ರಾಜ್ಯ ಕೇಂದ್ರ ಗ್ರಂಥಾಲಯದ ಅಧಿಕಾರಿಗಳ ಅಸಡ್ಡೆವರ್ತನೆ ಮತ್ತು ಕವಿ- ಸಾಹಿತಿ,ಪ್ರಕಾಶಕರುಗಳಿಗೆ ಆಗುತ್ತಿರುವ ಅಪಮಾನ,ಮುಜುಗರ

ರಾಜ್ಯ ಕೇಂದ್ರ ಗ್ರಂಥಾಲಯದ ಅಧಿಕಾರಿಗಳ ಅಸಡ್ಡೆವರ್ತನೆ ಮತ್ತು ಕವಿ- ಸಾಹಿತಿ,ಪ್ರಕಾಶಕರುಗಳಿಗೆ ಆಗುತ್ತಿರುವ ಅಪಮಾನ,ಮುಜುಗರ

ಲೇಖಕರು : ಮುಕ್ಕಣ್ಣ ಕರಿಗಾರ

ತೀರ ಬೇಸರದ ಸಂಗತಿಯೊಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ವಿಷಾದವೆನ್ನಿಸುತ್ತದೆ;ಆದರೆ ಹೇಳದೆ ವಿಧಿಯಿಲ್ಲವಾದ್ದರಿಂದ ಬರೆಯುತ್ತಿದ್ದೇನೆ. ಕರ್ನಾಟಕದಲ್ಲಿ ಕವಿ- ಸಾಹಿತಿ,ಪ್ರಕಾಶಕರುಗಳನ್ನು ಪ್ರೋತ್ಸಾಹಿಸಲೆಂದೇ ಇರುವ ಗ್ರಂಥಾಲಯ ಇಲಾಖೆಯ ಆಧೀನದಡಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಕೇಂದ್ರ ಗ್ರಂಥಾಲಯ ಇಲಾಖೆಯ ಅಧಿಕಾರಿ,ಸಿಬ್ಬಂದಿಯವರ ಅಸಡ್ಡೆ ಮತ್ತು ಕವಿ- ಸಾಹಿತಿಗಳನ್ನು don’t care attitude ನಿಂದ ನೋಡುವ ಪ್ರವೃತ್ತಿಯನ್ನು ಖಂಡಿಸಲೇಬೇಕಿದೆ.ಗ್ರಂಥಾಲಯ ಇಲಾಖೆ ಇರುವುದು ಕವಿ- ಸಾಹಿತಿ- ಪ್ರಕಾಶಕರುಗಳನ್ನು ಪ್ರೋತ್ಸಾಹಿಸಲು.ಆದರೆ ಇಲ್ಲಿ ಕವಿ ಸಾಹಿತಿ ಪ್ರಕಾಶಕರುಗಳನ್ನು ತೀರ ನಿಕೃಷ್ಟವಾಗಿ ಕಾಣಲಾಗುತ್ತದೆ.

