ದಶಕದ ಕನಸು ನನಸಾಗಿಸಿಕೊಂಡ ಶಾಸಕ ರಾಜಾ ವೆಂಕಟಪ್ಪ ನಾಯಕ

ಮಾನ್ವಿ ಬಾಲಕಿಯರ ಸರ್ಕಾರಿ ಪಿಯು ಕಾಲೇಜಿನಲ್ಲಿ ಶನಿವಾರ ವಿಜ್ಞಾನ ಪ್ರಯೋಗಾಲಯ( ಸೈನ್ಸ್ ಲ್ಯಾಬ್) ಉದ್ಘಾಟಿಸಿದ ಶಾಸಕ ರಾಜಾ ವೆಂಕಟಪ್ಪ ನಾಯಕ.

ನಾ ಕಂಡಂತೆ….
ದಶಕದ ಕನಸು ನನಸಾಗಿಸಿಕೊಂಡ ಶಾಸಕ ರಾಜಾ ವೆಂಕಟಪ್ಪ ನಾಯಕ
ಲೇಖಕ: ಬಸವರಾಜ ಭೋಗಾವತಿ
ಮಾನ್ವಿ ಶಾಸಕ ರಾಜಾ ವೆಂಕಟಪ್ಪ ನಾಯಕ ತಮ್ಮ ದಶಕದ ಕನಸೊಂದನ್ನು ನನಸಾಗಿಸಿಕೊಂಡಿದ್ದಾರೆ. ಹೌದು, ನಾನು ಮೊದಲಿನಿಂದಲೂ ಗಮನಿಸಿದಂತೆ ಮಾನ್ವಿಯ ಸರ್ಕಾರಿ ಪಿಯು ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ (ಸೈನ್ಸ್) ಅಭಿವೃದ್ಧಿಯಾಗಬೇಕು, ಈ ವಿಭಾಗಕ್ಕೆ ಸೇರುವ ಬಡ ಪ್ರತಿಭಾವಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕು ಎನ್ನುವುದು ಅವರ ದಶಕದ ಅಸೆಯಾಗಿತ್ತು. ಈ ಕುರಿತು ಹಲವು ಬಾರಿ ಅವರು ಬಹಿರಂಗ ಸಭೆ, ಸಮಾರಂಭಗಳಲ್ಲಿ ಹಾಗೂ ಆತ್ಮೀಯರ ಮುಂದೆ ಪ್ರಸ್ತಾಪಿಸಿದ್ದು ಉಂಟು. ಮಾನ್ವಿಯ ಸರ್ಕಾರಿ ಕಾಲೇಜಿನಲ್ಲಿ ಪಿಯುಸಿ ಸೈನ್ಸ್ ವಿಭಾಗಕ್ಕೆ ಸೇರಬಯಸುವ ಗ್ರಾಮೀಣ ಭಾಗದ ಬಡ ಪ್ರತಿಭಾವಂತ ಮಕ್ಕಳಿಗೆ ಸುಸಜ್ಜಿತ ಲ್ಯಾಬ್ ಹಾಗೂ ವಿಷಯವಾರು ಖಾಯಂ ಉಪನ್ಯಾಸಕರು ಲಭ್ಯವಿರಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು. ಆಡಳಿತಾರೂಢ ಪಕ್ಷದ ನಾಯಕರ ವೈಫಲ್ಯಗಳ ಬಗ್ಗೆ ಹೇಳುವಾಗಲೆಲ್ಲಾ ರಾಜಾ ವೆಂಕಟಪ್ಪ ನಾಯಕ ಮೊದಲಿಗೆ ಹೇಳುತ್ತಿದ್ದುದೇ ಈ ಸೈನ್ಸ್ ವಿಭಾಗದ ಅವ್ಯವಸ್ಥೆಯ ಕುರಿತು.
