ಗ್ರಾಮರಾಜ್ಯ ಮಂಟಪ : ಪೂರ್ವಿಕರ ಗ್ರಾಮಗಳನಿರ್ಣಾಯಕ ಶಕ್ತಿ ಕೇಂದ್ರಗಳಾಗಿ ‘ ದೇವರ ಕಟ್ಟೆಗಳು’

ಲೇಖಕರು: ಮುಕ್ಕಣ್ಣ ಕರಿಗಾರ

ಮಹಾತ್ಮ ಗಾಂಧೀಜಿಯರವರ 153 ನೇ ಜಯಂತಿಯ ದಿನವಾದ ಅಕ್ಟೋಬರ್ 02,2021ರಂದು ನಾನು ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತಿಯ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದೆ.ಗ್ರಾಮ ಪಂಚಾಯತಿ ಕೇಂದ್ರವಾದ ಬಳಿಚಕ್ರದ ‘ಬಸವಣ್ಣನ ಕಟ್ಟೆ’ಯಲ್ಲಿ ಗ್ರಾಮಸಭೆಯನ್ನು ಆಯೋಜಿಸಲಾಗಿತ್ತು.ಗ್ರಾಮಸಭೆಯ ಪ್ರಾರಂಭದ ಮುಂಚೆ ನಾನು ‘ ಬಸವಣ್ಣನ ಕಟ್ಟೆ’ ಯ ಹಿಂದಣ ಶಕ್ತಿ,ಸ್ಫೂರ್ತಿಯಾಗಿರುವ ಬಸವಣ್ಣನ ಗುಡಿಯನ್ನು ನೋಡಿದೆ.ನಾಲ್ಕೈದು ನೂರು ವರ್ಷಗಳಿಗೂ ಹಿಂದಿನ ಸರಳ ರಚನೆಯ ಬಸವಣ್ಣನ ಗುಡಿ.ಹಳೆಯ ಮೂರ್ತಿ ಭಗ್ನವಾಗಿದೆಯೆಂದು ಹೊಸ ಬಸವಣ್ಣನ ಮೂರ್ತಿ ಸ್ಥಾಪಿಸಿ,ಪೂಜಿಸುತ್ತಿದ್ದಾರೆ.ಹಳೆಯ ಮೂರ್ತಿಯಷ್ಟು ಈ ಹೊಸ ಬಸವಣ್ಣನ ಮೂರ್ತಿ ಆಕರ್ಷಕವಾಗಿಲ್ಲ.

ಗ್ರಾಮ ಪಂಚಾಯತಿಯ ಎಲ್ಲಾ ಸಭೆ- ಸಮಾರಂಭಗಳನ್ನು ‘ ಬಸವಣ್ಣನ ಕಟ್ಟೆ’ ಯಲ್ಲಿ ಆಯೋಜಿಸಲಾಗುತ್ತದೆ ಎಂದು ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜು ಮೇಟಿ ಮಾಹಿತಿ ನೀಡಿದರು.ಗ್ರಾಮಸಭೆಯ ವೇದಿಕೆಯಲ್ಲಿದ್ದ ನನ್ನ ಮನಸ್ಸು ಶತಮಾನಗಳ ಹಿಂದೆ,ಸಹಸ್ರಾರು ವರ್ಷಗಳಿಂದ ಗ್ರಾಮಜೀವನವನ್ನು ರೂಪಿಸುತ್ತ ಬಂದಿದ್ದ ಬಸವಣ್ಣನ ಕಟ್ಟೆಯಂತಹ ದೇವರ ಕಟ್ಟೆಗಳ ಬಗ್ಗೆ ಚಿಂತಿಸತೊಡಗಿತು.ನಮ್ಮ ಪೂರ್ವಿಕರ ಬದುಕಿನಲ್ಲಿ ‘ ದೇವರ ಕಟ್ಟೆಗಳು’ ವಹಿಸಿದ್ದ ಮಹತ್ವದ ಪಾತ್ರದ ಬಗ್ಗೆ ಇಂದಿನ ಯುವಪೀಳಿಗೆಗೆ ಅಷ್ಟಾಗಿ ಗೊತ್ತಿಲ್ಲ.