ಊರುಗಳು ಹೇಳುವ ಕಥೆ- ಪುರಾಣಗಳು

ಊರುಗಳು ಹೇಳುವ ಕಥೆ- ಪುರಾಣಗಳು

ಲೇಖಕರು: ಮುಕ್ಕಣ್ಣ ಕರಿಗಾರ

ಯಾದಗಿರಿಯಲ್ಲಿ ನನ್ನ ಆತ್ಮೀಯರಲ್ಲೊಬ್ಬರೂ ‘ ಪ್ರಜಾವಣಿ’ ಯ ಯಾದಗಿರಿ ಜಿಲ್ಲಾ ವರದಿಗಾರರು ಆದ ಪ್ರವೀಣಕುಮಾರ ಅವರು ‘ ಊರುಗಳ ಹೆಸರುಗಳ ಹಿಂದಿನ ಸ್ವಾರಸ್ಯವನ್ನು ಕುರಿತು ಬರೆಯಿರಿ ಸರ್’ ಎಂದು ಕೇಳಿದರು ಸೆಪ್ಟೆಂಬರ್ ೨೫ ರ ರಾತ್ರಿ.ಅವರು ನನ್ನ ಸ್ನೇಹಿತರು ಮತ್ತು ಸಮಾನ ಮನಸ್ಕರು ಆಗಿರುವುದರಿಂದ ನಾನು ಬರೆದ ಚಿಂತನೆ,ಲೇಖನ ಮತ್ತು ಕವನಗಳನ್ನು ಅವರಿಗೆ ಕಳುಹಿಸುತ್ತಿರುತ್ತೇನೆ ವಾಟ್ಸಾಪ್ ಮೂಲಕ. ನನ್ನ ಸಾಹಿತ್ಯವನ್ನುಓದಿ,ಪ್ರತಿಕ್ರಿಯಿಸಿ,ಪ್ರೋತ್ಸಾಹಿಸುವ ಹೃದಯವಂತರಲ್ಲಿ ಪ್ರವೀಣಕುಮಾರ ಅವರೂ ಒಬ್ಬರು.ಸೆಪ್ಟೆಂಬರ್ ೨೫ ರಂದು ಬಸವರಾಜ ಭೋಗಾವತಿ ಅವರ ಕೋರಿಕೆಯಂತೆ ಬರೆದಿದ್ದ ಮನೆದೇವರುಗಳ ಕುರಿತ ಲೇಖನವನ್ನು ಓದಿ,ಖುಷಿಪಟ್ಟ ಪ್ರವೀಣಕುಮಾರ ಅವರು ಊರುಗಳ ಹೆಸರುಗಳ,ಅವುಗಳ ಹಿಂದಣ ಚರಿತ್ರೆಯ ಬಗ್ಗೆ ಆಸಕ್ತರಾಗಿದ್ದಾರೆ.ಕೆಲವೊಂದು ಊರುಗಳ ಹೆಸರಿನ ಹಿಂದೆ ಯಾವ ಅರ್ಥವೂ ಹೊಮ್ಮುತ್ತಿಲ್ಲವಲ್ಲ ಎನ್ನುವ ಸಂದೇಹವೂ ಕಾಡಿದೆ ಅವರನ್ನು.

