ಪ್ರಶಸ್ತಿಗಳ ತೂಕ ಹೆಚ್ಚುವುದು, ಕಡಿಮೆಯಾಗುವುದು…… !

ಪ್ರಶಸ್ತಿಗಳ ತೂಕ ಹೆಚ್ಚುವುದು, ಕಡಿಮೆಯಾಗುವುದು…… !

ಲೇಖಕರು: ಮುಕ್ಕಣ್ಣ ಕರಿಗಾರ

ಹಿರಿಯ ಚೇತನರುಗಳಿಗೆ ಯಾವುದಾದರೂ ಪ್ರಶಸ್ತಿ ನೀಡಿದಾಗ ‘ …ಇವರಿಗೆ ನೀಡಿದ್ದರಿಂದ ಈ ಪ್ರಶಸ್ತಿಯ ತೂಕ ಹೆಚ್ಚಿತು’ ಎನ್ನುವ ಹೊಗಳಿಕೆಯ ಮಾತುಗಳನ್ನು ಕೇಳುತ್ತಿರುತ್ತೇವೆ ,ಆಗಾಗ.ಪ್ರಶಸ್ತಿಗಳು ಇರುವುದೇ ಹಿರಿಯ ಚೇತನರುಗಳನ್ನು,ಮಹಾನ್ ಸಾಧಕರುಗಳನ್ನು,ವಿಶಿಷ್ಟ ವ್ಯಕ್ತಿತ್ವಗಳನ್ನು ಗೌರವಿಸಲು.ಸಾಹಿತ್ಯ,ಸಂಸ್ಕೃತಿ,ಕಲೆ,ವಿಜ್ಞಾನ- ವೈದ್ಯಕೀಯ,ಸಮಾಜಸೇವೆ,ಪತ್ರಿಕೋದ್ಯಮ ಇವೇ ಮೊದಲಾದ ಕ್ಷೇತ್ರಗಳಲ್ಲಿ ಕೇಂದ್ರ ಮತ್ತು ರಾಜ್ಯಸರಕಾರಗಳು ಪ್ರಶಸ್ತಿಗಳನ್ನು ನೀಡುತ್ತಿವೆ.ಹಾಗೆಯೇ ಕೆಲವು ಪ್ರತಿಷ್ಠಿತ ಧಾರ್ಮಿಕ ಸಂಸ್ಥೆಗಳು ಸೇರಿದಂತೆ ಸರಕಾರಿ ವಲಯದಾಚೆಯ ಖಾಸಗಿ ಕ್ಷೇತ್ರದಿಂದಲೂ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ನಿಯಮಿತವಾಗಿಪ್ರಶಸ್ತಿ ಪ್ರದಾನ ಮಾಡುವಾಗ ಪ್ರತಿವರ್ಷ ಪ್ರಶಸ್ತಿ ನೀಡಬೇಕಾಗುತ್ತದೆ.ಹೀಗೆ ಪ್ರತಿವರ್ಷ ಪ್ರಶಸ್ತಿ ನೀಡಬೇಕಾದಾಗ ಪ್ರಶಸ್ತಿಗೆ ನಿಜವಾದ ಅರ್ಹತೆ ಇಲ್ಲದಿದ್ದವರಿಗೂ ಪ್ರಶಸ್ತಿ ನೀಡಬೇಕಾಗುವ ಅನಿವಾರ್ಯತೆ ತಲೆದೋರುತ್ತದೆ.