ಇಂದು ಗ್ರಾಮ ಪಂಚಾಯತಿ,ಸಮುದಾಯ ಭವನಗಳು ಪ್ರತಿ ಗ್ರಾಮದಲ್ಲಿ ಕಾಣಿಸಿಕೊಂಡಿರುವುದರಿಂದ ಗ್ರಾಮಸಭೆ ಮತ್ತಿತರ ಸಭೆ- ಸಮಾರಂಭಗಳನ್ನು ಈ ಸರಕಾರಿ ಕಟ್ಟಡಗಳಲ್ಲಿ ಆಯೋಜಿಸಲಾಗುತ್ತಿದೆ.ಈ ಸರಕಾರಿ ಕಟ್ಟಡಗಳು,ಗ್ರಾಮಸಭೆಗಳ ನಮ್ಮ ಪರಿಕಲ್ಪನೆಗೆ ಗ್ರಾಮಗಳ ಇಂತಹ ಕಟ್ಟೆಗಳೇ ಸ್ಫೂರ್ತಿಯಾಗಿವೆ.ಕಾಲ ಬದಲಾದಂತೆ ಬಯಲುಕಟ್ಟೆಗಳ ಬದಲಾಗಿ ಸಿಮೆಂಟ್ ಕಾಂಕ್ರಿಟ್ ಕಟ್ಟಡಗಳು ಎದ್ದು ನಿಂತಿವೆ.ಜನರ ಕೈಯಲ್ಲಿ ಅಧಿಕಾರ ಎಂದು ಪಂಚಾಯತಿಗಳು ಬಂದಿವೆ ಗ್ರಾಮಗಳ ಆಡಳಿತ ಕೇಂದ್ರಗಳಾಗಿ.ಆದರೆ ಹಿಂದಿನ ದೇವರ ಕಟ್ಟೆಗಳ ಶಕ್ತಿ,ಸಮುದಾಯ ಮನೋಭಾವನೆ ಮತ್ತು ನಿರ್ಣಾಯಕ ಶಕ್ತಿಗಳು ಗ್ರಾಮ ಪಂಚಾಯತಿ ಮತ್ತು ಸಮುದಾಯಭವನಗಳಂತಹ ಕಟ್ಟಡಗಳಿಗೆ ಇಲ್ಲ ಎನ್ನುವುದು ವಾಸ್ತವ.

ಭಾರತದ ಸಂವಿಧಾನಕ್ಕೆ ತಂದ 73 ನೇ ತಿದ್ದುಪಡಿಯಂತೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಬಲಪಡಿಸಲಾಗಿದೆ.ಗ್ರಾಮ ಪಂಚಾಯತಿಗಳಿಗೆ ಆರ್ಥಿಕ ಶಕ್ತಿ,ಸ್ವಯಮಾಭಿವೃದ್ಧಿಯ ಸಾಮರ್ಥ್ಯ ನೀಡಲಾಗಿದೆ.ಗ್ರಾಮಸಭೆಗಳಿಗೆ ಕಾನೂನಿನ ಬಲ ನೀಡಲಾಗಿದೆ.ಗ್ರಾಮದ ಎಲ್ಲ ನಿರ್ಣಯಗಳು ಗ್ರಾಮಸಭೆಯಲ್ಲಿಯೇ ಆಗಬೇಕು ಎಂದು ಕಾನೂನಿನಲ್ಲಿ ವಿಧಿಸಲಾಗಿದ್ದರೂ ನಮ್ಮ ಗ್ರಾಮಸಭೆಗಳು ನಿರೀಕ್ಷಿತ ಯಶಸ್ಸನ್ನು ಕಾಣುತ್ತಿಲ್ಲ.ಚುನಾಯಿತ ವ್ಯವಸ್ಥೆಯ ಹಿತಾಸಕ್ತಿಗಳ ಸಂಘರ್ಷವೇ ಗ್ರಾಮಸಭೆಗಳು ಪಡೆಯಬೇಕಾಗಿದ್ದ ಬಲ ಪಡೆಯುವಲ್ಲಿ ಹಿನ್ನಡೆ ಅನುಭವಿಸುವ ಕಾರಣ.ಜಾತಿ ಜನಾಂಗಗಳ ಹಿತಾಸಕ್ತಿ,ಸಮುದಾಯಗಳ ಹಿತಾಸಕ್ತಿ,ಚುನಾಯಿತ ಪ್ರತಿನಿಧಿಗಳ ವೈಯಕ್ತಿಕ ಹಿತಾಸಕ್ತಿಗಳು ಗ್ರಾಮಸಭೆಗಳ ಯಶಸ್ಸಿಗೆ ತೊಡರುಗಾಲುಗಳಾಗಿವೆ.

