*ದಿಕ್ಕು ತಪ್ಪಿದ ದೇವರ ಮಕ್ಕಳ ಮೇಲೆ ಕರುಣೆಗೆ ಕಾತರಿಸುತ್ತ* ಲೇಖಕ: ದೀಪಕ್ ಶಿಂಧೆ

*ದಿಕ್ಕು ತಪ್ಪಿದ ದೇವರ ಮಕ್ಕಳ ಮೇಲೆ ಕರುಣೆಗೆ ಕಾತರಿಸುತ್ತ*

ಲೇಖಕ: ದೀಪಕ್ ಶಿಂಧೆ

ಏ….ಸೂ….ಮಗನೆ ಯಾರೊ ನಿಮ್ಮಪ್ಪಾ?? ಬೋ….ಮಗನಿಗೆ ಎರಡು ಬಿಡಿ ಸಾರ್..ಪಿಕ್ ಪಾಕೆಟ್ ಮಾಡಿದಾನೆ….ಇಂಥೋರಿಂದ್ಲೆ ಸಾರ್ ಕ್ರೈಮು,ಕೊಲೆ,ಸುಲಿಗೆ ಎಲ್ಲಾ ಆಗ್ತಾ ಇರೋದು…..
ಹೀಗೆ ಧರ್ಮದ ಏಟುಗಳನ್ನ ಆ ಬಲಹೀನ ಕೈಗಳನ್ನು ಹಿಡಿದು ಕೆನ್ನೆಗೆ ಬಾರಿಸುವ ಜನರ ನಡುವೆ ನೂರು ಇನ್ನೂರು ರೂಪಾಯಿ ಇರಬಹುದಾದ ಪ್ಯಾಕೇಟು ಕದ್ದ ಆ ಬಾಲಕನ ಬಗ್ಗೆ ಕನಿಕರ ಹುಟ್ಟಿ ಬಿಡುತ್ತದೆ.ತಂಗಿಯ ಹಸಿವು ನೀಗಿಸಲು ಸ್ವೀಟ್ ಮಾರ್ಟ ಒಂದರಿಂದ ಬನ್ ಅಥವಾ ಬ್ರೆಡ್ ಕದ್ದು ಓಡುವ ಧಾವಂತದಲ್ಲಿ ನನ್ನ ಬೈಕಿಗೆ ಅಡ್ಡಬಂದು ಗಾಯಗೊಂಡ ಕರಿಯ ಹುಡುಗನ ಬಗ್ಗೆ ಕಕ್ಕುಲಾತಿಯೂ ಕೂಡ ಅಷ್ಟೇ ವೇಗವಾಗಿ ಹುಟ್ಟಿಕೊಂಡು ನನ್ನ ಮನಸ್ಸನ್ನ ಆರ್ದ್ರಗೊಳಿಸಿಬಿಡುತ್ತದೆ. ಆದರೆ ಕೆಲವು ಘಟನೆಗಳನ್ನ ಕೇಳಿದಾಗ ರಕ್ತ ಕುದಿಯತೊಡಗುತ್ತದೆ.