ಈಗ ಪ್ರಶಸ್ತಿಗಳಿಂದ ವ್ಯಕ್ತಿತ್ವಗಳನ್ನು ಅಳೆಯುವ ಪ್ರವೃತ್ತಿ ನಮ್ಮಲ್ಲಿ ಬೆಳೆಯುತ್ತಿರುವುದರಿಂದ ಪ್ರಶಸ್ತಿಗಳ ಆಕಾಂಕ್ಷಿಗಳು ನಾನಾ ಬಗೆಯ ಕಸರತ್ತುಗಳನ್ನು ಮಾಡುತ್ತಾರೆ.ನಿಜವಾದ ಸಾಧಕರುಗಳು ಪ್ರಶಸ್ತಿಯ ಬೆನ್ನುಹತ್ತಿ ಹೋಗುವುದಿಲ್ಲ.ಆದರೆ ಪ್ರಶಸ್ತಿಪಡೆದು ದೊಡ್ಡವರು ಎನ್ನಿಸಿಕೊಳ್ಳಬೇಕು ಎನ್ನುವ ಹಂಬಲದ ಜನರು ಪ್ರಶಸ್ತಿಪಡೆಯುವುದೇ ಜೀವನದ ಸಾರ್ಥಕತೆ ಎಂದು ಭಾವಿಸಿ,ಪ್ರಶಸ್ತಿಗಳಿಗಾಗಿ ಮಾಡಬಾರದ್ದನ್ನೆಲ್ಲ ಮಾಡುತ್ತಾರೆ.ಸರಕಾರಗಳು ಸೇರಿದಂತೆ ಖಾಸಗಿ ಸಂಸ್ಥೆಗಳು ಪ್ರಶಸ್ತಿಗೆ ಅರ್ಜಿ ಆಹ್ವಾನಿಸುವುದಂತೂ ಹಿರಿಯಚೈತನ್ಯಗಳಿಗೆ,ಸಾಂಸ್ಕೃತಿಕ ಲೋಕಕ್ಕೆ ಮಾಡುವ ಅಪಚಾರ. ನಿಜವಾದ ಅರ್ಹರನ್ನು ಹುಡುಕಿ ಪ್ರಶಸ್ತಿ ಕೊಡಬೇಕಾದ ಜವಾಬ್ದಾರಿಯನ್ನು ನಿಭಾಯಿಸಬೇಕಾದ ಸರ್ಕಾರಗಳು,ಸಂಸ್ಥೆಗಳು ಅರ್ಜಿ ಆಹ್ವಾನಿಸಿ,ಬಂದ ಅರ್ಜಿಗಳಲ್ಲಿ ಹುಡುಕಿ ಯಾರೋ ಒಬ್ಬಿಬ್ಬರು ತಮಗೆ ಬೇಕಾದವರಿಗೆ ಪ್ರಶಸ್ತಿ ನೀಡುವುದು ಸಾಂಸ್ಕೃತಿಕ ಕ್ಷೇತ್ರಕ್ಕೆ ಮಾಡುವ ಅಪಮಾನ.ಆದರೆ ಪ್ರಶಸ್ತಿಯೇ ಜೀವನದ ಸರ್ವಸ್ವ ಎಂದು ಭಾವಿಸಿರುವ ಮಂದಿಗೆ ಸ್ವಾಭಿಮಾನ ಇರುವುದಿಲ್ಲವಾಗಿ ಅವರು ಪ್ರಶಸ್ತಿಯ ಮೌಲ್ಯವನ್ನು ಕಳೆಯುತ್ತಾರೆ.ಅವರಿವರ ಮನೆಬಾಗಿಲು ಕಾಯ್ದು,ಶಿಫಾರಸ್ಸು ಪತ್ರ ಪಡೆದು,ಅವರಿವರ ಒತ್ತಡಗಳನ್ನು ಹೇರಿ ಪ್ರಶಸ್ತಿ ಪಡೆಯುವವರಿಂದ ಪ್ರಶಸ್ತಿಯ ತೂಕ ಕಡಿಮೆ ಆಗುತ್ತದೆ! ಪ್ರಶಸ್ತಿಯಂತೂ ಅದೇ.ಆದರೆ ಅದರ ತೂಕದಲ್ಲಿ ಹೆಚ್ಚು ಕಡಿಮೆ ಆಗಲು ಕಾರಣ ಅದನ್ನು ಪಡೆಯುವವರ ವ್ಯಕ್ತಿತ್ವ ಮತ್ತು ಪ್ರಶಸ್ತಿಯನ್ನು ಪಡೆದ ಬಗೆ.

