ಲಿಂಗಸೂಗುರು: ಟೆಂಟ್ ಶಾಲೆಗೆ ವಿದ್ಯಾರ್ಥಿ ಮುಖಂಡರ ಭೇಟಿ

ಲಿಂಗಸಗೂರು ಅ.5: ಪಟ್ಟಣದ ಅಲೆಮಾರಿ ಸಂಜೆ ಟೆಂಟ್‌ಶಾಲೆಗೆ ವಿದ್ಯಾರ್ಥಿ ಮುಖಂಡರಾದ ಶಶಿಕುಮಾರ್ ಹಾಗೂ ಶಿವರಾಜ್ ಮೋತಿ ಮಂಗಳವಾರ ಭೇಟಿ ನೀಡಿದ್ದರು. ಕ್ರಾಂತಿಗೀತೆ ಬರಹಗಾರ, ಹಾಡುಗಾರ ಪ್ರಶಾಂತ್ ದಾನಪ್ಪ ಮಸ್ಕಿ ಸಾರಥ್ಯದಲ್ಲಿ ನಡೆಯುತ್ತಿರುವ ಈ ಸಿಂಧೊಳ್ಳು ಸಮುದಾಯದ ಅಲೆಮಾರಿ ಸಂಜೆ ಟೆಂಟ್ ಶಾಲೆಯ 36 ಮಕ್ಕಳಿಗೆ ಕನ್ನಡ ಸುಲಭ ಕಲಿಕಾ ಅಂಕಲಿಪಿಗಳನ್ನು ಉಚಿತವಾಗಿ ಅವರು ನೀಡಿದರು, ನಂತರ ಮಾತನಾಡಿದ ಶಿವರಾಜ್ ಮೋತಿ, ಶೋಷಿತ ಜನಾಂಗಕ್ಕೆ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಸಾವಿತ್ರಿಭಾಯಿ ಫುಲೆಯವರ ಶೈಕ್ಷಣಿಕ, ಸಾಮಾಜಿಕ ಕೊಡುಗೆಗಳು ಹಾಗೂ ಡಾ.ಬಿ.ಆರ್. ಅಂಬೇಡ್ಕರ್- ಜ್ಯೋತಿಭಾ‌ ಫುಲೆ-ಗಾಂಧಿ-ಬಸವಣ್ಣನವರ ತತ್ವಾದರ್ಶಗಳ ಕುರಿತು ಮಕ್ಕಳಿಗೆ ವಿವರಿಸಿದರು.  ಮುಖಂಡ ಶಶಿಕುಮಾರ್ ಮಾತನಾಡಿ, ಯಾವುದೇ ಕಾರಣಕ್ಕೂ ಮಕ್ಕಳಿಗೆ ಶಾಲೆ ಬಿಡಿಸಬೇಡಿ, ನಿಮ್ಮ ವಸತಿ ವ್ಯವಸ್ಥೆಗಾಗಿಯೂ ಸಹ ಪ್ರಶಾಂತ ದಾನಪ್ಪ ಪ್ರಯತ್ನಿಸುತ್ತಿದ್ದು ನಿಮಗಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ನೀವು ನಿಂತು ಸಂಘಟಿತರಾಗಬೇಕು’ ಎಂದು ಮಕ್ಕಳ ಪಾಲಕರಿಗೆ ಹೇಳಿದರು.

ಮಕ್ಕಳಲ್ಲಿ ಮುಂದಿನ ಕನಸುಗಳನ್ನು ಬಿತ್ತಿ, ಮಕ್ಕಳದೊಂದಿಗೆ ಸಮಯ ಕಳೆದು ಈ ಶಾಲೆಗೆ ಒಳ್ಳೆಯದಾಗಲಿ ಎಂದು ಹರಸುತ್ತಾ, ಪ್ರಶಾಂತ ದಾನಪ್ಪ ಅವರಿಗೆ ಕರೆಮಾಡಿ, ಅಲೆಮಾರಿ ಮಕ್ಕಳಲ್ಲಿ ಶಿಕ್ಷಣದ ಮೂಲಕ ಶಿಕ್ಷಣ ಕ್ರಾಂತಿ ಬಯಸಿ ಕಾರ್ಯರೂಪಕ್ಕೆ ತರುತ್ತಿರುವ ತಮಗೆ ಅಭಿನಂದನೆಗಳು ಎಂದು  ಎಂದು ಶುಭ ಹಾರೈಸಿದರು.