ಇವು ಅವರಿವರ ದೂರಿನ ಮಾತುಗಳಲ್ಲ.ಸ್ವತಃ ನಾನೇ ಕಂಡು,ಅನುಭವಿಸಿದ ಸಂಗತಿ.ಇಂದು ಅಂದರೆ ಸೆಪ್ಟೆಂಬರ್ 28 ರಂದು ಮಧ್ಯಾಹ್ನ ನಾನು ಬೆಂಗಳೂರಿನಲ್ಲಿ ಕಛೇರಿ ಕೆಲಸಗಳನ್ನು ಮುಗಿಸಿಕೊಂಡು,ಬಹುಮಹಡಿಗಳ ಕಟ್ಟಡಕ್ಕೆ ಸಮೀಪವೇ ಇರುವ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಹೋಗಿದ್ದೆ– ಇತ್ತೀಚೆಗೆ ಪ್ರಕಟಗೊಂಡ ನನ್ನ ಎರಡು ಪುಸ್ತಕಗಳ ನೊಂದಣಿಗೆಂದು.ಗ್ರಂಥಾಲಯ ಇಲಾಖೆಯಲ್ಲಿ ಪುಸ್ತಕಗಳು ನೊಂದಣಿ ಆದರೆ ಅವುಗಳಿಗೆ ಒಂದಿಷ್ಟು ಅಧಿಕೃತತೆಯ ಮಾನ್ಯತೆ ಇರುತ್ತದೆ,ಪುಸ್ತಕಗಳ ಖರೀದಿಗೆ ಅನುಕೂಲವಾಗುತ್ತದೆ ಎನ್ನುವ ಕಾರಣದಿಂದ ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳ ಮೂರು ಪ್ರತಿಗಳನ್ನು ನೀಡಿ ನೊಂದಣಿ ಮಾಡಿಸಲಾಗುತ್ತದೆ.ಈ ನೊಂದಣಿ ಎಂಬ ಮಹಾಕಾರ್ಯಕ್ಕೋಸ್ಕರ ಕವಿ ಸಾಹಿತಿಗಳು ಬೀದರ,ಕಲ್ಬುರ್ಗಿ ,ರಾಯಚೂರುಗಳಂತಹ ದೂರದ ಪ್ರದೇಶಗಳಿಂದ ಇಲ್ಲಿಗೆ ಬರುತ್ತಾರೆ.ಆದರೆ ಇಲ್ಲಿಯ ಸಿಬ್ಬಂದಿಯವರು ಕವಿ- ಸಾಹಿತಿಗಳತ್ತ ಗಮನಿಸದೆ ಅವರು ಯಾರಾಗಿದ್ದರೇನು ‘ಅಲ್ಲಿ‌ಇಟ್ಟು ಹೋಗಿ.ನಿಮ್ಮ ಸರದಿ ಬಂದಾಗ ಕರೆಯುತ್ತೇವೆ’ ಎನ್ನುತ್ತಾರೆ.ಪಾಪ ವಯಸ್ಸಾದ ಹಿರಿಯರೂ ವಯೋವೃದ್ಧ ಸಾಹಿತಿಗಳು ತಮ್ಮ ಪುಸ್ತಕ ನೊಂದಣಿಗೆ ಬಂದಿದ್ದಾರೆ,ಅವರ ಪುಸ್ತಕಗಳ ನೊಂದಣಿ ಬೇಗ ಮಾಡಿಕೊಡಬೇಕು ಎನ್ನುವ ಸೌಜನ್ಯವೂ ಇಲ್ಲ ಕೇಂದ್ರಗ್ರಂಥಾಲಯ ಇಲಾಖೆಯ ಸಿಬ್ಬಂದಿಯವರಿಗೆ.ಸರಿಯಾಗಿ ಮಧ್ಯಾಹ್ನ ಒಂದುವರೆ ಘಂಟೆಗೆ ‘ಊಟಕ್ಕೆ ಹೋಗುತ್ತೇವೆ,ನೀವು ಹೋಗಿ ಊಟ ಮಾಡಿ ಬನ್ನಿ’ ಎಂದು ಹೋಗಿಯೇ ಬಿಡುತ್ತಾರೆ ತಮ್ಮ ಟಿಫನ್ ಬಾಕ್ಸಗಳನ್ನು ಕೈಯಲ್ಲಿ ಹಿಡಿದುಕೊಂಡು !