ಸ್ವಾತಂತ್ರ್ಯಾ ಪೂರ್ವದ ಬಹು ಹಿಂದಿನ ಕಾಲದಿಂದಲೂ ಗ್ರಾಮಕಟ್ಟೆಗಳು ಗ್ರಾಮಗಳ ಆಡಳಿತ ಮತ್ತು ಅಭಿವೃದ್ಧಿಯ ನಿರ್ಣಾಯಕ ಕೇಂದ್ರಗಳಾಗಿದ್ದವು.ಬ್ರಿಟಿಷರ ಆಳ್ವಿಕೆಯ ಪೂರ್ವದಲ್ಲಿಯೇ ಈ ದೇಶದಲ್ಲಿ ಪಂಚಾಯತಿಗಳು ಅಸ್ತಿತ್ವದಲ್ಲಿದ್ದವು ಎನ್ನುವುದು ಗಮನಾರ್ಹ.ಆ ಪಂಚಾಯತಿಗಳು ಈಗಿನ ರೀತಿಯ ಔಪಚಾರಿಕ ಆಡಳಿತ ಕೇಂದ್ರಗಳಾಗಿರದೆ ಅನೌಪಚಾರಿಕ ನಿರ್ಣಯ ಕೇಂದ್ರಗಳಾಗಿದ್ದವು.ಆ ಗ್ರಾಮದ ಆಗು- ಹೋಗುಗಳ ಬಗ್ಗೆ ಈ ಕಟ್ಟೆಗಳೇ ನಿರ್ಣಾಯಕ ಕೇಂದ್ರಗಳಾಗಿದ್ದವು ಮತ್ತು ಆ ಕಟ್ಟೆಗಳಿಂದ ಬರುತ್ತಿದ್ದ ತೀರ್ಪುಗಳು ಅಂತಿಮ ತೀರ್ಪುಗಳಾಗಿರುತ್ತಿದ್ದವು.ಗ್ರಾಮಗಳಲ್ಲಿ ಹಿಂದೆ ಆಯಾ ಗ್ರಾಮದೇವತೆಗಳ ಗುಡಿಗಳ ಮುಂದಿನ ಕಟ್ಟೆಗಳೇ ಪಂಚಾಯತಿ ಕಟ್ಟೆಗಳಾಗಿರುತ್ತಿದ್ದವು.ಗ್ರಾಮಗಳಲ್ಲಿ ಈಶ್ವರ,ಬಸವಣ್ಣ,ದುರುಗಮ್ಮ,ಕಾಳಮ್ಮ ,ಬೀರಪ್ಪ ಮೊದಲಾದ ದೇವರ ಗುಡಿಗಳ ಮುಂದಿನ ಕಟ್ಟೆಗಳು ದೇವರ ಕಟ್ಟೆಗಳು ಇಲ್ಲವೆ ಪಂಚಾಯತಿ ಕಟ್ಟೆಗಳಾಗಿ ಕಾರ್ಯನಿರ್ವಹಿಸುತ್ತಿದ್ದವು.ಐದು ಜನ ಪುರಪ್ರಮುಖರ ಗುಂಪು ಪಂಚಾಯತಿ ಆಗಿದ್ದರೆ ಅವರುಗಳಲ್ಲಿ ಒಬ್ಬರು ಪಂಚಾಯತಿ ಮುಖ್ಯಸ್ಥರಾಗಿರುತ್ತಿದ್ದರು.ಸರಪಂಚ,ಅಧ್ಯಕ್ಷ,ಮುಖ್ಯಸ್ಥ ಮೊದಲಾದ ಹೆಸರುಗಳಲ್ಲಿ ಅವರನ್ನು ಕರೆಯಲಾಗುತ್ತಿತ್ತು.