ದಹಿಸುವ ಸೂರ್ಯನಲಿ ಕರಗುತ್ತಿರುವೆನು ಪ್ರತಿದಿನಅವಳಿರದ ನಿತ್ಯಸಂಜೆ ಬೇಯುತ್ತಿರುವೆನು ಪ್ರತಿದಿನ
ವಿರಹದುರಿಯ ಅಗ್ನಿಕುಂಡದ ಜ್ವಾಲೆಯ ಮನಸು
ಬವಣೆಯ ಕಡುಬಿಸಿಲಲಿ ಸುಡುತ್ತಿರುವೆನು ಪ್ರತಿದಿನ
ಇಳಿಹೊತ್ತಿನ ಕುಳಿರ್ಗಾಳಿ ಸುಡುಬೆಂಕಿ ಕೆನ್ನಾಲಗೆ
ತಂಗಾಳಿಯ ತಂಪಲು ಬಾಡುತ್ತಿರುವೆನು ಪ್ರತಿದಿನ
ಜೀವನೋತ್ಸಾಹದ ಚಿಗುರು ಕಾಡುಹಾದಿ ಹುಲ್ಲು
ನಯನ ಮಿಂಚಲು ಕುರುಡಾಗುತ್ತಿರುವೆನು ಪ್ರತಿದಿನ
ಶಿಶಿರಕೂ ಗ್ರೀಷ್ಮದ ಬೇಗುದಿಯ ಪ್ರತಿರೂಪ ʻಗಿರಿʼ
ಸರ್ವಋತು ಸಖ್ಯವು ತಳಮಳಿಸುತ್ತಿರುವೆನು ಪ್ರತಿದಿನ
