ನನ್ನ ಆದರ್ಶ
ಲೇಖಕರು: ಮಹೇಂದ್ರ ಕುರ್ಡಿ
ನನ್ನ ಜೀವನದಲ್ಲಿ ಆದರ್ಶ ವ್ಯಕ್ತಿಗಳು ಅಂದ್ರೆ ನನಗೆ ಜನ್ಮ ನೀಡಿದ ನನ್ನ ತಂದೆ ತಾಯಿ
ಇವರನ್ನು ಹೊರತಾಗಿಯೂ ಆದರ್ಶದ ಬೆನ್ನು ಹತ್ತಿ ಹೊರಟರೆ ನಮಗೆ ಅದು ವ್ಯಕ್ತಿಯೇ ಆಗಿರಬೇಕು ಅಂತ ಏನಿಲ್ಲ , ಅದು ಒಂದು ವಸ್ತು ಅಥವಾ ವಿಚಾರವೂ ಕೂಡ ಆಗಿರಬಹುದು . ಆದರೆ ಅದರ ಪ್ರೇರಣೆ ಅಥವಾ ಪ್ರೇರೇಪಣೆ ಯು ನಮ್ಮ ಬದುಕಿಗೊಂದು ಹೊಸ ತಿರುವು ತಂದುಕೊಡುತ್ತದೆ . ಇಲ್ಲವೇ ಅದು ನಮ್ಮ ಬದುಕಿಗೆ ಶಾಶ್ವತ ಪಾಠವೂ ಆಗಿರುತ್ತದೆ. ಮತ್ತು ಅದು ನಮ್ಮ ಜೀವನ ಶೈಲಿ ಸಾಧನೆಯ ಮೇಲೆ ಮಹತ್ತರವಾದ ಪರಿಣಾಮವನ್ನು ಬೀರುತ್ತದೆ.
ಅದು ಯಾರು ಯಾವುದು ಎಂದು ನೋಡೋಣವೇ…
*ನನ್ನೊಳಗೆ ಇದ್ದಾನೆ ಒಬ್ಬ ಮಾಂತ್ರಿಕ ಅವನೇ ಅರಿವು ಎಂಬ ಚಿಂತಕ ನಾ ಬರೀ ಜೀವನದ ಯಾತ್ರಿಕ.*
*ನಿನ್ನ ನೀ ತಿಳಿದರೆ ಇನ್ನೇನೋ ಮತ್ತಿನ್ನೇನೋ* ಎನ್ನುವ ಹಾಗೆ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು ಆಗಲೇ ನಮ್ಮ ವ್ಯಕ್ತಿತ್ವಕ್ಕೆ ಸೂಕ್ತ ಬೆಲೆ ಬರುವುದು.
ಆ ನಮ್ಮ ತಿಳುವಳಿಕೆ ಮುಂದೆ ನಮ್ಮನ್ನು ಉತ್ತಮ ವ್ಯಕ್ತಿಯನ್ನಾಗಿ ಮಾಡಬಲ್ಲದು.
ನಾನು ಮನೆಬಿಟ್ಟು ಹೊರ ಪ್ರಪಂಚಕ್ಕೆ ಕಾಲಿಟ್ಟ ಗಳಿಗೆ ಅಂದ್ರೆ… ಅದೇ ನಾನು ಸರ್ಕಾರಿ ಶಾಲೆಗೆ ಒಂದನೇ ತರಗತಿಗೆ ಸೇರಿದ ದಿನ. ಅಲ್ಲಿಂದಲೂ ನನಗೆ ಚೆನ್ನಾಗಿ ನೆನಪಿದೆ ನಾ ಕಲಿಯುತ ಸಾಗಿ ಬಂದ ಹಾದಿ.