ಯಾಕೆಂದರೆ ಮೊನ್ನೆಯಷ್ಟೇ ಎರಡು ವರ್ಷದ ಪುಟ್ಟ ಕಂದನನ್ನ ನಿತ್ರಾಣಗೊಂಡ ಸ್ಥಿತಿಯಲ್ಲಿ ನಮ್ಮದೇ ಜಿಲ್ಲೆಯ ನಮ್ಮದೆ ತಾಲೂಕಿನ ಗ್ರಾಮವೊಂದರ ಹೊರವಲಯದಲ್ಲಿ ಎಸೆದು ಹೋಗಿದ್ದಾರೆ.ಮಗುವಿನ ದೇಹದ ಮೇಲೆ ಬೆಂಕಿ ಇಟ್ಟು ವೀಕೃತಿ ಮೆರೆಯಲಾಗಿದೆ.ಹೆತ್ತ ತಂದೆಯೆ ಮಗುವನ್ನ ಕೊಳವೆ ಬಾವಿಗೆ ಎಸೆದು ಜೀವಂತ ಸಮಾಧಿ ಮಾಡಿದ್ದಾನೆ.ಪಕ್ಕದ ಮನೆಯ ಕಾಮಾಂಧನೊಬ್ಬ ಎರಡನೆಯ ತರಗತಿಯ ಬಾಲಕಿಗೆ ಚಾಕಲೆಟ್ ಆಸೆ ತೋರಿಸಿ ಅತ್ಯಾಚಾರ ಮಾಡಿ ಸಾಕ್ಷಿ ಅಳಿಸುವದಕ್ಕಾಗಿ ಮಗುವಿನ ಉಸಿರುಗಟ್ಟಿಸಿ ಕೊಲೆ ಮಾಡಿ ಸಿಕ್ಕಿ ಬಿದ್ದಿದ್ದಾನೆ.ಅಲ್ಲೊಂದು ಭರ್ಬರ ಹತ್ಯೆ,ಇಲ್ಲೊಂದು ಧಾರುಣ ಸಾವು…ವಿಧಿಯನ್ನ ಹಳಿಯುವ ಸಾವಿರಾರು ಜನ ಹಿಡಿಶಾಪ ಹಾಕುವ ಲಕ್ಷಾಂತರ ಜನರ ನಡುವೆ ತಮ್ಮ ಮನೆಯ ಮಕ್ಕಳನ್ನು ಕಳೆದುಕೊಂಡವರ ಆರ್ತನಾದ ಮಾತ್ರ ಆ ದೇವರಿಗೆ ಕೇಳಿಸುತ್ತಲೇ ಇಲ್ಲ.ದೇವರೆ ಇಂತಹ ಪರಿಸ್ಥಿತಿ ನನ್ನ ಶತ್ರುವಿಗೂ ಬೇಡ ಅಂತ ಕಣ್ಣೀರು ಹಾಕುವ ಆ ಪುಟಾಣಿ ಕಂದಮ್ಮಗಳ ಪೋಷಕರ ಕೂಗು ಕೇವಲ ಆಕಾಶಕ್ಕೆ ಏಣಿ ಹಾಕುವ ಪ್ರಯತ್ನದಂತಾಗುತ್ತಿದೆ.ವಾಟ್ಸಪ್ಪು,ಫೇಸ್ ಬುಕ್,ಟ್ವಿಟರ್, ಇನ್ಸಟಾಗ್ರಾಮ್ ಗಳಲ್ಲಿ ಹರಿದಾಡುವ ಮಕ್ಕಳನ್ನು ಹಿಂಸಿಸುವ ಪೋಟೊ ಮತ್ತು ವಿಡಿಯೋಗಳು,ಪುಟಾಣಿ ಕಂದಮ್ಮಗಳ ಅಶ್ಲೀಲ ಚಿತ್ರಗಳು,ಮತ್ತಷ್ಟು ವೀಕೃತಿಯನ್ನೆ ಹರಡುತ್ತವೆಯೆ ಹೊರತು ಸಮಾಜಕ್ಕೆ ಯಾವ ಸಂದೇಶವನ್ನೂ ಸಾರುವದಿಲ್ಲ ಅನ್ನುವದು ಎಲ್ಲರಿಗೂ ತಿಳಿದ ವಿಷಯವೇ ಅಲ್ಲವಾ?? ಯಾರೋ ಮಾಡಿದ ತಪ್ಪಿಗೆ ಎಚ್ ಐ ವಿ ಅಂಟಿಸಿಕೊಂಡ ಹಸುಗೂಸುಗಳು,ದುಶ್ಚಟಕ್ಕೆ ಬಲಿಯಾದ ಪೋಷಕರ ಕಿರುಕುಳ ತಪ್ಪಿಸಿಕೊಳ್ಳಲು ಮನೆ ಬಿಟ್ಟ ಮಕ್ಕಳು, ಬಸ್ ಸ್ಟ್ಯಾಂಡ್ ,ರೈಲು ನಿಲ್ದಾಣ, ಇಲ್ಲವೆ ದೊಡ್ಡ ಪಟ್ಟಣದ ಕಾಮಗಾರಿಗೆ ಬಂದು ಬಿದ್ದ ಸಿಮೆಂಟಿನ ಪೈಪುಗಳ ನಡುವೆ ಚಳಿಯಲ್ಲಿ ನಡುಗುತ್ತ ಮಲಗಿದ ಜೀವಗಳತ್ತ ಒಮ್ಮೆ ಕಣ್ಣು ಹಾಯಿಸಿ ನೋಡಿ.ಅಪ್ಪ ಯಾರು ಅಂತ ಗೊತ್ತಿಲ್ಲದ ವೇಶ್ಯೆಯ ಮಕ್ಕಳು, ಬಡತನದಿಂದಾಗಿಯೋ ತಮ್ಮ ದುರ್ದೈವದಿಂದಾಗಿಯೋ ಕಾಯಿಲೆ ಕಸಾಲೆಗಳಿಂದ ಹೆತ್ತವರನ್ನು ಕಳೆದುಕೊಂಡು ಅನಾಥವಾದ ಮಕ್ಕಳು, ಹಗಲು ಹೊತ್ತಿನಲ್ಲಿ ಹೆಗಲಿಗೊಂದು ಚೀಲ ನೇತು ಬಿಟ್ಟುಕೊಂಡು, ಖಾಲಿ ಶೀಸಾ,ಪೇಪರ್ ಮತ್ತು ಪೆಟ್ ಬಾಟಲ್ ಆಯುವ ಮಕ್ಕಳ ಭವಿಷ್ಯ ಶಾಲೆಗಳಲ್ಲಿ ಅಡಗಿದೆಯೆ ಹೊರತು ವೈಟ್ನರ್ ಬಾಟಲಿ,ಅಥವಾ ಅವರು ಕದ್ದು ಸೇದುವ ಚುಟ್ಟಾ,ಬೀಡಿ,ಸಿಗರೇಟು ಮತ್ತು ಕೊರೆಕ್ಸ ಸಿರಪ್ಪಿನ ಬಾಟಲಿಗಳಲ್ಲಿ ಖಂಡಿತ ಅಲ್ಲ ಅನ್ನುವದು ನೆನಪಿರಲಿ.ಐದೂವರೆ ಇಂಚು ಅಗಲದ ಮೊಬೈಲ್‌ ಗಳು ಐದೂವರೆ ಅಡಿಯ ಮನುಷ್ಯನನ್ನ ಗಿರಗಿಟ್ಲೆ ಆಡಿಸುತ್ತಿರುವ ದುರಂತ ಕಾಲದಲ್ಲಿ ಮಂಗಳನ ಅಂಗಳ ತಲುಪಿದ ಅಥವಾ ಚಂದಿರನ ಮೇಲೆ ಕಾಲಿಟ್ಟ ದಿನಗಳ ಸಂತಸವನ್ನ ಬಹಳ ದಿನ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ.ಉಳ್ಳವರ ಮಕ್ಕಳು ಪಬ್ಜಿ ಆಡುತ್ತ ಬ್ಯೂಜಿ ಆದರೆ ಇಲ್ಲದವರ ಮಕ್ಕಳು ಅದೇ ಮೊಬೈಲನ್ನ ತಮ್ಮ ಅಪ್ಪ ಅಮ್ಮ ಕೊಡಿಸಲಿಲ್ಲ ಅಂತ ಆತ್ಮಹತ್ಯೆ ಮಾಡಿಕೊಂಡ ಕಹಿ ಘಟನೆಗಳು ಪೇಪರ್ ಮತ್ತು ಟೀವಿಗಳಲ್ಲಿ ದಿನ ನಿತ್ಯವೂ ಪ್ರಸಾರವಾಗುತ್ತಿವೆ ಅನ್ನುವದಾದರೆ….. ಮನುಷ್ಯನ ಆವಿಷ್ಕಾರಗಳು ಮನುಕುಲದ ಬುಡಕ್ಕೆ ಕೊಡಲಿ ಏಟನ್ನೆ ಕೊಡುತ್ತಿವೆ ಅಲ್ಲವೇ??
