮಹಿಷಮರ್ಧಿನಿ ಎನ್ನುವ ಹೆಸರ್ಗೊಂಡು ಪೂಜೆಗೊಳ್ಳುವ ಮೂಲಕ ಉದ್ಧರಿಸಿದ್ದಾಳೆ ಮಹಿಷನನ್ನು.ಇದನ್ನು ಅರ್ಥಮಾಡಿಕೊಂಡರೆ ಮಹಿಷ ದಸರಾಕ್ಕೆ ಒತ್ತಾಯಿಸುವ,ಹೋರಾಡುವ ಪ್ರಸಂಗವೇ ಬರುವುದಿಲ್ಲ.

ಲೇಖಕರು: ಮುಕ್ಕಣ್ಣ ಕರಿಗಾರ
ಮೊ;94808 79501

06.10.2021