ಪ್ರಾಥಮಿಕ ಹಂತದಲ್ಲಿಯೇ ನನ್ನ ಅರಿವಿಗೆ ಬಂದಿತ್ತು ಕಾಯಕದ ಜೊತೆಗೆ ನಾನೊಬ್ಬ ಸಮಾಜ ಜೀವಿಯಾಗಿ ಬದುಕಬೇಕು, ಇಲ್ಲಿ ಎಲ್ಲರೂ ನನ್ನವರು, ಎಲ್ಲರನ್ನೂ ಪ್ರೀತಿಯಿಂದ ಕಾಣಬೇಕು ಹಾಗು ಯಾವುದೇ ಜಾತಿ ಧರ್ಮಗಳ ಪರದೆ ಇರದೇ ಬಾಳುವ ಅನೇಕ ಯೋಚನೆಗಳು ಅಲ್ಲಿಂದಲೇ ಆರಂಭವಾಗಿರುವುದು.
ಈ ವಿಚಾರಗಳು ಈಗಲೂ ಕೂಡ ಹಾಗೆಯೇ ಇವೆ ಅವುಗಳಲ್ಲಿ ಯಾವುದೇ ಬದಲಾವಣೆಯೂ ಸಹ ಆಗಿಲ್ಲ, ಆಗುವುದೂ ಇಲ್ಲ ಎಂದುಕೊಂಡಿದ್ದೇನೆ.
ಕಾಯಕ ವಿಚಾರ ಬಂದಾಗ ನಾನು ಶಾಲೆಗೆ ಹೋಗುವ ಮುನ್ನ ಮನೆಯ ಕೆಲಸ ಶಾಲೆಯಿಂದ ಬಂದ ಮೇಲೆ ಹೊಲದ ಕೆಲಸ ಮಾಡಲೇಬೇಕಿತ್ತು.
ಬೆಳಿಗ್ಗೆ ಎದ್ದು ದನ ಕರುಗಳ ಸೆಗಣಿ ಬಾಚುವುದು, ಮನೆಯ ನಿತ್ಯ ಬಳಕೆಗೆ ಸಾರ್ವಜನಿಕ ನಲ್ಲಿಯಿಂದ ನೀರು ತಂದು ತುಂಬಿಸುವುದು , ನಂತರ ದನ ಕರುಗಳಿಗೆ ಹಸಿ ಹುಲ್ಲು ತರುವುದು , ಉರುವಲು ಕಟ್ಟಿಗೆ ಕಡಿಯುವುದು ಇವೆಲ್ಲದರ ನಡುವೆ ಹರಿದ ಬಟ್ಟೆ ಇದ್ದರೂ ಸರಿ ತೇಪೆ ಹಾಕಿದ ಚಡ್ಡಿ ಇದ್ದರೂ ಸರಿ ತೊಟ್ಟು ಶಾಲೆಗೆ ಹೋಗಿ ಅಭ್ಯಾಸ ಮಾಡಬೇಕು.
ಇಲ್ಲಿ ದಣಿವರಿಯದ ದುಡಿಮೆ ನನ್ನ ಜೀವನದಲ್ಲಿ ನಿತ್ಯ ನಿರಂತರವಾಗಿ ಸಾಗುತ್ತಿತ್ತು .
ಈಗ್ಲೂ ಸಹಿತ ಬೇಸರವಿಲ್ಲದೆ ಆಯಾ ಕಾಲದ ಕೆಲಸಗಳನ್ನು ಮಾಡುತ್ತಲಿರುವೆ.
ಇಲ್ಲಿ ನಾನು ಕಲಿತದ್ದು ಸರಳತೆ , ಸಮಾನತೆ
ಹಾಗೂ ಕೆಲಸ ಅದು ಯಾವುದೇ ಇರಲಿ ಅದು ಅವಮಾನ ಎಂದು ಭಾವಿಸುವುದಿಲ್ಲ. ನಮ್ಮ ಕೆಲಸ ನಮ್ಮ ಹೆಮ್ಮೆ ಸ್ವ ಇಚ್ಛೆಯಿಂದ ಮಾಡುವ ಕೆಲಸ ದಣಿವು ಮರೆತು ನೆಮ್ಮದಿ ತರುತ್ತದೆ ಎಂಬ ಅರಿವು ಆಗಿನಿಂದಲೇ ಮೂಡಿಬಂದಿತು.