ಊರು –ಮನುಷ್ಯ ಕಾಡುಗಳಿಂದ ನಾಡಿಗೆ ಪಯಣಿಸುತ್ತಿದ್ದ ಕಾಲಘಟ್ಟದ ಮನುಷ್ಯರ ನೆಲೆ.ಆದಿಮಾನವರು ಕಾಡುಗಳಲ್ಲಿ,ಬೆಟ್ಟ- ಗುಹೆಗಳಲ್ಲಿ ತಮ್ಮ ನೆಲೆ ಕಂಡುಕೊಂಡಿದ್ದರು.ಅವರಲ್ಲಿ ಬುದ್ಧಿ ಅಷ್ಟೊಂದು ವಿಕಾಸವಾಗಿರಲಿಲ್ಲ.ಹಾಗಾಗಿ ಕಾಡಿನಂಚು,ಗುಡ್ಡ- ಗುಹೆಗಳಾಚೆ ವಿಸ್ತಾರಗೊಳ್ಳಲಿಲ್ಲ ಅವರ ನೆಲೆ.ಮನುಷ್ಯನ ಬುದ್ಧಿ ವಿಕಾಸವಾದಂತೆ ಅವನ ಅನ್ವೇಷಣಾ ಬುದ್ಧಿಯು ಚುರುಕುಗೊಂಡು ಕೃಷಿಚಟುವಟಿಕೆಗಳನ್ನು ಪ್ರಾರಂಭಿಸಿದ.ಕುರಿ- ಹಸುಗಳಂತಹ‌ ಪ್ರಾಣಿಗಳನ್ನು ಪೋಷಿಸತೊಡಗಿದ.ಬೇಟೆಯ ಜೀವನ ಪದ್ಧತಿಯಿಂದ ಕೃಷಿ ಆಧಾರಿತ ಜೀವನ ಪದ್ಧತಿಯತ್ತ ಹೊರಳಿದ.ಬದುಕಿಗೆ ನೀರು ಅನಿವಾರ್ಯವಾಗಿದ್ದರಿಂದ ಕಾಡು,ಗುಡ್ಡ- ಗುಹೆಗಳಿಂದ ಹೊರಬಂದ ಆದಿಮಾನವ ನದಿಯ ದಡಗಳಲ್ಲಿ ನೆಲೆಕಂಡುಕೊಂಡ.ತನಗೂ ತಾನು ಸಾಕಿದ ಪ್ರಾಣಿಗಳಿಗೂ ನದಿಯ ನೀರು ಆಸರೆಯಾಗಿತ್ತು.ನದಿಯ ತಟಗಳಲ್ಲಿ ನೆಲೆಯೂರಿದಂದಿನಿಂದ ಮಾನವನ‌ ಪ್ರಗತಿಯ ಇತಿಹಾಸ ಪ್ರಾರಂಭವಾಯಿತು.ಆ ಕಾರಣದಿಂದ ನದಿಗಳನ್ನು ‘ ನಾಗರಿಕತೆಯ ತೊಟ್ಟಿಲುಗಳು’ ಎನ್ನಲಾಗುತ್ತದೆ.

ಆದಿ ಮಾನವರು ಗುಂಪುಗಳಲ್ಲಿ ನದಿದಂಡೆಗಳಲ್ಲಿ,ಸಮುದ್ರ ತೀರದಲ್ಲಿ,ಜಲಾಶಯ- ಕೊಳ್ಳಗಳ ಬಳಿ ವಾಸಿಸತೊಡಗಿದರು.ಅವರ ಒಂದೊಂದು ಗುಂಪು ಒಂದೊಂದು ಕಡೆ ವಾಸಿಸತೊಡಗಿತು.ಅವರಲ್ಲಿ ಮತ್ತೆ ಕೆಲವರು ಜೀವನೋಪಾಯಕ್ಕಾಗಿ ನದಿಯ ದಂಡೆಯನ್ನು ಬಿಟ್ಟು ವಿಸ್ತಾರವಾದ ಬಯಲು ಇರುವ ಕಡೆ ಪ್ರಯಾಣಿಸಿದರು.ಹೀಗೆ ಪ್ರಯಾಣಿಸಿದ ಕಡೆಗಳಲ್ಲೆಲ್ಲ ನೆಲೆ ಊರ ತೊಡಗಿದರು.ನಮ್ಮ ಪೂರ್ವಿಕರು ನೆಲೆ ಕಂಡುಕೊಂಡ ಇಂತಹ ಸ್ಥಳಗಳೇ ‘ ಊರುಗಳು’.ಕಾಡು,ಗುಡ್ಡ- ಗುಹೆಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆ ಸಂಚರಿಸುತ್ತಿದ್ದವರು ಈಗ ಒಂದು ಕಡೆ ನೆಲೆ ನಿಂತದ್ದೇ ಊರುಗಳು ಬೆಳೆಯಲು ಕಾರಣ.’ ಕಾಲೂರಿದ’ , ‘ ತಳವೂರಿದ’ ಎನ್ನುವ ಪದಗಳನ್ನು ಗಮನಿಸಬೇಕು.ಇದುವರೆಗೆ ಅಲೆಮಾರಿಯಾಗಿದ್ದ ಮನುಷ್ಯ ಈಗ ಒಂದೆಡೆ ‘ ಊರ’ ತೊಡಗಿದ್ದರಿಂದ ಅಂದರೆ ನೆಲೆ ನಿಲ್ಲತೊಡಗಿದ್ದರಿಂದ ಊರುಗಳು ಬೆಳೆದವು.’ಊರು’ ಎನ್ನುವ ಶಬ್ದಕ್ಕೆ ತೊಡೆ ಎನ್ನುವ ಅರ್ಥ ಇರುವಂತೆಯೇ ಮೊಳಕೆಗಳನ್ನು ಬಿತ್ತು,ನಾಟಿಸು ಎನ್ನವೂ ಅರ್ಥವೂ ಇದೆ.ತೊಡೆಯ ಕೆಳಭಾಗವೇ ಕಾಲು ಆಗಿದ್ದರಿಂದ ತೊಡೆಯ ಬದಲು ಕಾಲೂರಿದ.ನೆಲೆ ನಿಂತ ,ತಳ ಊರಿದ.ಜೀವನೋಪಾಯಕ್ಕಾಗಿ ಕೃಷಿಯನ್ನು ಪ್ರಾರಂಭಿಸಿ ಬಿತ್ತಿ,ಬೆಳೆಯಲಾರಂಭಿಸಿದ.ಹೀಗೆ ಹುಟ್ಟಿದವು ಊರುಗಳು.

