ವಿಮರ್ಶೆ :ಅತ್ತ ಆಕರವೂ ಆಗದ ಇತ್ತ ಚರಿತ್ರೆಯೂ ಆಗದ ರಾಯಚೂರು ಜಿಲ್ಲೆಯ ಗ್ರಾಮ ಚರಿತ್ರೆ ಕೋಶ – ಮುಕ್ಕಣ್ಣ ಕರಿಗಾರ

ಅತ್ತ ಆಕರವೂ ಆಗದ ಇತ್ತ ಚರಿತ್ರೆಯೂ ಆಗದ ರಾಯಚೂರು ಜಿಲ್ಲೆಯ ಗ್ರಾಮ ಚರಿತ್ರೆ ಕೋಶ

ಲೇಖಕರು:ಮುಕ್ಕಣ್ಣ ಕರಿಗಾರ

ಕರ್ನಾಟಕ ಜಾನಪದ ವಿಶ್ವವಿದ್ಯಾಲಯವು ಸರಕಾರದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಾಯೋಜಕತ್ವದಡಿ ‘ ಕರ್ನಾಟಕ ಗ್ರಾಮ ಚರಿತ್ರೆ ಕೋಶ’ ಎನ್ನುವ ಗ್ರಾಮಗಳ ಮಾಹಿತಿ ಸಂಗ್ರಹದ ವಿನೂತನ ಕಾರ್ಯಕೈಗೆತ್ತಿಕೊಂಡು ಮುಗಿಸಿದೆ.ರಾಜ್ಯದ ಎಲ್ಲಾ ಜಿಲ್ಲೆಗಳ ಚರಿತ್ರೆ ಕೋಶಗಳನ್ನು ಹೊರತಂದೂ ಆಗಿದೆ.ಇತ್ತೀಚೆಗೆ ಯಾದಗಿರಿ ಜಿಲ್ಲೆಯ ಗ್ರಾಮ ಚರಿತ್ರೆ ಕೋಶವನ್ನು ಓದಿದಾಗ ಅದು ನೀಡುವ ವಿಪುಲ ಮಾಹಿತಿಯು ನನ್ನನ್ನು ಬೆರಗುಗೊಳಿಸಿತ್ತು.ವಿಶ್ವವಿದ್ಯಾಲಯದಂತಹ ಸಂಸ್ಥೆ ಮಾಡಬಹುದಾದ ನಂಬಿಕೆಗೆ ಅರ್ಹ ಆಕರ ಗ್ರಂಥ ಅದು ಎನ್ನುವ ಭಾವನೆ ಮೂಡಿತ್ತು.ಇಂದು ( ಸೆಪ್ಟೆಂಬರ್ 28) ಅದೇ ಭಾವನೆಯಿಂದ ಬೆಂಗಳೂರಿನ ಸಪ್ನಾ ಬುಕ್ ಸ್ಟಾಲಿನಲ್ಲಿ ” ರಾಯಚೂರು ಜಿಲ್ಲೆ” ಯ ಗ್ರಾಮಚರಿತ್ರೆ ಕೋಶವನ್ನು ಖರೀದಿಸಿ ಕಣ್ಣಾಡಿಸಿದಾಗ ಎಂಟು ನೂರು ರೂಪಾಯಿಗಳನ್ನು ಕೊಟ್ಟು ಖರೀದಿಸಿದ್ದು ‘ಭಾರ’ವೆನ್ನಿಸಿತು.ನಾನು ಪುಸ್ತಕಗಳ ಖರೀದಿಗೆ ಎಂದೂ ಹಿಂದೆ ಮುಂದೆ ನೋಡುವುದಿಲ್ಲ.ಉಪಯುಕ್ತವೆನ್ನುವ ಪುಸ್ತಕ ಅದು ಎಷ್ಟೇ ಬೆಲೆಯುಳ್ಳದ್ದಾಗಲಿ ಖರೀದಿಸುವೆ.ಹಾಗಾಗಿ ನನ್ನ ಸಂಗ್ರಹದಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯ ಪುಸ್ತಕಗಳಿವೆ.ಯಾವುದೇ ವಿಷಯದ ಬಗ್ಗೆ ಕನ್ನಡ,ಇಂಗ್ಲಿಷ್ ಮತ್ತು ಸಂಸ್ಕೃತ ಭಾಷೆಯ ಪುಸ್ತಕಗಳು ನನ್ನ ಅಧ್ಯಯನ ಕೋಣೆಯಲ್ಲಿ ದೊರೆಯುತ್ತವೆ.ಆದರೆ ನಾನು ಖರೀದಿಸಿದ ಪುಸ್ತಕ ಒಂದು ಓದಿದಾಗ ನನಗೆ ಸಂತೃಪ್ತಿ ಕೊಟ್ಟರಷ್ಟೆ ಆ ಪುಸ್ತಕದ ಬಗ್ಗೆ ನನಗೆ ಸದಭಿಪ್ರಾಯ ಮೂಡುತ್ತದೆ.