ನಾನು ಉಪಕಾರ್ಯದರ್ಶಿ ಎಂದು ಹೇಳಿದರೂ ಅಲ್ಲಿದ್ದ‌ ಮಹಿಳಾ ಸಿಬ್ಬಂದಿ ಒಬ್ಬರು ‘ ಇಲ್ಲ ಸರ್,ಈಗ ಆಗುವುದಿಲ್ಲ.ಯಾರಿಗಾದರೂ ಹೇಳಿ’ ಎನ್ನಬೇಕೆ? ನನ್ನೊಂದಿಗೆ ಬಂದಿದ್ದ ನಮ್ಮ ಪಿಡಿಒ ಮಲ್ಲಿಕಾರ್ಜುನ ಸಂಗವಾರ ಅವರು ಮತ್ತೊಬ್ಬ ಸಿಬ್ಬಂದಿಗೆ ‘ ಸಾಹೇಬರು’ ಎಂದು ಪರಿಚಯಿಸಿಕೊಟ್ಟು ನೊಂದಣಿಗೆ ಅನುಕೂಲ ಮಾಡಿಕೊಟ್ಟರು.ಆಗಲೂ ಆ ಮಹಿಳಾ ಸಿಬ್ಬಂದಿ ‘ ಪುಸ್ತಕದ ಮುಖಪುಟದಲ್ಲಿ‌ ಪ್ರಕಾಶಕರ ಹೆಸರು ಇಲ್ಲ,ರಜಿಸ್ಟರ್ ಮಾಡಬೇಕೆ’ ಎಂದು ಅವರ ಮೇಲಾಧಿಕಾರಿ ಪುರುಷ ಸಿಬ್ಬಂದಿಯವರನ್ನು ಪ್ರಶ್ನೆ ಮಾಡಿದರು.ನಾನು ‘ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ’ ಮತ್ತು‌’ ಶಿವತತ್ತ್ವ ಚಿಂತನೆ’ ಎನ್ನುವ ಇತ್ತೀಚಿನ ನನ್ನ ಎರಡು ಪುಸ್ತಕಗಳನ್ನು ನೊಂದಣಿ ಮಾಡಿಸಲು ಹೋಗಿದ್ದೆ.’ ಶಿವತತ್ತ್ವ ಚಿಂತನೆ’ ಯನ್ನು ಸ್ನೇಹಿತ ಬಸವರಾಜ ಸಿಣ್ಣೂರ ಅವರು ಸ್ವಯಂ ಮುತುವರ್ಜಿ ವಹಿಸಿ,ನಾಲ್ಕು ದಿನಗಳ ಕಾಲ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿ ಯಂತ್ರೋದ್ಧಾರಕ ಪ್ರಿಂಟರ್ಸ್ ನವರ ಮೂಲಕ ಅಚ್ಚುಕಟ್ಟಾಗಿ ಮುದ್ರಿಸಿದ್ದರು.ಯಂತ್ರೋದ್ಧಾರಕ ಮುದ್ರಣಾಲಯದ ಮುಖ್ಯಸ್ಥರಾದ ಅನಿಲ್ ಅವರು ಬಹುವರ್ಷಗಳಿಂದ ಬೆಂಗಳೂರಿನಲ್ಲಿಯೇ ನೆಲೆನಿಂತು ಶಾರದೆಯ ಸೇವೆ ಎಂದು ಪುಸ್ತಕಗಳ ಮುದ್ರಣ ಕಾರ್ಯವನ್ನು ಕೈಗೆತ್ತಿಕೊಂಡಿರುವುದರಿಂದ ಮತ್ತು ಅವರಿಗೆ ಗ್ರಂಥಾಲಯ ಇಲಾಖೆಯ ಪುಸ್ತಕ ಖರೀದಿಯ ವಿಧಿ- ವಿಧಾನಗಳ ಮಾಹಿತಿ‌ ಇರುವುದರಿಂದ ಪ್ರಕಾಶಕರ ವಿವರಗಳು ಸೇರಿದಂತೆ ಮುಖಪುಟ ಮತ್ತು ತಾಂತ್ರಿಕ ಪುಟಗಳನ್ನು ಸೊಗಸಾಗಿ ಮುದ್ರಿಸಿದ್ದರು.ಆದರೆ’ ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ”ಎನ್ನುವ ಸಂಶೋಧನಾತ್ಮಕ ಕೃತಿಯನ್ನು ಯಾದಗಿರಿಯ ಸ್ನೇಹಿತ ಮೇಘನಾಥ ಬೆಳ್ಳಿ ಅವರು ಹೈದರಾಬಾದಿನಲ್ಲಿ ಮುದ್ರಿಸಿದ್ದರಿಂದ ಅದರ ಮುಖಪುಟದಲ್ಲಿ ಪ್ರಕಾಶಕರ ಹೆಸರು ಮುದ್ರಿಸಿರಲಿಲ್ಲ.ಬೆಂಗಳೂರು ಮತ್ತು ಯಾದಗಿರಿಗಳ ನಡುವೆ ಎಲ್ಲಿಯ ಸಾಮ್ಯ? ಯಾದಗಿರಿಯಲ್ಲಿ ಪುಸ್ತಕಗಳನ್ನು ಮುದ್ರಿಸುವುದು ಸಾಹಸದ ಕೆಲಸ.ಮೇಘನಾಥ ಬೆಳ್ಳಿ ಅವರು ತಮಗೆ ಪರಿಚಿತರಿರುವ ಹೈದರಾಬಾದಿನ ಪ್ರಿಂಟಿಂಗ್ ಪ್ರೆಸ್ ನ ಮಾಲಕರಿಂದ ಹಲವು ಕನ್ನಡ ಪುಸ್ತಕಗಳನ್ನು ಮುದ್ರಿಸಿ,ಸಾಹಿತ್ಯ ಪ್ರೇಮ ಮೆರೆದಿದ್ದಾರೆ. ಸ್ವಲ್ಪ ಸಿಟ್ಟಿಗೆದ್ದ ನಾನು’ನಿಮ್ಮ ಇಲಾಖೆಯ ಖರೀದಿಗೆಂದು ನಾನು ನೊಂದಣಿ ಮಾಡಿಸುತ್ತಿಲ್ಲ.ದಾಖಲೆಗಾಗಿ ಮಾತ್ರ ನೊಂದಣಿ ಮಾಡಿಸುತ್ತಿದ್ದೇನೆ’ ಎಂದಾಗ ನೊಂದಣಿಗೆ ಕೈಗೆತ್ತಿಕೊಂಡರು.

