ಗ್ರಾಮರಾಜ್ಯ ಮಂಟಪ : ಗಾಂಧಿ ಜಯಂತಿಯಂದು ಬಳಿಚಕ್ರ ಗ್ರಾಮ ಪಂಚಾಯತಿಯ ಗ್ರಾಮಸಭೆಯಲ್ಲಿ ಪಾಲ್ಗೊಂಡ ಅನುಭವ -ಮುಕ್ಕಣ್ಣ ಕರಿಗಾರ

ಲೇಖಕರು: ಮುಕ್ಕಣ್ಣ ಕರಿಗಾರ

ಕರ್ನಾಟಕ ಸರಕಾರದ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ನಿರ್ದೇಶನದಂತೆ ಮಹಾತ್ಮ ಗಾಂಧೀಜಿಯವರ 153 ನೇ ಜಯಂತಿಯ ಅಂಗವಾಗಿ ಅಕ್ಟೋಬರ್ 02,2021ರಂದು ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿ ‘ ವಿಶೇಷ ಗ್ರಾಮಸಭೆಗಳನ್ನು’ ಆಯೋಜಿಸಲಾಗಿದೆ.ಯಾದಗಿರಿ ಜಿಲ್ಲೆಯಲ್ಲಿಯೂ ಸಹ ಇಂದು ‘ ವಿಶೇಷ ಗ್ರಾಮಸಭೆಗಳ’ ನ್ನು ಆಯೋಜಿಸಲಾಗಿದ್ದು ನಮ್ಮ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರಾದ ಶ್ರೀಮತಿ ಶಿಲ್ಪಾ ಶರ್ಮಾ ಅವರು ಮತ್ತು ನಾನು ಸೇರಿದಂತೆ ಜಿಲ್ಲಾ ಪಂಚಾಯತಿಯ ಹಿರಿಯ ಅಧಿಕಾರಿಗಳು ಜಿಲ್ಲೆಯ ಆರು ತಾಲೂಕುಗಳ ಒಂದೊಂದು ಗ್ರಾಮ ಪಂಚಾಯತಿಗೆ ಒಬ್ಬೊಬ್ಬರಂತೆ ವಿಶೇಷಗ್ರಾಮಸಭೆಗಳಲ್ಲಿ ಪಾಲ್ಗೊಂಡಿದ್ದೇವೆ.

ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತಿಯ ಗ್ರಾಮಸಭೆಯಲ್ಲಿ ನಾನು ಪಾಲ್ಗೊಂಡಿದ್ದೆ.ಪ್ರತಿವರ್ಷವೂ ನಾನು ನಾಲ್ಕೈದು ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳುವುದರಿಂದ ಮತ್ತು ಕಳೆದ ಇಪ್ಪತ್ತೆರಡು ವರ್ಷಗಳಿಂದ ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿರುವ ನನಗೆ ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳುವುದು ಖುಷಿಯ ಸಂಗತಿ.ಸರಕಾರದ ಮೇಲಾಧಿಕಾರಿಗಳ ಸಭೆ, ವಿಡಿಯೋ ಸಂವಾದದ ಕಾರ್ಯಕ್ರಮಗಳಲ್ಲಿ ಸಿದ್ಧ ಉತ್ತರ ನೀಡಿ,ಸೈ ಎನ್ನಿಸಿಕೊಳ್ಳಬಹುದು.ಆದರೆ ಗ್ರಾಮಸಭೆಗಳಲ್ಲಿ ಹಾಗಲ್ಲ,ಜನರ ಅನಿರೀಕ್ಷಿತ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ ! ನೀವು ಯಾರು,ಎಂತಹ ದೊಡ್ಡ ಅಧಿಕಾರಿಗಳು ಎನ್ನುವುದು ಗ್ರಾಮೀಣ ಜನರಿಗೆ ಮುಖ್ಯವಲ್ಲ; ಅವರ ಪ್ರಶ್ನೆಗಳಿಗೆ ಸಮಾಧಾನಕರ ಉತ್ತರ ನೀಡಲೇಬೇಕು.ಇಲ್ಲದಿದ್ದರೆ ಕೆಲವರು ಗಲಾಟೆ ಮಾಡಿ ಗೊಂದಲ ಎಬ್ಬಿಸುತ್ತಾರೆ.ಇಂತಹ ಕಾರಣಗಳಿಂದ ನಮ್ಮ ಅಧಿಕಾರಿಗಳಿಗೆ ಗ್ರಾಮಸಭೆಗಳು ಎಂದರೆ ಆಗಿಬರುವುದಿಲ್ಲ.