ನನಗೆ ಈಗಲೂ ನೆನಪಿದೆ. ಅದು 2006ರ ಸೆಪ್ಟೆಂಬರ್ ತಿಂಗಳ ಸಮಯ. ಮಾನ್ವಿ ತಾಲ್ಲೂಕಿನ ಪೋತ್ನಾಳ ಗ್ರಾಮದಲ್ಲಿ ಜೆಡಿಎಸ್ ತಾಲ್ಲೂಕು ಘಟಕದಿಂದ ತಾಲ್ಲೂಕಿನ ಅಭಿವೃದ್ಧಿ ವಿಚಾರವಾಗಿ ಧರಣಿ, ಪ್ರತಿಭಟನೆ ನಡೆದಿತ್ತು. ಆ ಪ್ರತಿಭಟನಾ ಸಭೆಯಲ್ಲಿ ಆಗ ಜಿ.ಪಂ ಸದಸ್ಯರಾಗಿದ್ದ ರಾಜಾ ವೆಂಕಟಪ್ಪ ನಾಯಕ ತಮ್ಮ ಭಾಷಣದಲ್ಲಿ ತಾಲ್ಲೂಕಿನ ಅಭಿವೃದ್ಧಿ ವೈಫಲ್ಯದ ಕುರಿತು ಮಾತನಾಡುತ್ತಾ, ಮಾನ್ವಿಯ ಸರ್ಕಾರಿ ಜೂನಿಯರ್ ಕಾಲೇಜಿನ ಸೈನ್ಸ್ ವಿಭಾಗದಲ್ಲಿ ಉಪನ್ಯಾಸಕರ ಹುದ್ದೆಗಳು ಖಾಲಿ ಇರುವ ಕುರಿತು ಹಾಗೂ ಸಲಕರಣೆಗಳಿಲ್ಲದ ಪ್ರಯೋಗಾಲಯ(ಲ್ಯಾಬರೆಟೋರಿ) ಕೊರತೆ ಕುರಿತು ತಮ್ಮ ಅಸಮಾಧಾನ ಹೊರಹಾಕಿದ್ದರು. ಮರುದಿನ ನಮ್ಮ ಪತ್ರಿಕೆಯಲ್ಲಿ ಕಾಲೇಜಿನ ಸೈನ್ಸ್ ವಿಭಾಗದ ಅವ್ಯವಸ್ಥೆ ಕುರಿತು ಅವರ ಭಾಷಣದ ಅಂಶಗಳನ್ನು ಯಥಾವತ್ತಾಗಿ ವರದಿ ಮಾಡಿದ್ದೆ. ಆ ವರದಿ ನೋಡಿ ಖುಷಿಯಾಗಿದ್ದ ರಾಜಾ ವೆಂಕಟಪ್ಪ ನಾಯಕ, ತಮ್ಮ ಚಿಕ್ಕಪ್ಪ ರಾಜಾ ಪಾಂಡುರಂಗನಾಯಕ ವಕೀಲರಿಗೆ ನಾನು ಬರೆದ ವರದಿ ಬಗ್ಗೆ ಹೇಳುವ ಮೂಲಕ ನನ್ನನ್ನು ಅವರಿಗೆ ಪರಿಚಯಿಸಿದ್ದರು. ಹೀಗೆ ನಂತರದ ವರ್ಷಗಳಲ್ಲಿ ಯಾವುದೇ ಕಾಲೇಜಿನಲ್ಲಿ ಅಡ್ಮಿಷನ್ ವಿಷಯ ಬಂದಾಗಲೆಲ್ಲಾ ಸರ್ಕಾರಿ ಕಾಲೇಜಿನಲ್ಲಿನ ಸೈನ್ಸ್ ವಿಭಾಗದ ಬಗ್ಗೇನೆ ಹೇಳುತ್ತಿದ್ದರು. ಈಗ ಶಾಸಕರಾಗಿ ಮಾನ್ವಿಯ ಬಾಲಕರ ಸರ್ಕಾರಿ ಪಿಯು ಕಾಲೇಜು, ಬಾಲಕಿಯರ ಪಿಯು ಕಾಲೇಜು ಹಾಗೂ ಸಿರವಾರ ಸರ್ಕಾರಿ ಪಿಯು ಕಾಲೇಜುಗಳ ಸೈನ್ಸ್ ವಿಭಾಗಕ್ಕೆ ತಲಾ ರೂ.4ಲಕ್ಷದಂತೆ ಒಟ್ಟು ರೂ.12ಲಕ್ಷ ಅನುದಾನ ನೀಡಿ ಸುಸಜ್ಜಿತ ಪ್ರಯೋಗಾಲಯಗಳ ವ್ಯವಸ್ಥೆ ಮಾಡಿಸಿದ್ದಾರೆ. ಶನಿವಾರ(ಸೆ.25) ಮಾನ್ವಿಯ ಸರ್ಕಾರಿ ಬಾಲಕಿಯರ ಕಾಲೇಜಿನ ಸೈನ್ಸ್ ವಿಭಾಗದ ಲ್ಯಾಬ್ (ಪ್ರಯೋಗಾಲಯ) ಉದ್ಘಾಟಿಸಿದ್ದಾರೆ. ಈ ಕಾಲೇಜಿನಲ್ಲಿ ಸೈನ್ಸ್ ವಿಭಾಗಕ್ಕೆ ಪ್ರತಿ ವರ್ಷ 20-25 ವಿದ್ಯಾರ್ಥಿನಿಯರು ಪ್ರವೇಶ ಪಡೆಯುತ್ತಿದ್ದರು. ಈಗ ಈ ಕಾಲೇಜಿನಲ್ಲಿ ಎಲ್ಲಾ ವಿಷಯಗಳ ಖಾಯಂ ಉಪನ್ಯಾಸಕರು ಇದ್ದು ಈ ಬಾರಿ 70ವಿದ್ಯಾರ್ಥಿನಿಯರು ಸೈನ್ಸ್ ವಿಭಾಗಕ್ಕೆ ಪ್ರವೇಶ ಪಡೆದಿದ್ದಾರೆ ಎನ್ನುವ ವಿಷಯ ತಿಳಿದು ಖುಷಿಯಾದ ರಾಜಾ ವೆಂಕಟಪ್ಪ ನಾಯಕ ತಮ್ಮ ಭಾಷಣದಲ್ಲಿ ‘ ನಾನು ಶಾಸಕನಾದದ್ದು ಸಾರ್ಥಕವಾದಂತಾಯಿತು’ ಎಂದು ಹೇಳುವ ಮೂಲಕ ಹೆಮ್ಮೆಯ ಭಾವನೆ ವ್ಯಕ್ತಪಡಿಸಿದರು. ಪಿಯುಸಿ ಸೈನ್ಸ್ ವಿಭಾಗಕ್ಕೆ ಅಡ್ಮಿಷನ್ ಪಡೆಯಲು ಬಳ್ಳಾರಿ, ದಾವಣಗೆರೆ, ಮಂಗಳೂರು, ಧಾರವಾಡದಂತಹ ನಗರ ಪ್ರದೇಶಗಳಲ್ಲಿ ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾಗಿರುವ ಈ ದಿನಗಳಲ್ಲಿ ಬಡ ಮಕ್ಕಳಿಗೆ ಸರ್ಕಾರಿ ಕಾಲೇಜುಗಳೇ ಆಸರೆ. ಇಂತಹ ಅವಕಾಶ ಮಾನ್ವಿಯಲ್ಲಿ ಶಾಸಕರ ಇಚ್ಛಾಶಕ್ತಿಯಿಂದ ಸಾಧ್ಯವಾಗಿದೆ ಎನ್ನುವುದು ಸತ್ಯ. ಮಾನ್ವಿ ತಾಲ್ಲೂಕಿನ ಪಾಲಕರು ತಮ್ಮ ಮಕ್ಕಳನ್ನು ಪಿಯುಸಿ ಸೈನ್ಸ್ ಕಲಿಕೆಗಾಗಿ ಸರ್ಕಾರಿ ಕಾಲೇಜುಗಳಿಗೆ ಸೇರಿಸುವ ಮೂಲಕ ಸರ್ಕಾರ ಹಾಗೂ ಶಾಸಕರ ಆಶಯ ಸಾಕಾರಗೊಳ್ಳುವಂತೆ ಮಾಡಬೇಕು.
ಕ್ಷೇತ್ರದ ಜನತೆ ನೀಡಿರುವ ಅಧಿಕಾರವನ್ನು ತಾಲ್ಲೂಕಿನ ಶೈಕ್ಷಣಿಕ ಪ್ರಗತಿಗಾಗಿ ಬಳಸಿಕೊಳ್ಳುತ್ತಿರುವ ಶಾಸಕ ರಾಜಾ ವೆಂಕಟಪ್ಪ ನಾಯಕ ಅಭಿನಂದನಾರ್ಹರು. ಸರ್ಕಾರಿ ಪಿಯು ಕಾಲೇಜು ಸೈನ್ಸ್ ವಿಭಾಗ…ಸೈನ್ಸ್ ವಿಭಾಗ ಅಂತಾ 15ವರ್ಷಗಳ ಹಿಂದೆ ಅವರು ಹೇಳಿದ್ದ, ಆಗಾಗ ಹೇಳುತ್ತಿದ್ದ ಡೆವಲಪ್ ಮೆಂಟ್ ವಿಷಯ ಈಗ ಅನುಷ್ಠಾನಗೊಂಡಿದ್ದಕ್ಕಾಗಿ ಮತ್ತೊಮ್ಮೆ ಅವರಿಗೆ ನನ್ನ ಕಡೆಯಿಂದ ‘ಕಂಗ್ರಾಟ್ಸ್….!’

ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯರಿಗೆ ಪಠ್ಯ ಪುಸ್ತಕ ವಿತರಣೆ