ಪುಸ್ತಕ ಹೀಗೆಯೇ ಇರಬೇಕು ಎಂದು ನಿರ್ಧರಿಸಲು ರಾಜ್ಯ ಕೇಂದ್ರ ಇಲಾಖೆಯವರು ಯಾರು? ಗ್ರಂಥಾಲಯ ಇಲಾಖೆ ಖರೀದಿಸುವ ಪುಸ್ತಕಗಳಿಗೆ ನಿಮ್ಮ ನಿಯಮ- ನಿರ್ಬಂಧನೆಗಳನ್ನು ಹಾಕಿ.ಆದರೆ ಕವಿ- ಸಾಹಿತಿಗಳು ಪುಸ್ತಕ ಪ್ರಕಟಿಸುವುದೇ ಕಷ್ಟದ ಕೆಲಸ ಆಗಿರುವಾಗ ,ಪುಸ್ತಕ ಓದುವ ಸಂಸ್ಕೃತಿ ಕಡಿಮೆ ಆಗಿರುವ ದಿನಗಳಲ್ಲಿ ಕವಿ- ಸಾಹಿತಿಗಳು ಹೇಗೋ ಒಂದು ಪುಸ್ತಕವನ್ನು ಪ್ರಕಟಿಸಿದ್ದರೆ ಇದರಲ್ಲಿ ಅದು ಇಲ್ಲ,ಇದು ಇಲ್ಲ ಎಂದು ಆಕ್ಷೇಪಣೆ ಎತ್ತುವ ಅಧಿಕಾರ ಗ್ರಂಥಾಲಯ ಇಲಾಖೆಗೆ ಇದೆಯೆ? ಕವಿ ಸಾಹಿತಿಗಳನ್ನು ಪ್ರೋತ್ಸಾಹಿಸಲೆಂದೇ ಇರುವ ಒಂದು‌ ಇಲಾಖೆ ಮತ್ತು ಕವಿ ಸಾಹಿತಿಗಳ ಕೆಲಸಕ್ಕೆಂದೇ ಸರಕಾರಿ ಸಂಬಳ‌ ಪಡೆಯುವ ಕೇಂದ್ರ ಗ್ರಂಥಾಲಯ ಇಲಾಖೆಯ ಸಿಬ್ಬಂದಿಯವರು ಕವಿ ಸಾಹಿತಿಗಳೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ.

ಇಂದು ನಾನು ಪುಸ್ತಕ ನೊಂದಣಿಗೆ ಹೋಗಿದ್ದ ಸಂದರ್ಭದಲ್ಲಿ ಸುಮಾರು ಇಪ್ಪತ್ತು ಜನ ಕವಿ -ಸಾಹಿತಿಗಳು ಮಧ್ಯಾಹ್ನ 12.30 ರಿಂದ ಕಾಯುತ್ತಾ ಕುಳಿತಿದ್ದರು. ಮಧ್ಯಾಹ್ನ 3.30 ಆದರೂ ಅವರ‌ಪುಸ್ತಕಗಳಿಗೆ ನೊಂದಣಿ ಭಾಗ್ಯ ಸಿಗಲಿಲ್ಲ !