ಆದರೆ ಗ್ರಾಮೀಣ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ನಾನು ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳುವುದು ಎಂದರೆ ನಮ್ಮ ಅನುಭವಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ,ನಮ್ಮ ಲೋಪದೋಷಗಳನ್ನು ತಿದ್ದುಕೊಳ್ಳುವ ಮತ್ತು ನಮ್ಮನ್ನು ಮತ್ತಷ್ಟು ಜನಮುಖಿಯಾಗಿಸಿಕೊಳ್ಳುವ ಪ್ರಯತ್ನ ಎಂದು ತಿಳಿದಿದ್ದೇನೆ.ಗ್ರಾಮಸಭೆಗಳಲ್ಲಿ ಜನರು ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ ಎನ್ನುವ ಲೆಕ್ಕಾಚಾರದೊಂದಿಗೆ ನಾನು ಗ್ರಾಮಸಭೆಗಳಲ್ಲಿ ಪಾಲ್ಗೊಳ್ಳುತ್ತೇನೆ. ಮೇಲಾಧಿಕಾರಿಗಳ ಸಭೆ,ವಿ ಸಿ ಗಳನ್ನು ಎದುರಿಸುವುದು ಸುಲಭ; ಆದರೆ ಗ್ರಾಮಸಭೆಗಳನ್ನು ಎದುರಿಸುವುದು ಅಷ್ಟು ಸುಲಭದ ಮಾತಲ್ಲ.ನೆರೆದಿರುವ ನೂರಾರು ಜನರು ನೂರಾರು ತರಹದ ಪ್ರಶ್ನೆಗಳನ್ನು ಕೇಳುತ್ತಾರೆ.ನಾವು ಅಧಿಕಾರಿಗಳು ಎನ್ನುವ ಪೊಗರು ಬಿಟ್ಟು ಜನರ ಪ್ರಶ್ನೆಗಳಿಗೆ ಅವರಿಗೆ ಮನವರಿಕೆ ಆಗುವ ರೀತಿಯಲ್ಲಿ ಉತ್ತರಿಸಬೇಕಾಗುತ್ತದೆ.ಉತ್ತರಿಸಲಾಗದವರು ಗೊಂದಲ ಎಬ್ಬಿಸಿಕೊಂಡು ಗ್ರಾಮಸಭೆಗಳನ್ನು ಮುಂದೂಡಿ ಬರುತ್ತಾರೆ.ಮುಂದಿನ ಗ್ರಾಮಸಭೆಗೆ ಅಂತಹ ಅಧಿಕಾರಿಗಳು ಆ ಗ್ರಾಮಕ್ಕೆ ಹೋಗುವುದಿಲ್ಲ ಎನ್ನುವುದೂ ಗಮನಾರ್ಹ.

ಇಂದು ಬೆಳಿಗ್ಗೆ ನಿಗದಿತ ಒಂಬತ್ತುವರೆ ಘಂಟೆಗೆ ಮುಂಚೆಯೇ ನಾನು ಬಳಿಚಕ್ರದಲ್ಲಿದ್ದೆ.ಬಳಿಚಕ್ರ ಗ್ರಾಮವು ದೊಡ್ಡ ಗ್ರಾಮವಾಗಿರುವುದರಿಂದ ಆ ಗ್ರಾಮದಲ್ಲಿಯೇ ಗ್ರಾಮ ಪಂಚಾಯತಿ ಇದೆ.ಗ್ರಾಮ ಪಂಚಾಯತಿ ಕಟ್ಟಡದ ಬಳಿಯೇ ಇರುವ ‘ಬಸವಣ್ಣನ ಕಟ್ಟೆ’ ಯಲ್ಲಿ ಗ್ರಾಮ ಸಭೆಯನ್ನು ಆಯೋಜಿಸಲಾಗಿತ್ತು.ಬಳಿಚಕ್ರಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಫಾತಿಮಾಬಿ ಅವರು ಆಸಕ್ತಿಯಿಂದಲೇ ಗ್ರಾಮಸಭೆಯಲ್ಲಿ ಪಾಲ್ಗೊಂಡಿದ್ದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜು ಮೇಟಿ ಅವರು ಸ್ವಾಗತದೊಂದಿಗೆ ಕಾರ್ಯಕ್ರಮ ಪ್ರಾರಂಭಿಸಿ,ವಿಶೇಷ ಗ್ರಾಮಸಭೆಯನ್ನು ಆಯೋಜಿಸಿದ್ದ ಉದ್ದೇಶ ತಿಳಿಸಿ ನನಗೆ ಮೈಕ್ ಹಸ್ತಾಂತರಿಸಿದರು ಮಾತನಾಡಲು.