ಪಂಚಾಯತಿಗಳ ಸದಸ್ಯರುಗಳಾದ ಇತರ ನಾಲ್ವರು ಪಂಚರುಗಳು ಮತ್ತು ಪಂಚಾಯತಿ ಮುಖ್ಯಸ್ಥರು ಗ್ರಾಮಗಳ ಶ್ರೀಮಂತರು,ಮೇಲ್ವರ್ಗದ ಜನರೇ ಆಗಿರುತ್ತಿದ್ದರು.ಆದರೂ ಆ ಗ್ರಾಮದಲ್ಲಿ ಹೆಚ್ಚಿನ ಜನಸಂಖ್ಯೆಯಲ್ಲಿರುವ ಜನಸಮುದಾಯಗಳಿಂದ ಒಬ್ಬಿಬ್ಬರನ್ನು ಪಂಚರನ್ನಾಗಿ ಆಯ್ಕೆ ಮಾಡಲಾಗುತ್ತಿತ್ತು.ಪಂಚರುಗಳಲ್ಲಿ ದಲಿತರು ಮತ್ತು ಮಹಿಳೆಯರಿಗೆ ಅವಕಾಶ ಇರಲಿಲ್ಲ.ಈ ಕಾರಣದಿಂದಾಗಿಯೇ ಗ್ರಾಮಗಳ ದೇವರ ಕಟ್ಟೆಗಳು ದುರ್ಬಲಗೊಂಡವು ಎನ್ನಬಹುದು.ಸಾಮಾಜಿಕ ಅಸಮಾನತೆ,ಕೆಲವೇ ಜಾತಿಗಳ ಹಿಡಿತದಲ್ಲಿದ್ದ ಕಾರಣದಿಂದ ಸ್ವಾತಂತ್ರ್ಯಾನಂತರದ ದಿನಗಳಲ್ಲಿ ಗ್ರಾಮಕಟ್ಟೆಗಳು ತಮ್ಮ ಅಸ್ತಿತ್ವ ಕಳೆದುಕೊಂಡವು.

‘ ದೇವರ ಕಟ್ಟೆಗಳು’ ಗ್ರಾಮ ಜೀವನವನ್ನು ರೂಪಿಸುತ್ತಿದ್ದವು.ಗೌಡ,ಪಟೇಲ್,ಸಾಹುಕಾರ ,ಶಾನುಭೋಗರುಗಳು ವಂಶಪಾರಂಪರ್ಯವಾಗಿ ಇಲ್ಲವೆ ತಮಗಿರುವ ಪ್ರಭಾವದ ಬಲದಿಂದ ಪಂಚರುಗಳಾಗುತ್ತಿದ್ದರು.ಉಳಿದ ಒಬ್ಬರನ್ನು ಇಲ್ಲದಿದ್ದರೆ ಬ್ರಾಹ್ಮಣ ಸಮುದಾಯ ಇಲ್ಲದ ಗ್ರಾಮಗಳಲ್ಲಿ ಇಬ್ಬರನ್ನು ಮಾತ್ರ ಆ ಗ್ರಾಮದ ಬಲಿಷ್ಟ ಸಮುದಾಯದಿಂದ ಆಯ್ಕೆ ಮಾಡಲಾಗುತ್ತಿತ್ತು.ದಲಿತರು ಬಹುಸಂಖ್ಯಾತರಿದ್ದರೂ ಅವರಿಗೆ ಪಂಚರು ಆಗುವ ಅವಕಾಶ ಇರಲಿಲ್ಲ ,ಪಂಚರು ಆದವರು ಕಟ್ಟೆಯ ಮೇಲೆ ಇಲ್ಲವೆ ಅಗ್ರಭಾಗದಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆಯುತ್ತಿದ್ದರಿಂದ.