ಜಾನಪದ ವಿಶ್ವವಿದ್ಯಾಲಯವು ಸಿದ್ಧಪಡಿಸಿ ಪ್ರಕಟಿಸಿದ ರಾಯಚೂರು ಜಿಲ್ಲೆಯ ಗ್ರಾಮಕೋಶವು ಅಪೂರ್ಣ ಮಾಹಿತಿಗಳಿಂದ ಕೂಡಿದ,ತಪ್ಪು ತಪ್ಪು ಮಾಹಿತಿಗಳಿಂದ ಕೂಡಿದ ವಿಫಲ ಕೋಶ ಎನ್ನದೆ ವಿಧಿಯಿಲ್ಲ.ಕುತೂಹಲಕ್ಕೆ ಮೊದಲು ನಮ್ಮೂರು ಗಬ್ಬೂರಿನ ಬಗ್ಗೆ ಕಣ್ಣಾಡಿಸಿದಾಗಲೇ ಇದೊಂದು ವ್ಯರ್ಥಸಾಹಸದ ಪುಸ್ತಕ ಎಂದು ಮನವರಿಕೆಯಾಯಿತು.

ನಮ್ಮೂರು ಗೊಬ್ಬೂರು ಇತಿಹಾಸಪ್ರಸಿದ್ಧ ಊರು.ಎರಡನೇ ಹಂಪೆ ಎಂದು ಪ್ರಸಿದ್ಧಿ ಪಡೆಯುವಷ್ಟು ದೇವಾಲಯಗಳು ಅಲ್ಲಿವೆ.ಗಬ್ಬೂರಿಗೆ ಇರುವಷ್ಟು ಐತಿಹಾಸಿಕ,ಸಾಹಿತ್ಯಕ ಮತ್ತು ಸಾಂಸ್ಕೃತಿಕ ಹಿರಿಮೆ ಜಿಲ್ಲೆಯ ಯಾವ ಗ್ರಾಮಕ್ಕೂ ಇಲ್ಲ.ಆದರೆ ಈ ಗ್ರಾಮ ಚರಿತ್ರೆಕೋಶದಲ್ಲಿ ಗೊಬ್ಬೂರಿನ ಕುರಿತ ಮಾಹಿತಿ ತೀರ ಲಘುವಾಗಿದೆ,ಅದನ್ನೊಂದು ಉಡಾಫೆಯ ಬಗೆಯಲ್ಲಿ ವಿವರಿಸಲಾಗಿದೆ.ಚರಿತ್ರೆ ಕೋಶದಲ್ಲಿ ದಾಖಲಾದ ಗೊಬ್ಬೂರಿನ ಮಾಹಿತಿಯನ್ನು ಓದಿದಾಗ ನನ್ನಲ್ಲಿ ನಗು ಮತ್ತು ಆಕ್ರೋಶಗಳೆರಡೂ ಏಕ ಕಾಲಕ್ಕೆ ಉಂಟಾದವು.ರಾಯಚೂರು ಜಿಲ್ಲೆಯ ಗ್ರಾಮ ಚರಿತ್ರೆ ಕೋಶದಲ್ಲಿ ದಾಖಲಾದ ಗೊಬ್ಬೂರಿನ ಮಾಹಿತಿ ;