ಈಗ ನನ್ನಲ್ಲಿ ಇರುವ ಮಾನವೀಯತೆ, ಪ್ರೀತಿ ವಿಶ್ವಾಸ, ಜಾತಿ ಧರ್ಮಗಳ ಕುರಿತಂತೆ ಏಕತೆ
ರಾಷ್ಟ್ರಾಭಿಮಾನ ವಿಶ್ವ ಮಾನವತೆ ತತ್ವಗಳು ಯಾರನ್ನೂ ನೋಡಿ ಕಲಿಯಲಿಲ್ಲ , ಕಲಿತಿಲ್ಲ ಅವುಗಳು ನನ್ನ ಬದುಕಿನ ಜೊತೆಗೆ ಬೆಳೆದು ಬಂದಿವೆ ಎಂದರೂ ತಪ್ಪಿಲ್ಲ. ಆದರೂ ತಿಳಿದುಕೊಳ್ಳುವ ವಿಚಾರದಲ್ಲಿ ನಾನಿನ್ನೂ ಬಾವಿಯೊಳಗಿನ ಕಪ್ಪೆ.
ಈ ವಿಚಾರವಾಗಿ ನೈಜ ಸತ್ಯ ಘಟನೆ ನನ್ನ ಜೀವನದಲ್ಲಿ ನಡೆದಿದ್ದು ಈಗಲೂ ನನ್ನ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿದಿದೆ. ಇಲ್ಲಿ ಅದನ್ನು ನಾನು ತಮ್ಮ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ.
ನಾನು ಆಗಿನ್ನೂ ಮೂರನೇ ತರಗತಿಯಲ್ಲಿ ಓದುತ್ತಿದ್ದೆ . ಶಾಲೆ ಮುಗಿದ ನಂತರ ಕೆಲವು ಸ್ನೇಹಿತರು ಸೇರಿ ಸಾಯಂಕಾಲ ನಮ್ಮ ಮನೆಯ ಅಂಗಳದಲ್ಲಿ ದಿನಾಲೂ ಕುಳಿತು ಮನೆಪಾಠ, ಓದುವ ಹವ್ಯಾಸ.
ಅದರಲ್ಲಿ ಕೆಲವು ಹುಡುಗರು ಮತ್ತು ಹುಡುಗಿಯರೂ ಇರುತ್ತಿದ್ದರು.
ಒಂದು ದಿನ ಒಬ್ಬ ಹುಡುಗಿ ಶಿವಗಂಗಮ್ಮ ಅಂತ ಅವಳ ಹೆಸರು. ಇನ್ನೇನು ಓದು ಮುಗಿಸಿ ಮನೆಗೆ ಹೋಗಬೇಕು ಆದರೆ ಕತ್ತಲಾಗಿದೆ ದಿನಾಲೂ ಅವಳ ಜೊತೆಗೆ ಬರುತ್ತಿದ್ದ ಅವಳ ಗೆಳತಿ ಅಂದು ಬಂದಿರಲಿಲ್ಲ.
ಅವಳು ಒಬ್ಬಳೇ ಮನೆಗೆ ಹೋಗಲು ಭಯ ಬೇರೆ .
ಸರಿ ಅಂತ ನಾನು ಅವಳನ್ನ ಮನೆಯವರೆಗೂ ಬಿಟ್ಟು ಬರಲು ಸಿದ್ಧನಾಗಿ ಜೊತೆ ನಡೆದೆ.
ಸ್ವಲ್ಪ ದೂರ ಅಷ್ಟೇ ಇತ್ತು ಅವಳ ಮನೆ ಹಾಗೇಯೇ ದಾರಿಯಲ್ಲಿ ಮಾತನಾಡುತ್ತಾ ಹೆಜ್ಜೆ ಹಾಕಿದೆವು. ಈ ಮಧ್ಯೆ ಅವಳು ಒಂದು ಪ್ರಶ್ನೆ ಕೇಳಿದಳು ನನಗೂ ಗೊತ್ತಿಲ್ಲ ಹೀಗೇಕೆ ಕೇಳುತ್ತಿದ್ದಾಳೆ ಅಂತ.
