ಚಿಂತನೆ: ಚಾಮುಂಡೇಶ್ವರಿ- ಮುಕ್ಕಣ್ಣ ಕರಿಗಾರ

ಚಾಮುಂಡೇಶ್ವರಿ

ಲೇಖಕರು; ಮುಕ್ಕಣ್ಣ ಕರಿಗಾರ

ನವರಾತ್ರಿಯು ಕರ್ನಾಟಕದ ನಾಡಹಬ್ಬವಾದರೆ ಚಾಮುಂಡೇಶ್ವರಿಯು ಕರ್ನಾಟಕದ ನಾಡದೇವಿ.ಈಗ ನಾವು ನವೆಂಬರ್ ಒಂದನ್ನು ಕರ್ನಾಟಕ ರಾಜ್ಯೋತ್ಸವದಿನವನ್ನಾಗಿ ಆಚರಿಸಿ ಕನ್ನಡ ರಾಜರಾಜೇಶ್ವರಿ ಭುವನೇಶ್ವರಿ ಮಾತೆಯನ್ನು ಪೂಜಿಸುತ್ತೇವೆ.ಬಹುಪುರಾತನ ಕಾಲದಿಂದಲೂ ಚಾಮುಂಡಿಯು ಕರ್ನಾಟಕದ ನಾಡದೇವಿ ಆಗಿ ಮೆರೆದಿದ್ದಾಳೆ.ಚಾಮುಂಡೇಶ್ವರಿ ಮೈಸೂರು ಒಡೆಯರ್ ಮನೆತನದವರ ಮನೆದೇವಿ ಎನ್ನುವ ಭಾವನೆ ವ್ಯಾಪಕವಾಗಿದೆ.ಆದರೆ ಚಾಮುಂಡಿದೇವಿಯು ಮೈಸೂರು ಅರಸರ ಆಳ್ವಿಕೆ ಪ್ರಾರಂಭವಾಗುವ ಸಾವಿರಾರು ವರ್ಷಗಳ ಮುಂಚೆಯೇ ಆ ಬೆಟ್ಟದಲ್ಲಿ ನೆಲೆಸಿದ್ದಳು.ಮೈಸೂರಿನ ಅರಸರಾದ ಒಡೆಯರ್ ಮನೆತನದವರು ತಮ್ಮ ಸಾಮ್ರಾಜ್ಯಕ್ಕೆ ರಕ್ಷಣೆ ಸಿಗಲೆಂದು ಚಾಮುಂಡಿಯನ್ನು ಆರಾಧಿಸಿ,ದೇವಸ್ಥಾನವನ್ನು ಕಟ್ಟಿಸಿದರು ಮತ್ತು ಚಾಮುಂಡಿಯನ್ನು ತಮ್ಮ ಕುಲದೈವವಾಗಿ ಸ್ವೀಕರಿಸಿದರು.

ಮೈಸೂರಿಗೆ ಬಹುಪುರಾತನ ಇತಿಹಾಸವಿದೆ.ಮಹಿಷಾಸುರನ ರಾಜಧಾನಿಯಾಗಿದ್ದ ಮೈಸೂರನ್ನು ಹಿಂದೆ ‘ ಮಹಿಷ ಮಂಡಲ’ ಎಂದು ಕರೆಯಲಾಗುತ್ತಿತ್ತು.ಮಹಿಷಾಸುರನು ಮದೋನ್ಮತ್ತನಾಗಿ ವರ್ತಿಸಿ ದೇವತೆಗಳನ್ನು ಕಾಡತೊಡಗಿದ.ಮಹಿಷನು ಪುರುಷರಾರಿಂದಲೂ ತನಗೆ ಸಾವು ಬರಬಾರದು ಎಂದು ಶಿವನಿಂದ ವರಪಡೆದಿರುತ್ತಾನೆ.ಇದನ್ನರಿತ ದೇವತೆಗಳು ದೇವಿ ಪಾರ್ವತಿಯನ್ನು ಪ್ರಾರ್ಥಿಸುತ್ತಾರೆ ತಮ್ಮನ್ನು ರಕ್ಕಸ ಮಹಿಷನ ಉಪಟಳ- ಉಪದ್ರವಗಳಿಂದ ಕಾಪಾಡಲು.ಕೋಣನ ತಲೆಯನ್ನು ಹೊಂದಿದ್ದ ಉನ್ಮತ್ತ ಮಹಿಷನನ್ನು ಬೆಟ್ಟದಲ್ಲಿ ಕೊಂದು ತಾಯಿ ದುರ್ಗೆಯು ಭಕ್ತೋದ್ಧಾರಕ್ಕೆ ನೆಲೆ ನಿಂತ ಸ್ಥಳವೇ ಚಾಮುಂಡಿಬೆಟ್ಟ.ಚಂಡ ಮತ್ತು ಮುಂಡ ಎನ್ನುವ ಇಬ್ಬರು ರಾಕ್ಷಸರನ್ನು ಕೊಂದಿದ್ದರಿಂದ ದುರ್ಗಾದೇವಿಗೆ ಚಾಮುಂಡಿ ಎನ್ನುತ್ತಾರೆ.

