ಪ್ರಸ್ತುತ : ಸರಕಾರಿ ಅಧಿಕಾರಿಗಳು,ನೌಕರರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸರಕಾರದ ಆಡಳಿತ ಚೆನ್ನಾಗಿರುತ್ತದೆ ! – ಮುಕ್ಕಣ್ಣ ಕರಿಗಾರ

ಪ್ರಸ್ತುತ:

ಸರಕಾರಿ ಅಧಿಕಾರಿಗಳು,ನೌಕರರ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಸರಕಾರದ ಆಡಳಿತ ಚೆನ್ನಾಗಿರುತ್ತದೆ !

ಲೇಖಕರು: ಮುಕ್ಕಣ್ಣ ಕರಿಗಾರ

ಜನಪ್ರತಿನಿಧಿಗಳಿಗೆ ಸರಕಾರಿ ಅಧಿಕಾರಿಗಳು,ಸರಕಾರಿ ನೌಕರರು ಅಂದರೆ ಅದೇಕೋ ಬಲು ಬೇಸರ ಅಂತ ಕಾಣಿಸುತ್ತದೆ.ಸಮಯ ಸಿಕ್ಕಾಗಲೆಲ್ಲ ಜನಪ್ರತಿನಿಧಿಗಳು ಸರಕಾರಿ ಅಧಿಕಾರಿಗಳನ್ನು,ನೌಕರರುಗಳನ್ನು ಟೀಕಿಸುತ್ತಿರುತ್ತಾರೆ.ಆದರೆ ಸರಕಾರಿ ಅಧಿಕಾರಿ,ನೌಕರರುಗಳನ್ನು ಒಳಗೊಂಡ ಕಾರ್ಯಾಂಗವು ಕೂಡ ನಮ್ಮ ಸಂವಿಧಾನ ವಿಧಿಸಿದ ಮೂರು ಕಡ್ಡಾಯ ಅಂಗಗಳಲ್ಲಿ ಒಂದು ಎಂಬುದನ್ನು ಮರೆಯುತ್ತಾರೆ.ಸಂವಿಧಾನದಲ್ಲಿಯೇ ಸರಕಾರಿ ಅಧಿಕಾರಿಗಳು ಮತ್ತು ನೌಕರರುಗಳಿಗೆ ರಕ್ಷಣೆ ಇದೆ ಎನ್ನುವುದು ಬಹಳಷ್ಟು ಜನ ಜನಪ್ರತಿನಿಧಿಗಳಿಗೆ ತಿಳಿದಂತೆ ಕಾಣುತ್ತಿಲ್ಲ.

ಈಗ ಸರಕಾರಿ ಅಧಿಕಾರಿಗಳು,ನೌಕರರ ರಜಾಕಡಿತದ ಬಗ್ಗೆ ಚಿಂತನೆ ನಡೆದಿದೆ.’ಕಾಯಕ ಸಂಸ್ಕೃತಿ’ ಎಂದರೆ ಸರಕಾರಿ ನೌಕರರ ಸಂವಿಧಾನ ಬದ್ಧ ಹಕ್ಕುಗಳ ಮೇಲೆ ಸವಾರಿ ಮಾಡುವುದಲ್ಲ; ಬದಲಿಗೆ ಸರಕಾರಿ ಅಧಿಕಾರಿಗಳು,ನೌಕರರು ಎಲ್ಲರಂತೆ ಮನುಷ್ಯರೆ,ಅವರಿಗೆ ಇರುವ ಸೌಲಭ್ಯಗಳನ್ನು ಅವರಿಗೆ ಕೊಟ್ಟು ಅವರ ದಕ್ಷತೆ,ಕಾರ್ಯಕ್ಷಮತೆ ಹೆಚ್ಚಿಸುವಂತಹ ವಾತಾವರಣ ನಿರ್ಮಿಸಬೇಕು.ಸರಕಾರಿ ನೌಕರರು ಯಂತ್ರಗಳಲ್ಲ; ಅವರೂ ಎಲ್ಲರಂತೆ ಮನುಷ್ಯರೆ! ಎಲ್ಲ ಮನುಷ್ಯರಿಗಿರುವಂತೆ ಅವರಿಗೂ ನೋವು,ಆಯಾಸ,ದಣಿವುಗಳು ಆಗುತ್ತವೆ.ಅವರ ದೇಹ ಮತ್ತು ಮೆದುಳಿಗೂ ವಿಶ್ರಾಂತಿಬೇಕು.