” ದೇವದುರ್ಗ ತಾಲ್ಲೂಕು ಕೇಂದ್ರದಿಂದ ಪೂರ್ವಕ್ಕೆ ೨೭ ಕಿ ಮೀ ದೂರದಲ್ಲಿದೆ.ಶಾಸನಗಳು ಇದನ್ನು ಗೋಪುರಪುರ ಎಂದು ಕರೆದಿವೆ.ಭೌಗೋಳಿಕ ವಿಸ್ತೀರ್ಣ 52852 ಎಕರೆಗಳು.ಕೆಂಪು,ಕಪ್ಪು ಮತ್ತು ಮಸುಬು ಮಣ್ಣಿನ ಲಕ್ಷಣದಿಂದ ಕೂಡಿದೆ.ನಾಗಭೂಷಣ ಗುಡ್ಡ ಮತ್ತು ಸಿದ್ದೇಶ್ವರ ಗುಡ್ಡಗಳಿವೆ.ಕೊಳವೆಬಾವಿ,ತೆರೆದ ಬಾವಿಗಳಿವೆ.ದಾಸರಬಾವಿ,ಸಿದ್ದರಬಾವಿ,ನಾಗರಬಾವಿಗಳಿವೆ.ಈ ನೀರನ್ನು ಕೃಷಿಗೆ ಬಳಸಿಕೊಳ್ಳುತ್ತಾರೆ.ಕೈ ಪಂಪು ಮತ್ತು ನೀರಿನ ತೊಟ್ಟಿಯಲ್ಲಿ ನೀರನ್ನು ಸಂಗ್ರಹಿಸಿ ಕುಡಿಯಲು ಪೂರೈಸುತ್ತಾರೆ.ಕೊಪ್ಪೆಯರು/ ಗೊಪ್ಪೆ ಜನಾಂಗ ವಾಸವಿದ್ದ ಊರು.
ಕೃಷಿ ಪ್ರಧಾನವಾಗಿದ್ದು ಜೋಳ,ಸಜ್ಜಿ,ಶೇಂಗ,ತೊಗರಿ ಪ್ರಧಾನ ಬೆಳೆಗಳು.ಹೆಸರು,ಕಡಲೆ,ಸೂರ್ಯಕಾಂತಿ,ಅಲಸಂದಿ,ಉಪಬೆಳೆಗಳು.ಟೊಮೊಟೊ,ಬದನೆಕಾಯಿ,ಈರುಳ್ಳಿ,ಬೆಂಡೆಕಾಯಿ,ಮೆಣಸಿನ ಕಾಯಿ ತೋಟದ ಬೆಳೆಗಳು.ಸಾಂಪ್ರದಾಯಿಕ ಹೈನುಗಾರಿಕೆ ಇದೆ.
೨೦೧೧ ರ ಜನಗಣತಿಯ ಪ್ರಕಾರ ಒಟ್ಟು ೧೪೦೦ ಜನಸಂಖ್ಯೆಯಿದೆ.ನಾಯಕರು,ಮುಸ್ಲಿಂರದು ದೊಡ್ಡ ಸಮುದಾಯ.ಕಬ್ಬೇರ,ಉಪ್ಪಾರ,ಮಾದಿಗರು,ಲಿಂಗಾಯತರು,ಅಗಸರು,ಮ್ಯಾದಾರ,ವಡ್ಡರು ಸಣ್ಣಸಮುದಾಯ.ಕನ್ನಡ ಪ್ರಮುಖ ಭಾಷೆ.ಹಿಂದಿ ಬಳಕೆಯಲ್ಲಿದೆ.ಗುಡಿಸಲುಮನೆ,ಮಣ್ಣಿನ ಮನೆ,ಕಲ್ಲಿನ ಕಾಂಕ್ರಿಟ್ ಮನೆಗಳಿವೆ.

ಗ್ರಾಮವು ರಾಯಚೂರು ಲೋಕಸಭಾ ಕ್ಷೇತ್ರ,ಗೊಬ್ಬೂರು ಜಿಲ್ಲಾ ಪಂಚಾಯತಿ,ತಾಲೂಕು ಪಂಚಾಯತಿ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಗೆ ಸೇರಿದೆ.ಸ್ತ್ರೀಶಕ್ತಿ ಸಂಘಗಳಿವೆ.ಸಂಚಾರಕ್ಕೆ ರಸ್ತೆ ಮಾರ್ಗವಿದ್ದು,ಸರಕಾರಿ ಮತ್ತು ಖಾಸಗಿ ವಾಹನಗಳು ಸಂಚರಿಸುತ್ತವೆ.ಸ್ಥಿರ ಮತ್ತು ಚರ ದೂರವಾಣಿ ಬಳಕೆಯಲ್ಲಿವೆ.

