ಚಿಂತನೆ : ಮನೆದೇವರು– ಕೆಲವು ವಿಚಾರಗಳು

ಚಿಂತನೆ

ಮನೆದೇವರು– ಕೆಲವು ವಿಚಾರಗಳು

ಲೇಖಕರು: ಮುಕ್ಕಣ್ಣ ಕರಿಗಾರ

ನನ್ನ ಆತ್ಮೀಯರೂ ಮಾನ್ವಿಯ ಪ್ರಗತಿ ಪಿಯು ಕಾಲೇಜಿನ ಪ್ರಾಂಶುಪಾಲರೂ ಮತ್ತು ‘ಬಿಬಿ ನ್ಯೂಸ್ ಗುರು ಆನ್ ಲೈನ್’ ಪತ್ರಿಕೆಯ ಸಂಪಾದಕರಾದ ಬಸವರಾಜ ಭೋಗಾವತಿ ಅವರು ‘ ಮನೆಯ ದೇವರುಗಳ ಬಗ್ಗೆ ಮಾಹಿತಿ ನೀಡುವ ಒಂದು ಲೇಖನ ಬರೆಯಿರಿ ಸರ್.ಎಲ್ಲರಿಗೂ ಒಬ್ಬೊಬ್ಬ ಮನೆದೇವರಿರುತ್ತಾರೆ.ಆದರೆ ಆ ಬಗ್ಗೆ ಸಾಕಷ್ಟು ಮಾಹಿತಿ ಇರುವುದಿಲ್ಲ’ ಎಂದು ಕೋರಿದ್ದರು.’ನಾಳೆ ಅಥವಾ ಅನುಕೂಲವಾದಾಗ ಬರೆಯುವುದಾಗಿ’ ಭೋಗಾವತಿಯವರಿಗೆ ಹೇಳಿದ್ದೆನಾದರೂ ಬ್ಯುಸಿ ಶೆಡ್ಯೂಲ್ ನ ನನಗೆ ಯಾವಾಗ ,ಏನು ಕಾರ್ಯಕ್ರಮ ಬಂದೊದಗುತ್ತದೆಯೋ ಗೊತ್ತಿಲ್ಲವಾದ್ದರಿಂದ ಇಂದೇ ಬರೆಯಲು ಸಂಕಲ್ಪಿಸಿದೆ.

ಮನೆಯ ದೇವರ ಬಗ್ಗೆ ನಾನು ಆಗಾಗ ಆಲೋಚಿಸಿದ್ದುಂಟು.ನಮ್ಮ ಮನೆಯ ದೇವರು ಮೈಲಾಪುರದ ಮಲ್ಲಯ್ಯ.ಮೈಲಾಪುರದ ಮಲ್ಲಯ್ಯ ಬರಿ ಕುರುಬ ಜನಾಂಗದವರಿಗೆ ಮಾತ್ರ ಮನೆಯ ದೇವರು ಆಗಿರದೆ ಲಿಂಗಾಯತರು ಸೇರಿದಂತೆ ಎಲ್ಲ ಜಾತಿಗಳ ಮನೆಯ ದೇವರು ಆಗಿದ್ದಾನೆ.ಬ್ರಾಹ್ಮಣರಿಗೂ ಮೈಲಾಪುರದ ಮಲ್ಲಯ್ಯ ಮನೆಯ ದೇವರು ಎನ್ನುವುದನ್ನು ತಿಳಿದ ಬಳಿಕ ಆಶ್ಚರ್ಯವಾಗಿತ್ತು.ಆಗಲೇ ಮನೆದೇವರ ಬಗ್ಗೆ ಚಿಂತಿಸಿದ್ದೆ.ಸದ್ಯ ನಾನು ಉಪಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಯಾದಗಿರಿ ಜಿಲ್ಲೆಯ ಬಹುತೇಕ ಎಲ್ಲ ಜನಾಂಗಗಳ ಮನೆದೇವರು ಮೈಲಾಪುರದ ಮಲ್ಲಯ್ಯ.ಇದು ಪ್ರದೇಶದ ಕಾರಣದಿಂದ ಆಗಿರಬಹುದು. ಯಾದಗಿರಿಯ ಸುತ್ತಮುತ್ತಣ ಊರು- ಪಟ್ಟಣ- ನಗರಗಳಲ್ಲಿ ಮೈಲಾಪುರದ ಮಲ್ಲಯ್ಯನ ಗಾಢಪ್ರಭಾವ ಇರುವುದರಿಂದ ಆತ ‘ಸಮಷ್ಟಿಯ ಮನೆದೇವರು’ ಆಗಿರಬಹುದು.ಇತ್ತೀಚೆಗೆ ಖ್ಯಾತ ವಿದ್ವಾಂಸ ಸೀತಾರಾಮ ಜಾಗೀರದಾರ ಅವರ ಅಲ್ಲಮಪ್ರಭುಗಳ ಕುರಿತ ಲೇಖನ ಓದುತ್ತಿರುವಾಗ ಕೆಲವು ಜನ ಬ್ರಾಹ್ಮಣರೂ ಸವದತ್ತಿ ಯಲ್ಲಮ್ಮನನ್ನು ಮನೆದೇವರನ್ನಾಗಿ ಹೊಂದಿ,ಆರಾಧಿಸುತ್ತಿರುವ ವಿಷಯ ತಿಳಿಯಿತು.ಆಗ ಮನೆಯದೇವರುಗಳ ಬಗ್ಗೆ ಮತ್ತಷ್ಟು ಕುತೂಹಲ ಉಂಟಾಗಿತ್ತು.