ಊರು ಎಂದರೆ ಹಿಂದೆ ಒಂದೇ ಕುಟುಂಬದ ನೆಲೆ ಅಥವಾ ಹತ್ತಾರು ಕುಟುಂಬಗಳು ನೆಲೆ ನಿಂತ ಸ್ಥಳಗಳು.ಒಂದು ಗುಂಪು ಅಥವಾ ಪಂಗಡವು ಒಂದು ಊರಲ್ಲಿ ನೆಲೆ ಕಂಡರೆ ಮತ್ತೊಂದು ಪಂಗಡವು ಇನ್ನೊಂದು ಕಡೆ ವಾಸಿಸತೊಡಗಿತ್ತು.ಎರಡು ಪಂಗಡಗಳ ನಡುವೆ ಪರಸ್ಪರ ಸಂಬಂಧ- ಸಂಪರ್ಕಗಳು ಏರ್ಪಟ್ಟು ,ಆ ಊರುಗಳನ್ನು ಹೆಸರಿಟ್ಟು ಕರೆಯುವ ಅನಿವಾರ್ಯತೆ ತಲೆದೋರಿತು.ಮೊದಲು ತಮ್ಮ ಊರಿನ ಸಂಪರ್ಕಕ್ಕೆ ಬಂದ ಊರನ್ನು ‘ ಆ ಊರು’ ಎಂದು ಕರೆದರು.ತಮ್ಮ ಸಮೀಪದ ಊರನ್ನು’ ಈ ಊರು’ ಎಂದು ಕರೆದರು.ತಮ್ಮ ಮುಂದೆ ಇರುವ ಊರನ್ನು ‘ ಮುಂದಿನ ಊರು- ಮುಂದಿನೂರು’ ಎಂದು ಕರೆದರೆ ತಮ್ಮ ನೆಲೆಯ ಹಿಂದೆ ಇದ್ದ ಊರನ್ನು’ ಹಿಂದಿನ ಊರು- ಹಿಂದಿನೂರು’ ಎಂದು ಕರೆದರು.ಅವರ ಸಂಬಂಧ-ಸಂಪರ್ಕಗಳು ಕೆಲವೇ ಮೈಲುಗಳ ಅಂತರದಲ್ಲಿ ಇರುತ್ತಿದ್ದವು.ಈ ಅಂತರದಾಚೆ ಇರುವ ಯಾರಾದರೂ ತಮ್ಮ ಬಳಿ ಬಂದರೆ ಅಥವಾ ಇವರಲ್ಲಿ ಯಾರಾದರೂ ಒಬ್ಬರು ದೂರದ ಊರುಗಳಿಗೆ ಹೋಗಿದ್ದರೆ ಅದನ್ನು’ ಬೇರೆಯ ಊರು-ಬೇವೂರು’ ಎಂದು ಗುರುತಿಸಿದರು.ಹೀಗೆ ಊರುಗಳನ್ನು ಗುರುತಿಸುತ್ತ ಮುಂದೆ ಜನಸಂಖ್ಯೆಯು ಬೆಳೆದಂತೆ ಹೊಸ ಹೊಸ ನೆಲೆಗಳ ಅಗತ್ಯ ಉಂಟಾಗಿ ನೂರಾರು,ಸಾವಿರಾರು ಊರುಗಳಾದವು.ಆಗ ಊರುಗಳಿಗೆ ಹೆಸರಿಡಬೇಕಾಯಿತು.