ಸರಕಾರದ ರಜಾ ನೀತಿಯ ಹಿಂದೆ ಒಂದು ಸದುದ್ದೇಶವಿದೆ.ಸರಕಾರಿ ಅಧಿಕಾರಿಗಳು,ನೌಕರರ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ವೃದ್ಧಿ ಪಡಿಸುವ ಉದ್ದೇಶದಿಂದ ಅವರಿಗೆ ರಜೆ ನೀಡಲಾಗುತ್ತದೆ.ವಾರಕ್ಕೆ ಒಂದು ದಿನವೂ ರಜೆ ಬೇಡ ಎಂದರೆ ಹೇಗೆ? ವಾರದಲ್ಲಿ ಒಂದು ದಿನ ಸರಕಾರಿ ಅಧಿಕಾರಿ,ನೌಕರರು ತಮ್ಮ ತಂದೆ- ತಾಯಿ,ಹೆಂಡತಿ- ಮಕ್ಕಳು,ಕುಟುಂಬ ವರ್ಗದವರೊಡನೆ ಬೆರೆತು ಕೌಟುಂಬಿಕ ಜೀವನವನ್ನು ಆನಂದಿಸಿ,ಫ್ರೆಶ್ ಮೂಡಿನೊಂದಿಗೆ ಕಾರ್ಯತತ್ಪರರಾಗಲಿ ಎನ್ನುವ ಕಾರಣಕ್ಕೆ ರಜೆ ನೀಡಲಾಗುತ್ತಿದೆ.