ಸಾಕ್ಷರತೆ ಪ್ರಮಾಣ ೪೫% ರಷ್ಟು ಇದೆ.ಎರಡು ಅಂಗನವಾಡಿ,ಒಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿವೆ.ಶಾಲೆಯಲ್ಲಿ ಬಿಸಿಯೂಟ,ಕ್ಷೀರಭಾಗ್ಯ ಯೋಜನೆಗಳು ಜಾರಿಯಲ್ಲಿವೆ.ಸಂಧ್ಯಾ ಸುರಕ್ಷಾ ಯೋಜನೆ,ವಿಕಲ ಚೇತನ,ವಿಧವಾ ವೇತನ,ಭಾಗ್ಯಲಕ್ಷ್ಮೀ,ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿದ್ದಾರೆ.

ಗ್ರಾಮದಲ್ಲಿ ಹನುಮಂತ,ಕರಿಯಪ್ಪ,ದ್ಯಾವಮ್ಮ ಗುಡಿಗಳಿವೆ.ದೇವರಿಗೆ ಹರಕೆ,ಬಲಿ ಕೊಡುವ ಸಂಪ್ರದಾಯವಿದೆ.

ಸಂಪ್ರದಾಯದ ಪದ,ತತ್ವಪದ,ಸೋಬಾನೆ ಪದ,ಸುಗ್ಗಿಯ ಪದ ಹಾಡುವ ಕಲಾವಿದರು ಬೀದಿ ನಾಟಕ ಆಡುವವರು ಇದ್ದಾರೆ.ಶರಣ ಗೊಬ್ಬರದು ಚೌಡಯ್ಯ ಇದೇ ಗ್ರಾಮದವರು ”

ಇದು ಜಾನಪದ ವಿಶ್ವವಿದ್ಯಾಲಯದ ಗ್ರಾಮ ಚರಿತ್ರೆ ಕೋಶ ಕಟ್ಟಿಕೊಡುವ ಗೊಬ್ಬೂರಿನ ಇತಿಹಾಸ!ಮಾಹಿತಿ ಸಂಗ್ರಹಕಾರರ ಅಜ್ಞಾನವೋ,ಅಸಡ್ಡೆಯೋ ಚರಿತ್ರೆಕೋಶದಂತಹ ಮಹತ್ವದ ದಾಖಲೆಯಲ್ಲಿ ಗಬ್ಬೂರಿನ ಮಾಹಿತಿ ಜೊಳ್ಳುಜೊಳ್ಳಾಗಿದೆ.ಸಂಪಾದಕರು ರಾಯಚೂರು ಜಿಲ್ಲೆಯವರೆ! ಗೊಬ್ಬೂರಿನ ಬಗ್ಗೆ ಮಾಹಿತಿ ಉಳ್ಳವರೆ.ಅವರಿಗೆ ಮಾಹಿತಿಕಲೆ ಹಾಕಿದವರ ವಿವರಗಳನ್ನು ಓದುವಷ್ಟು ಬಿಡುವು ಇರಲಿಲ್ಲವೋ ಅಥವಾ ಅವಸರದಲ್ಲಿ ಮುದ್ರಿಸಿದ್ದಾರೋ ಗೊತ್ತಿಲ್ಲ– ಐತಿಹಾಸಿಕ ಮಹತ್ವದ ಗೊಬ್ಬೂರಿಗೆ ಅಪಚಾರ ಎಸಗಿದ್ದಾರೆ.ಬರಿಯ ಗೊಬ್ಬೂರಿಗೆ ಸಂಬಂಧಿಸಿದ ಮಾಹಿತಿಯ ಬಗ್ಗೆ ಮಾತ್ರವಲ್ಲ ಸುಮಾರು ನಲವತ್ತಕ್ಕೂ ಹೆಚ್ಚು ಗ್ರಾಮಗಳ ಮಾಹಿತಿ ಓದಿ ಇದೊಂದು ವ್ಯರ್ಥ ಪ್ರಯತ್ನ ಎನ್ನುವ ಅಭಿಪ್ರಾಯಕ್ಕೆ ಬಂದಿದ್ದೇನೆ.