ಮನೆಯದೇವರು ಮತ್ತು ಕುಲದೇವರು ಎಂದು ಜನರು ತಮ್ಮ ಇಷ್ಟದೈವಗಳನ್ನು ಗುರುತಿಸಿಕೊಂಡು ಬಂದಿದ್ದಾರೆ ಬಹು ಹಿಂದಿನಿಂದಲೂ.ಆದರೆ ಕುಲದೇವರೇ ಮನೆಯ ದೇವರು ಆಗಿರಬೇಕಿಲ್ಲ.ಒಂದೇ ಕುಲದವರು ಎಂದ ಮಾತ್ರಕ್ಕೆ ಎಲ್ಲರಿಗೂ ಒಂದೇ ಮನೆದೇವರು ಅಥವಾ ಕುಲದೇವರು ಇರುವುದಿಲ್ಲ.ಉದಾಹರಣೆಗೆ ನಮ್ಮ ಕುರುಬ ಜನಾಂಗದಲ್ಲಿಯೇ ಮಲ್ಲಯ್ಯನ ಜೊತೆಗೆ ಬೀರಪ್ಪ,ರೇವಣಸಿದ್ಧ,ಮಾಳಿಂಗರಾಯ,ಅಮೋಘಸಿದ್ಧ,ಸಿದ್ಧರಾಮ,ಅಯ್ಯಾಳಪ್ಪ ಮೊದಲಾದ ದೇವರುಗಳನ್ನು ಮನೆದೇವರುಗಳಾಗಿ ಪೂಜಿಸಲಾಗುತ್ತಿದೆ.ಇತರ ಜನಾಂಗಗಳಲ್ಲಿಯೂ ಒಂದೇ ಜಾತಿಯಲ್ಲಿ ಹಲವಾರು ಮನೆಯ ದೇವರುಗಳು ಇರುತ್ತಾರೆ.ಮನೆಯ ದೇವರುಗಳಲ್ಲಿ ಪುರುಷ ದೇವರುಗಳ ಜೊತೆಗೆ ಹೆಣ್ಣು ದೇವರುಗಳೂ ಇರುತ್ತಾರೆ.ಯಲ್ಲಮ್ಮ,ದುರುಗಮ್ಮ,ತುಳಜಾಭವಾನಿಯವರಂತಹ ಹೆಣ್ಣು ದೇವತೆಗಳು ಸಹ ಗಂಡುದೇವರುಗಳೊಂದಿಗೆ ಮನೆಯ ಹೆಣ್ಣುದೇವರುಗಳಾಗಿ ಪೂಜೆಗೊಳ್ಳುತ್ತಿದ್ದಾರೆ.ಒಂದು ಗಂಡುದೇವರು,ಒಂದು ಹೆಣ್ಣು ದೇವರು ಹೀಗೆ ಇಬ್ಬರು ಮನೆಯದೇವರುಗಳು ಇರುತ್ತಾರೆ.ಕೆಲವರಿಗೆ ಗಂಡು ದೇವರು ಮಾತ್ರ ಮನೆದೇವರಾಗಿದ್ದರೆ ಮತ್ತೆ ಕೆಲವು ಕುಟುಂಬಗಳಿಗೆ ಹೆಣ್ಣುದೇವರು ಮಾತ್ರ ಮನೆಯ ದೇವರು ಆಗಿರುತ್ತಾರೆ.ಬ್ರಾಹ್ಮಣರಲ್ಲಿ ಅವರವರ ಗೋತ್ರಾನುಸಾರ ಮನೆಯ ದೇವರುಗಳಿರುತ್ತಾರೆ.ಶೈವ ಬ್ರಾಹ್ಮಣರಿಗೆ ಶಿವ ಮತ್ತು ಶಿವನ ಗಣದೇವತೆಗಳು ಮನೆಯದೇವರು ಆಗಿದ್ದರೆ ಮಾಧ್ವರು ಮತ್ತು ವೈಷ್ಣವರಿಗೆ ವಿಷ್ಣು ಮತ್ತು ವಿಷ್ಣುವಿನ ಆರಾಧಕರು,ಉಪಾಸಕರು ಆಗಿರುವ ವೈಷ್ಣವ ಪರಂಪರೆಯ ಯತಿಗಳೂ ಮನೆದೇವರಾಗಿರುವುದುಂಟು.ವೀರಶೈವ ಲಿಂಗಾಯತರಿಗೆ ಶಿವ,ಶಿವಗಣರು,ವೀರಭದ್ರ ಮತ್ತು ಬಸವಣ್ಣನವರು ಮನೆದೇವರುಗಳಾಗಿರುತ್ತಾರೆ.ತಳಸಮುದಾಯಗಳು ಮತ್ತು ದಲಿತ ಜನಾಂಗಗಳಿಗೆ ಪರಶುರಾಮ,ಆಂಜನೇಯ ಮತ್ತು ಶಿವಶರಣರುಗಳು ಮೊದಲಾದ ದೇವರುಗಳು ಮನೆಯ ದೇವರಾಗಿರುತ್ತಾರೆ.ದಲಿತ ಕುಟುಂಬಗಳಲ್ಲಿ ಯಲ್ಲಮ್ಮ ಮತ್ತು ದುರುಗಮ್ಮ ದೇವಿಯರು ಮನೆಯದೇವರುಗಳಾಗಿರುವುದು ಸಾಮಾನ್ಯ ಸಂಗತಿ.