ಸಾರ್ವಜನಿಕರ ತೆರಿಗೆ ಮತ್ತು ಸೆಸ್ ನಿಂದ ನಡೆಯುವ ಗ್ರಂಥಾಲಯ ಇಲಾಖೆ ಸಾರ್ವಜನಿಕರಲ್ಲಿ ಬೌದ್ಧಿಕ ಪ್ರಜ್ಞೆಯನ್ನು ಎತ್ತರಿಸುವ ಕೆಲಸ ಮಾಡುತ್ತಿರುವ ಕವಿ- ಸಾಹಿತಿಗಳನ್ನು ಯಕಃಶ್ಚಿತ ಮನುಷ್ಯರು ಎಂಬಂತೆ ಕಾಣುವುದು ಸರಿಯಲ್ಲ.ರಾಜ್ಯ ಕೇಂದ್ರ ಗ್ರಂಥಾಲಯ ಇಲಾಖೆಯ ಸಿಬ್ಬಂದಿಯವರ ಅನುಚಿತ ವರ್ತನೆಯ ಬಗ್ಗೆ ಸಾಕಷ್ಟು ಜನ ಕವಿ- ಸಾಹಿತಿಗಳು ದೂರುತ್ತಿದ್ದಾರೆ.ಪುಸ್ತಕಗಳನ್ನು ನೊಂದಣಿ ಮಾಡಿಸಲು ಕವಿ- ಸಾಹಿತಿಗಳು ಬೆಂಗಳೂರಿನ ರಾಜ್ಯ ಕೇಂದ್ರ ಗ್ರಂಥಾಲಯಕ್ಕೆ ಏಕೆ ಬರಬೇಕು? ಅವರವರ ಊರುಗಳಿಂದಲೇ ಮುದ್ರಿತ ಪುಸ್ತಕದ ಮೂರು ಪ್ರತಿಗಳನ್ನು ಪೋಸ್ಟ್ ಮಾಡಿದರೆ ಅವುಗಳನ್ನು ನೊಂದಣಿ ಮಾಡಿ ಕವಿ- ಸಾಹಿತಿಗಳಿಗೆ ನೊಂದಣಿ ಪತ್ರ ಕಳಿಸಿದರೆ ಗ್ರಂಥಾಲಯ ಇಲಾಖೆಯ ಸೇವೆ ಶ್ಲಾಘನೀಯವೆನಿಸುತ್ತದೆ,ಸಾರ್ಥಕ ವೆನಿಸುತ್ತದೆ.ಅಂತಹ ಸುಸಂಸ್ಕೃತ ಮನಸ್ಸಿನವರು ರಾಜ್ಯ ಕೇಂದ್ರ ಗ್ರಂಥಾಲಯದಲ್ಲಿ ಇರುವಂತೆ ಕಾಣಿಸುತ್ತಿಲ್ಲ.ಎರಡು ತಿಂಗಳುಗಳ ಹಿಂದೆ ಮುದ್ರಣಗೊಂಡಿದ್ದ ‘ ಆನೆಗುಂದಿಯೇ ಆಂಜನೇಯನ ಜನ್ಮಸ್ಥಳ’ ಎನ್ನುವ ನನ್ನ ಪುಸ್ತಕದ ಮೂರು ಪ್ರತಿಗಳನ್ನು ನೊಂದಣಿಗೆ ಕೋರಿ ‘ತ್ವರಿತ ಅಂಚೆ’ಯ ಮೂಲಕ ಕಳಿಸಿದ್ದರೂ ನೊಂದಣಿ ಮಾಡುವುದು ಒತ್ತಟ್ಟಿಗಿರಲಿ ಕನಿಷ್ಟ ಸೌಜನ್ಯಕ್ಕಾಗಿ ಒಂದು ಪತ್ರವನ್ನು ಕಳಿಸಲಿಲ್ಲ ರಾಜ್ಯ ಕೇಂದ್ರ ಗ್ರಂಥಾಲಯ ಇಲಾಖೆಯ ಸಿಬ್ಬಂದಿಯವರು.ನನ್ನಂತಹ ಹಿರಿಯ ಅಧಿಕಾರಿಯೊಂದಿಗೆ ಈ ರೀತಿಯಾಗಿ ವರ್ತಿಸುವ ಗ್ರಂಥಾಲಯ ಇಲಾಖೆಯ ಸಿಬ್ಬಂದಿಯವರು ಕವಿ-ಸಾಹಿತಿಗಳು,ಪ್ರಕಾಶಕರುಗಳೊಂದಿಗೆ ಹೇಗೆ ವರ್ತಿಸಬಹುದು? ಆಶ್ಚರ್ಯದ ಸಂಗತಿ ಎಂದರೆ ಜಿಲ್ಲಾ ಮಟ್ಟದಲ್ಲಿ ಗ್ರಂಥಾಲಯ ಇಲಾಖೆ ನೇರವಾಗಿ ಜಿಲ್ಲಾ ಪಂಚಾಯತಿ ಆಧೀನದಲ್ಲಿ ಬರುತ್ತಿದ್ದು ಗ್ರಾಮ ಪಂಚಾಯತಿ ಗ್ರಂಥಾಲಯಗಳ ನಿರ್ವಹಣೆ,ನಿಯಂತ್ರಣ ಮತ್ತು ಮೇಲ್ವಿಚಾರಣೆಗಳ ಜವಾಬ್ದಾರಿ ಗ್ರಾಮ ಪಂಚಾಯತಿಗಳದ್ದು.ಅಂತಹ ಗ್ರಾಮ ಪಂಚಾಯತಿಗಳ ಜಿಲ್ಲಾ ಮಟ್ಟದ ಮೇಲ್ವಿಚಾರಣಾ ಮತ್ತು ನಿಯಂತ್ರಣಾಧಿಕಾರಿಯಾಗಿರುವ ಉಪಕಾರ್ಯದರ್ಶಿಯಾದ ನನ್ನನ್ನೇ ಗ್ರಂಥಾಲಯ ಇಲಾಖೆ ಗುರುತಿಸುವುದಿಲ್ಲ ಎಂದರೆ ಈ ಇಲಾಖೆಯ ಸ್ಪಂದನ ಶೀಲತೆ,ಸೌಜನ್ಯಯುತ ವರ್ತನೆ ಸಾರ್ವಜನಿಕರೊಂದಿಗೆ ಹೇಗಿರಬಹುದು?