‌ಊರುಗಳಿಗೆ ಹೆಸರಿಡುವ ಈ‌ ಪ್ರಕ್ರಿಯೆ ಮೊದಮೊದಲು ಸಹಜವಾಗಿತ್ತು.ಅಂದರೆ ಒಂದು ಜನಾಂಗ ಅಥವಾ ಪಂಗಡವು ವಾಸಿಸುತ್ತಿದ್ದ ನೆಲೆಯು ಇರುವ ಪ್ರಾಕೃತಿಕ ನೆಲೆ ಅಥವಾ ಆ ನೆಲೆಯನ್ನು ಸುಲಭವಾಗಿ ಗುರುತಿಸಬಹುದಾದ ಯಾವುದಾದರೂ ನೈಸರ್ಗಿಕ ಗುರುತುಗಳಿಂದ ಅದನ್ನು ಗುರುತಿಸಲಾರಂಭಿಸಿದರು.ಉದಾಹರಣೆಗೆ ಬೆಟ್ಟದ ಬಳಿ ಇದ್ದ ಊರು ಬೆಟ್ಟದೂರು ಆಯಿತು.ಬೆಟ್ಟದ ಕಲ್ಲುಗಳು ಕರಿಯ ಬಣ್ಣದಿಂದ ಕೂಡಿದ್ದರೆ ಕರಿಕಲ್ಲು ಅಥವಾ ಕರಿಕಲ್ಲೂರು ಆಯಿತು.ನೀರಿನ ಕೊಳ್ಳದ ಬಳಿ ಇದ್ದ ಊರು ಕೊಳ್ಳೂರು ಆಯಿತು. ದನಕರು ಕುರಿಗಳಿಗೆ ಮೇಯುವ ಹುಲ್ಲು ಯಥೇಚ್ಛವಾಗಿ ದೊರೆಯುತ್ತಿದ್ದ ಊರು ಹುಲ್ಲೂರು ಆಯಿತು.ಹೀಗೆ ನೈಸರ್ಗಿಕ ಗುರುತುಗಳಿಂದ ಊರುಗಳನ್ನು‌ ಗುರುತಿಸುವ ಪ್ರಕ್ರಿಯೆ ಊರುಗಳ ಹೆಸರಿಡುವ ಮೊದಲ ಹಂತ.

ಮುಂದೆ ಆ ಊರುಗಳಲ್ಲಿ ವಾಸಿಸುತ್ತಿದ್ದ ತಮ್ಮ ಪರಿಚಿತರು,ಸಂಬಂಧಿಕರುಗಳ ಹೆಸರಿನಲ್ಲಿ ಊರುಗಳನ್ನು ಗುರುತಿಸುವ ಪ್ರಕ್ರಿಯೆ ಪ್ರಾರಂಭವಾಯಿತು.ಮಲ್ಲನೆಂಬ ವ್ಯಕ್ತಿ ಇದ್ದ ಊರು ಮಲ್ಲನ ಊರು- ಮಲ್ಲೂರು ಆದರೆ ರಾಯನೆಂಬ ವ್ಯಕ್ತಿ ಇದ್ದ ಊರು ರಾಯನ ಊರು ಆಗಿ ಮುಂದೆ ಅದೇ ರಾಯಚೂರು ಆಯಿತು.ರಾಯಚೂರಿನ ಮೂಲವನ್ನು ವಿಜಯನಗರದ ಅರಸರ ಆಳ್ವಿಕೆಯ ಕುರುಹಾಗಿ ರಾಯನ ಚೂರು- ರಾಯಚೂರು ಎಂದು ಗುರುತಿಸುವುದು ಸರಿಯಾದುದಲ್ಲ.ವಿಜಯನಗರ ಸಾಮ್ರಾಜ್ಯ,ಕೃಷ್ಣದೇವರಾಯನ ವಿಜಯ ಯಾತ್ರೆಗಳ ಮುಂಚೆಯೂ ಇತ್ತಲ್ಲ ರಾಯಚೂರು! ರಾಯಪ್ಪ ಅಥವಾ ರಾಯ ಎನ್ನುವ ವ್ತಕ್ತಿಯೇ ಹೆಸರೇ ರಾಯಚೂರಿನ ಮೂಲವಾಗಿತ್ತು ಎಂದು ಊಹಿಸಬಹುದು.ಹಾಗೆಯೇ ಕಲ್ಲನ ಊರು ಕಲ್ಲೂರು ಆದರೆ ಮುದ್ದನ ಊರು ಮುದ್ದೂರು ಆಯಿತು.