ಮಾನ್ವಿ: ಪಕ್ಷಿಪ್ರೇಮಿ ಸಲಾವುದ್ದೀನ್ ಆರೈಕೆ, ಚೇತರಿಸಿಕೊಂಡ ನವಿಲು

ಮಾನ್ವಿ, ಅ.4: ತಾಲೂಕಿನ ಬಾಪೂರು ಸೀಮೆಯ ಹೊಲದಲ್ಲಿ  ಈಚೆಗೆ ದೊಡ್ಡಗಾತ್ರದ ಗಂಡು ನವಿಲೊಂದು ಗಾಯಗೊಂಡು ನರಳುತ್ತಾ ಬಿದ್ದಿರುವುದನ್ನು ಫಯಾಜ್ ರುಮಾಲ್ ವಾಲೆ ಹಾಗೂ ಸ್ನೇಹಿತರು ನೋಡಿದ್ದರು. ನಂತರ ಗಾಯಗೊಂಡಿದ್ದ ನವಿಲನ್ನು ಮಾನ್ವಿಯ  ಪಕ್ಷಿಪ್ರೇಮಿ  ಸಲಾವುದ್ದೀನ್ ಅವರಿಗೆ  ಒಪ್ಪಿಸಿದ್ದರು. ಸಲಾವುದ್ದೀನ್ ಅವರು ಕೂಡಲೇ ಈ ಕುರಿತು ಸ್ಥಳೀಯ ವಲಯ ಅರಣ್ಯಾಧಿಕಾರಿ ರಾಜೇಶ ನಾಯಕ್ ಅವರಿಗೆ ಮಾಹಿತಿ ನೀಡಿದ್ದರು. ಗಾಯಗೊಂಡಿದ್ದ ನವಿಲನ್ನು ಇಲಾಖೆ ಸಿಬ್ಬಂದಿಯೊಂದಿಗೆ ಪಶು ವೈದ್ಯಾಲಯಕ್ಕೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ನಂತರ ಈ ನವಿಲನ್ನು ಪಕ್ಷಿ ಪ್ರೇಮಿ ಸಲಾವುದ್ದೀನ್ ಅವರ ಮನೆಯಲ್ಲಿ ಕೋಳಿಗಳೊಂದಿಗೆ ಸೇರಿಸಿ ಆರೈಕೆ ಮಾಡಲಾಯಿತು.

ಕಳೆದ ಹತ್ತು ದಿನಗಳಿಂದ ನಿರಂತರ ಆರೈಕೆ, ಚಿಕಿತ್ಸೆ ನಂತರ ನವಿಲು ಸಂಪೂರ್ಣವಾಗಿ ಚೇತರಿಸಿಕೊಂಡಿತು. ಅ.4 ಸೋಮವಾರ ಮಧ್ಯಾಹ್ನ ವಲಯ ಅರಣ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ಯವರ ಸಮಕ್ಷಮದಲ್ಲಿ ಈ‌ ಮೊದಲು ಪತ್ತೆಯಾಗಿದ್ದ ಸ್ಥಳದಲ್ಲಿ ಬಿಡುವ ಮೂಲಕ ನವಿಲನ್ನು ಸ್ವತಂತ್ರಗೊಳಿಸಲಾಯಿತು. ನವಿಲಿನ ಸಂರಕ್ಷಣೆ ಮಾಡಿದ ಪಕ್ಷಿಪ್ರೇಮಿ ಸಲಾವುದ್ದೀನ್ , ಅರಣ್ಯಾಧಿಕಾರಿ ರಾಜೇಶ ನಾಯಕ ಹಾಗೂ ಸಿಬ್ಬಂದಿ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.