ಪ್ರಶ್ನೆ ಹೀಗಿತ್ತು…
ಅವಳು , *ನೀವು ಜಾತಿ ಭೇದ ಮಾಡುವಿರಾ?* ಎನ್ನುವ ಪ್ರಶ್ನೆ ಹಾಕಿದಳು
ಸಹಜವಾಗಿಯೇ ತಕ್ಷಣ ಇಲ್ಲವೆಂದು ಹೇಳಿತು ನನ್ನ ಮನ.
ಮುಂದುವರೆದು ಮತ್ತೊಂದು ಪ್ರಶ್ನೆ;
*ಹಾಗಾದರೆ ನಮ್ಮ ಮನೇಲಿ ನೀವು ಊಟ ಮಾಡ್ತೀರಾ?*
ಆಗಲೇ ನಾನು ತಕ್ಷಣ ಉತ್ತರ ನೀಡಿದ್ದು ರೊಟ್ಟಿ ಪಲ್ಯ ಆನ್ನ ಸಾರು ಇದ್ದರೆ ಯಾರ ಮನೆಯಲ್ಲಿ ಬೇಕಾದ್ರೂ ಸರಿಯೇ ನಾನು ಊಟ ಮಾಡುವೆ ಅದರಲ್ಲಿ ಏನಿದೆ ಇಷ್ಟ ಆಗುವ ಊಟ ಇದ್ದರೆ ಅಷ್ಟೇ ಸಾಕು ಎಂದಾಗ, ಅವಳಿಗೆ ಖುಷಿ ಆಯ್ತು ಅನ್ಸುತ್ತೆ.
ಇನ್ನೇನು ಮನೆ ತಲುಪಿದೆವು ಅದೊಂದು ಪುಟ್ಟ ಗುಡಿಸಲು ಮನೆ ಒಳಗೆ ಸಣ್ಣ ಚಿಮಣಿ ದೀಪ ಅದರಿಂದ ಮಂದ ಬೆಳಕು ಬರುತ್ತಿತ್ತು ಅವಳ ತಾಯಿ ಒಳಗೆ ಕುಳಿತು ಏನೋ ಮಾಡ್ತಾ ಇದ್ದಳು. ಇನ್ನೇನು ಅಲ್ಲಿ ಅವಳನ್ನು ಬಿಟ್ಟು ನಾನು ಮರಳಬೇಕು ಅಷ್ಟರಲ್ಲಿ ಅವಳು ಮನೆಯ ಒಳಗೆ ಬರುವಂತೆ ಹೇಳಿದಳು ಹಾಗೆಯೇ ಕರೆದುಕೊಂಡು ಹೋಗಿ ಒಳಗೆ ಕೂರಿಸಿದಳು. ನಾನು ಕುಳಿತೆ , ಚಿಮಣಿ ದೀಪದ ಮಂದ ಬೆಳಕು ಆಕಡೆ ಅವಳ ತಾಯಿ ಕೂತಿದ್ದರು ಹಿಂದಿನಿಂದ ಹೋಗಿ ಮೆಲ್ಲಗೆ ಅವಳು ತಾಯಿ ಹೋಗಿ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು.
ಸ್ವಲ್ಪ ಹೊತ್ತು ಅಷ್ಟೇ ಅವಳ ತಾಯಿ ಒಂದು ತಟ್ಟೆಯಲ್ಲಿ ಅನ್ನ ಸಾರು ಹಾಕಿಕೊಂಡು ತಂದು ಮುಂದಿಟ್ಟಳು. ಆಗಲೇ ನನಗೆ ತಿಳಿದದ್ದು ದಾರಿಯಲ್ಲಿ ಬರುವಾಗ ಆ ಪ್ರಶ್ನೆಗಳನ್ನು ಆಕೆ ಏಕೆ ಕೇಳಿದ್ದು ಅಂತ.