ಇತರ ಪಂಗಡಗಳೊಂದಿಗೆ ಹೋರಾಡಿ ಜಯಶೀಲನಾದ ವ್ಯಕ್ತಿಯ ಹೆಸರಿನಲ್ಲಿ ವೀರನೂರು ಹುಟ್ಟಿದ್ದರೆ ,ಬೀರ ಎನ್ನುವ ವ್ಯಕ್ತಿ ಇದ್ದ ಊರು ಬೀರನ ಊರು,ಬೀರನೂರು ಆಗಿದೆ. ದಿಕ್ಕುಗಳ ಪರಿಚಯವಾದಂತೆ ಆ ದಿಕ್ಕುಗಳಿಗಿರುವ ಊರುಗಳನ್ನು ಆ ದಿಕ್ಕುಗಳ ಹೆಸರಿನಲ್ಲೇ ಕರೆಯಲಾಗಿದೆ.ಮೂಡೂರು,ಪಡೂರು,ಬಡೂರು,ತೆಂಕೂರು ಎಂಬಿತ್ಯಾದಿಯಾಗಿ.ಬಳಾರಿ ದೇವಿಯ ನೆಲೆ ಬಳ್ಳಾರಿ ಆಗಿದ್ದರೆ ಸಿದ್ಧರು ಇದ್ದ ಊರು ಸಿದ್ಧಾಪುರ ಆಗಿದೆ.ಹೀಗೆ ತಮಗೆ ಪರಿಚಿತರಿರುವ ವ್ಯಕ್ತಿಗಳು,ದೇವ ದೇವಿಯರು ಮತ್ತು ದಿಕ್ಕುಗಳ ಹೆಸರುಗಳಲ್ಲಿ ಊರುಗಳನ್ನು ಗುರುತಿಸಿ ಊರು ಸಂಸ್ಕೃತಿ ಬೆಳೆದ ಎರಡನೇ ಹಂತ.

ಗ್ರಾಮದೇವತೆಗಳು,ಕುಲದೇವತೆಗಳ ಹೆಸರಿನಲ್ಲಿ ಊರುಗಳನ್ನು ಗುರುತಿಸತೊಡಗಿದ್ದು ಮೂರನೇ ಹಂತ.ಯಾದಗಿರಿ ಜಿಲ್ಲೆಯ ಮೈಲಾಪುರ ಮತ್ತು ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರಗಳು ಹೀಗೆ ಗ್ರಾಮದೇವತೆ ಅಥವಾ ಕುಲದೇವತೆಗಳ ಹೆಸರಿನಲ್ಲಿ ಗುರುತಿಸಲ್ಪಟ್ಟ ಅತ್ಯಂತ ಪ್ರಾಚೀನ ಹೆಸರುಗಳು,ನೆಲೆಗಳು.ಮೈಲಾಪುರದಲ್ಲಿ ಮಲ್ಲಯ್ಯ ಇರುವುದರಿಂದ ಆ ಮಲ್ಲಯ್ಯನು ಶ್ರೀಶೈಲದ ಮಲ್ಲಿಕಾರ್ಜುನ ಅಥವಾ ಶಿವನ‌ ಪರ್ಯಾಯ ನಾಮ- ರೂಪವಾಗಿದ್ದರಿಂದ ಮಲ್ಲಯ್ಯನನ್ನು ‘ ಮೈಲಾರ ಲಿಂಗ’ ಎಂದೂ ಕರೆಯುತ್ತಾರೆ.ಅಂತಹ ಮೈಲಾರಲಿಂಗನ ಊರು– ಮೈಲಾರ ಊರು– ಮೈಲಾರೂರು-ಮೈಲಾಪುರ ಆಗಿದೆ.ಊರು ‘ ಪುರ’ ವಾಗಿದ್ದು ಜನಪದರ ಸಂಸ್ಕೃತಿಯ ಮೇಲೆ ಆರ್ಯರ ಸಂಸ್ಕೃತಿಯು ಪ್ರಭಾವ ಬೀರಿ,ಊರು,ವ್ಯಕ್ತಿ,ದೈವದ ಹೆಸರುಗಳು ಸಂಸ್ಕೃತೀಕರಣಗೊಂಡು,ಶಿಷ್ಟರೂಪ ಪಡೆದ ಬಳಿಕ.ಮೈಲಾಪುರದ ಹಿಂದಿನ ಹೆಸರು ಮೈಲಾರೂರು ಆಗಿರುತ್ತದೆ.ಬಳ್ಳಾರಿ ಜಿಲ್ಲೆಯ ಮಲ್ಲಯ್ಯನ ಊರು ‘ ಮೈಲಾರ’ ವೆಂದೇ ಗುರುತಿಸಲ್ಪಟ್ಟಿದೆ.ಹಿಂದೆ ಅಲ್ಲಿ ಜನವಸತಿ ಇಲ್ಲದೆ ಕೇವಲ ಮೈಲಾರ ಲಿಂಗನ ಗುಡಿ ಮಾತ್ರ ಇದ್ದುದರಿಂದ ಅದನ್ನು ಮೈಲಾರವೆಂದೇ ಗುರುತಿಸಿದ್ದಾರೆ.