ಆದರೆ ಈಗೀಗ ಇ ಆಡಳಿತದ ಹೆಸರಿನಲ್ಲಿ ಸರಕಾರಿ ಅಧಿಕಾರಿಗಳು,ನೌಕರರುಗಳು ಮೇಲಾಧಿಕಾರಿಗಳ ವಿಡಿಯೋ ಸಂವಾದದಲ್ಲಿಯೇ ಕಾಲಕಳೆಯುವಂತಾಗಿದೆ.ಬರಿ ವಿಡಿಯೋ ಸಂವಾದ ಇಟ್ಟರೆ ಕಛೇರಿಗಳ ಆಡಳಿತ ನಡೆಯುವದೆಂತು? ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವುದೆಂತು? ಯೋಜನೆಗಳ ಅನುಷ್ಠಾನ ಹೇಗೆ ಸಾಧ್ಯ? ಉನ್ನತ ಮಟ್ಟದ ಜನಪ್ರತಿನಿಧಿಗಳು ಮೊದಲು ಇ ಆಡಳಿತ ಎಂಬ ಅನಿಷ್ಟದಿಂದ ಅಧಿಕಾರಿಗಳು ಮತ್ತು ಸಾರ್ವಜನಿಕರನ್ನು ಕಾಪಾಡಬೇಕಿದೆ.ಪೇಪರ್ ಲೆಸ್ ಆಫೀಸ್ ಯಾರಿಗಾಗಿ? ನಮ್ಮಲ್ಲಿ ಎಷ್ಟು ಜನ ಗ್ರಾಮೀಣ ಪ್ರದೇಶದ ಜನಸಾಮಾನ್ಯರಿಗೆ ಕಂಪ್ಯೂಟರ್ ಜ್ಞಾನ ಇದೆ? ತಮ್ಮ ಹೆಸರನ್ನೇ ತಮಗೆ ಬರೆಯಲು ಬಾರದ ಜನರಿಂದ ಆನ್ ಲೈನ್ ನಲ್ಲಿ ಮನವಿ ಸಲ್ಲಿಸಿ ಎಂದು ಸೂಚಿಸುವುದು ಪ್ರಜಾಪ್ರಭುತ್ವದಲ್ಲಿ ಪ್ರಭುಗಳಾದ ಪ್ರಜೆಗಳಿಗೆ ಮಾಡುವ ಅನ್ಯಾಯವಲ್ಲವೆ? ಜನಪರ ಕಾಳಜಿಯಿಂದ ಸರಕಾರಗಳು ರೂಪಿಸುವ ಅಭಿವೃದ್ಧಿ ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಬೇಕಾದ ಜಿಲ್ಲಾ,ತಾಲೂಕು ಮತ್ತು ಕ್ಷೇತ್ರ ಮಟ್ಟದ ಅಧಿಕಾರಿಗಳನ್ನು ಯಾವಾಗಲೂ ವಿ ಸಿ ಹಾಲಿನಲ್ಲಿ ಕೂಡಿ ಹಾಕುವುದರಿಂದ ಜನತೆಯ ಆಶೋತ್ತರಗಳ ಈಡೇರಿಕೆಗೆ ಧಕ್ಕೆಯೊದಗುತ್ತದೆ.ಕ್ಷೇತ್ರ ಮಟ್ಟದ ಅಧಿಕಾರಿಗಳು ವಿ ಸಿ,ಮೀಟಿಂಗ್ ಗಳಲ್ಲೇ ಕಾಲಕಳೆಯುವಂತಹ ಸನ್ನಿವೇಶ ನಿರ್ಮಿಸುವ ಬದಲು ಅವರು ಸರಕಾರಗಳು ಜಾರಿಗೆ ತಂದ ಜನಪರ ಯೋಜನೆಗಳನ್ನು ಶ್ರದ್ಧೆ,ನಿಷ್ಠೆ ಮತ್ತು ನಾವಿನ್ಯಯುಕ್ತವಾಗಿ ಅನುಷ್ಠಾನಗೊಳಿಸುವಂತಹ ‘ಕಾಯಕ ಸಂಸ್ಕೃತಿ’ ಯನ್ನು ಬೆಳೆಸಬೇಕು.

ಕೆಲವು ಜನ ಜನಪ್ರತಿನಿಧಿಗಳು ಉದ್ದೇಶಪೂರ್ವಕವಾಗಿಯೇ ಸರಕಾರಿ ರಜಾ ದಿನಗಳಂದು ಪ್ರಗತಿ ಪರಿಶೀಲನಾ ಸಭೆ ನಿಗದಿ ಪಡಿಸುತ್ತಾರೆ!ಸರಕಾರಿ ಅಧಿಕಾರಿಗಳು,ನೌಕರರು ಹೇಗಿದ್ದರೂ ‘ ಬಾಯಿಸತ್ತವರು’ ,ಏನು ಮಾಡಿದರೂ ನಡೆದೀತು’ ಎನ್ನುವ ಅಸಡ್ಡೆ ಮನೋಭಾವ.ಸರಕಾರಿ ಅಧಿಕಾರಿ,ನೌಕರರುಗಳೇನೋ ಅಸಹಾಯಕತೆಯಲ್ಲಿ ಸಹಿಸಿಕೊಳ್ಳಬಹುದು.ಆದರೆ ಇದು ಪ್ರಬುದ್ಧ ಜನಪ್ರತಿನಿಧಿಗಳ ಲಕ್ಷಣವಲ್ಲ!ಸರಕಾರಿ ಅಧಿಕಾರಿಗಳು,ನೌಕರರು ನ್ಯಾಯಾಲಯಗಳ ಮೊರೆಹೋಗಿ ತಮ್ಮ ಹಕ್ಕುಗಳ ರಕ್ಷಣೆ ಮಾಡಿಕೊಳ್ಳಬೇಕಾದ ಕಾಲ ಬರಬಹುದು,ಪರಿಸ್ಥಿತಿ ಹೀಗೆಯೇ ಮುಂದುವರೆದರೆ.

