ಕೆಂಪು ದಾಸವಾಳ ನೋಡಿದಾಗೊಮ್ಮೆ ನಿನ್ನ ನೆನಪು
ನೊಂದ ಮನ ತೊಳಲಾಡಿದಾಗೊಮ್ಮೆ ನಿನ್ನ ನೆನಪು
ದುಗುಡಗಳ ಮುತ್ತಿಗೆಗೆ ಎದೆಗೂಡು ಕುಲುಮೆಯಂತೆ
ವಿಹ್ವಲಗೊಂಡು ಚಡಪಡಿಸಿದಾಗೊಮ್ಮೆ ನಿನ್ನ ನೆನಪು
ಕಣ್ಣೆದುರಿನ ಸಂಪಿಗೆಯ ಮರ ನೋಡಿ ಅಣಕಿಸುತಿದೆ
ಕೋಗಿಲೆ ಇಂಪಾಗಿ ಹಾಡಿದಾಗೊಮ್ಮೆ ನಿನ್ನ ನೆನಪು
ಪ್ರಣಯಿಗಳು ಪಿಸುಮಾತಲಿ ಮಗ್ನರಾದುದ ಕಂಡೆ
ಮೆಲುನುಡಿ ಊಹಿಸಿಕೊಂಡಾಗೊಮ್ಮೆ ನಿನ್ನ ನೆನಪು
ಭೋರ್ಗರೆವ ಕಡಲುಕ್ಕಿ ಕಿನಾರೆಗೆ ಮುತ್ತಿಡುತ್ತಿದೆ ಗಿರಿ
ಸುಳಿಯಪ್ಪುಗೆ ನೆನಪಿಸಿಕೊಂಡಾಗೊಮ್ಮೆ ನಿನ್ನ ನೆನಪು