ದೇವರುಗಳು ಪುರಾಣ ಪುರುಷರು,ಮಹಿಮಾನ್ವಿತ ವ್ಯಕ್ತಿಗಳ ಹೆಸರಿನಲ್ಲಿ ಊರುಗಳನ್ನು ಗುರುತಿಸಿದ್ದು ಊರುಗಳ ಸಂಸ್ಕೃತಿಯ ನಾಲ್ಕನೇ ಹಂತ.ಶಿವಪುರ,ಕೈಲಾಸಪುರ,ರಜತಪುರ,ಬೆಳ್ಳಿಯೂರು ಮೊದಲಾದ ಹೆಸರುಗಳು ಶಿವಸಂಬಂಧಿ ಊರುಗಳ ಹೆಸರುಗಳಾದರೆ ವಿಷ್ಣುಪುರ,ಕೃಷ್ಣಪುರ,ರಾಮಪುರ,ನರಸಿಂಗಾಪುರ ಮೊದಲಾದವುಗಳು ವಿಷ್ಣು ಸಂಬಂಧಿ ಊರುಗಳ ಹೆಸರುಗಳು.ರಾಮ ಮತ್ತು ಕೃಷ್ಣರ ಹೆಸರುಗಳಲ್ಲಿ ಸಾಕಷ್ಟು ಸಂಖ್ಯೆಯ ಊರುಗಳಿವೆ.ಪಾಂಡವರ ಹೆಸರಿನಲ್ಲೂ ಊರುಗಳಿವೆ ಯುಧಿಷ್ಟರನ ಹೆಸರಿನಲ್ಲಿ ಧರ್ಮರಾಯನಪುರ ಇದ್ದರೆ ಭೀಮನ ಹೆಸರಿನಲ್ಲಿ ಭೀಮನೂರು,ಭೀಮಾಪುರಗಳಿವೆ.ಹಾಗೆಯೇ ಮಧ್ಯಮ ಪಾಂಡವ ಅರ್ಜುನನ ಹೆಸರಿನಲ್ಲಿ ಅರ್ಜುನಪುರ,ಅರ್ಜುನವಾಡ,ಅರ್ಜುನಟಗಿ ಮೊದಲಾದ ಊರುಗಳಿದ್ದರೆ ನಕಲೂರು,ನಕಲಾಪುರ ಮತ್ತು ಸಾದೇವನೂರು ,ಸಹದೇವಪುರಗಳು ನಕುಲ ಸಹದೇವರ ಹೆಸರಿನಲ್ಲಿ ಇರುವ ಊರುಗಳು.ಪಾಂಡವರ ತಾಯಿ ಕುಂತಿಯ ಹೆಸರಿನಲ್ಲೂ ಊರುಗಳಿವೆ — ಕುಂತಿಯೂರು,ಕುಂತಿಪುರ ಮೊದಲಾಗಿ.ದ್ರೌಪದಿಯ ಹೆಸರಿನಲ್ಲಿ ಪಾಂಚಾಲಿಯೂರು,ಪಾಂಚಾಲಿಪುರಗಳಿವೆ.ಸೀತೆಯ ಹೆಸರಿನಲ್ಲಿ ಸೀತೆಯ ಊರು,ಸೀತಾಪುರಗಳಿದ್ದರೆ ಲಕ್ಷ್ಮಣ ಹೆಸರಿನಲ್ಲಿ ಲಕ್ಷ್ಮಣಾಪುರ,ಲಕ್ಷ್ಮಣ ಗಿರಿಗಳಿವೆ.ರಾಜ್ಯದ ಸಾಂಸ್ಕೃತಿಕ ನಗರಿ ಮೈಸೂರು ‘ ಮಹಿಷನ ಊರು’ ಆಗಿತ್ತು.