ಅಕ್ಟೋಬರ್ ಎರಡರಂದು ಗಾಂಧಿ ಜಯಂತಿಯ ಅಂಗವಾಗಿ ಆಯೋಜಿಸಿರುವ ವಿಶೇಷ ಗ್ರಾಮಸಭೆಗಳ ಬಗ್ಗೆ ಪ್ರಸ್ತಾಪಿಸಿತ್ತ ಗ್ರಾಮರಾಜ್ಯ ನಿರ್ಮಾಣದಲ್ಲಿ ಗ್ರಾಮಸಭೆಗಳ ಬಗ್ಗೆ ವಿವರಿಸಿದ ನಾನು ಇಂದಿನಿಂದ ‘ ಮನೆಮನೆಗೆ ಉದ್ಯೋಗ ಖಾತ್ರಿ ಅಭಿಯಾನ’ಪ್ರಾರಂಭಿಸುವ ಬಗ್ಗೆ ಮಾತನಾಡಿದೆ.ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಮುಂದಿನವರ್ಷದ ಕಾಮಗಾರಿಗಳ ಗುಚ್ಛಕ್ಕಾಗಿ ಈ ವರ್ಷದ ಗಾಂಧಿ ಜಯಂತಿಯಂದೇ ಚಾಲನೆ ನೀಡಲಾಗುತ್ತದೆ.ಇದು ಪ್ರತಿವರ್ಷ ನಡೆದುಕೊಂಡು ಬಂದಿರುವ ಪದ್ಧತಿ ಮತ್ತು ಉದ್ಯೋಗ ಖಾತ್ರಿ ಯೋಜನೆಯ ನಿಯಮಗಳಂತೆ ಕಡ್ಡಾಯ ಕೂಡ.ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಳೆದ ಹತ್ತು ವರ್ಷಗಳಿಂದ ಆಸಕ್ತಿಯಿಂದ ತೊಡಗಿಸಿಕೊಂಡಿರುವ ನನಗೆ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಭಾಷಣ ಬಿಗಿಯುವುದೆಂದರೆ ಖುಷಿಯ ಸಂಗತಿ( ನಾನು ಉತ್ತಮ ಭಾಷಣಕಾರನಲ್ಲದಿದ್ದರೂ).ಎರಡುದಶಕಗಳಿಗೂ ಮಿಕ್ಕು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ನನಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಅನುಷ್ಠಾನಗೊಳಿಸಿದ ಮತ್ತು ಅನುಷ್ಠಾನಗೊಳಿಸುತ್ತಿರುವ ನೂರಾರು ಜನಪರ ಯೋಜನೆಗಳಲ್ಲಿ ‘ಉದ್ಯೋಗ ಖಾತ್ರಿ ಯೋಜನೆ’ ತುಂಬ ಇಷ್ಟದ ಯೋಜನೆ.ಗ್ರಾಮೀಣ ಪ್ರದೇಶದ ಬಡವರು,ರೈತರು,ದಲಿತರು ಮತ್ತು‌ ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಆಸರೆಯಾಗುತ್ತಿರುವ ಯೋಜನೆ ಇದು ಎನ್ನುವ ಕಾರಣದಿಂದ ಗ್ರಾಮೀಣ ಪ್ರದೇಶದ ಜನರ ಅಭ್ಯುದಯ- ಅಭಿವೃದ್ಧಿಗಳಲ್ಲಿ ಪ್ರಾಮಾಣಿಕ ಕಾಳಜಿ ಮತ್ತು ಕಳಕಳಿಗಳು ಇರುವ ನಾನು ಉಪಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ ಬಹುತೇಕ ಜಿಲ್ಲೆಗಳಲ್ಲಿ ಉದ್ಯೋಗಖಾತ್ರಿ ಯೋಜನೆಯ ಜಿಲ್ಲಾ ನೋಡಲ್ ಅಧಿಕಾರಿ ಆಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದೇನೆ.ಕೆಲವೊಮ್ಮೆ ನನ್ನ ಮೇಲಾಧಿಕಾರಿಗಳು ‘ ಉದ್ಯೋಗ ಖಾತ್ರಿ ಒಂದೇ ಅಲ್ಲ ಜಿಲ್ಲಾ ಪಂಚಾಯತಿಯ ಕಾರ್ಯಕ್ರಮಗಳಲ್ಲಿ’ ಎಂದು ಆಕ್ಷೇಪ ಎತ್ತುವ ಮಟ್ಟಿಗೆ ನಾನು ಉದ್ಯೋಗ ಖಾತ್ರಿಯಲ್ಲಿ ಆಸಕ್ತಿಯಿಂದ ತೊಡಗಿಸಿಕೊಂಡು ದುಡಿದಿದ್ದೇನೆ.ಗ್ರಾಮೀಣ ಪ್ರದೇಶದ ಬಡಕುಟುಂಬದಿಂದ ಬಂದ ನನಗೆ ಗ್ರಾಮೀಣ ಭಾರತದ ಬಡವರ ಬವಣೆ- ಸಂಕಷ್ಟಗಳ ಅರಿವು ಇದೆ.ಮಧ್ಯವರ್ತಿಗಳು,ದಲ್ಲಾಳಿಗಳು ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿರುವ ಕಟು ಸತ್ಯವೂ ಗೊತ್ತಿದೆ.ಪ್ರಭಾವಿಗಳು ಜನಹಿತಕ್ಕಿಂತ ಮುಖ್ಯವಾಗಿ ತಮ್ಮ ಅನುಯಾಯಿಗಳ ಹಿತವೇ ಮುಖ್ಯ ಎನ್ನುವ ಪ್ರಜಾಪ್ರಭುತ್ವ ವಿರೋಧಿ ನಿಲುವನ್ನೇ ತಮ್ಮ ಅಧಿಕಾರದ ಸಾರ್ಥಕತೆ ಎಂದು ಭಾವಿಸಿರುವ ಸಂಗತಿಯೂ ಗೊತ್ತಿದೆ.ಈ ಎಲ್ಲ ಸಮಸ್ಯೆಗಳು,ಅಡ್ಡಿ- ಆತಂಕಗಳ ನಡುವೆಯೂ ನಾನು ಗ್ರಾಮೀಣ ಬಡವರ ಪರವಾದ ನನ್ನ ಬದ್ಧತೆಯಿಂದ ಉದ್ಯೋಗಖಾತ್ರಿಯೋಜನೆಯನ್ನು ನಿರ್ಭೀತಿಯಿಂದ ಅನುಷ್ಠಾನಗೊಳಿಸಿದ್ದೇನೆ.ಪ್ರಭಾವಿಗಳೊಂದಿಗೆ ಕೈಜೋಡಿಸಿ ಬಡವರ ಅನ್ನ ಕಸಿದುಕೊಂಡವರನ್ನು ನಿರ್ದಾಕ್ಷಿಣ್ಯವಾಗಿ ದಂಡಿಸಿದ್ದೇನೆ.ಹೀಗಾಗಿ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಭಾಷಣ ಮಾಡುವ,ಉಪದೇಶ ಬಿಗಿಯುವ ನೈತಿಕ ಹಕ್ಕು ನನಗಿದೆ ಎಂದು ಭಾವಿಸಿದ್ದೇನೆ.

ಬಳಿಚಕ್ರ ಗ್ರಾಮದ ಗ್ರಾಮಸಭೆಯಲ್ಲಿ ಕೂಡ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಅದರಿಂದ ಗ್ರಾಮೀಣ ಪ್ರದೇಶದ ಬಡವರಿಗೆ,ಕೂಲಿಕಾರರಿಗೆ ಮತ್ತು ದಲಿತ ಸಮುದಾಯಗಳಿಗೆ ಆಗುತ್ತಿರುವ ಅನುಕೂಲಗಳ ಬಗ್ಗೆ ವಿವರಿಸತೊಡಗಿದೆ.ಗುರುವಪ್ಪ ಎ‌ನ್ನುವ ವ್ಯಕ್ತಿ ಒಬ್ಬರು ಎದ್ದು ಆಕ್ಷೇಪಿಸತೊಡಗಿದರು.ತಮ್ಮ ಜೊತೆ ಇತರರು ಮಾತನಾಡಬೇಕು ಎಂದು ಜನರತ್ತ ನೋಡುತ್ತ ‘ ಏನಪ್ಪ ಹೌದೋ ಅಲ್ಲ,ಹೇಳ್ರಿ ನೀವು’ ಎನ್ನುತ್ತ ನೆರೆದಿದ್ದ ಜನರನ್ನು ಪ್ರಚೋದಿಸಿದರು.ಅವರ ಪ್ರಚೋದನೆಯ ಮಾತುಗಳಿಂದ ಉತ್ತೇಜಿತರಾದ ಹತ್ತಾರು ಜನರು ಏಕಕಾಲಕ್ಕೆ ಮಾತನಾಡತೊಡಗಿದ್ದರಿಂದ ಗ್ರಾಮಸಭೆಯಲ್ಲಿ ಗೊಂದಲ ಉಂಟಾಯಿತು.