ಚಾಮುಂಡಿ ಮಂತ್ರ ಮಹಾತ್ಮೆ: ಮುಕ್ಕಣ್ಣ ಕರಿಗಾರ

ಚಾಮುಂಡಿ ಮಂತ್ರ ಮಹಾತ್ಮೆ

ಲೇಖಕರು: ಮುಕ್ಕಣ್ಣ ಕರಿಗಾರ

ದೇವಿ ಪಾರ್ವತಿಯು ಲೋಕಕಂಟಕರಾಗಿದ್ದ ಚಂಡ- ಮುಂಡರನ್ನು ಸಂಹರಿಸಿ ಚಾಮುಂಡಿ ಎನ್ನುವ ಅಭಿದಾನ ಪಡೆದು ಮಹಿಷಾಸುರನನ್ನು ಸಂಹರಿಸಿ ‘ ಮಹಿಷಮರ್ಧಿನಿ’ ಎಂದು ಕೊಂಡಾಡಿಸಿಕೊಂಡು ತನ್ನ ಲೀಲೆ ಪರಿಸಮಾಪ್ತಿಗೊಳಿಸಿಕೊಂಡು ಚಾಮುಂಡೇಶ್ವರಿ ದೇವಿಯಾಗಿ ನೆಲೆನಿಲ್ಲುತ್ತಾಳೆ ಬೆಟ್ಟದಲ್ಲಿ.ಚಾಮುಂಡಿಯು ರಕ್ಕಸರನ್ನು ಸಂಹರಿಸಿ,ಲೋಕೋದ್ಧಾರಕ್ಕಾಗಿ ನೆಲೆನಿಂತ ಬೆಟ್ಟವು ‘ ಚಾಮುಂಡಿ ಬೆಟ್ಟ’ ಎಂದು ಹೆಸರಾಗಿದೆ.

ದೇವಿ ದುರ್ಗೆಯು ತನ್ನ ಚಾಮುಂಡಿ ಲೀಲೆಯನ್ನು ಉಪಸಂಹರಿಸಿಕೊಂಡ ಬಳಿಕ ಲೋಕೋದ್ಧಾರಕ್ಕಾಗಿ ಕಲ್ಯಾಣಮೂರ್ತಿ ಇಲ್ಲವೆ ಅನುಗ್ರಹಮೂರ್ತಿ ರೂಪದಲ್ಲಿ ಸಿಂಹವಾಹನೆಯಾಗಿ ಬೆಟ್ಟದಲ್ಲಿ ನೆಲೆನಿಂತಿದ್ದಾಳೆ.ಹಿಂದೆ ಋಷಿ ಮುನಿ ಸಿದ್ಧರುಗಳಿಂದ ಪೂಜೆ- ಆರಾಧನೆಗಳಿಂದ ಸೇವಿಸಲ್ಪಟ್ಟ ದೇವಿಯು ತಪಸ್ವಿಗಳಿಗೆ ದರ್ಶನವಿತ್ತು ಆಶೀರ್ವದಿಸಿದ್ದಾಳೆ.ಋಷಿಗಳು ‘ ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಚೆ’ ಎನ್ನುವ ಚಾಮುಂಡಿ ಮೂಲಮಂತ್ರದಿಂದ ದುರ್ಗಾದೇವಿಯ ತಪೋನುಷ್ಠಾನ ಮಾಡಿ,ಸಾಕ್ಷಾತ್ಕಾರ ಪಡೆದಿದ್ದಾರೆ.ಈ ಮಂತ್ರವನ್ನು ‘ ನವಾರ್ಣ ಮಂತ್ರ’ ಎನ್ನಲಾಗುತ್ತದೆ.ದೇವಿಯು ತನ್ನ ನವಶಕ್ತಿರೂಪದಲ್ಲಿ ಈ ಮಂತ್ರದಲ್ಲಿ ಪ್ರಕಟಗೊಂಡ ಕಾರಣ ಇದು ನವಾರ್ಣಮಂತ್ರ.ನವದುರ್ಗೆಯರು ಒಂದಾಗಿ ಮೇಳೈಸಿ ಮೂರ್ತಿವೆತ್ತಿದ್ದಾರೆ ಚಾಮುಂಡಿಯಲ್ಲಿ.

