ಗಾಂಧಿ ಜಯಂತಿಯ ಅಂಗವಾಗಿ ಬಳಿಚಕ್ರ ಗ್ರಾಪಂಯಲ್ಲಿ ಜಿಪಂ ಉಪಕಾರ್ಯದರ್ಶಿಯವರ ನೇತೃತ್ವದಲ್ಲಿ ವಿಶೇಷಗ್ರಾಮ ಸಭೆ ಮತ್ತು ವಿವಿಧ ರಚನಾತ್ಮಕ ಕಾರ್ಯಕ್ರಮಗಳು

ಯಾದಗಿರಿ: ಗಾಂಧೀಜಿ ಜಯಂತಿಯ ಅಂಗವಾಗಿ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮ ಪಂಚಾಯತಿಯಲ್ಲಿ ಆಯೋಜಿಸಲಾಗಿದ್ದ ವಿಶೇಷಗ್ರಾಮ ಸಭೆಯಲ್ಲಿ ಜಿಲ್ಲಾ ಪಂಚಾಯತ ಉಪಕಾರ್ಯಧರ್ಶಿ ಮುಕ್ಕಣ್ಣ ಕರಿಗಾರ ಅವರು ಪಾಲ್ಗೊಂಡು ವಿಶೇಷ ಗ್ರಾಮಸಭೆಯ ಉದ್ದೇಶವನ್ನು ವಿವರಿಸಿ ಮಹಾತ್ಮ ಗಾಂಧಿ ನರೆಗಾ ಯೋಜನೆಯಡಿ ‘ ಮನೆಮನೆಗೆ ಉದ್ಯೋಗ ಖಾತ್ರಿ’ ಅಭಿಯಾನಕ್ಕೆ ಚಾಲನೆ ನೀಡಿದರು.

ನರೆಗಾ ಯೋಜನೆಯ ‘ ಮನೆಮನೆಗೆ ಮನರೆಗಾ ಯೋಜನೆ ಅಭಿಯಾನಕ್ಕೆ ಚಾಲನೆ ನೀಡುತ್ತ ಗ್ರಾಮಸ್ಥರನ್ನು ಉದ್ದೇಶಿಸಿ ” ಮಹಾತ್ಮ ಗಾಂಧಿ ನರೆಗಾ ಯೋಜನೆಯು ಹಳ್ಳಿಗಳ ಅಭಿವೃದ್ಧಿ ಮತ್ತು ಗ್ರಾಮೀಣ ಪುನರ್ ನಿರ್ಮಾಣದಲ್ಲಿ ಬಹುಮುಖ್ಯ ಯೋಜನೆಯಾಗಿದ್ದು ನರೆಗಾ ಯೋಜನೆಯ ಅನುಷ್ಠಾನದಿಂದ ಗಾಂಧೀಜಿಯವರ ಕನಸಿನ ‘ ಗ್ರಾಮರಾಜ್ಯ’ ಗಳನ್ನು ಕಟ್ಟಬಹುದು. ದೇಶದ ಗ್ರಾಮೀಣ ಪ್ರದೇಶದ ದುಡಿಯುವ ಕುಟುಂಬಗಳಿಗೆ ವರ್ಷದಲ್ಲಿ ನೂರುದಿನಗಳ ಉದ್ಯೋಗದ ಖಾತ್ರಿ ನೀಡುವ ಮೂಲಕ ಉದ್ಯೋಗ ಖಾತ್ರಿ ಯೋಜನೆಯು ಬಡತನ ನಿರ್ಮೂಲನೆಗೆ ನೆರವಾಗುವುದರ ಜೊತೆಗೆ ಗ್ರಾಮೀಣ ಬಡಜನತೆಯು ಸ್ವಾವಲಂಬಿಗಳಾಗಿ,ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ಮಿಸಿದೆ.ದಿನ ಒಂದಕ್ಕೆ 289 ರೂಪಾಯಿಗಳ ಕೂಲಿಯನ್ನು ಲಿಂಗಭೇದವಿಲ್ಲದೆ,ಪಕ್ಷಪಾತವಿಲ್ಲದೆ ಸಮಾನವಾಗಿ ನೀಡಲಾಗುತ್ತದೆ.ಕೂಲಿಕಾರರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕೂಲಿಯ ಹಣ ಜಮೆ ಆಗುವುದರಿಂದ ಮಧ್ಯವರ್ತಿಗಳ ಹಾವಳಿ ಮತ್ತು ಶೋಷಣೆಗೆ ಅವಕಾಶವಿಲ್ಲ.ಉದ್ಯೋಗ ಖಾತ್ರಿ ಯೋಜನೆಯಡಿ ಸಮುದಾಯ ಆಧಾರಿತ ಮತ್ತು ವೈಯಕ್ತಿಕ ಕಾಮಗಾರಿಗಳು ಎನ್ನುವ ಎರಡು ವಿಧದ ಕಾಮಗಾರಿಗಳನ್ನು ತೆಗೆದುಕೊಳ್ಳುತ್ತಿದ್ದು ಸಣ್ಣರೈತರು,ಬಡವರು ತಮ್ಮ ಹೊಲಗಳಲ್ಲಿ ಕ್ಷೇತ್ರಬದುನಿರ್ಮಾಣ,ಕೃಷಿಹೊಂಡಗಳ ನಿರ್ಮಾಣ,ಮತ್ತು ಬದುಬೇಸಾಯ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದಲ್ಲದೆ ದನಗಳ ಕೊಟ್ಟಿಗೆ, ಕುರಿಗಳ ಕೊಟ್ಟಿಗೆಗಳನ್ನು ಸಹ ಕಟ್ಟಿಕೊಳ್ಳಬಹುದು.ಮೆಟಿರಿಯಲ್ ಆಧಾರಿತ ಕಾಮಗಾರಿಗಳಿಂದ ಗ್ರಾಮಸಮುದಾಯಕ್ಕೆ ಅವಶ್ಯಕವಿರುವ ಕಾಮಗಾರಿಗಳನ್ನು ತೆಗೆದುಕೊಳ್ಳಬಹುದು” ಎಂದು ವಿವರಿಸಿ ಹೇಳಿದರು. ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ‌ ಫಾತಿಮಾಬಿ ಅವರು ಬೇಡಿಕೆಪಟ್ಟಿಯಲ್ಲಿ ಗ್ರಾಮದ ಪರವಾಗಿ ಬೇಡಿಕೆಸಲ್ಲಿಸುವ ಮೂಲಕ ೨೦೨೨-೨೩ ನೇ ಸಾಲಿನ ನರೆಗಾ ಯೋಜನೆಯ ಕಾಮಗಾರಿಗಳ ಗುಚ್ಛ ತಯಾರಿಕೆಗೆ ಚಾಲನೆ ನೀಡಿದರು. ಲಸಿಕೆ ಹಾಕಿಸುವ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು.ಸ್ವಚ್ಛಭಾರತ ನಿರ್ಮಾಣದ ದೃಢ ಸಂಕಲ್ಪ ಹೊಂದುವ ಪ್ರತಿಜ್ಞೆಯನ್ನು ಗ್ರಾಮಸ್ಥರಿಗೆ ಬೋಧಿಸಿದ ಬಳಿಕ ಗ್ರಾಮ ಪಂಚಾಯತಿಯ ಮುಂದಿನ ದಾರಿಯನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತಾ ಕಾರ್ಯಕ್ರಮ ಸಹ ನೆರವೇರಿಸಲಾಯಿತು.ಗ್ರಾಮ ಪಂಚಾಯತಿಯ ಆವರಣದಲ್ಲಿ ಸಸಿ ನೆಡಲಾಯಿತು.

ಪಂಚಾಯತಿ ಅಭಿವೃದ್ಧಿ ಅಧಿಕಾರಿ ರಾಜು ಮೇಟಿ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ಪಂಚಾಯತಿಯ ಉಪಕಾರ್ಯದರ್ಶಿ ಹಾಗೂ ವಿಶೇಷ ಗ್ರಾಮ ಸಭೆಗಳ ನೋಡಲ್ ಅಧಿಕಾರಿಯಾದ ನನ್ನೊಂದಿಗೆ ಬಳಿಚಕ್ರ ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಶ್ರೀಮತಿ ಫಾತಿಮಾಬಿ,ಪಿಡಿಒ ರಾಜು ಮೇಟಿ,ಗ್ರಾಮ ಪಂಚಾಯತಿಯ ಸದಸ್ಯರುಗಳು ಮತ್ತು ಗ್ರಾಮಸ್ಥರು ಹಾಗೂ ಗ್ರಾಮ ಪಂಚಾಯತಿಯ ಸಿಬ್ಬಂದಿಯವರು ಪಾಲ್ಗೊಂಡಿದ್ದರು.