ಸರಕಾರಿ ಅಧಿಕಾರಿಗಳು,ನೌಕರರ ಬಗೆಗಿನ ಜನಪ್ರತಿನಿಧಿಗಳ ದೃಷ್ಟಿಕೋನ ಬದಲಾಗಬೇಕು.ಸರಕಾರಗಳ ಆಡಳಿತದ ಯಶಸ್ಸು ಇರುವುದೇ ಸರಕಾರಿ ಅಧಿಕಾರಿಗಳು ಮತ್ತು ನೌಕರರುಗಳಲ್ಲಿ.ಸರಕಾರಗಳು ರೂಪಿಸುವ ಜನಪರ ಅಭಿವೃದ್ಧಿ ಯೋಜನೆಗಳ ಅನುಷ್ಠಾನವು ಸರಕಾರಿ ಅಧಿಕಾರಿಗಳು ಮತ್ತು ನೌಕರರ ಜವಾಬ್ದಾರಿಯಾಗಿರುತ್ತದೆ.ಸರಕಾರಿ ನೌಕರರನ್ನು ನಿಯಂತ್ರಿಸಲು ಕಾನೂನು,ನಿಯಮಗಳಿವೆ.ತಪ್ಪಿನಡೆದಾಗ ಶಿಕ್ಷಿಸುವ ದಂಡನಾ ವಿಧಾನವೂ ಹೀಗಿದೆ.ಎಲ್ಲಕ್ಕೂ ಮೇಲಾಗಿ ಸರಕಾರಿ ಅಧಿಕಾರಿಗಳು ಉತ್ತರದಾಯಿ(accountable) ಆಗಿರುತ್ತಾರೆ ಅವರ ಕಾರ್ಯನಡುವಳಿಗಳಿಗೆ. ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ಲೋಪವಾದರೆ ಅದಕ್ಕೆ ಅಧಿಕಾರಿಗಳೇ ಹೊಣೆಯಾಗುತ್ತಾರೇ ಹೊರತು ಜನಪ್ರತಿನಿಧಿಗಳಲ್ಲ! ನಮ್ಮ ಸಮಾಜವು ಸರಕಾರಿ ಅಧಿಕಾರಿಗಳು ಏನಾದರೂ ತಪ್ಪು ಮಾಡಿದಾಗ ಅವರತ್ತ ನೋಡುವ ನೋಟವೂ ವಿಚಿತ್ರವಾದುದೆ! ನ್ಯಾಯಾಲಯಗಳು ಅಂತಹ ಸರಕಾರಿ ಅಧಿಕಾರಿ, ನೌಕರರ ಬಗ್ಗೆ ‘ ಅವರು ಮನುಷ್ಯರೇ ಅಲ್ಲವೇನೋ’ ಎಂಬಂತೆ ನೋಡುತ್ತವೆ.ಆದರೆ ಬಡಪಾಯಿ ಸರಕಾರಿ ಅಧಿಕಾರಿ ಅಥವಾ ನೌಕರ ಯಾಕೆ ಹೀಗೆ ಮಾಡಿದ ಎಂದು ವಿಚಾರಿಸುವ ಹೃದಯವಂತಿಕೆ ಬೇಡ ಕನಿಷ್ಟ ಸೌಜನ್ಯವೂ ನಮ್ಮ ಸಮಾಜಕ್ಕೆ ಇಲ್ಲ.ಮನುಷ್ಯ ಸನ್ನಿವೇಶದ ಶಿಶು.ಸರಕಾರಿ ಅಧಿಕಾರಿಗಳು,ನೌಕರರುಗಳು ಸಹ ಜನಪ್ರತಿನಿಧಿಗಳು,ಮೇಲಾಧಿಕಾರಿಗಳ ಒತ್ತಡಕ್ಕೆ ಮಣಿದು ಏನೋ ಲೋಪ ಎಸಗಿದ್ದರೆ ಅದಕ್ಕೆ ಸರಕಾರಿ ಅಧಿಕಾರಿಗಳನ್ನೇ ಹೊಣೆ ಮಾಡುವುದು ‘ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಇಡುವ’ ಅಮಾನವೀಯ ನಡೆ.ಎಲ್ಲ ಸರಕಾರಿ ಅಧಿಕಾರಿಗಳು,ನೌಕರರು ಸತ್ಯಸಂಧರು,ಪರಿಶುದ್ಧರು ಎಂದು ನಾನು ಹೇಳುತ್ತಿಲ್ಲ.ಸರಕಾರಿ ಅಧಿಕಾರಿ,ನೌಕರರುಗಳಲ್ಲೂ ಕೊಳಕರು,ಹಣಕೊಳ್ಳೆಹೊಡೆಯುವುದನ್ನೇ ಪ್ರವೃತ್ತಿಯನ್ನಾಗಿ ಮಾಡಿಕೊಂಡ ಭ್ರಷ್ಟರೂ ಇದ್ದಾರೆ.ಅಂಥಹವರ ಬಗ್ಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.ಅದಕ್ಕೆ ಯಾರ ತಕರಾರೂ ಇಲ್ಲ.ಆದರೆ ಅಸಹಾಯಕರು,ಅಮಾಯಕರು ,ಮುಗ್ಧರು ಆದ ಸರಕಾರಿ ಅಧಿಕಾರಿಗಳು ಮತ್ತು ನೌಕರರನ್ನು ರಕ್ಷಿಸಬೇಕಾದದ್ದು ಎಲ್ಲರ ಕರ್ತವ್ಯ.

