ಬಡವರ ಹಿರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧ: ಸಂಸದ ರಾಜಾ ಅಮರೇಶ್ವರ ನಾಯಕ

ಮಾನ್ವಿ:
ದೇಶದ ಬಡವರು, ರೈತರು ಹಾಗೂ ಕೂಲಿಕಾರರ ಹಿತರಕ್ಷಣೆಗೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಸಂಸದ ರಾಜಾ ಅಮರೇಶ್ವರ ನಾಯಕ ಹೇಳಿದರು. ಶನಿವಾರ ಪಟ್ಟಣದ ಕೋನಾಪುರಪೇಟೆಯಲ್ಲಿ ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಬಡ ಫಲಾನುಭವಿಗಳಿಗೆ ಉಚಿತ 5ಕೆಜಿ ಅಕ್ಕಿ ಕಿಟ್‌ಗಳನ್ನು ವಿತರಿಸಿ ಅವರು ಮಾತನಾಡಿದರು. ಸರ್ಕಾರದ ಸೌಲಭ್ಯಗಳು ನೇರವಾಗಿ ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಸಂಸದರು ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳನ್ನು ಒಳಗೊಳ್ಳುವಂತೆ ಮಾಡುವ ಮೂಲಕ ಯೋಜನೆಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಉಜ್ವಲಾ, ಜಲಧಾರೆ ಸೇರಿದಂತೆ ಹಲವು ಯೋಜನೆಗಳನ್ನು ಗ್ರಾಮೀಣ ಜನರ ಕಲ್ಯಾಣಕ್ಕಾಗಿ ಜಾರಿಗೊಳಿಸಲಾಗಿದೆ. ಜನಧನ್ ಬ್ಯಾಂಕ್ ಖಾತೆ ಮೂಲಕ ನೇರವಾಗಿ ರೈತರು ಹಾಗೂ ನರೇಗಾ ಕೂಲಿಕಾರ್ಮಿಕರಿಗೆ ಹಣ ಪಾವತಿಸಲಾಗುತ್ತಿದೆ’ ಎಂದರು.
‘ಪ್ರಧಾನಮAತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ಅಡಿಯಲ್ಲಿ ಜಿಲ್ಲೆಯ ಸುಮಾರು 5ಲಕ್ಷ ಬಡ ಪಡಿತರಚೀಟಿದಾರಿಗೆ ತಲಾ 5ಕೆಜಿ ಅಕ್ಕಿ ಪ್ರತಿ ತಿಂಗಳು ಉಚಿತವಾಗಿ ನೀಡಲಾಗುವುದು. ರಾಜ್ಯ ಸರ್ಕಾರದ 5ಕೆಜೆ ಸೇರಿ ಒಟ್ಟು 10ಕೆಜಿ ಅಕ್ಕಿ ಸಿಗಲಿದೆ. ಬಡವರು ಹಸಿವಿನಿಂದ ಬಳಲಬಾರದು ಎನ್ನುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಗಿದೆ. ಗಾಂಧೀಜಿಯವರು ಕಂಡಿದ್ದ ಗ್ರಾಮ ಸ್ವರಾಜ್ಯ ಕನಸು ನನಸಾಗಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಶ್ರಮಿಸುತ್ತಿದ್ದಾರೆ’ ಎಂದು ಅವರು ವಿವರಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹಾದ್ದೂರ್ ಶಾಸ್ತ್ರೀಜಿ ಜಯಂತಿ ಪ್ರಯುಕ್ತ ನೇಕಾರರು ಸೇರಿದಂತೆ ಇತರ ಗುಡಿಕೈಗಾರಿಕೆಯಲ್ಲಿ ತೊಡಗಿಸಿಕೊಂಡ ಶ್ರಮಿಕರನ್ನು ಸನ್ಮಾನಿಸಲಾಯಿತು.
ಮಾಜಿ ಶಾಸಕರಾದ ಗಂಗಾಧರನಾಯಕ ಹಾಗೂ ಬಸನಗೌಡ ಬ್ಯಾಗವಾಟ, ರಾಜ್ಯ ಖಾದಿ ಗ್ರಾಮೋದ್ಯೋಗ ಮಂಡಳಿಯ ಮಾಜಿ ಅಧ್ಯಕ್ಷ ಹರವಿ ಶಂಕರಗೌಡ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪಗೌಡ ನಕ್ಕುಂದಿ, ತಾಲ್ಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ವೀರೇಶನಾಯಕ ಬೆಟ್ಟದೂರು, ಮುಖಂಡರಾದ ಕೆ.ಬಸವಂತಪ್ಪ, ಡಾ.ಶರಣಪ್ಪ ಬಲ್ಲಟಗಿ, ಎಸ್.ತಿಮ್ಮಾರೆಡ್ಡಿ ಭೋಗಾವತಿ, ಮಲ್ಲನಗೌಡ ನಕ್ಕುಂದಿ, ಮ್ಯಾಕಲ್ ಅಯ್ಯಪ್ಪ ನಾಯಕ, ನವೀನ್ ನಾಡಗೌಡ, ಉಮೇಶ ಸಜ್ಜನ್, ಮೌಲಾಸಾಬ ಗಣದಿನ್ನಿ, ಗುರುಗೌಡ ಕಣ್ಣೂರು, ಕೆ.ನಾಗಲಿಂಗಸ್ವಾಮಿ, ಕೆ.ಎಂ.ಶಿವಲಿAಗಯ್ಯ ಸ್ವಾಮಿ, ಶರಣಯ್ಯ ಸ್ವಾಮಿ, ಪಿ.ಗಿರಿನಾಯಕ, ಚಂದ್ರು ಜಾನೇಕಲ್, ಮೋಹನ್ ದಾನಿ, ಕೆ.ವೆಂಕಟೆಶ, ಕುಮಾರಸ್ವಾಮಿ ಮೇದಾ ಹಾಗೂ ಬಿಜೆಪಿ ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಕಾರ್ಯಕ್ರಮಕ್ಕೆ ಮೊದಲು ಪಟ್ಟಣದ ಪಂಪಾ ಉದ್ಯಾನದಲ್ಲಿ ಗಣ್ಯರು ಮಹಾತ್ಮ ಗಾಂಧೀಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ನಂತರ ಬಿಜೆಪಿ ವತಿಯಿಂದ ಸಸಿ ನೆಡುವ ಕಾರ್ಯಕ್ರಮ ಹಾಗೂ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.