ಮನೆಯ ದೇವರ ಬಗ್ಗೆ ಯೋಚಿಸಿದಾಗ ಕೆಲವು ಸಂಗತಿಗಳು ಹೊಳೆಯುತ್ತವೆ.
೧. ಮನೆಯ ದೇವರುಗಳು ಆ ವಂಶಿಕರ,ಮನೆಯ ಪೂರ್ವಿಕರೋ,ಪುರಾಣ ಪುರುಷರೋ ಆಗಿರುತ್ತಾರೆ.
೨. ಬಸವಣ್ಣನವರ ಪ್ರಭಾವದಿಂದ ಲಿಂಗಧಾರಿಗಳಾಗಿ ಕೆಳವರ್ಗದ ಕೆಲವು ಜನಾಂಗಗಳು ಲಿಂಗಾಯತರು ಆಗಿ ಶಿಷ್ಟೀಕರಣಗೊಂಡಿದ್ದರೂ ಅವರ ಮೂಲಕುಲದೈವವೇ ಅವರ ಮನೆಯ ದೇವರು ಆಗಿ ಮುಂದುವರೆದಿರುತ್ತದೆ.ಮತವನ್ನು ಬದಲಾಯಿಸಿರಬಹುದಾದರೂ ಮನೆದೇವರನ್ನು ಬದಲಾಯಿಸದೆ ಮುಂದುವರೆಸಿಕೊಂಡಿದ್ದಾರೆ ಮೇಲ್ಜಾತಿಗಳಿಗೆ ಉನ್ನತೀಕರಣಗೊಂಡ ಜಾತಿಗಳವರು.’ಮನೆಯದೇವರು ಕಾಡದೆ ಬಿಡ’ ಎನ್ನುವ ಭಯ ಆಳವಾಗಿ ಜನಮಾನಸದಲ್ಲಿ ಬೇರೂರಿರುವುದರಿಂದ ಲಿಂಗಧಾರಿಗಳಾಗಿಯೂ,ಯಜ್ಞೋಪವೀತಗಳನ್ನು ಧರಿಸಿಯೂ ಮೈಲಾಪುರದ ಮಲ್ಲಯ್ಯನನ್ನು ಪೂಜಿಸುತ್ತಾರೆ ಲಿಂಗಾಯತರು ಮತ್ತು ಬ್ರಾಹ್ಮಣರುಗಳ ಮನೆತನಗಳವರು.
೩. ಊರಿಂದ ಊರಿಗೆ ವಲಸೆ ಹೋದಾಗಲೂ ತಮ್ಮ ಮನೆಯದೇವರನ್ನು ತಮ್ಮೊಂದಿಗೆ ಕರೆದೊಯ್ದು ಪೂಜಿಸುವ ಮೂಲಕ ತಾವು ನೆಲೆಕಂಡುಕೊಂಡ ಪ್ರದೇಶಗಳಲ್ಲಿ ತಮ್ಮ ಮನೆದೇವರ ಪರಂಪರೆಯನ್ನು ಮುಂದುವರೆಸಿರುತ್ತಾರೆ.
೪. ಮನೆಯ ದೇವರುಗಳಾಗಿ ಪೂಜೆಗೊಳ್ಳುವ ದೇವ ದೇವಿಯರೆಲ್ಲರೂ ಮರ್ತ್ಯದಲ್ಲಿ ಅವತರಿಸಿ ಲೀಲೆ ಮೆರೆದ ಮಣ್ಣಿನ ಮಕ್ಕಳೆ.ಶಿವ ,ವಿಷ್ಣು ಅಥವಾ ಬ್ರಹ್ಮ ದೇವರುಗಳು ಯಾರ ಮನೆದೇವರುಗಳಲ್ಲ ಎನ್ನುವುದನ್ನು ಗಮನಿಸಬೇಕು.ಆದರೆ ಶಿವನ ಹೆಸರಿನ ಮರ್ತ್ಯದ ಲಿಂಗವೋ ಇಲ್ಲವೆ ಮೂರ್ತಿಯೋ ಶೈವರ ಮನೆದೇವರು ಆಗಿದ್ದಾರೆ ರಾಮ,ಕೃಷ್ಣ,ನರಸಿಂಹ,ದಾಮೋದರ ಮೊದಲಾದ ವಿಷ್ಣು ವಿಭೂತಿಗಳು ವೈಷ್ಣವರ ಮನೆದೇವರುಗಳಾಗಿರುತ್ತಾರೆ.