ಗೊಬ್ಬೂರು ನನ್ನ ಊರು.ನಾನು ಬೆಳೆದು ಆಡಿ ದೊಡ್ಡವನಾದ ಊರು.ಗೊಬ್ಬೂರಿನ ಇಂಚಿಂಚು ಇತಿಹಾಸವೂ ನನಗೆ ಗೊತ್ತಿದೆ.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಯ ಪ್ರಾಯೋಜಿತ ಕೋಶದ ಮಾಹಿತಿ ಸಂಗ್ರಹಕ್ಕೆ ಕೈ ಹಾಕಿದವರಿಗೆ ಅದೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೇರಿದ ಹಿರಿಯ ಅಧಿಕಾರಿ ಒಬ್ಬರು ಇಲ್ಲಿದ್ದಾರೆ,ಅವರೂ ಓದಬಹುದು ಈ ಚರಿತ್ರೆಯನ್ನು ಎನ್ನುವ ಕನಿಷ್ಟ ಜ್ಞಾನವಾದರೂ ಇರಬೇಕಿತ್ತು.ಗೊಬ್ಬೂರಿನಲ್ಲಿ ಯಾರೂ‌ ಓದುವುದಿಲ್ಲ,ಏನು ಬರೆದರೂ ನಡೆದೀತು ಎನ್ನುವ ಅಸಡ್ಡೆಯಲ್ಲಿ ಗೊಬ್ಬೂರಿನ ಮಾಹಿತಿ ನೀಡಿದ್ದಾರೆ.ಗೋಪುರಗ್ರಾಮವಾಗಿತ್ತು ಎನ್ನುವ ಶಾಸನೋಕ್ತ ಒಂದು ವಿಚಾರ ಮತ್ತು ಕೆಲವು ಗುಡ್ಡ,ಬಾವಿಗಳನ್ನು ಪ್ರಸ್ತಾಪಿಸಿದ್ದು ಬಿಟ್ಟರೆ ಗಬ್ಬೂರಿನ ಬಗ್ಗೆ ಇವರು ಹೇಳಿದ್ದೆಲ್ಲ ಸುಳ್ಳು.
ಗೊಬ್ಬೂರು ಒಂದೇ ಗ್ರಾಮ ಇರುವ ಗ್ರಾಮ ಪಂಚಾಯತಿ ಕೇಂದ್ರ.ಗ್ರಾಮ ಪಂಚಾಯತಿಯ ರಚನೆಗೆ ಕನಿಷ್ಟ 5000 ಜನಸಂಖ್ಯೆಯ ಅಗತ್ಯ ಇದೆ ಎನ್ನುವುದು ಸಾಮಾನ್ಯ ಓದು ಬರಹ ಬಲ್ಲವರಿಗೂ ಗೊತ್ತಿರುವ ಸಂಗತಿ.ಗಬ್ಬೂರಿನಲ್ಲಿ 1993 ರಿಂದಲೇ ಗ್ರಾಮ ಪಂಚಾಯತಿ ಇದೆ.ಆದರೆ ಈ ಚರಿತ್ರೆ ಹೇಳುವಂತೆ ” 2011ರ ಜನಗಣತಿಯಂತೆ 1400 ಜನಸಂಖ್ಯೆ ಇದೆ”! ಮತ್ತೊಂದು ಸೋಜಿಗದ ಸಂಗತಿ ಎಂದರೆ ಗಬ್ಬೂರಿನಲ್ಲಿ ನಾಯಕರ ಮನೆಗಳು ನಾಲ್ಕಕ್ಕಿಂತ ಹೆಚ್ಚಿಗೆ ಇಲ್ಲ.ಆದರೆ ಈ ಚರಿತ್ರೆ ಕೋಶ ಬಣ್ಣಿಸುತ್ತದೆ ” ನಾಯಕರು,ಮುಸ್ಲಿಮರು ದೊಡ್ಡ ಸಮುದಾಯ!”.ಗ್ರಾಮದ ಬಗ್ಗೆ ವಸ್ತುನಿಷ್ಠ ಮಾಹಿತಿ ನೀಡುವ ಬದಲು ಸರಕಾರಿ ಯೋಜನೆ,ಕಾರ್ಯಕ್ರಮಗಳ ವಿವರ ಗ್ರಾಮದ ವಿವರಕ್ಕಿಂತ ಹೆಚ್ಚಿಗೆ ಇದೆ.ಸರಕಾರಿ ಯೋಜನೆಗಳು ಎಲ್ಲಾ ಗ್ರಾಮಗಳಲ್ಲಿಯೂ ಅನುಷ್ಠಾನಗೊಳ್ಳುತ್ತಿವೆ.ಅವುಗಳನ್ನೇ ವಿಶೇಷವಾಗಿ ಬಣ್ಣಿಸುವ ಅಗತ್ಯವೇನಿದೆ?
ಇನ್ನೂ ಅದ್ಭುತ ವಿವರಣೆ ಇವೆ

” ಗ್ರಾಮದಲ್ಲಿ ಹನುಮಂತ,ಕರಿಯಪ್ಪ,ದ್ಯಾವಮ್ಮ ಗುಡಿಗಳಿವೆ” ಬಹುಶಃ ಹೊಸಬಸ್ ಸ್ಟಾಂಡ್ ಅಷ್ಟೇ ಪರಿಚಯ ಇರಬಹುದು ಈ ಮಾಹಿತಿ ಸಂಗ್ರಾಹಕರಿಗೆ.ಹೊಸಬಸ್ ಸ್ಟಾಂಡ್ ಪಕ್ಕದ ಹನುಮಂತ ದೇವರು,ಕರಿಯಪ್ಪನ ಗದ್ದುಗೆ ಮತ್ತು ಅಲ್ಲೇ ದಾರಿಯಲ್ಲಿದ್ದ ಹಳೆಯ ದ್ಯಾವಮ್ಮನ ಗುಡಿ ಮಾತ್ರ ಕಂಡಿವೆ ಇವರ ಕಣ್ಣುಗಳಿಗೆ.

ಮುಂದಿನ ಮಾಹಿತಿಯಂತೂ ಹಾಸ್ಯಾಸ್ಪದ
“ಶರಣ ಗೊಬ್ಬರದ ಚೌಡಯ್ಯ ಇದೇ ಗ್ರಾಮದವರು!”
ಯಾರೀತ ಗೊಬ್ಬರದ ಚೌಡಯ್ಯ? ಎಲ್ಲಿಂದ ಕರೆತಂದರೋ ಗೊಬ್ಬರದ ಚೌಡಯ್ಯ ಎನ್ನುವ ಶರಣನನ್ನು.ಅಸಡ್ಡೆ ,ಅಜ್ಞಾನ ಸೇರಿ ಮಹತ್ವದ ದಾಖಲೆಯಾಗಬೇಕಿದ್ದ ಒಂದು ಚರಿತ್ರೆಕೋಶ ಹೇಗೆ ನಿಷ್ಪ್ರಯೋಜಕವಾಗಬಲ್ಲದು ಎನ್ನುವುದಕ್ಕೆ ” ರಾಯಚೂರು ಜಿಲ್ಲೆಯ ಗ್ರಾಮ ಚರಿತ್ರೆ ಕೋಶ”ವು ಒಂದು ಉತ್ತಮ ಉದಾಹರಣೆ.ಈ ಪುಸ್ತಕದ ಬಗ್ಗೆ,ಇದರಲ್ಲಿರುವ ಲೋಪದೋಷಗಳ ಬಗ್ಗೆ ಇನ್ನೊಂದು ಲೇಖನದಲ್ಲಿ ವಿವರವಾಗಿ ಬರೆಯುವೆ.ಸದ್ಯ ಗೊಬ್ಬೂರಿನ ವಿವರಗಳಿಗಷ್ಟೇ ಸೀಮಿತಗೊಳಿಸುವೆ.