ಸರಕಾರಿ ಅಧಿಕಾರಿಗಳು ಮತ್ತು ನೌಕರರುಗಳತ್ತ ಕೆಟ್ಟದೃಷ್ಟಿಯಿಂದ ನೋಡುವ ನಮ್ಮ ಸಮಾಜದ ದೃಷ್ಟಿಕೋನವೂ ಬದಲಾಗಬೇಕು.ಒಬ್ಬ ಮನುಷ್ಯ ಸರಕಾರಿ ನೌಕರ ಅಥವಾ ಅಧಿಕಾರಿ ಆಗಬೇಕು ಎಂದರೆ ಆತ ಆ ಹುದ್ದೆಗೆ ಸಂಬಂಧಿಸಿದ ಪರೀಕ್ಷೆಗಳನ್ನು‌ ಪಾಸು ಮಾಡಿಯೇ ನೌಕರಿ ಪಡೆದಿರುತ್ತಾನೆ.ಕಷ್ಟಪಟ್ಟು ಓದಿ ಪಡೆದ ಹುದ್ದೆಗೆ ದೊರಕುವ ಸೌಲಭ್ಯಗಳನ್ನು ಅನುಭವಿಸಲು ಆತ ಅಥವಾ ಆಕೆಗೆ ಸಂವಿಧಾನದತ್ತ ಅವಕಾಶಗಳಿವೆ.’ಸರಕಾರಿ ನೌಕರರು ಸುಖಿಜೀವಿಗಳು,ಮಳೆ ಬಂದರೇನು,ಬರಬಿದ್ದರೇನು ತಿಂಗಳಾದರೆ ಸಂಬಳ ಎಣಿಸುತ್ತಾರೆ’ ಎನ್ನುವ ಜನರಿಗೆ ಆ ಸರಕಾರಿ ಅಧಿಕಾರಿ ಮತ್ತು ನೌಕರರುಗಳು ಪರಿಶ್ರಮ ಪಟ್ಟು ದುಡಿಯುತ್ತಿರುವುದರಿಂದಲೇ ಸಮಾಜ ಜೀವನ ಸುಸೂತ್ರವಾಗಿ ನಡೆಯುತ್ತಿದೆ ಎನ್ನುವುದು ತಿಳಿದಿಲ್ಲ.ಶಿಕ್ಷಕರು ಇರದಿದ್ದರೆ ನಿಮ್ಮ ಮಕ್ಕಳ ಭವಿಷ್ಯ ರೂಪಿಸುವವರು ಯಾರು? ಪೋಲಿಸರು ಇರದಿದ್ದರೆ ನಿಮ್ಮನ್ನು ರಕ್ಷಿಸುವವರು ಯಾರು? ವೈದ್ಯರು ಇರದಿದ್ದರೆ ನಿಮ್ಮ ಆರೋಗ್ಯ ರಕ್ಷಿಸುವವರು ಯಾರು? ಇಂಜನಿಯರ್ ಗಳು ಇರದಿದ್ದರೆ ನಿಮಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವವರು ಯಾರು? ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಇರದಿದ್ದರೆ ತಳಹಂತದ ನಿಮ್ಮ ಸ್ವಾತಂತ್ರ್ಯಕ್ಕೆ ಅರ್ಥವಾದರೂ ಎಲ್ಲಿ? ನಿಮ್ಮ ಗ್ರಾಮಸರ್ಕಾರಗಳ ನಿರ್ವಹಣೆ ಗ್ರಾಮ ಪಂಚಾಯತಿಗಳ ಸಿಬ್ಬಂದಿಯವರದ್ದೇ ಅಲ್ಲವೆ?ನಿಮಗಾಗಿಯೇ ಇರುವ ಸರಕಾರಿ ಅಧಿಕಾರಿ,ನೌಕರರುಗಳನ್ನು ಗೌರವಿಸುವುದು ಬೇಡ, ಕನಿಷ್ಟ ಅವರ ಸೇವೆಯ ಬಗ್ಗೆ ನಾಲ್ಕು ಮೆಚ್ಚುಗೆಯ ಮಾತುಗಳನ್ನು ಆಡಬಾರದೆ?