ಏನೂ ಅರಿಯದ ಮತ್ತು ಈ ಜಗತ್ತನ್ನೇ ಸರಿಯಾಗಿ ನೋಡಿರದ ಅದೆಷ್ಟು ಜೀವಗಳು ಹೀಗೆ ಯಾರದೊ ತಪ್ಪಿಗೆ ಅಥವಾ ಇನ್ಯಾರದೋ ತೆವಲಿಗೆ ಬಲಿಯಾಗುತ್ತಿವೆ ಅನ್ನುವದಾದರೆ ಧ್ವನಿ ಎತ್ತಬೇಕಾಗಿರುವದು ನಮ್ಮ ನಿಮ್ಮೆಲ್ಲರ ಆದ್ಯ ಕರ್ತವ್ಯ ಅಲ್ಲವೇ?? ಆದರೆ ಎಲ್ಲೋ ಒಂದು ಕಡೆ ಬಲಾತ್ಕಾರವಾದಾಗ ಆ ಮಗುವಿನ ಜಾತಿಯವರು ಮತ್ತು ಜನಾಂಗದವರಷ್ಟೆ ಅದನ್ನು ಪ್ರತಿಭಟಿಸುವ ಮತ್ತು ನ್ಯಾಯಕ್ಕಾಗಿ ಧ್ವನಿ ಎತ್ತುವ ಹಂತವನ್ನು ಈಗಾಗಲೇ ಈ ನತದೃಷ್ಟ ಸಮಾಜ ತಲುಪಿಯಾಗಿದೆ‌.ನಮ್ಮ ಮನೆಗೆ ಬೆಂಕಿ ಬಿದ್ದಾಗ ಮಾತ್ರ ಬೆಂಕಿಯನ್ನು ಆರಿಸಲು ಪ್ರಯತ್ನ ಮಾಡುವ ನಾವು ಮತ್ತೊಬ್ಬರ ಮನೆಗೆ ಬೆಂಕಿ ಬಿದ್ದಾಗ ವಿಡಿಯೋ ಮಾಡುವದರಲ್ಲೋ ಅಥವಾ ನೋಡುತ್ತ ನಿಲ್ಲುವದರಲ್ಲೋ ನಮ್ಮ ಮಾನವೀಯತೆಯನ್ನ ಮಣ್ಣು ಕೊಡುತ್ತಿದ್ದೇವೆ ಅನ್ನುವದು ದುರಾದೃಷ್ಟವೇ ಸರಿ.ಕಾಲೇಜು ಶಿಕ್ಷಣ ಪಡೆಯಲು ಹಳ್ಳಿಯಿಂದ ಪಟ್ಟಣಕ್ಕೆ ಬರುವ ಬರುವ ಹದಿ ಹರೆಯದ ಹುಡುಗ-ಹುಡುಗಿಯರು ಪ್ರೀತಿ ಪ್ರೇಮ ಅಂತ ಮನೆ ಬಿಟ್ಟು ಓಡಿ ಹೋಗುವ ಅಥವಾ ಯಾವದೋ ಲಾಡ್ಜಿನಲ್ಲಿ ಹುಟ್ಟು ಉಡುಗೆಯಲ್ಲಿ ಸಿಕ್ಕಿ ಬೀಳುವ ಮತ್ತು ಹುಡುಗಿಯ ಪೋಷಕರು ಖಾಸಗಿ ಹೆರಿಗೆ ಆಸ್ಪತ್ರೆಗಳ ಹಿಂಬಾಗಿಲು ತಟ್ಟಿ ಸಾಲು ಸಾಲಾಗಿ ಬ್ರೂಣ ಹತ್ಯೆಗಳನ್ನು ಮಾಡುವ ಮಟ್ಟಕ್ಕೆ ಇಂದಿನ ಯುವಜನಾಂಗ ದಿಕ್ಕು ತಪ್ಪಿಯಾಗಿದೆ.