
ಮಾನ್ವಿ: ತಾಲೂಕಿನ ಗೇಡ್ -1 ತಹಶೀಲ್ದಾರ್ ಆಗಿದ್ದ ಸಂತೋಷರಾಣಿ ಅವರನ್ನು ಸರ್ಕಾರ ಕೊಪ್ಪಳ ಜಿಲ್ಲೆಯ ಸಹಾಯಕ ಆಯುಕ್ತರ ಕಚೇರಿಗೆ ಮುಂದಿನ ಆದೇಶದವರೆಗೆ ವರ್ಗಾಯಿಸಿದೆ. ಸಂತೋಷರಾಣಿ ಅವರು ಅಕ್ರಮ ಮರಳು ಸಾಗಣೆ ದಂಧೆಕೋರರ ಜೊತೆ ಶಾಮೀಲಾಗಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೋ ಸಂಭಾಷಣೆ ವೈರಲ್ ಆಗುವ ಮೂಲಕ ವಿವಾದಕ್ಕೆ ಕಾರಣವಾಗಿದ್ದರು. ತಹಶೀಲ್ದಾರ್ ಸಂತೋಷರಾಣಿ ಅವರನ್ನು ಸೇವೆಯಿಂದ ಅಮಾನತುಗೊಳಿಸುವಂತೆ ಸಂಘಟನೆಗಳು ಹೋರಾಟ ನಡೆಸಿದ್ದವು. ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಈ ವರ್ಗಾವಣೆಯ ಆದೇಶ ಹೊರಡಿಸಲಾಗಿದೆ ಎಂದು ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ರಶ್ಮಿ ಎಂ.ಎಸ್ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ. ಕಳೆದ ಫೆಬ್ರವರಿ ತಿಂಗಳಲ್ಲಿ ಸಂತೋಷರಾಣಿ ಅವರು ಮಾನ್ವಿಗೆ ಗೇಡ್- 1 ತಹಶೀಲ್ದಾರ್ ಆಗಿ ನೇಮಕಗೊಂಡಿದ್ದರು . ಸೆಪ್ಟೆಂಬರ್ 9 ರಂದು ಅವರು ಮರಳು ಅಕ್ರಮ ಸಾಗಣೆಗೆ ಸಂಬಂಧಿಸಿದಂತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾದ ಆಡಿಯೋ ಸಂಭಾಷಣೆ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಾರ್ವಜನಿಕ ವಲಯದಲ್ಲಿ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು.