ಪ್ರಗತಿ ಪರರು ಕೆಲವರು ಚಾಮುಂಡಿ ದೇವಿಯು ಮಹಿಷ ಮತ್ತು ಚಂಡ- ಮುಂಡರನ್ನು ಕೊಂದದ್ದನ್ನು ಆಕ್ಷೇಪಿಸಿತ್ತಾರೆ.ಮಹಿಷ ಮತ್ತು ಚಂಡ ಮುಂಡರು ನೆಲಮೂಲದ ಸಂಸ್ಕೃತಿಯವರು,ಚಾಮುಂಡಿ ಪುರೋಹಿತರ ಇಲ್ಲವೇ ಆರ್ಯರ ದೇವಿ ಎನ್ನುವುದು ಅವರ ವಾದ.ಈ ವಾದ ಅರ್ಥಹೀನವಾದದ್ದು.ಭಾರತದಲ್ಲಿ ಮಾತ್ರವಲ್ಲ ವಿಶ್ವದಾದ್ಯಂತ ಮೊದಲು ಆರಂಭಗೊಂಡ ಆರಾಧನಾ ಪದ್ಧತಿಯೇ ಮಾತೃದೇವಿಯ ಆರಾಧನೆ.ಪುರುಷದೇವರುಗಳ ಆಗಮನಕ್ಕಿಂತ ಮುಂಚೆಯೇ ಹೆಣ್ಣು ದೇವತೆಗಳ ಆರಾಧನೆ ನಡೆಯುತ್ತಿತ್ತು.ಚಾಮುಂಡೇಶ್ವರಿಯು ಈ ನೆಲದ ಸಂಸ್ಕೃತಿಯ ಪ್ರತೀಕ,ನೆಲಮೂಲ ಸಂಸ್ಕೃತಿಯ ದೇವಿ.ದುಷ್ಟರು ಯಾರಾದರೇನು ಅವರು ವಧಾರ್ಹರು,ನಿಗ್ರಹಾರ್ಹರು.ದೇವಿ ಚಾಮುಂಡಿಯು ಮಹಿಷ ಮತ್ತು ಚಂಡ ಮುಂಡರಿಬ್ಬರನ್ನು ಅವರು ದುಷ್ಟರು,ಮಿತಿ ಮೀರಿದ ದೌರ್ಜನ್ಯ ಎಸಗಿದ್ದರು ಎನ್ನುವ ಕಾರಣದಿಂದ ಕೊಂದಳೇ ಹೊರತು ಆಕೆ ಪುರೋಹಿತರ ಹಿತ ಕಾಯಲು ರಾಕ್ಷಸರನ್ನು ಕೊಲ್ಲಲಿಲ್ಲ.ಮುಂಡ ಎನ್ನುವ ಬುಡಕಟ್ಟು ಜನಾಂಗದ ವಿಧ್ವಂಸಕಿ ಚಾಮುಂಡಿ ಎನ್ನುವ ವಾದವೂ ಹುರುಳಿಲ್ಲದು.’ ಚಾಮುಂಡಾ ಎನ್ನುವ ಪದದಲ್ಲಿ ‘ ಚಾ’ ಪೂರ್ವಪದವಾಗಿಯೂ ‘ ಮುಂಡ’ ಉತ್ತರಪದವಾಗಿಯೂ ಇದೆ ಎನ್ನುವುದನ್ನು ಗಮನಿಸಬೇಕು ಚಾ– ಮುಂಡ ಎನ್ನುವುದು ಬರಬರುತ್ತ ಚಾಮುಂಡಾ ಎಂದು ಉಚ್ಛರಿಸಲ್ಪಡುತ್ತಿದೆ.’ ಚಾ’ ಎಂದರೆ ತಾಯಿ,ರಕ್ತಕುಡಿಯುವವಳು,ರುಂಡ ತರಿದವಳು ಎನ್ನುವ ಅರ್ಥಗಳಿವೆ.ದೇವಿಯು ರಕ್ಕಸರ ತಲೆಗಳನ್ನು ಕಡಿದು ತಿಂದಳು ಎನ್ನುತ್ತದೆ ‘ ದುರ್ಗಾಸಪ್ತಶತಿ’. ಚಿದಾನಂದಾವಧೂತರು ತಮ್ಮ ‘ ಪಾರ್ವತಿ ಮಹಾತ್ಮೆ’ ಎನ್ನುವ ದೇವಿಪುರಾಣದಲ್ಲಿಯೂ ದೇವಿಯು ರಕ್ಕಸರ ಶಿರಗಳನ್ನು ಕಡಿದು ತಿಂದಳು ಎನ್ನುತ್ತಾರೆ.ಇದರರ್ಥ ಏನು? ಮಾಂಸಹಾರ ಪದ್ಧತಿಯು ದೇಶದ ಮೂಲನಿವಾಸಿಗಳಾದ ಶೂದ್ರರು,ದ್ರಾವಿಡರ ಆಹಾರ ಪದ್ಧತಿ ಆಗಿತ್ತು.ಚಾಮುಂಡಿಯು ರಕ್ಕಸರ ತಲೆಗಳನ್ನು ತಿನ್ನುವ ಮೂಲಕ ನೆಲಮೂಲದ ಸಂಸ್ಕೃತಿಯ ದೇವಿ ಎನ್ನುವುದನ್ನು ಸಾರಿದ್ದಾಳೆ.ದೇವಿ ಉಪಾಸಕರು ಅದರಲ್ಲೂ ತಾಂತ್ರಿಕರು ದೇವಿಯನ್ನು ಪಂಚ ಮಕಾರಗಳಿಂದ ಅಂದರೆ ಮತ್ಸ್ಯ,ಮಾಂಸ,ಮದಿರೆ,ಮೈಥುನಗಳಂತಹವುಗಳನ್ನು ಬಳಸಿ ಪೂಜಿಸುತ್ತಾರೆ.ಇಂದಿಗೂ ದೇವಿಯ ಉಪಾಸಕರಲ್ಲಿ ಕೆಲವರು ಮದ್ಯಪಾನ- ಮಾಂಸಾಹಾರ ಸೇವಿಸುತ್ತಾರೆ.ದೇವಿಯು ನಾಡಜನಪದರ ಆರಾಧ್ಯಳಾಗಿದ್ದಳು ಎನ್ನುವುದನ್ನು ಇಂತಹ ಆಚರಣೆಗಳು ಸಂಕೇತಿಸುತ್ತವೆ.