ಮಹಿಳೆಯರಿಗೆ ಪಂಚರು ಆಗುವುದು ಒತ್ತಟ್ಟಿಗಿರಲಿ ಪಂಚಾಯತಿಗಳ ಸಭೆಗಳಲ್ಲಿ ಪಾಲ್ಗೊಳ್ಳುವ ಅವಕಾಶವೂ ಇರಲಿಲ್ಲ.ಪ್ರತಿ ಮನೆಯ ಯಜಮಾನ ಇಲ್ಲವೆ ಮುಖ್ಯಸ್ಥರು ಪಂಚಾಯತಿ ಕಟ್ಟೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು.ಪಂಚಾಯತಿ ಪ್ರಮುಖ ಅಥವಾ ಪುರಪ್ರಮುಖ ಪಂಚಾಯತಿ ಸೇರುವ ಹಿಂದಿನ ದಿನ ಊರಲ್ಲಿ ‘ ನಾಳೆ ಪಂಚಾಯತಿ ಸೇರಬೇಕು’ ಎಂದು ಡಂಗೂರ ಸಾರಿಸುತ್ತಿದ್ದ.ಪಂಚಾಯತಿ ಕಟ್ಟೆಗಳಾಗಿದ್ದ ಈ ದೇವರ ಕಟ್ಟೆಗಳಲ್ಲಿ ಪಂಚರು ಕಟ್ಟೆಯ ಮೇಲೆ ಕುಳಿತುಕೊಂಡರೆ ಉಳಿದವರು ಕೆಳಗೆ ಅಥವಾ ಅಕ್ಕಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು.ಪಂಚಾಯತಿ ಪ್ರಮುಖ ನಡುವೆ ಕುಳಿತುಕೊಂಡರೆ ಅವನ ಎಡಬಲಗಳಲ್ಲಿ ಆ ಕಡೆ ಇಬ್ಬರು ಈ ಕಡೆ ಇಬ್ಬರು ಪಂಚರು ಕುಳಿತುಕೊಳ್ಳುತ್ತಿದ್ದರು.ಕಟ್ಟೆಯ ಮುಂದೆ ‘ದಂಡಧಾರಿ’ ಗಳಾಗಿ ತಳವಾರರು ನಿಲ್ಲುತ್ತಿದ್ದರು.ತಳವಾರರು ಪರಿಶಿಷ್ಟ ಪಂಗಡ,ಉಪ್ಪಾರ- ಕಬ್ಬಲಿಗ ಜನಾಂಗಗಳಿಗೆ ಸೇರಿದವರು ಆಗಿರುತ್ತಿದ್ದರು.ಕೆಲವು ಗ್ರಾಮಗಳಲ್ಲಿ ದಲಿತ ಸಮುದಾಯದ ವ್ಯಕ್ತಿಗಳು ಸಹ ತಳವಾರರು ಆಗಿರುತ್ತಿದ್ದರು.ಕೈಯಲ್ಲಿ ಬಡಿಗೆ- ಕೋಲುಗಳನ್ನು ಹಿಡಿದು ನಿಲ್ಲುತ್ತಿದ್ದ ತಳವಾರರನ್ನು ಕಂಡು ಪಂಚರ ನಿರ್ಣಯಕ್ಕೆ ವಿರೋಧ ವ್ಯಕ್ತಪಡಿಸುವ ಪ್ರತಿರೋಧ ಇಲ್ಲವೆ ಪ್ರತಿಭಟನೆಯ ಬಾಯಿ ಏಳುತ್ತಿರಲಿಲ್ಲ.