ಕೊನೆಯದಾಗಿ ಒಂದು ಮಾತನ್ನು ಎಲ್ಲರೂ ನೆನಪಿನಲ್ಲಿಟ್ಟುಕೊಳ್ಳಬೇಕು — ಸರಕಾರಿ ಅಧಿಕಾರಿಗಳು,ನೌಕರರುಗಳು ಪಡೆಯುತ್ತಿರುವ ಸಂಬಳ- ಸವಲತ್ತುಗಳು ಯಾರೂ ಅವರಿಗೆ ನೀಡುತ್ತಿರುವ ಭಿಕ್ಷೆಯಲ್ಲ; ಅದು ಅವರ ಸಂವಿಧಾನಬದ್ಧ ಹಕ್ಕು.ಸಂವಿಧಾನವನ್ನು ಓದಿ,ಬಲ್ಲ ಯಾರೂ ಸಾರ್ವಜನಿಕ ಸೇವಕರಾದ ಸರಕಾರಿ ಅಧಿಕಾರಿಗಳು ಮತ್ತು ನೌಕರರುಗಳನ್ನು ಲಘುವಾಗಿ ಪರಿಗಣಿಸುವುದಿಲ್ಲ.ಸಾರ್ವಜನಿಕ ಆಡಳಿತದ ಅರಿವು ಉಳ್ಳ ಯಾರೂ ಸರಕಾರಿ ಅಧಿಕಾರಿಗಳನ್ನು ಉಪೇಕ್ಷಿಸುವುದಿಲ್ಲ.

ಮುಕ್ಕಣ್ಣ ಕರಿಗಾರ
ಮೊ; 94808 79501

25.09.2021