ಶಿವನು ವರಕೊಡುವ ಬೋಳೇಶಂಕರನಾದರೆ ಪಾರ್ವತಿಯು ‘ ದುಷ್ಟ ಶಿಕ್ಷಣ,ಶಿಷ್ಟ ರಕ್ಷಣೆ’ ಯ ಹೊಣೆಹೊತ್ತ ಶಿವಕುಟುಂಬಿನಿ.ನಿಗ್ರಹಾನುಗ್ರಹ ಸಮರ್ಥಳಾದ ದೇವಿ ದುರ್ಗೆಯೇ ಮತ್ತೊಂದು ಹೆಸರೇ ಚಾಮುಂಡಿ.

ಚಾಮುಂಡಿಯ ಮಂತ್ರವೂ ಕೂಡ ಚಾಮುಂಡಿಯು ನೆಲಮೂಲದ ದೇವಿ ಎನ್ನುವುದನ್ನು ಒತ್ತಿ ಹೇಳುತ್ತದೆ.” ಓಂ ಐಂ ಹ್ರೀಂ ಕ್ಲೀಂ ಚಾಮುಂಡಾಯೈ ವಿಚ್ಛೆ’ ಎನ್ನುವುದು ಚಾಮುಂಡಿ ದೇವಿಯಿ ಮೂಲ ಮಂತ್ರ.ಎಲ್ಲ ದೇವ ದೇವಿಯರ ಮಂತ್ರಗಳಲ್ಲಿ ಕೊನೆಗೆ ‘ ನಮಃ’ ಎನ್ನುವ ನಮಸ್ಕಾರಭಾವ ಇರುತ್ತಿದ್ದರೆ ಚಾಮುಂಡಿ ನವಾರ್ಣ ಮಂತ್ರದಲ್ಲಿ ವಿಚ್ಛೆ ಎನ್ನುವ ಭಾಗ ಇದೆ.ವಿಚ್ಚೆ,ಬಿಚ್ಚೆ ಇವು ದೇಶೀಯ ಪದಗಳಾಗಿದ್ದು ಶರಣಾಗತಿ ಎಂಬ ಅರ್ಥ ಹೊರಹೊಮ್ಮಿಸುತ್ತವೆ.ಇತರ ಮಂತ್ರಗಳಂತೆ ” ನಮಃ” ಅಥವಾ ” ಸ್ವಾಹಾ” ಕಾರಗಳಿಲ್ಲದ ಚಾಮುಂಡಿ ನವಾರ್ಣ ಮಂತ್ರವು ವಿಚ್ಚೇ ಎನ್ನುವ ದೇಶಿ ಪದವನ್ನು ಬಳಸಿ ದುಷ್ಟಶಿಕ್ಷಕಿ,ಶಿಷ್ಟರಕ್ಷಕಿಯಾದ ದೇವಿ ಚಾಮುಂಡಿಯಲ್ಲಿ ಪ್ರಾರ್ಥಿಸುತ್ತೇವೆ ಎಂದುದೇವಿಯನ್ನು ಸ್ಮರಿಸುವ ಮುಲಕ ನಾಡಜನಪದರು ತಮ್ಮ ಭಕ್ತ್ಯಾತಿಶಯವನ್ನು ಮೆರೆದಿದ್ದಾರೆ.

29.00.2022