ದುರ್ಗಾದೇವಿಯ ಮತ್ತೊಂದು ಹೆಸರೇ ಚಾಮುಂಡಿ.ದುರ್ಗಾದೇವಿಯು ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಎನ್ನುವ ತ್ರಿಗುಣಾತ್ಮಿಕೆಯಾಗಿದ್ದಾಳೆ.ಚಾಮುಂಡಿಯು ಸಹ ಮಹಾಕಾಲೀ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿಯರೆಂಬ ತ್ರಿದೇವಿಯರ ಏಕರೂಪಳು ಎನ್ನುವುದನ್ನು ಅಭಿವ್ಯಕ್ತಿಸುತ್ತದೆ ಚಾಮುಂಡಾ ನವಾರ್ಣ ಮಂತ್ರ.’ ಓಂ’ ಪ್ರಣವವು ದೇವಿ ಪಾರ್ವತಿಯು ಪರಾಶಕ್ತಿಯಾದ ಪರಬ್ರಹ್ಮೆ ಎನ್ನುವುದನ್ನು ಸಂಕೇತಿಸಿದರೆ ‘ ಐಂ’ ಕಾರವು ಸರಸ್ವತಿಯನ್ನು, ‘ ಹ್ರೀಂ’ ಕಾರವನ್ನು ಲಕ್ಷ್ಮೀಯನ್ನು ಮತ್ತು’ ಕ್ಲೀಂ’ ಕಾರವು ಕಾಳಿಯನ್ನು ಪ್ರತಿನಿಧಿಸುತ್ತದೆ.ಮಹಾಕಾಲೀ ಮಹಾಲಕ್ಷ್ಮೀ ಮತ್ತು ಮಹಾ ಸರಸ್ವತೀ ಸ್ವರೂಪಿಣಿಯಾದ ಚಾಮುಂಡಾದೇವಿಯು ತನ್ನನ್ನು ಶರಣುಬಂದವರನ್ನು ಪೊರೆದು ರಕ್ಷಿಸಲಿ ಎನ್ನುವುದೇ ಚಾಮುಂಡಾ ನವಾರ್ಣ ಮಂತ್ರದ ಅರ್ಥ.ಈ ಮಂತ್ರದಿಂದ ಚಾಮುಂಡೇಶ್ವರಿಯನ್ನು ಪೂಜಿಸುವವರ ಮನೋ ಬಯಕೆಗಳು ಈಡೇರುತ್ತವೆ.ಈ ಮಂತ್ರದ ಉಪಾಸನೆಯಿಂದ ಭೋಗ ಮೋಕ್ಷಗಳೆರಡೂ ಸಿದ್ಧಿಸುತ್ತವೆ.ಈ ಮಂತ್ರಾನುಷ್ಠಾನದಿಂದ ಸಾಧಕರ ಸಂಕಲ್ಪಗಳು ನೆರವೇರುತ್ತವೆ.ಮಾರ್ಕಂಡೇಯ ಋಷಿಯು ಬರೆದ ‘ ದುರ್ಗಾಸಪ್ತಶತಿ’ ಯು ದೇವಿ ಚಾಮುಂಡಿಯ ಮಹಿಮೆಯೂ ಅಹುದು.’ ದುರ್ಗಾಸಪ್ತಶತಿ’ ಯಲ್ಲಿ ‘ಸಿದ್ಧಕುಂಜಿಕಾ ಮಂತ್ರ’ ವೆಂದು ಚಾಮುಂಡಿ ನವಾರ್ಣ ಮಂತ್ರವನ್ನು ದರ್ಶಿಸಲಾಗಿದೆ.ರುದ್ರಶಕ್ತಿಸ್ವರೂಪಿಣಿಯಾಗಿರುವ ಚಾಮುಂಡಿಯು ಸಿದ್ಧಕುಂಜಿಕಾ ಮಂತ್ರಾನುಷ್ಠಾನದಿಂದ ಜಾಗೃತಗೊಂಡು ,ಭಕ್ತನೆದುರು ಪ್ರಕಟಗೊಳ್ಳುತ್ತಾಳೆ.

ದೇವಿ ಚಾಮುಂಡಿಯ ಈ ನವಾಕ್ಷರಿ ಮಂತ್ರವು ಸಾಧಕರ ಶರೀರದ ನವಶಕ್ತಿಕೇಂದ್ರಗಳನ್ನು ಜಾಗೃತಗೊಳಿಸಿ ಅವರನ್ನು ಭವಮುಕ್ತರನ್ನಾಗಿಸುತ್ತವೆ.ಭವಹಾರಿಣಿಯ ಈ ಮಂತ್ರವು ಭಕ್ತರು,ಸಾಧಕರುಗಳಿಗೆ ಕಾಮಧೇನು- ಕಲ್ಪವೃಕ್ಷಗಳೋಪಾದಿಯಲ್ಲಿ ವರಗಳನ್ನಿತ್ತು ಅನುಗ್ರಹಿಸುತ್ತದೆ.ಚಾಮುಂಡಿಯನ್ನು ಈಶ್ವರೀ ಎನ್ನಲಾಗುತ್ತದೆ.ಚಾಮುಂಡೇಶ್ವರಿ ಎನ್ನುವ ದೇವಿಶಬ್ದಕ್ಕೆ ಈಶ್ವರನ ಅಥವಾ ಶಿವನ ಸತಿ ಪಾರ್ವತಿ ಎಂದು ಒಂದು ಅರ್ಥವಾದರೆ ಈಶ್ವರನ ಲೋಕಾನುಗ್ರಹ ಸಾಮರ್ಥ್ಯ ಉಳ್ಳ ಶಿವಶಕ್ತಿ ಎನ್ನುವುದು ಮತ್ತೊಂದು ಅರ್ಥ.ಲೋಕಾನುಗ್ರಹ ಕಾರಣದಿಂದ ಲೀಲೆತೋರುತ್ತಿದ್ದಾಳೆ ದೇವಿ ಚಾಮುಂಡಿಯು ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ.