ಅವರೆಲ್ಲರನ್ನು ಉದ್ದೇಶಿಸಿ ನಾನು ಹೇಳಿದೆ ‘ ನಿಮ್ಮ ಸಮಸ್ಯೆ ಏನೇ ಇದ್ದರೂ ಒಬ್ಬೊಬ್ಬರಾಗಿ ಮಾತನಾಡಿ.ನಾನು ಎಲ್ಲರ ಪ್ರಶ್ನೆಗಳಿಗೂ ಉತ್ತರಿಸುತ್ತೇನೆ.ತಾಸಲ್ಲ,ಎರಡು ಮೂರು ತಾಸುಗಳು ಆದರೂ ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಿಯೇ ಹೋಗುತ್ತೇನೆ.ಮೊದಲು ನನ್ನ ಭಾಷಣ ಕೇಳಿ,ಆಮೇಲೆ ಪ್ರಶ್ನೆಗಳನ್ನು ಕೇಳಿ’ ಎಂದೆ.’ ಈತ ಮೊಂಡಗಿರಾಕಿ’ ಎಂದುಕೊಂಡರೋ ಏನೋ.ಅಂತೂ ಸುಮ್ಮನಾಗಿ ನನ್ನ ಭಾಷಣ ಕೇಳಿದರು.ನಂತರ ನಾನೂ ಅವರ ಸಮಸ್ಯೆಗಳನ್ನು ಕೇಳಿದೆ.ಅವರ ಸಮಸ್ಯೆ ಏನು ಎಂದರೆ -ಬಳಿಚಕ್ರಗ್ರಾಮದಲ್ಲಿ ಸಾಕಷ್ಟು ಜನರು ರೈತರಿದ್ದು ಉದ್ಯೋಗ ಖಾತ್ರಿಯೋಜನೆಯಡಿ ಕೆಲಸ ಮಾಡುವವರು ತಮ್ಮ ಹೊಲಗದ್ದೆಗಳಲ್ಲಿ ಕೆಲಸಕ್ಕೆ ಬರುತ್ತಿಲ್ಲ.ನಾವು ನಾಲ್ಕುನೂರು ರೂಪಾಯಿಗಳ ಕೂಲಿ ಕೊಟ್ಟರೂ ಕೆಲಸಕ್ಕೆ ಬರುತ್ತಿಲ್ಲ ಜನರು.ಆದ್ದರಿಂದ ನೀವು ರೈತರ ಬಿತ್ತು ಬೆಳೆಯ ಸೀಸನ್ ಬಿಟ್ಟು ಕೂಲಿಕಾರರಿಗೆ ಕೆಲಸ ಕೊಡಿ ಎನ್ನುವುದು.ಈ ಪ್ರಶ್ನೆ ಸಾಮಾನ್ಯ ಪ್ರಶ್ನೆ ಆಗಿದೆ ಉದ್ಯೋಗ ಖಾತ್ರಿ ಯೋಜನೆ ಬಂದಬಳಿಕ.ಕೊಪ್ಪಳದಲ್ಲಿ,ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತು ಬಳ್ಳಾರಿಯಲ್ಲೂ ಕೂಡ ನಾನು ಈ ಪ್ರಶ್ನೆ ಎದುರಿಸಿದ್ದೇನೆ.ಇದು ಬದಲಾಗುತ್ತಿರುವ ಗ್ರಾಮೀಣ ಜನಜೀವನದ ಸಂಕೇತ. ಬಳಿಚಕ್ರ ಗ್ರಾಮದ ಮತ್ತೆ ಕೆಲವರ ಆಕ್ಷೇಪಗಳು ‘ ಉದ್ಯೋಗ ಖಾತ್ರಿ ಕೆಲಸ ಬರಿ ಬೋಗಸ್’ ‘ ನಾಲ್ಕುಪುಟ್ಟಿ ಮಣ್ಣು ಹಾಕ್ತಾರ ಬರ್ತಾರ ಮುಗೀತು; ದುಡ್ಡು ಎಣಿಸ್ತಾರ’. ‘ ಎರಡು ಮೂರು ತಾಸು ಕೆಲಸ ಮಾಡಿ ದುಡ್ಡು ಎಣಿಸೋ ಮಂದಿ ಮೈಮುರ್ದು ದುಡಿಯೋದ್ನ ಮರತಾರ’.’ ನಾವು ರೈತರು ನಮ್ಮ ಹೊಲಮನ್ಯಾಗ ನಾವೇ ಕೆಲ್ಸ ಮಾಡೋ ಪರಿಸ್ಥಿತಿ ಬಂದಾದ’.’ ಹೀಂಗ ಆದ್ರ ರೈತ್ರು ಹೊಲಮನಿ ಮಾರೋಗತಿ ಬರ್ತದ’