ಪಂಚಾಯತಿ ಪ್ರಾರಂಭ ಆಗುವ ಪೂರ್ವದಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಆ ದೇವರ ಸನ್ನಿಧಿಯಲ್ಲಿ,ದೇವರ ಸಾಕ್ಷಿಯಾಗಿ ಪಂಚಾಯತಿ ನಡೆಸುತ್ತಿದ್ದೇವೆ ಎಂದು ಘೋಷಿಸಲಾಗುತ್ತಿತ್ತು.ದೇವರ ಮೇಲಿನ ಭಯ- ಭಕ್ತಿಗಳು ಜನರು ಗ್ರಾಮದ ಹಿತಾಸಕ್ತಿಯನ್ನು ವಿರೋಧಿಸದಂತೆ ತಡೆಯುತ್ತಿದ್ದವು.ಇಂತಹ ಪಂಚಾಯತಿ ಕಟ್ಟೆಗಳು ಬಹುತೇಕವಾಗಿ ಸಮಷ್ಟಿ ಹಿತವನ್ನೇ ಸಾಧಿಸುತ್ತಿದ್ದವು.ದರ್ಪ- ದೌರ್ಜನ್ಯಗಳಿಗೆ ಅವಕಾಶ ಇರಲಿಲ್ಲ.ಊರಿನ ಜಾತ್ರೆ,ಉತ್ಸವ,ಕೆರೆ – ಕಟ್ಟೆ,ಕುಂಟೆಗಳ ನಿರ್ಮಾಣ ಮೊದಲಾದ ಗ್ರಾಮಕ್ಕೆ ಸಂಬಂಧಿಸಿದ ವಿಚಾರಗಳಿಗಾಗಿ ಪಂಚಾಯತಿಕಟ್ಟೆ ನೆರೆಯುತ್ತಿದ್ದವು.ಊರಿನ ನ್ಯಾಯ ತೀರ್ಮಾನಗಳಿಗಾಗಿಯೂ ಪಂಚಾಯತಿ ಸೇರಿಸಲಾಗುತ್ತಿತ್ತು.ಪಂಚರು ನೀಡುವ ತೀರ್ಮಾನವೇ ಅಂತಿಮವಾಗುತ್ತಿತ್ತು ನ್ಯಾಯ ಪಂಚಾಯತಿಗಳಲ್ಲಿ.ಗುಡಿ,ದೇವಸ್ಥಾನಗಳ ನಿರ್ಮಾಣ,ಚಾವಡಿ ಕಟ್ಟಿಸುವುದು,ಕೆರೆಗಳನ್ನು ಕಟ್ಟಿಸುವ ಕಾರ್ಯಗಳಿಗಾಗಿ ಗ್ರಾಮಸ್ಥರಿಂದ ಹಣ,ದವಸ- ಧಾನ್ಯಗಳನ್ನು ಸಂಗ್ರಹಿಸಲಾಗುತ್ತಿತ್ತಲ್ಲದೆ ಶ್ರಮದಾನಕ್ಕೂ ತಿಳಿಸಲಾಗುತ್ತಿತ್ತು ಪಂಚಾಯತಿ ಕಟ್ಟೆಗಳಲ್ಲಿ.ಪಂಚಾಯತಿ ಕಟ್ಟೆಗಳು ಗ್ರಾಮಗಳ ಸಮಷ್ಟಿ ಹಿತರಕ್ಷಣೆಯ ಕೇಂದ್ರಗಳಾಗಿದ್ದರೆ ಪಂಚರುಗಳು ಗ್ರಾಮದೈವದ ಪ್ರತಿನಿಧಿಗಳಾಗಿ ಊರಹಿತ ಕಾಯುತ್ತಿದ್ದರು.ಸ್ವಾರ್ಥ ಮತ್ತು ಸ್ವಜನ ಪಕ್ಷಪಾತಗಳಿಗಿಂತ ಗ್ರಾಮದ ಸಮಷ್ಟಿ ಹಿತವೇ ಮುಖ್ಯವಾಗುತ್ತಿತ್ತು ಈ ದೇವರುಗಳ ಕಟ್ಟೆಯ ಪಂಚಾಯತಿಗಳಲ್ಲಿ.