ಕರಾವಳಿ ತೀರದಲ್ಲಿ ಬ್ರಹ್ಮನನ್ನು ಪೂಜಿಸುವ ಕೆಲವು ಕುಟುಂಬಗಳಿವೆಯಾದರೂ ಅವರು ಬ್ರಹ್ಮನ ಬೇರೆ ಬೇರೆ ರೂಪಗಳನ್ನು ಅಂದರೆ ಭೂತಬ್ರಹ್ಮ,ವೃಕ್ಷಬ್ರಹ್ಮ,ಬ್ರಹ್ಮಲಿಂಗೇಶ್ವರ ಮೊದಲಾದ ಹೆಸರುಗಳುಳ್ಳ ಮನೆದೇವರುಗಳನ್ನು ಹೊಂದಿದ್ದಾರೆ.ಅಂದರೆ ಸರ್ವಶಕ್ತನಾದ ಪರಮಾತ್ಮನು ( ಅವರವರ ಮತಗಳ ನಂಬಿಕೆಯಂತೆ) ಯಾರಿಗೂ ಮನೆದೇವರಾಗಿಲ್ಲ.ಮನದ ದೇವರಾಗಿ ಪೂಜೆಗೊಂಡು ಉದ್ಧರಿಸಿದ್ದಾನೆ ಪರಮಾತ್ಮ.
೫. ಮನೆಯ ದೇವರುಗಳು ನಮ್ಮ ಕಷ್ಟಕ್ಕಾಗುವ ನಮ್ಮ ಸಮೀಪದ ದೇವರು; ಪರಮಾತ್ಮ ನಮ್ಮಿಂದ ದೂರ ಇರುವ ಜಗನ್ನಿಯಾಮಕ ಎನ್ನುವ ಭಾವನೆ ಜನರಲ್ಲಿದೆ.
೬. ಮನೆಯ ದೇವರುಗಳು ಪೂಜಿಸಿದರೆ ಸಂತೃಪ್ತರಾಗುವ ಪೂಜಿಸದಿದ್ದರೆ ಸಿಟ್ಟಾಗುವ,ಕೆಟ್ಟದ್ದನ್ನು ಮಾಡುವ ಉಗ್ರಸ್ವಭಾವದ ದೇವರುಗಳು.ಆದರೆ ಪರಮಾತ್ಮನು ಹಾಗಲ್ಲ.ಜನರು ತನ್ನನ್ನು ಪೂಜಿಸಲಿ ಅಥವಾ ಪೂಜಿಸದೆ ಇರಲಿ ಆ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.ಆದರೆ ಮನೆಯ ದೇವರುಗಳ ವಿಷಯ ಹಾಗಲ್ಲ.ತಮ್ಮನ್ನು ವರ್ಷಕ್ಕೊಮ್ಮೆಯಾದರೂ ಪೂಜಿಸದೆ ಇದ್ದರೆ ತಮ್ಮನ್ನು ಪೂಜಿಸಬೇಕಾದವರು ಎಲ್ಲಿಯೇ ಇದ್ದರೂ ಅವರನ್ನು ಕಾಡಿ,ಪೀಡಿಸಿ ಪೂಜೆ ,ಸೇವೆಗಳನ್ನು ಮಾಡಿಸಿಕೊಳ್ಳುತ್ತಾರೆ.
೭. ಮನೆಯ ದೇವರುಗಳೆಲ್ಲ ಸಾಕಾರ ದೇವರುಗಳು.ಮನೆಯ ದೇವರುಗಳಿಗೆ ಒಂದು ಮೂರ್ತಿಯೋ,ವಿಗ್ರಹವೋ ಅಥವಾ ಮುಖವೋ ಇರುತ್ತದೆ ಆಕಾರವಾಗಿ.