‌ ದೂರದ ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರದ ರಾಜಾರಾಮ್ ಮೋಹನ್ ರಾಯ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಅಂಚೆಯ ಮೂಲಕ ಕಳಿಸಿದರೆ ಅವು ತಲುಪಿದ ಒಂದು ವಾರದಲ್ಲಿ ನೊಂದಣಿ ಪತ್ರ ಬರುತ್ತದೆ.ಆದರೆ ನಮ್ಮದೇ ರಾಜ್ಯದ ರಾಜಧಾನಿಯಲ್ಲಿರುವ ರಾಜ್ಯಕೇಂದ್ರ ಗ್ರಂಥಾಲಯ ಇಲಾಖೆಯ ವರ್ತನೆ ಬೇಸರವನ್ನುಂಟು ಮಾಡುತ್ತದೆ.ಕವಿ- ಸಾಹಿತಿಗಳನ್ನು ಗೌರವಿಸುವ ಸೌಜನ್ಯ ಇಲ್ಲದ ಗ್ರಂಥಾಲಯ ಇಲಾಖೆಯಿಂದ ಪುಸ್ತಕಗಳ ನೊಂದಣಿಯ ಅಧಿಕಾರವನ್ನು ಕಿತ್ತುಕೊಂಡು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರ ಅಥವಾ ಸಾಹಿತ್ಯ ಅಕಾಡೆಮಿಗೆ ವಹಿಸುವುದು ಸೂಕ್ತ.

ಮುಕ್ಕಣ್ಣ ಕರಿಗಾರ
ಮೊ; 94808 79501

28.09.2021