ಇಲ್ಲಿ ನನಗೆ ಅವಳ ಜಾತಿ ಹೇಳಲು ಮನಸ್ಸು ಇಲ್ಲ ,ಆದರೂ ಅನಿವಾರ್ಯ ಹೇಳ್ತಾ ಇದ್ದೇನೆ ಪರಿಶಿಷ್ಟ ಜಾತಿ ಅವರದ್ದು ಅದಕ್ಕಾಗಿ ಮೊದಲು ನನಗೆ ಈ ರೀತಿಯ ಪ್ರಶ್ನೆಗಳನ್ನು ಕೇಳಿರಬಹುದು ಅಂತ ಕಾಣುತ್ತೆ.
ಅದೇನೇ ಇರಲಿ ಊಟ ಮಾಡಿ ನಂತರ ಮನೆಗೆ ಮರಳಿದೆ ಬಹಳ ರುಚಿಕರ ಹಾಗೂ ಮರೆಯಲಾಗದ ಅನುಭವ
ಅಂದಿನ ಆ ಊಟದ ರುಚಿ ಈಗಲೂ ನನ್ನ ಮನದಲ್ಲಿ ಹಾಗೇ ಹಚ್ಚ ಹಸಿರಾಗಿದೆ.
ಅನ್ನದ ಮುಂದೆ ಈ ಯಾವುದೇ ಜಾತಿ, ಧರ್ಮ, ಮೇಲು ,ಕೀಳು ಹಾಗೂ ಅಂತಸ್ತಿನ ತಾರತಮ್ಯ ಯಾವತ್ತೂ ಸಮನಾಗಲಾರದು. ಈ ವಿಚಾರದಲ್ಲಿ ನಾನು ಆಗಿನಿಂದಲೂ ಈವರೆಗೂ ಅದನ್ನೇ ಮೈಗೂಡಿಸಿಕೊಂಡು ಬಂದಿದ್ದು ವಿಶೇಷ. ಇದರಲ್ಲಿ ನನ್ನ ಅರಿವು ಎನ್ನುವ ಮಾಂತ್ರಿಕನ ಕೊಡುಗೆ ಕೂಡ ಅಪಾರ.
ಇನ್ನು ಸಾಕಷ್ಟು ವಿಚಾರಗಳನ್ನು ಹೇಳಬಹುದು ಆದರೆ ಅದರ ಅಗತ್ಯವಿಲ್ಲ ಎಂದು ನನಗೆ ಅನಿಸುತ್ತದೆ ಕಾರಣ ಅನ್ನ ಬೆಂದಿದೆ ಎಂದು ನೋಡಲು ಒಂದು ಅಗುಳು ಹಿಸುಕಿದರೆ ಸಾಕು ಅಲ್ಲವೇ? ಹಾಗಾಗಿ ನಾನು ಮನಸು ಹೇಗೆ ಎಂದು ತಿಳಿಯಲು ಇಷ್ಟು ಸಾಕು ಎಂದು ಅನ್ಸುತ್ತೆ .
*ಹರ ಮುನಿದರೆ ಗುರು ಕಾಯುವ*
ಗುರು ಮುನಿದರೆ?
*ಆಗ ನಮ್ಮ ಅರಿವು ನಮ್ಮನ್ನು ಕಾಯುವುದು.*
ಆ ಒಳ ಅರಿವು ಬೆಳೆಸಿಕೊಂಡು ಎಲ್ಲರೂ ನಮ್ಮ ನಮ್ಮ ಅರಿವಿಗೆ ಶರಣಾಗಿ ಉತ್ತಮ ವಿಚಾರಗಳನ್ನು ಮೈಗೂಡಿಸಿಕೊಂಡು ಸ್ವಾಸ್ಥ್ಯ ಸಮಾಜದತ್ತ ಹೆಜ್ಜೆ ಹಾಕೋಣ ವಿಶ್ವ ಮಾನವ ಸಂದೇಶ ಜಗಕೆ ಸಾರೋಣ.

ಶ್ರೀ ವಿನಾಯಕ ವಿದ್ಯಾ ಸಂಸ್ಥೆ (ರಿ)
ಹಟ್ಟಿ ಚಿನ್ನದ ಗಣಿ
ತಾ. ಲಿಂಗಸುಗೂರು
ಜಿ. ರಾಯಚೂರು
ಹಟ್ಟಿ.. 584 115
ಮೊ:9483591141