ಪ್ರಶಸ್ತಿಗಳು ಇರಬೇಕು ಅರ್ಹರನ್ನು ಸತ್ವಯುತ ವ್ಯಕ್ತಿತ್ವಗಳನ್ನು ಗೌರವಿಸಲು.ಪ್ರಶಸ್ತಿಗಳು ಇರಬಾರದು ಮನಸ್ಸಿಗೆ ಬಂದವರಿಗೆ ನೀಡಲು.ಜಾತಿ,ಮತ- ಧರ್ಮಗಳನ್ನು ಆಧರಿಸಿ ಓಲೈಕೆಗಾಗಿ ಪ್ರಶಸ್ತಿಗಳನ್ನು ನೀಡುವುದು ಆಯಾ ಕ್ಷೇತ್ರಗಳಿಗೆ ಮಾಡುವ ಅನ್ಯಾಯ,ಎಸಗುವ ಅಪಚಾರ.ಇನ್ನೂ ಭಯಂಕರವಾದ ಸಂಗತಿ ಒಂದಿದೆ,ಜಾತಿ- ಜನಾಂಗಗಳ ಮಠ- ಪೀಠಗಳು,ಸಂಘಟನೆಗಳು ತಮ್ಮ ಜನಾಂಗದವರಿಗೆ ನೀಡುವ ಪ್ರಶಸ್ತಿಗಳು.ಆಯಾ ಸಮಾಜ,ಜಾತಿ- ಜನಾಂಗದ ಹೆಸರಿನಲ್ಲಿ ಪ್ರಶಸ್ತಿ ನೀಡಿದರೆ ಪರವಾಯಿಲ್ಲ– ಆದರೆ ಸಾಹಿತ್ಯ,ಸಂಸ್ಕೃತಿ,ಕಲೆ- ವಿಜ್ಞಾನ,ವೈದ್ಯಕೀಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ ಎಂದು ತಮ್ಮ ಜನಾಂಗದವರಿಗೆ ಪ್ರಶಸ್ತಿಗಳನ್ನು ನೀಡುವುದು ಒಳ್ಳೆಯ ಬೆಳವಣಿಗೆಯಲ್ಲ.ಆದರೆ ಅದು ಸರಿ ಅಲ್ಲ ಅಂತ ಹೇಳುವವರು ಯಾರು? ಇದು ಪ್ರಜಾಪ್ರಭುತ್ವ ರಾಷ್ಟ್ರ.ಇಲ್ಲಿ ಯಾರು,ಏನುಬೇಕಾದರೂ ಮಾಡಬಹುದು!ಪ್ರಜಾಪ್ರಭುತ್ವದ ಅಪಮೌಲ್ಯೀಕರಣವು ಸಾಹಿತ್ಯ- ಸಾಂಸ್ಕೃತಿಕ ಲೋಕದ ಅಪಮೌಲ್ಯೀಕರಣಕ್ಕೂ ಕಾರಣವಾಗುತ್ತದೆ.ಜಾತಿ ಸಂಘಟನೆಗಳು,ಜಾತಿ ಮಠ ಪೀಠಗಳು ನೀಡುವ ಪ್ರಶಸ್ತಿಗಳು ನಿಜವಾದ ಪ್ರಶಸ್ತಿಗಳಲ್ಲ,ಅವುಗಳಿಗೆ ಸಮಷ್ಟಿ ಸಹಮತ ಮೌಲ್ಯ ಇರುವುದಿಲ್ಲ.ಅಂತಹ ಪ್ರಶಸ್ತಿಗಳನ್ನು ಪಡೆದವರು ಸರ್ವಜನಾದರಣೀಯರಾಗರು.

