ಎನ್.ಆರ್.ಬಿ.ಸಿ ಕಾಲುವೆ ಕಾಮಗಾರಿ ಕಳಪೆ: ರೈತರಲ್ಲಿ ಆತಂಕ

ಲಿಂಗಸೂಗುರು; ನಾರಾಯಣಪುರ ಬಲದಂಡೆ ನಾಲೆ ಅಧುನೀಕರಣ ಕಾಮಗಾರಿ ಆರಂಭದಲ್ಲಿಯೆ ಕಳಪೆತನ ಪ್ರದರ್ಶನ ರೈತರಲ್ಲಿ ಆತಂಕ ಮನೆ ಮಾಡಿದೆ.
ನಾರಾಯಣಪು ಜಲಾಶಯದ ಬಲದಂಡೆ ಮುಖ್ಯ ನಾಲೆ ಅಧುನೀಕರಣ ಮೂಲಕ ರಾಯಚೂರು ಜಿಲ್ಲೆ ಲಿಂಗಸುಗೂರು, ದೇವದುರ್ಗ, ರಾಯಚೂರು ಅಚ್ಚು ಕಟ್ಟು ಪ್ರದೇಶಕ್ಕೆ ನೀರು ಹರಿಸುವ ಮಹತ್ವಾಕಾಂಕ್ಷಿಯ ಅಧುನೀಕರಣ ಕಾಮಗಾರಿ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ.
ಬಲದಂಡೆ ಮುಖ್ಯ ನಾಲೆ ಅಧುನೀಕರಣಕ್ಕೆ ರಾಜ್ಯ ಸರ್ಕಾರ ೯೫ ಕಿಲೋ ಮೀಟರ್ ಕಾಮಗಾರಿಗೆ ರೂ. ೯೫೦ಕೋಟಿ ನೀಡಿದೆ. ೫ ತಿಂಗಳಲ್ಲಿಯೆ ತರಾತುರಿ ಕಾಮಗಾರಿ ಪೂರ್ಣಗೊಳಿಸಿ ರೂ. ೬೫೦ ಕೋಟಿಯಷ್ಟು ಹಣ ಪಾವತಿಸಿ ಕಾಮಗಾರಿ ಪ್ರಗತಿ ಹಂತದಲ್ಲಿದೆ ಎಂದು ದಾಖಲೆಯಲ್ಲಿ ತೋರಿಸಿದ್ದಾರೆ.
ಕಾಮಗಾರಿ ಆರಂಭದಲ್ಲಿಯೆ ೦೦ಕಿಲೋ ಮೀಟರ್ ದಲ್ಲಿ ಲೈನಿಂಗ್ ಕೊಚ್ಚಿ ಸುದ್ದಿಯಲ್ಲಿತ್ತು. ರೈತ ಮತ್ತು ಪ್ರಗತಿಪರ ಸಂಘಟನೆಗಳು ಕೂಡ ಮರಂ ಬಳಕೆ, ಕಬ್ಬಿಣದ ಸರಳು ಬಳಕೆ, ಕಳಪೆ ಮರಳು ಬಳಸುವ ಕುರಿತು ದೂರು ಸಲ್ಲಿಸುತ್ತ ಬಂದಿದ್ದನ್ನು ಸ್ಮರಿಸಬಹುದಾಗಿದೆ.
ಈಚೆಗೆ ಮಳೆ ನೀರು ನಾಲೆಗೆ ಹರಿದು ೪೪ ನೇ ಕಿಲೋ ಮೀಟರ್ ದಲ್ಲಿ ಕೊಚ್ಚಿ ಹೋಗಿತ್ತು. ಈಗ ನಾಲೆಗೆ ನೀರು ಹರಿಸುವ ಪ್ರಮಾಣ ಕಡಿಮೆ ಮಾಡಿದ್ದು ಅಲ್ಲಲ್ಲಿ ಲೈನಿಂಗ್ ಕಳಚಿ ಬಿದ್ದಿದೆ. ಬಹುತೇಕ ಕಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಲೈನಿಂಗ ಕುಸಿದು ರೈತರಲ್ಲಿ ಆತಂಕ ಸೃಷ್ಟಿಸಿದ್ದು ಕೋಟ್ಯಂತರ ಹಣ ನೀರು ಪಾಲಾಗುವ ಲಕ್ಷಣಗಳು ಸ್ಪಷ್ಟವಾಗಿವೆ.
ವೀಕ್ಷಣಾ ರಸ್ತೆಗುಂಟ ಹಾಕಿದ ಮರಂ ಭಾಗಶಃ ಕೊಚ್ಚಿ ನಾಲೆಗೆ ಹರಿದಿದೆ. ಸಂಪರ್ಕ ರಸ್ತೆ ಅಭಿವೃದ್ಧಿ, ರೈತರ ಜಮೀನು ಸಂಪರ್ಕಿಸುವ ಕಾಲುದಾರಿ ದುರಸ್ತಿ ಮಾಡಿಲ್ಲ. ಪ್ರಗತಿಯಲ್ಲಿರುವಾಗಲೆ ಶೇಕಡ ೮೦ರಷ್ಟು ಹಣ ಪಾವತಿ ಹಣ ದುರ್ಬಳಕೆಗೆ ಸಾಕ್ಷಿಯಾಗಿದೆ. ಈ ಕುರಿತು ತನಿಖೆ ನಡೆಸಿ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಕೃಷ್ಣಾ ಭೀಮ ಅಚ್ಚುಕಟ್ಟು ಪ್ರದೇಶ ರೈತ ಸಂಘದ ರಾಜ್ಯಾಧ್ಯಕ್ಷ ಅಮರೇಶ ಒತ್ತಾಯಿಸಿದ್ದಾರೆ.