‌ಐದನೇ ಹಂತದಲ್ಲಿ ತಮ್ಮನ್ನು ಆಳಿದ ರಾಜ ಮಹಾರಾಜರುಗಳ ಹೆಸರುಗಳನ್ನು ಜನಪದರು ಹೆಮ್ಮೆಯಿಂದ ಇಟ್ಟುಕೊಂಡದ್ದು ಒಂದು ಬಗೆಯಾದರೆ ರಾಜ ಮಹಾರಾಜರುಗಳು ತಮ್ಮ ವಿಜಯೋತ್ಸವದ ಕುರುಹಾಗಿಯೇ ಅಥವಾ ತಮ್ಮ ವಂಶಸ್ಥರ ಕುರುಹಾಗಿಯೋ ಊರುಗಳಿಗೆ ಅರಸುಮನೆತಗಳ ವ್ಯಕ್ತಿಗಳ ಹೆಸರುಗಳನ್ನಿಟ್ಟರು.ವಿಜಯನಗರದ ಪ್ರಸಿದ್ಧ ದೊರೆ ಕೃಷ್ಣದೇವರಾಯನ ಹೆಸರಿನಲ್ಲಿ ಕೃಷ್ಣದೇವರಾಯ ಪುರ,ಕೃಷ್ಷರಾಜ ನಗರ,ಕೃಷ್ಣರಾಜಗಿರಿಗಳಿದ್ದರೆ ಮೈಸೂರಿನ ಒಡೆಯರ ಮನೆತನದವರು ಮೈಸೂರು‌ಪ್ರಾಂತ್ಯದಲ್ಲಿ ಹಲವು ಗ್ರಾಮಗಳಿಗೆ ತಮ್ಮ ವಂಶಿಕರ ಹೆಸರುಗಳನ್ನು‌ ಇಟ್ಟಿದ್ದಾರೆ.ಸಂಡೂರಿನ ಶಾಸಕರು,ಮಂತ್ರಿಗಳೂ ಆಗಿದ್ದ ಎಂ ವೈ ಘೋರ್ಪಡೆಯವರು ರಾಜಮನೆಯನದವರು ಆಗಿದ್ದರಿಂದ ಸಂಡೂರಿನ ಕೆಲವು ಗ್ರಾಮಗಳ ಹೆಸರುಗಳನ್ನು ಬದಲಾಯಿಸಿ ತಮ್ಮ ಪೂರ್ವಿಕರ ಹೆಸರುಗಳನ್ನು ಆ ಗ್ರಾಮಗಳಿಗೆ ಇಟ್ಟು ಯಶವಂತನಗರ,ಮುರಾರಿಪುರ,ಲಕ್ಷ್ಮೀಪುರ ಮೊದಲಾಗಿ ಮರುನಾಮಕರಣ ಮಾಡಿದ್ದಾರೆ.ರಾಜ್ಯವನ್ನಾಳಿದ ಇತರ ಅರಸು ಮನೆತನಗಳ,ದೊರೆಗಳ ಮನೆತನದವರ ಹೆಸರುಗಳನ್ನು ಗ್ರಾಮಗಳಿಗೆ ಇಡಲಾಗಿದೆ.ಹೈದರಾಬಾದ್ ನಿಜಾಮರ ಆಳ್ವಿಕೆಯ ಕಾಲದಲ್ಲಿ ಸಾಕಷ್ಟು ಊರುಗಳ ಹೆಸರುಗಳು ಇಸ್ಲಾಮೀಕರಣಗೊಂಡಿವೆ.ಇಬ್ರಾಹಿಂಪುರ,ಅನ್ವರ್,ಬೇಗಂಪಲ್ಲಿ,ನಿಜಾಮನಗರ,ದೌಲತ್ಪುರ,ಕರೀಂನಗರ,ಮಲಿಯಾಬಾದ್,ನಜರಾಪುರ ಮೊದಲಾದ ಹೆಸರುಗಳು ನಿಜಾಮರಾಳ್ವಿಕೆಯಲ್ಲಿ ಮಾರ್ಪಾಡುಕಂಡ ಗ್ರಾಮಗಳ ಹೆಸರುಗಳು.ಹೀಗೆ ಆಳರಸ ಮನೆತನದವರ ಹೆಸರುಗಳನ್ನಿಟ್ಟುಕೊಂಡ ಊರುಗಳ ಇತಿಹಾಸ,ಸಾಂಸ್ಕೃತಿಕ ವೈಭವಗಳು ಕಳೆಗುಂದಿವೆ.