ಗೊಬ್ಬೂರು ಶಾಸನಗಳಲ್ಲಿ ಉಲ್ಲೇಖವಾಗಿರುವಂತೆಯೇ ಇತಿಹಾಸ ಪ್ರಸಿದ್ಧ ಊರು.ಮೊದಲು ಗೋರಖಪುರ ಎಂದು ಕರೆಯಿಸಿಕೊಳ್ಳುತ್ತಿದ್ದ ಊರು ಮುಂದೆ ಗೋಪುರ,ಗೋಪುರ ಗ್ರಾಮ ಎಂದು ಹೆಸರಾದ ಪ್ರಸಿದ್ಧ ಅಗ್ರಹಾರವಾಗಿತ್ತು.ಗೊಬ್ಬೂರು ಪಂಡಿತರು,ವಿದ್ವಾಂಸರ ನೆಲೆವೀಡು ಆಗಿದ್ದುದರ ಜೊತೆಗೆ ಮಂತ್ರಾಕ್ಷತೆಯನ್ನಿತ್ತು ಭಕ್ತಸಮೂಹವನ್ನು ಉದ್ಧರಿಸುತ್ತಿದ್ದ ತಪಸ್ವಿ ಸಾಧಕರುಗಳನ್ನೊಳಗೊಂಡ ” ಗ್ರಾಮರಾಜ್ಯ” ವಾಗಿತ್ತು ಎನ್ನುತ್ತವೆ ಶಾಸನಗಳು.ಇಲ್ಲಿ ಏಳುಬಾವಿ ಬಸವಣ್ಣ,ಮೇಲುಶಂಕರ,ಸೋಮನಾಥ,ಸಿದ್ದೆಶ್ವರ ಎನ್ನುವ ಪುರಾತನ ದೇವಸ್ಥಾನಗಳ ಬಗ್ಗೆ ಉಲ್ಲೇಖವಿದೆ.ವರ್ತಮಾನದಲ್ಲಿ ಗಬ್ಬೂರು ಶರಣ ಬೂದಿಬಸವನ ಹೆಸರಿನಿಂದ ಪ್ರಸಿದ್ಧಿಗೆ ಬಂದಿದೆಯಾಗಲಿ ಹತ್ತೆಂಟು ವರ್ಷಗಳ ಕೆಳಗೆ ಬದುಕಿದ್ದ ಕರಿಯಪ್ಪನಿಂದ ಅಲ್ಲ.ಗಬ್ಬೂರಿನಲ್ಲಿ ಏಳು ಹನುಮಪ್ಪನಗುಡಿಗಳು,ಏಳು ಅಗಸೆಗಳೂ ಇದ್ದವು.ಗಬ್ಬೂರಿನಲ್ಲಿದ್ದ ದೇವಸ್ಥಾನಗಳ ಬಗ್ಗೆ ಒಂದು ಮಾತಿದೆ — ಸೊಲಗಿ( ಎರಡುವರೆಸೇರು) ಗುಗ್ಗರಿಯಲ್ಲಿ ಒಂದೊಂದು ಗುಗ್ಗರಿ ಕಾಳನ್ನು ಒಂದೊಂದು ದೇವರ ಮುಂದೆ ಇಡುತ್ತ ಬರಲು ಒಂದು ದೇವರಿಗೆ ಗುಗ್ಗರಿ ಕಡಿಮೆ ಆಯಿತಂತೆ.ಆ ಕಾರಣದಿಂದ ಆ ಬಸವಣ್ಣ ಗೋಣು ತಿರುಗಿಸಿದನಂತೆ.ಇಷ್ಟೊಂದು ದೇವಾಲಯಗಳಿದ್ದ ಊರಿನಲ್ಲಿ ಹಿಂದೆ ಊರ ಸುತ್ತ ದೊಡ್ಡ ಕೋಟೆಯೂ ಇತ್ತು,ಕೋಟೆಯ ಹೊರಗಡೆ ನೀರಿನ ಕಂದಕವೂ ಇತ್ತು.

ಗ್ರಾಮಸ್ಥರು ಇದನ್ನು ಬಭ್ರುವಾಹನನ ಮಣಿಪುರ ಎಂದೇ ನಂಬಿದ್ದಾರೆ. ಅರ್ಜುನ‌ ಈಜುತ್ತ ಪಾತಾಳದ ಉಲುಚಿಯ ಅರಮನೆಗೆ ಹೋದನೆಂದು ಹೇಳುವ ಸುಬ್ಬಣ್ಣನ ಬಾವಿ ಮತ್ತು ಬಭ್ರುವಾಹನ ಅರ್ಜುನನ ಕುದುರೆ ಕಟ್ಟಿದ ಸ್ತಂಭ ಎನ್ನುವ ಕುರುಹುಗಳನ್ನು ಈಗಲೂ ನೋಡಬಹುದು.ಬಭ್ರುವಾಹನನ ಪುರವಾಗಿರದಿದ್ದರೂ ಯಾವುದೋ ಪ್ರಸಿದ್ಧ ರಾಜಮನೆತನದ ಆಳ್ವಿಕೆಗೆ ಒಳಪಟ್ಟಿದ್ದ ಪ್ರಸಿದ್ಧ ಐತಿಹಾಸಿಕ ಕೇಂದ್ರವಾಗಿತ್ತು.ಮಾರ್ತಂಡಪ್ಪ ಎನ್ನುವ ಅನುಭಾವಕವಿ ತನ್ನ ಪದಗಳ ಅಂಕಿತವನ್ನು ‘ ಮಣಿಪುರದೀಶ’ ಎಂದು ಬಳಸಿರುವುದು ಈ ಗ್ರಾಮ ಮಣಿಪುರವಾಗಿತ್ತು ಎಂದು ಜನರು ನಂಬಲು ಕಾರಣವಾಗಿರಬಹುದು.ಹಂಪಣ್ಣಪ್ಪ ಎನ್ನುವ ಮತ್ತೊಬ್ಬ ಅನುಭಾವ ಕವಿ ತನ್ನಗುರು ದೊಡ್ಡ ಬಸ್ಸಪ್ಪನ ಹೆಸರಿನಲ್ಲಿ ” ಘನ ವೃಷಭ” ಎನ್ನುವ ಅಂಕಿತದಲ್ಲಿ ಅನುಭಾವ ಪದಗಳನ್ನು ರಚಿಸಿದ್ದಾನೆ.ಕನ್ನಡದ ಆದ್ಯ ವಚನಕಾರ ಜೇಡರ ದಾಸಿಮಯ್ಯನ ಅನುಭಾವದ ಒಗಟಿಗೆ ಉತ್ತರಿಸಿ ಆತನ ಮಡದಿಯಾದ ದುಗ್ಗಳೆಯು ಇದೇ ಗೊಬ್ಬೂರಿನವಳು.ಪ್ರಸಿದ್ಧ ವಚನಕಾರ ಬಿಬ್ಬಿಬಾಚರಸರು ಗಬ್ಬೂರಿನವರು.ಏಣಾಂಕಧರ ಸೋಮೇಶ್ವರ ಎನ್ನುವ ಅಂಕಿತದಲ್ಲಿ ವಚನಗಳನ್ನು ಬರೆದ ಬಿಬ್ಬಿಬಾಚರಸರು ಬಸವಾದಿ ಶರಣಗಣದಿಂದ ಕೊಂಡಾಡಿಸಿಕೊಂಡ ಉನ್ನತಮಹಿಮೆಯ ಶರಣವ್ಯಕ್ತಿತ್ವ ಉಳ್ಳವರಾಗಿದ್ದರು.