ಎಲ್ಲರ ಮಾತುಗಳನ್ನು ಸಮಾಧಾನದಿಂದ ಆಲಿಸಿದ ನಾನು ಅವರಿಗೆ ಕೆಲವು ಪ್ರಶ್ನೆಗಳಿಗೆ ಕೇಳಿದೆ.’ ನೀವು ವರ್ಷದ ಮುನ್ನೂರಾ ಅರವತ್ತೈದು ದಿನಗಳ ಕೆಲಸ ಕೊಡ್ತಿರಾ ಕೂಲಿಕಾರರಿಗೆ? ಹೆಣ್ಣಾಳು ಗಂಡಾಳಿಗೆ ನಾಲ್ಕುನೂರು ರೂಪಾಯಿ ಕೂಲಿ ಕೊಡುತ್ತೀರಾ? ಕುಂಟರು,ಕುರುಡರು,ವಯಸ್ಸಾದವರಿಗೆ ಕೆಲಸ ಕೊಡುತ್ತೀರಾ? ತಿರುಗಿ ಅವರಿಗೇ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ನನ್ನನ್ನು ಕಂಡು ಸಭೆಯಲ್ಲಿದ್ದವರಿಗೆ ಏನು ಅನ್ನಿಸಿತೋ ಅಂತೂ ಸುಮ್ಮನಾದರು.ಅವರನ್ನು ಉದ್ದೇಶಿಸಿ ನಾನು ಹೇಳಿದ್ದು; ‘ ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿಯುವ ಹೆಣ್ಣು ಮಕ್ಕಳು ಗಂಡು ಮಕ್ಕಳಿಗೂ ಎಲ್ಲರಿಗೂ ತಾರತಮ್ಯ ಇಲ್ಲದೆ ಇನ್ನೂರ ಎಂಬತ್ತೊಂಬತ್ತು ರೂಪಾಯಿ ಕೂಲಿ ನೀಡಲಾಗುತ್ತದೆ.ಕೂಲಿಯ ಹಣ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಆಗುತ್ತದೆ.ಯಾವ ದಲ್ಲಾಳಿಗಳಿಗೂ ನಯಾಪೈಸೆ ಕೊಡಬೇಕಿಲ್ಲ.ಅಂಗವಿಕಲರಿಗೂ ಅವರ ಯೋಗ್ಯತಾನುಸಾರ ಕೆಲಸ ಕೊಡಲಾಗುತ್ತದೆ.ಊರಲ್ಲಿ ಮಳೆಗಾಲ,ಬಿತ್ತನೆ ಕಾಲದಲ್ಲಿ ಮಾತ್ರ ಕೆಲಸ ಕೊಡುತ್ತೀರಿ.ಬಡವರು ದುಡಿಯಲು ಪರ ಊರುಗಳಿಗೆ ಗುಳೆ ಹೋಗಬೇಕಾಗುತ್ತದೆ.ಅವರ ಮಕ್ಕಳ ಶಿಕ್ಷಣ ಯಾರ ಜವಾಬ್ದಾರಿ? ಅವರ ಮನೆಗಳಲ್ಲಿ ಹೆಂಡಿರು ಮಕ್ಕಳುಗಳಿಗೆ ಸುಸ್ತಿ ಆದರೆ ಯಾರು ನೋಡುತ್ತಾರೆ? ಈ ಎಲ್ಲ ಕಾರಣಗಳಿಂದ ಸರಕಾರವು ಆಲೋಚಿಸಿಯೇ ಈ ಯೋಜನೆ ತಂದಿದೆ.ಇದು ಬರಿಯ ಯೋಜನೆ ಅಲ್ಲ ಕಾಯ್ದೆ ಆಗಿದೆ.ಕೆಲಸ ಕೊಡದೆ ಇದ್ದರೆ ಪಂಚಾಯತಿಯವರು ಪರಿಹಾರ ಕೊಡಬೇಕಾಗುತ್ತದೆ.ಕೆಲಸ ಕೊಡದೆ ಪರಿಹಾರ ಕೊಡುವುದೆ ಸರಿಯೆ? ಕೂಲಿಕಾರರು ಕೆಲಸ ಕೇಳುವುದು ಅವರ ಹಕ್ಕು,ಕೆಲಸ ಕೊಡುವುದು ಪಂಚಾಯತಿಗಳ ಜವಾಬ್ದಾರಿ.ನೀವು ನಿಮ್ಮೂರಲ್ಲಿ ಕೂಲಿಕಾರರಿಗೆ ರೈತರ ಹೊಲಗದ್ದೆಗಳಲ್ಲಿ ಕೆಲಸ ಇಲ್ಲದಾಗ ಕೆಲಸ ಕೊಡು ಅಂತೀರಲ್ಲ,ಹಾಗಂತ ಇಂದಿನ ಗ್ರಾಮಸಭೆಯಲ್ಲಿ ನಿರ್ಣಯ ಮಾಡಿ ಸಹಿ ಮಾಡಿ,ಸರಕಾರಕ್ಕೆ ಕಳುಹಿಸುತ್ತೇವೆ’. ‘ ನಿರ್ಣಯ’ ಸಹಿ’ ಅಂದ ಕೂಡಲೆ ‘ ಇದೆಲ್ಲಿಯ ಗೋಜಪ್ಪ’ ಅಂತ ಒಬ್ಬೊಬ್ಬರೆ ಜಾಗ ಖಾಲಿ ಮಾಡತೊಡಗಿದರು!