ಕೆಲವರು ಇಂತಿಂಥವರಿಗೆ ಪ್ರಶಸ್ತಿಗಳನ್ನು ನೀಡಬೇಕು ಎಂದೇ ಪ್ರಶಸ್ತಿಗಳನ್ನು ಸೃಷ್ಟಿಸುತ್ತಿರುವುದು ಇತ್ತೀಚಿಗೆ ಬೆಳೆದುಕೊಂಡು ಬಂದ ಸತ್ಸಂಪ್ರದಾಯ! ತಮಗೆ ಬೇಕಾದ ವ್ಯಕ್ತಿಗೆ ಪ್ರಶಸ್ತಿ ಕೊಡಬೇಕು ಎಂದು ನಿರ್ಧರಿಸಿ ಪ್ರಶಸ್ತಿಗಳನ್ನು ನೀಡುವವರಿಗೆ ನೆಲೆ ಇರುವುದಿಲ್ಲ; ಅಂತಹ ಪ್ರಶಸ್ತಿಗಳನ್ನು ಪಡೆದವರಿಗೆ ಬೆಲೆ ಇರುವುದಿಲ್ಲ.ಕೊಡುವವರು – ಪಡೆಯುವವರ ಒಳ ಒಪ್ಪಂದವೋ,ಒಡಂಬಡಿಕೆಯೋ ಆಗಿ ಸೃಷ್ಟಿಸಲ್ಪಟ್ಟ ಪ್ರಶಸ್ತಿಗಳಿಗೆ ಕವಡೆ ಕಿಮ್ಮತ್ತೂ ಇರುವುದಿಲ್ಲ.ಹಣಪಡೆದು ಪ್ರಶಸ್ತಿ ನೀಡುವ ಸಂಘ- ಸಂಸ್ಥೆಗಳೂ ಸಾಕಷ್ಟಿವೆ.ಅಂತಹ ಸಂಸ್ಥೆಗಳಿಗೆ ಹಣಬೇಕು,ಈ ಮಹಾನುಭಾವರುಗಳಿಗೆ ಪೇಪರುಗಳಲ್ಲಿ ಮಿಂಚಲು,ಬಣ್ಣಬಣ್ಣದ ಲೆಟರ್ ಹೆಡ್,ವಿಸಿಟಿಂಗ್ ಕಾರ್ಡಗಳನ್ನು ಮುದ್ರಿಸಲು ಪ್ರಶಸ್ತಿಬೇಕು.ತಮ್ಮ ಬೆನ್ನನ್ನು ತಾವೇ ಚಪ್ಪರಿಸಿಕೊಂಡು ದೊಡ್ಡವರಾಗುವ ಮಂದಿಗೆ ಯಾವುದೋ ಒಂದು ಪ್ರಶಸ್ತಿ ಮುಖ್ಯವಾಗುತ್ತದೆಯೇ ಹೊರತು ಆತ್ಮಾವಲೋಕನ ಮುಖ್ಯವಾಗುವುದಿಲ್ಲ.ಆತ್ಮವಿಮರ್ಶೆ,ಆತ್ಮಾವಲೋಕನ ಎಂದರೆ ಏನೆಂದೇ ಅರಿಯದವರಲ್ಲಿ ತತ್ತ್ವ,ಆದರ್ಶ- ಮೌಲ್ಯಗಳನ್ನು ಹುಡುಕುವುದಾದರೂ ಹೇಗೆ?

ನಮ್ಮ ವ್ಯಕ್ತಿತ್ವ ದೊಡ್ಡದು ಆಗಿರಬೇಕು.ಪದವಿ- ಪ್ರಶಸ್ತಿಗಳಿಂದ ವ್ತಕ್ತಿತ್ವವಲ್ಲ; ವ್ಯಕ್ತಿತ್ವವನ್ನು ಅರಸಿ ಪದವಿ- ಪ್ರಶಸ್ತಿಗಳು ಬರಬೇಕೇ ಹೊರತು ಪದವಿ- ಪ್ರಶಸ್ತಿಗಳಿಂದ ಪರಿಪೂರ್ಣವಾಗದು ವ್ಯಕ್ತಿತ್ವ.ಪದವಿ- ಪ್ರಶಸ್ತಿಗಳಿಗಿಂತ ಪೂರ್ಣಪಥದತ್ತ ತುಡಿಯುವುದೇ ಜೀವನದ ಗುರಿಯಾಗಬೇಕು.ಪೂರ್ಣರಾಗುವುದರ ಮುಂದೆ ಯಾವ ಪ್ರಶಸ್ತಿ ದೊಡ್ಡದು ಇದ್ದೀತು?

ಮುಕ್ಕಣ್ಣ ಕರಿಗಾರ
ಮೊ; 94808 79501

25.09.2021