ಸುಲಭವಾಗಿ ಮೆಡಿಕಲ್ ಗಳಲ್ಲಿ ಸಿಗುವ ಅನ್ ವಾಂಟೆಡ್ ಕಿಟ್ ಮತ್ತು ಪ್ರೆಗ್ನಾ ಟೆಸ್ಟ್ ಕಿಟ್ಟುಗಳು ಹಾಗೂ ಮೊಬೈಲಿನ ಪರದೆಯಲ್ಲಿ ತೆರೆದುಕೊಳ್ಳುತ್ತಿರುವ ಹಸಿಬಿಸಿ ದೃಶ್ಯಗಳು ಯುವಕ ಯುವತಿಯರಲ್ಲಿ ಅದ್ಯಾವ ಕನಸುಗಳನ್ನು ಹುಟ್ಟಿಸುವದಕ್ಕೆ ಸಾಧ್ಯ ಅಲ್ಲವಾ?? ಸುಂದರ ಸಮಾಜದ ಕನಸು ಕಾಣುವ ಮತ್ತು ನಮ್ಮ ದೇಶದ ಸಂಸ್ಕೃತಿ ಪರಂಪರೆಯ ಬಗ್ಗೆ ಮಾತನಾಡುವ ಹಿರಿಯರು ನಮಗೆ ಹುಚ್ಚರಂತೆ ಕಾಣಿಸತೊಡಗಿದ ಮೇಲೆ ಅನಾಚಾರ ಮತ್ತು ಅತ್ಯಾಚಾರಗಳಷ್ಟೇ ಈ ಜಗದ ಮೂಲೆ ಮೂಲೆಗಳಲ್ಲಿ ವಿಜೃಂಭಿಸುತ್ತವೆ ಅನ್ನುವದನ್ನು ನಾವು ಎಂದಿಗೂ ಮರೆಯಬಾರದು ಅಲ್ಲವೆ?? ಹಾಗಾದರೆ ಇದಕ್ಕೆಲ್ಲ ಪರಿಹಾರ ಏನು ಅಂತೀರಾ?? ಇದನ್ನ ಬರೆಯುತ್ತಿರುವ ಈ ನಿಟ್ಟಿನಲ್ಲಿ ಯೋಚಿಸುತ್ತಿರುವ ನಾನು ಕೂಡ ಹುಲುಮಾನವನೇ ಆದರೂ ಒಂದಷ್ಟು ತ್ವರಿತಗತಿಯ ನ್ಯಾಯ ಅಂತಹ ನರಕಕ್ಕೆ ಸಿಲುಕಿ ನಲುಗಿದ ಅಸಂಖ್ಯ ಮಕ್ಕಳ ಜೀವಕ್ಕೆ ನೆಮ್ಮದಿ ತರುವಂತಾಗಲಿ,ಅತ್ಯಾಚಾರಿಗಳಿಗೆ ಆಗುವ ಗಲ್ಲು ಶಿಕ್ಷೆಗಳು ತಮ್ಮದಲ್ಲದ ತಪ್ಪಿಗೆ ಈ ಲೋಕದಿಂದಲೇ ದೂರವಾದ ಕಂದಮ್ಮಗಳ ಆತ್ಮಕ್ಕೆ ಶಾಂತಿ ಕೊಡುವಂತಾಗಲಿ ಅನ್ನುವ ಆಶಯ ನನ್ನದು.ಆರೋಪಿಯೊಬ್ಬನನ್ನು ಅಮಾಯಕ ಅಂತಲೋ ಅಥವಾ ನಮ್ಮ ಜಾತಿ ಅಥವಾ ಧರ್ಮದವನು ಅಂತಲೋ ನೋಡುವ ಮುನ್ನ,ಅವರ ಹಣಬಲ ಮತ್ತು ಅಧಿಕಾರ ಬಲದ ಎದುರು ಸಾಕ್ಷಿ ಹೇಳದೆಯೋ,ದೂರು ದಾಖಲಿಸದೆಯೋ,ಹೆದರಿಸಿ,ಬೆದರಿಸಿಯೋ ದೊಡ್ಡವರ ಎದುರು ಮಂಡಿಯೂರಿ ಬಡವರ ಮಕ್ಕಳ ಮೇಲಿನ ಅತ್ಯಾಚಾರದ ಕೇಸು ಮುಚ್ಚಿ ಹಾಕುವ ಮುನ್ನ,ರಾಕ್ಷಸ ಪ್ರವೃತ್ತಿ ಮೆರೆದ ಕಾಮಾಂಧರ ಪರವಾಗಿ ವಕಾಲತ್ತು ವಹಿಸಿಕೊಂಡು ಅಂತವರನ್ನು ಶಿಕ್ಷೆಯಿಂದ ಪಾರು ಮಾಡುವ ಮುನ್ನ ನಮ್ಮ ಮನೆಯಲ್ಲೇ ಅಂತಹ ಘಟನೆ ಆದರೆ ಏನಾಗುತ್ತಿತ್ತು ಅಂತ ಒಂದು ಕ್ಷಣ ದೌರ್ಜನ್ಯಕ್ಕೆ ಒಳಗಾದ ಮಕ್ಕಳ ತಂದೆ ತಾಯಿಯ ಜಾಗದಲ್ಲಿ ನಿಂತು ನಾವು ನೀವೆಲ್ಲ ಯೋಚಿಸಬೇಕಾಗಿದೆ.
ಅನಾಥರಿಗೆ ಮತ್ತು ದಿಕ್ಕಿಲ್ಲದವರಿಗೆ ದೇವರು ಆಸರೆಯಾಗುತ್ತಾನೆ ಅನ್ನುವ ನಂಬಿಕೆ ಇರುವ ದೇಶ ನಮ್ಮದು ಅಗತ್ಯ ಇರುವವನಿಗೆ ಅನ್ನ ಕೊಟ್ಟವನು ಆ ಕ್ಷಣಕ್ಕೆ ಹಸಿದವನ ಪಾಲಿಗೆ ದೇವರಂತೆ ಕಾಣಿಸುತ್ತಾನೆ ಅನ್ನುವದಾದರೆ ಸಮಬಾಳು-ಸಮಪಾಲಿನ ಕಲ್ಪನೆ ಸಾಕಾರಗೊಳ್ಳುವತನಕ ನಮ್ಮ ಕೈಯ್ಯಲ್ಲಿನ ರೊಟ್ಟಿಯ ಚೂರನ್ನು ಮತ್ತೊಬ್ಬರೊಂದಿಗೆ ಹಂಚಿಕೊಂಡು ತಿನ್ನಲು ನಾವು ಹಿಂದೇಟು ಹಾಕಬಾರದು ಅಲ್ಲವೇ??
ಯಾರೂ ದಿಕ್ಕಿಲ್ಲದ ಅಥವಾ ಕಾರಣಾಂತರಗಳಿಂದ ದಿಕ್ಕು ತಪ್ಪಿದ ದೇವರಂತಹ ಮುಗ್ದ ಮಕ್ಕಳ ಮೇಲೆ ದಯೆ ಮತ್ತು ಕರುಣೆಯನ್ನ ತೋರಿಸುವ ಮೂಲಕ,ಅವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ,ಅವರಿಗೆ ಶಿಕ್ಷಣ ಕೊಡಿಸಿ,ಬದುಕು ರೂಪಿಸಿ, ಒಂದಷ್ಟು ಪ್ರೀತಿ, ಮಮತೆಯನ್ನು ಹಂಚುವ ಮೂಲಕ ಒಂದಷ್ಟು ಮಾನವೀಯತೆಯನ್ನು ಮೆರೆಯೋಣ ಅಲ್ಲವಾ??

ದೀಪಕ್ ಶಿಂಧೆ, ಪತ್ರಕರ್ತ
ನಿಂಬಾಳಕರ ಪ್ಲಾಟ್,
ಶಾಂತಿ ನಗರ, ಅಥಣಿ-591304
ಜಿಲ್ಲಾ: ಬೆಳಗಾವಿ
ಮೊಬೈಲ್: 9482766018