ಇದು ಗ್ರಾಮಭಾರತದ ವಾಸ್ತವ.ಮಹಾತ್ಮಗಾಂಧಿ ನರೆಗಾ ಯೋಜನೆಯು ಅನುಷ್ಠಾನಕ್ಕೆ ಬಂದ ಈ ಹನ್ನೊಂದು ವರ್ಷಗಳಲ್ಲಿ ಗ್ರಾಮೀಣ ದುಡಿಯುವ ವರ್ಗದ ಜನತೆಯಲ್ಲಿ ಆತ್ಮವಿಶ್ವಾಸ ಬಲಗೊಂಡಿದೆ.ಊರ ಉಳ್ಳವರ ಹೊಲಗದ್ದೆಗಳಲ್ಲಿ ದುಡಿದು ಅವರ ಮುಲಾಜಿಗೆ ಬೀಳುವ ಗೊಡವೆ ಬೇಡವೆಂದು ನರೆಗಾ ಯೋಜನೆಯಡಿ ದುಡಿಯುತ್ತಿದ್ದಾರೆ.ಗೌಡ- ಸಾಹುಕಾರರ ಮನೆಬಾಗಿಲುಗಳಲ್ಲಿ ಕಾಯದೆ ಗ್ರಾಮ ಪಂಚಾಯತಿಗಳ ಕದ ತಟ್ಟುತ್ತಿದ್ದಾರೆ.’ದುಡಿಯುವುದು ನಮ್ಮ ಹಕ್ಕು’ ಎನ್ನುವ ಪ್ರಜ್ಞೆ ಕೂಲಿಕಾರರಲ್ಲಿ ಜಾಗೃತಗೊಂಡಿದೆ.ಬಂದ ಕೂಲಿಯಲ್ಲಿಯೇ ಸ್ವಲ್ಪ ಉಳಿಸಿ ಸಂಸಾರದ ಆಗು- ಹೋಗುಗಳನ್ನು ನಿರ್ವಹಿಸುವ ಉಳಿತಾಯದ ಮನೋಭಾವವೂ ಬೆಳೆದಿದೆ.ಉಳ್ಳವರ ಹಂಗಿಗೊಳಗಾಗದೆ ಸರಕಾರದ ಕೆಲಸ ಮಾಡಿ,ಸ್ವಾಭಿಮಾನದಿಂದ ತಲೆ ಎತ್ತಿ ಬದುಕಬಹುದು ಎನ್ನುವ ಆತ್ಮವಿಶ್ವಾಸ,ಸ್ವಾಭಿಮಾನಗಳು ಮೂಡಿವೆ ಕೆಳವರ್ಗದ,ದಲಿತ ಸಮುದಾಯಗಳ ಕೂಲಿಕಾರರಲ್ಲಿ.ಸಹಜವಾಗಿಯೇ ಇದು ಹಳ್ಳಿಗಳ ಉಳ್ಳವರ ಆಕ್ರೋಶಕ್ಕೆ ಕಾರಣವಾಗಿದೆ.ಉಳ್ಳವರು ಉಳ್ಳವರಾಗುತ್ತಲೇ ಇರಬಯಸುವ ಬಡವರನ್ನು ಕೂಲಿಯಾಳುಗಳನ್ನಾಗಿಯೇ ನೋಡಬಯಸುವ ಮನಸ್ಸುಗಳಿಗೆ ಉದ್ಯೋಗ ಖಾತ್ರಿ ಯೋಜನೆ ಸರಿ ಇಲ್ಲ ಎನ್ನಿಸುತ್ತಿದೆ.ಬಡವರಿಗೆ ವರವಾದ ಯೋಜನೆ ಉಳ್ಳವರು,ಸಿರಿವಂತರು,ಜಮೀನ್ದಾರರಿಗೆ ಶಾಪವಾಗಿದೆ! ದುಡಿಯುವವರ ಹಕ್ಕುಗಳನ್ನು ಗೌರವಿಸದವರ,ಬಡವರ ಏಳಿಗೆಯನ್ನು ಸಹಿಸದವರ ಮತ್ತು ದಲಿತರು ಸ್ವಾವಲಂಬಿಗಳಾಗಿ,ಸ್ವಾಭಿಮಾನದಿಂದ ತಲೆ ಎತ್ತಿ ತಿರುಗುವುದನ್ನು ನೋಡಲು ಇಚ್ಛಿಸದ ಮನಸ್ಸುಗಳಲ್ಲಿ ಇಂತಹ ಪ್ರಶ್ನೆಗಳಿದ್ದರೆ ಅದು ಸಹಜ.