ಆಯಾ ಮನೆತನಗಳ ಪೂರ್ವಪುರುಷರುಗಳು ಇಲ್ಲವೆ ಹಿಂದೆ ಬದುಕಿದ್ದ ಕ್ಷಾತ್ರಪರಂಪರೆಗೆ ಸೇರಿದ ಪುರಾಣ ಪುರುಷರುಗಳು ಮನೆಯದೇವರುಗಳು ಆಗಿರುತ್ತಾರೆ.ಮನೆಯ ದೇವರುಗಳನ್ನು ಹುಡುಕುತ್ತ ಜನರ ಕುಲಮೂಲ,ವಂಶಮೂಲಗಳನ್ನು ಹುಡುಕಬಹುದು.ಜನಪದರ ದೈವಗಳೇ ಮನೆದೇವರುಗಳಾಗಿ ಪೂಜೆಗೊಳ್ಳುವ ಮೂಲಕ ಭಾರತದ ಸಂಸ್ಕೃತಿಯು ಜನಪದ ಮೂಲದ,ನೆಲಮೂಲದ ಮಣ್ಣಿನ ಮಕ್ಕಳ ಸಂಸ್ಕೃತಿ ಎನ್ನುವುದರತ್ತ ನಮ್ಮ ಗಮನ ಸೆಳೆಯುತ್ತದೆ.

ಮುಕ್ಕಣ್ಣ ಕರಿಗಾರ
ಮೊ;94808 79501

25.09.2021