ಗಬ್ಬೂರಿನಲ್ಲಿ 1984 ರಿಂದಲೇ ಜೂನಿಯರ್ ಕಾಲೇಜು ಇದೆ,ಏಳು ಅಂಗನವಾಡಿ ಕೇಂದ್ರಗಳಿವೆ,ಒಂದಲ್ಲ ಮೂರ್ನಾಲ್ಕು ಕಿರಿಯ ಹಿರಿಯ ಪ್ರಾಥಮಿಕ ಶಾಲೆಗಳಿವೆ,ಪ್ರಾಥಮಿಕ ಆರೋಗ್ಯಕೇಂದ್ರವಿದೆ,ಪಶುಚಿಕಿತ್ಸಾಘಟಕವೂ ಇದೆ.ಇಂತಹ ವಿಪುಲ ಮಾಹಿತಿಯನ್ನು ಬಿಟ್ಟು ಮನಸ್ವಿ ಮಾಹಿತಿ ನೀಡಿದರದು ಇತಿಹಾಸಕ್ಕೆ ಎಸಗುವ ಅಪಚಾರ.ಸರಕಾರದ ಅನುದಾನ ಪಡೆದು ವಿಶ್ವವಿದ್ಯಾಲಯ ಒಂದು ರಚಿಸುವ ಚರಿತ್ರೆಕೋಶವು ಸಮಗ್ರ ಮಾಹಿತಿಗಳನ್ನೊಳಗೊಂಡ ಇತಿಹಾಸದ ಆಕರವಾಗಬೇಕಾಗುತ್ತದೆ.ಅಂತಹ ಆಕರ ಗ್ರಂಥದ ರಚನೆಗೆ ವಿಶೇಷಪರಿಣತಿ ಬೇಕಾಗುತ್ತದೆ.ಕಾಟಾಚಾರಕ್ಕೆ ಒಂದು ಚರಿತ್ರೆಕೋಶ ತರಬೇಕಿದ್ದರೆ ಅದಕ್ಕೆ ಜಾನಪದ ವಿಶ್ವವಿದ್ಯಾಲಯವೇ ಏಕೆ ಬೇಕು? ಸಾರ್ವಜನಿಕರ ತೆರಿಗೆಯ ಹಣವನ್ನು ಇಂತಹ ವ್ಯರ್ಥ ಕೋಶಗಳಿಗಾಗಿ ವಿನಿಯೋಗಿಸದೆ ಜನೋಪಯೋಗಿಯಾದ ಅರ್ಥಪೂರ್ಣ ಕಾರ್ಯಚಟುವಟಿಕೆಗಳಿಗಾಗಿ ಬಳಸಬಹುದಿತ್ತು.

ಮುಕ್ಕಣ್ಣ ಕರಿಗಾರ
ಮೊ; 94808 79501

28.09.2021