ಇದು ಊರುಗಳ ಹಿಂದಿನ ಕಥೆ- ಪುರಾಣ.ಪ್ರತಿ ಊರಿಗೂ ಒಂದೊಂದು ಕಥೆ ಇದೆ.ದೇವಸ್ಥಾನ ಕ್ಷೇತ್ರಗಳು ಇದ್ದ ಊರುಗಳಿಗೆ ‘ ಸ್ಥಳಪುರಾಣ’ ಗಳೂ ಉಂಟು.ಊರುಗಳು ನಮ್ಮ ಪೂರ್ವಿಕರ ನೆಲೆತಾಣಗಳಾಗಿದ್ದು ಅವುಗಳ ಹಿಂದೆ ಒಂದು ಸಂಸ್ಕೃತಿ ಇದೆ.ಊರುಗಳು ಸಾಂಸ್ಕೃತಿಕ ತಾಣಗಳಾಗಿದ್ದರೆ ನಗರಗಳು ನಾಗರಿಕತೆಯ ಕೇಂದ್ರಗಳು.ಊರುಗಳೇ ಬೆಳೆದು ನಗರಗಳಾಗಿವೆ,ನಾಗರಿಕತೆಯ ನೆಲೆಗಳಾಗಿವೆ.ಇಂದು ನಾಗರಿಕತೆಯ ಭರಾಟೆಗೆ ಸಿಕ್ಕು ಊರುಗಳು ಇದ್ದರೂ ಅವು ಹೆಸರಿನಲ್ಲಷ್ಟೇ ಉಳಿದುಕೊಂಡು ತಮ್ಮ ಸಾಂಸ್ಕೃತಿಕ ಹಿರಿಮೆಯನ್ನು ಕಳೆದುಕೊಂಡಿವೆ.ವಿಜ್ಞಾನ ತಂತ್ರಜ್ಞಾನಗಳ ಕ್ಷೇತ್ರಗಳಲ್ಲಿ ಉಂಟಾದ ಅತ್ಯದ್ಭುತ ಪ್ರಗತಿಯಿಂದ ಮನೆಮನೆಗೂ ಟಿ ವಿ,ಕಂಪ್ಯೂಟರ್,ಮೊಬೈಲ್ ಗಳು ಬಂದು ಗ್ರಾಮಜೀವನದ ಸಂಸ್ಕೃತಿ,ಸೊಗಡು ಮರೆಯಾಗಿ ಹಳ್ಳಿಗಳು ನಗರಗಳ ನಕಲುಕೇಂದ್ರಗಳಾಗಿವೆ.ಶ್ರೀಮಂತ ಸಂಸ್ಕೃತಿ ಮರೆಯಾಗಿ ಅರ್ಥವಿಲ್ಲದ ಆಧುನಿಕತೆಯ ತಾಣಗಳಾಗುತ್ತಿವೆ ಹಳ್ಳಿ ಅಥವಾ ಊರುಗಳು.ಇದು ಊರುಗಳ ಬಗ್ಗೆ ಒಂದು ಕಿರುಪರಿಚಯ ಅಷ್ಟೆ.’ ಮಜ್ಜಿಗೆ ರಾಮಾಯಣ’ ಎನ್ನುವಂತೆ ಪ್ರವೀಣಕುಮಾರ ಅವರು ಕೇಳಿದ್ದಕ್ಕೆ ತಕ್ಷಣದ ಪ್ರತಿಕ್ರಿಯೆಯಾಗಿ ಮೂಡಿ ಬಂದ ಲೇಖನ.ಊರುಗಳ ಬಗ್ಗೆ ಹಲವು ಸಂಪುಟಗಳಾಗುವಷ್ಟು ಬರೆಯಬಹುದು.ಅಧ್ಯಯನಾಸಕ್ತರಿಗೆ ಕೆಲವು ಮಾಹಿತಿ ಒದಗಿಸಿದ್ದೇನೆ ನನ್ನ ಸ್ವಂತ ಒಳಗಣ್ಣ ನೋಟದಲ್ಲಿ ಅನ್ನುವುದು ನನ್ನ ಸಮಾಧಾನದ ಸಂಗತಿ.

ಮುಕ್ಕಣ್ಣ ಕರಿಗಾರ
ಮೊ;94808 79501

26.09.2021