ನನ್ನ ಉತ್ತರದಿಂದ ಗ್ರಾಮಸ್ಥರು ಸಂತೃಪ್ತರಾದರೋ ಇಲ್ಲವೋ ನಾನರಿಯೆ.ಅಂತೂ ನಾವು ಇಟ್ಟಿದ ಬೇಡಿಕೆಗಳ ಪಟ್ಟಿಯಲ್ಲಿ ಒಬ್ಬೊಬ್ಬರಾಗಿ ಎದ್ದು ಬಂದು ತಮ್ಮ ಬೇಡಿಕೆಯ ಚೀಟಿಗಳನ್ನು ಹಾಕತೊಡಗಿದರು.ಸಾಯಿಬಣ್ಣ ಎನ್ನುವ ದಲಿತ ವ್ಯಕ್ತಿಯೊಬ್ಬರು ವೇದಿಕೆಯಲ್ಲಿದ್ದ ನನ್ನ ಬಳಿ ಬಂದು ‘ ಯಪ್ಪಾ ನನ್ಗ ಸಾಲಿ ಬರೋದಿಲ್ಲ.ಚೀಟಿ ಬರಿಯಾಕ ಬರೋದಿಲ್ಲ.ನನ್ನ ಎರಡು ಎಕರೆ ಹೊಲಕ್ಕ ಹಳ್ಳದ ನೀರು ಬಂದು ಒಡ್ಡು ಒಡದಾದ.ಅದಕ್ಕ ಒಂದು ಗ್ವಾಡೆ ಕಟ್ಟಿಸಿಕೊಟ್ಟು ಪುಣ್ಯ ಕಟ್ಟಿಕೊ’ ಎಂದು ಅಂಗಲಾಚಿದ ಪರಿಯನ್ನು ಕಂಡು ನನ್ನ ಗ್ರಾಮಸಭೆಯ ಉದ್ದೇಶ ಸಫಲವಾಯಿತು ಎನ್ನುವ ಸಾರ್ಥಕ ಭಾವನೆ ಉಂಟಾಯಿತಾದರೂ ಇಂದಿಗೂ ಇಂತಹ ಪದದುಳಿತರು ಸರಕಾರಿ ಯೋಜನೆಗಳನ್ನು ಪಡೆಯುವ ದೈನ್ಯಸ್ಥಿತಿಯಲ್ಲಿ ಇದ್ದಾರಲ್ಲ ಎನ್ನುವ ನೋವೂ ಉಂಟಾಯಿತು.ನಾವು ಸರಕಾರಿ ಅಧಿಕಾರಿಗಳು ಇಂತಹ ಬಾಯಿ ಇಲ್ಲದ,ಬಾಯಿ ಸತ್ತವರ ಧ್ವನಿಯಾಗಬೇಕು,ಆಗಲೇ ನಮ್ಮ ಸೇವೆ ಸಾರ್ಥಕವಾಗುವುದು.ನಮ್ಮ ಪಿಡಿಒ ರಾಜು ಮೇಟಿ ಅವರಿಗೆ ಈ ವರ್ಷ ಅವರ ಕಾಮಗಾರಿಯನ್ನು ತೆಗೆದುಕೊಳ್ಳಿ ಎಂದು ಸೂಚಿಸಿದೆ.

ನಾನು ಗ್ರಾಮಸಭೆಯನ್ನು ಮುಗಿಸಿ ಗ್ರಾಮ ಪಂಚಾಯತಿಯಲ್ಲಿ ಚಹಾಕುಡಿಯುತ್ತಿದ್ದಾಗ ಹತ್ತಾರು ಜನ ರೈತರ ಗುಂಪೊಂದು ಬಂದು ‘ ಸಾಹೇಬ್ರ ಅವರು ದೊಡ್ಡವರ್ರು.ಹಂಗೆ ಹೇಳ್ತಾರ.ನಮ್ಗ ಕೆಲ್ಸಕೊಡಿ.ದೊಡ್ಡವರ ಮನ್ಯಾಗ ಕಸ ಮುಸರಿ ಬಳಕೊಂಡು ಇರೋದು ಆಗೋದಿಲ್ಲ ನಮ್ಮಿಂದ’ ಅಂತ ಒತ್ತಾಯಿಸಿದ್ದು ವಾಸ್ತವದ ಇನ್ನೊಂದು ಮುಖ.ವ್ಯವಸ್ಥೆಯ ವಿಭಿನ್ನ ಮಗ್ಗಲುಗಳ ನಡುವೆಯೂ ಅಂತಃಸಾಕ್ಷಿಯನ್ನು ಜಾಗೃತವಾಗಿಟ್ಟುಕೊಂಡು ಜನಪರವಾಗಿ ದುಡಿಯುವುದು ನಿಜವಾದ ಸಾರ್ವಜನಿಕ ಸೇವಕರ ಲಕ್ಷಣ.

02.10.2021