ಚಾಮುಂಡಿ ನವಾರ್ಣ ಮಂತ್ರವಾದ ‘ ಓಂ ಐಂ ಹ್ರೀಂ‌ ಕ್ಲೀಂ ಚಾಮುಂಡಾಯೈ ವಿಚ್ಚೆ’ಎನ್ನುವ ಈ ಮಂತ್ರವು ರಕ್ಷಾ ಮಂತ್ರವಾಗಿದ್ದು ಸಾಧಕರನ್ನು ಸರ್ವವಿಧದಿಂದ ಉಪದ್ರವ- ಪೀಡೆಗಳಿಂದ ರಕ್ಷಿಸಿ,ಪೊರೆಯುತ್ತದೆ.ಅಪಘಾತ- ಅಪಮೃತ್ಯುಗಳಿಂದ ಸಾಧಕರನ್ನು ರಕ್ಷಿಸುತ್ತದೆ.ಪ್ರತಿದಿನ ಕನಿಷ್ಟ ಒಂದು ನೂರಾ ಎಂಟು ಸಾರಿ ಈ ಮಂತ್ರವನ್ನು ಜಪಿಸುವ ಭಕ್ತನು ದೇವಿಯನುಗ್ರಹದಿಂದ ಧನ‌ಕನಕ ಸಿರಿ ಸಂಪದಾಭಿವೃದ್ಧಿಗಳನ್ನು ಕಾಣುವನು.ಈ ಮಂತ್ರವನ್ನು ಗುರುವಾನುಗ್ರಹಪೂರ್ವಕವಾಗಿ ಅಂದರೆ ಗುರುಮುಖದಿಂದ ಗ್ರಹಿಸಿ ,ಯೋಗಮಾರ್ಗದಿಂದ ದೇವಿಯನ್ನು ಧ್ಯಾನಿಸುವ ಯೋಗಿಯು ಮೂರುವರ್ಷಗಳಲ್ಲಿ ಚಾಮುಂಡೇಶ್ವರಿಯ ದರ್ಶನ ಪಡೆಯುವನು.ಸಾಮಾನ್ಯ ಭಕ್ತರು ನವವಿಧ ಭಕ್ತಿಯಿಂದ ದೇವಿದುರ್ಗೆಯನ್ನು ಭಜಿಸುತ್ತಾ ಪ್ರತಿದಿನ ತ್ರಿಕಾಲಗಳಲ್ಲಿ ಒಂದು ಸಮಯಕ್ಕೆ 3240 ಗಳ ಜಪದಂತೆ ( ಜಪಮಾಲೆಯು 108 ಮಣಿಗಳನ್ನು ಹೊಂದಿದ್ದು ಒಂದು ಬಾರಿ 108 ಬಾರಿ ಮಂತ್ರಪಠಣೆ ಆದರೆ ಒಂದು ಮಾಲೆ ಆಗುತ್ತದೆ. 10 ಮಾಲೆಗೆ 1080. ಹೀಗೆ ಒಂದು ದಿನಕ್ಕೆ ತ್ರಿಕಾಲ ಜಪಮಾಡಿದರೆ 9720 ಮಂತ್ರಗಳ ಜಪವಾಗುತ್ತದೆ. ಗುರುವಾನುಗ್ರಹ ಕೈಗೊಂಡು ಚಾಮುಂಡಿದೇವಿಯ ಉಪಾಸನೆ ಮಾಡುವ ಭಕ್ತರು ಈ ಮಂತ್ರಾನುಷ್ಠಾನ ಮಾಡುತ್ತ ಒಂಬತ್ತು ವರ್ಷಗಳಲ್ಲಿ ದೇವಿಚಾಮುಂಡಿಯನ್ನು ಕಾಣಬಹುದು.ಅಪಾರ ಫಲ ಕೊಡುವ ಚಾಮುಂಡಿ ನವಾರ್ಣ ಮಂತ್ರವು ಭಕ್ತರ ಸಕಲ ಮನೋಭಿಷ್ಟಗಳನ್ನು‌ ಈಡೇರಿಸುತ್ತದೆ.

ಮುಕ್ಕಣ್ಣ ಕರಿಗಾರ
ಮೊ; 94808 79501

30.09.2021