ಪಂಚಾಯತಿ ಕಟ್ಟೆಗಳ ಬದಲಾಗಿ ಗೌಡ,ಸಾಹುಕಾರರ ಮನೆಗಳೇ ಆಡಳಿತ ಕೇಂದ್ರಗಳಾದಾಗ ನಿರಂಕುಶ ಆಳ್ವಿಕೆಯ ಕಾಣಿಸಿಕೊಂಡಿತು.ಪರಿಣಾಮವಾಗಿ ಗೌಡ- ಸಾಹುಕಾರರ ದರ್ಪ,ದೌರ್ಜನ್ಯಗಳು ಸಾಮಾನ್ಯ ಸಂಗತಿಗಳಾದವು..ಊರದೈವದಲ್ಲಿದ್ದ ಅಧಿಕಾರ ಕೇಂದ್ರ ಗೌಡ- ಸಾಹುಕಾರರ ಮನೆಗಳಿಗೆ ವರ್ಗಾವಣೆಗೊಂಡಿದ್ದರಿಂದ ಜನಹಿತದ ಕಡೆಗಣನೆಯ ಜೊತೆಗೆ ಸರ್ವಾಧಿಕಾರಿ ಪ್ರವೃತ್ತಿಯ ವ್ಯಕ್ತಿಗಳು ಬೆಳೆದು ಬರಲು ಕಾರಣವಾಯಿತು.ಪಂಚಾಯತಿ ಬದಲಾಗಿ ಗೌಡ ಅಥವಾ ಸಾಹುಕಾರ ಹೇಳಿದ್ದೇ ಕಾನೂನು ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡು ಗ್ರಾಮಸಾಮರಸ್ಯವು ಹಾಳಾಗಿ ಶಾಂತಿ,ನೆಮ್ಮದಿಯಿಂದ ಬದುಕಬೇಕಿದ್ದ ಜನರು ಭಯ- ಆತಂಕಗಳಲ್ಲಿ ಬದುಕುವಂತಾಯಿತು.ಇಂತಹ ಸರ್ವಾಧಿಕಾರಿ ಪುರಪ್ರಮುಖರು ಕಂಡವರ ಮನೆಯ ಹೆಂಗಸರ ಶೀಲಭಂಗಕ್ಕೂ ಪ್ರಯತ್ನಿಸುತ್ತಿದ್ದರು.ಅಂತಹ ಸಂದರ್ಭದಲ್ಲಿ ಅವಮಾನಿತ ಕುಟುಂಬದವರು ಗೌಡ- ಸಾಹುಕಾರರುಗಳು ಕೊಚ್ಚಿ,ಕೊಲೆಮಾಡಿದ ಪ್ರಕರಣಗಳೂ ಇವೆ.ಸಮುದಾಯದ ಹಿಡಿತ ತಪ್ಪಿದ ಅಧಿಕಾರ ವ್ಯಕ್ತಿ ಅಥವಾ ಮನೆಕೇಂದ್ರಿತವಾದಾಗ ಏನೆಲ್ಲ ತೊಂದರೆ- ಅನಾಹುತಗಳನ್ನು ಎದುರಿಸಬಹುದೋ ಅದನ್ನೂ ಅನುಭವಿಸಿದೆ ಅಸಹಾಯತೆಯಲ್ಲಿ ಹಿಂದಿನ ಗ್ರಾಮಸಮುದಾಯ. ಈ ಎಲ್ಲ ಅನುಭವಗಳ ಹಿನ್ನೆಲೆಯಲ್ಲಿ ಸಂವಿಧಾನದ ಆಶಯಗಳಾದ ಸಮಾನತೆ,ಸರ್ವೋದಯ,ಸಾಮಾಜಿಕ ನ್ಯಾಯ,ಕಾನೂನಾತ್ಮಕ ಪರಿಹಾರಗಳ ಆಧಾರದ ಮೇಲೆ ದೇಶದಲ್ಲಿ ಇಂದು ಪಂಚಾಯತ್ ರಾಜ್ ವ್ಯವಸ್ಥೆ ಮತ್ತು ಅವಕಾಶಗಳ ಸಮಾನತೆ,ಸರ್ವೋದಯ ತತ್ತ್ವದ ಸಾಕಾರ ಕೇಂದ್ರಗಳಾಗಿ ಗ್ರಾಮಸಭೆಗಳು ರೂಪುಗೊಂಡಿವೆ.

ಮುಕ್ಕಣ್ಣ ಕರಿಗಾರ
ಮೊ;94808 79501

03.10.2021