ಅಭಿಶಾಪ
ಲೇಖಕ: ರವಿನಾಯಕ ಜಾನೇಕಲ್
ಈ ಪ್ರಪಂಚದ ಸೃಷ್ಟಿಕಾರ್ಯ ಅದೇ ತಾನೇ ಮುಗಿದಿತ್ತು. ಬ್ರಹ್ಮನು ಸತ್ಯ, ಅಸತ್ಯ, ಅಗ್ನಿ, ವರುಣರನ್ನು ಕರೆದು ಅಮರತ್ವನ್ನಂಟುಮಾಡುವ ಒಂದು ಫಲವನ್ನು ಕೊಟ್ಟು ಅವರೆಲ್ಲರೂ ಭೂಮಿಗೆ ಹೋಗಿ ಅಲ್ಲಿ ಹಣ್ಣನ್ನು ಸರಿಯಾಗಿ ಹಂಚಿಕೊಂಡು ತಿನ್ನುವಂತೆ ಹೇಳಿದ.
ಕ್ರಮಿಸಬೇಕಾದ ದಾರಿ ಧೀರ್ಘವಾಗಿತ್ತು. ಆದರೂ ಅಮರ ಫಲ ಸಿಕ್ಕಿದ್ದಿರಿಂದ ಸಹರ್ಷರಾಗಿಯೇ ಆ ನಾಲ್ವರು ಭೂಮಿಯತ್ತ ಕ್ರಮಿಸಿತೊಡಗಿದರು. ಈ ಹಣ್ಣನ್ನು ತಾನೊಬ್ಬನೇ ಯಾಕೆ ಕಬಳಿಸಬಾರದೆಂಬ ಕೆಟ್ಟ ಯೋಚನೆ ಅಸತ್ಯಕ್ಕೆ ಬಂತು. ಆದ್ರೆ ಹಾಗೆ ಮಾಡಹೋದರೆ ಉಳಿದ ಮೂವರು ತನ್ನನ್ನು ಸುಮ್ಮನೆ ಬಿಟ್ಟಾರೆ ? ಎಂಬ ವಿಚಾರವು ಅದಕ್ಕೆ ಬಾರದಿರಲಿಲ್ಲ
ಈ ವಿಚಾರ ಬಂದಿದ್ದೆ ತಡ ಅದು ವರುಣನ ಬಳಿ ಹೋಗಿ ಆ ಮಾತು, ಈ ಮಾತು ಆಡುತ್ತಾ “ನಿನ್ನಲ್ಲಿ ಹೇಗೋ ಸಾಕಷ್ಟು ಶಕ್ತಿ ಇದೆ ಆ ಶಕ್ತಿಯನ್ನು ಉಪಯೋಗಿಸಿ ಅಗ್ನಿಯನ್ನು ಹೊಡೆದು ಹಾಕಿದರೆ ಅವನ ಪಾಲಿನ ಹಣ್ಣನ್ನು ನಾವಿಬ್ಬರು ತಿನ್ನಬಹುದಲ್ಲವೇ? ಅಂದಾಗ, ಪಾಲಿಗೆ ಬರುವುದಕ್ಕಿಂತ ಹೆಚ್ಚಿನದನ್ನು ತಿಂದರೆ ಹೆಚ್ಚು ಅಮರತ್ವ ಬರುವುದೆಂದು ಭಾವಿಸಿದ
ವರುಣ ಆಗ್ನಿಯನ್ನು ಕೂಡಲೇ ಹೊಡೆದು ಹಾಕಿದ,
ಬಳಿಕ ಅದು ಸತ್ಯದ ಬಳಿ ಹೋಗಿ “ನೋಡಿದೆಯಾ ಗೆಳೆಯ ಈ ವರುಣನ ಮಿತ್ರಾಘಾತುಕನವನ್ನ? ಇಂಥವನಿಗೆ ಅಮರತ್ವ ಉಂಟಾದರೆ ಜಗತ್ತಿನ ಗತಿಯೇನಾದೀತು ?
ನಾವಿಬ್ಬರು ಪರ್ವತಾಗ್ರಕ್ಕೆ ಹೋಗಿ ಹಣ್ಣನ್ನು ಹಂಚಿಕೊಳ್ಳುವ ಎಂದಾಗ ಸತ್ಯಕ್ಕೆ ಅಸತ್ಯದ ಮಾತೇ ಸರಿಯೆನಿಸಿತು,
ಹೇಳಿ ಕೇಳಿ ವರುಣ ನೀರಿನ ದೇವತೆ ಅಂದಮೇಲೆ ಪರ್ವತವನ್ನ ಹೇಗೆ ತಾನೇ ಏರಿಯಾನು? ವರುಣನು ಎಷ್ಟು ಬೊಬ್ಬೆ ಹೊಡೆದರು ಕಿವಿಯಮೇಲೆ ಹಾಕಿಕೊಳ್ಳದ ಸತ್ಯ ಅಸತ್ಯಗಳೆರಡೂ ವರುಣನನ್ನು ಬಿಟ್ಟು ಪರ್ವತವನ್ನ ಏರತೊಡಗಿದವು. ಪರ್ವತಾಗ್ರವನ್ನ ತಲುಪುತ್ತಲೇ ಅಸತ್ಯ ಸತ್ಯದ ಕತ್ತನ್ನು ಹಿಸುಕತೊಡಗಿತು. ಕಕ್ಕಾಬಿಕ್ಕಿಯಾದ ಸತ್ಯ ಏದುಸಿರು ಬಿಡುತ್ತಾ ಬ್ರಹ್ಮನನ್ನು ನೆನೆಯಿತು. ಮೇಲಿನಿಂದ ಅಶರೀರವಾಣಿಯೊಂದು ಬಂತು, “ಸತ್ಯ ನೀನಿಷ್ಟು ಪ್ರಬಲನಾಗಿದ್ದರೂ ಮೋಸಮಾಡಿ ಗಳಿಸಬೇಕೆಂಬ ದುರ್ಬುದ್ಧಿ ನಿನಗೆ ಬಂತು! ಹಾಗಾಗಿ ಅಹೋರಾತ್ರಿ ಒಂದು ಕ್ಷಣವೂ ಬಿಡದೆ ಅಸತ್ಯದೊಂದಿಗೆ ಹೊಡೆದಾಡುತ್ತಿರುವುದೇ ನೀನೀಗ ಅನುಭವಿಸುಬೇಕಾದ ಶಿಕ್ಷೆ ” ಎಂದಿತು. ಅಂದಿನಿಂದ ಅಸತ್ಯದೊಂದಿಗೆ ಸತ್ಯದ ಸಂಗ್ರಾಮ ನೆಡೆಯುತ್ತಲಿದೆ.

ಮೊ:8310271403