ಬದುಕುವ ದಾರಿ -1 ‘ಇನ್ನಾದರೂ ನಿನ್ನನ್ನು ನೀನು ತಿದ್ದಿಕೋ’

ಇನ್ನಾದರೂ ನಿನ್ನನ್ನು ನೀನು ತಿದ್ದಿಕೋ!

ಲೇಖಕ: ರವಿ ಜಾನೇಕಲ್

ನಮ್ಮಲ್ಲಿ ಹೆಚ್ಚಿನವರು ಒಂದಲ್ಲಾ ಒಂದು ದಿನ, ಏನೋ ಒಂದು ಕಾರಣಕ್ಕೆ ತಮ್ಮ ಹೆತ್ತವರನ್ನು ಬೈದಿರುತ್ತೇವೆ, ನೋಯಿಸಿರುತ್ತೇವೆ. ‘ನೀವು ನಮಗಾಗಿ ಏನೂ ಮಾಡಿಲ್ಲ. ಮಾಡಿದ ಕೆಲವೊಂದು ಕೆಲಸಗಳು ಕೇವಲ ನಿಮ್ಮ ಕರ್ತವ್ಯವಷ್ಟೇ. ಅದೇನೂ ದೊಡ್ಡ ವಿಷಯವೇನಲ್ಲ’ ಎಂದು ಹೀಯಾಳಿಸಿರುತ್ತೇವೆ. ಇದೆಲ್ಲಾ ಹೇಳಲು ಎಷ್ಟು ಸುಲಭವೋ, ಅದನ್ನೇ ಅನುಭವಿಸುವುದು ಅಷ್ಟೇ ಕಷ್ಟ. ಈ ರೀತಿ ಮಾಡುವ ಮುಂಚೆ ಒಂದು ಹೊತ್ತಿನ ಊಟವಾದರೂ ನಿಮ್ಮ ಪರಿಶ್ರಮದಿಂದ ದುಡಿದು ನೋಡಬೇಕು. ಆಗ ನಿಮ್ಮ ಹೆತ್ತವರು ನಿಮಗಾಗಿ ಮಾಡಿರುವುದು ಏನು ಎಂದು ಅರ್ಥವಾಗುತ್ತದೆ. ಇದಕ್ಕಾಗಿ ಒಂದು ಕಥೆ ಕೇಳಿ.

ಒಂದಾನೊಂದು ಊರಿನಲ್ಲಿ ಒಬ್ಬ ಪರಿಶ್ರಮಿ ವ್ಯಕ್ತಿಯಿದ್ದ. ಅವನು ಕಷ್ಟಪಟ್ಟು ದುಡಿದು ತನ್ನ ಸಂಸಾರವನ್ನು ಚೆನ್ನಾಗಿ ನಡೆಸುತ್ತಿದ್ದ. ಆದರೆ ಅವನ ಮಗ ಮಾತ್ರ ಕೆಲಸ ಕಳ್ಳನೂ, ಆಲಸಿಯೂ ಆಗಿದ್ದ. ಅವನು ಯಾವತ್ತೂ ನೋಡಿದರೂ, ಮೋಜು, ಮಸ್ತಿ, ಆಟ ಅಂತ ತಂದೆಯ ಹಣದಲ್ಲಿ ಐಶಾರಾಮಿ ಜೀವನ ನಡೆಸುತ್ತಿದ್ದ. ಇದರಿಂದ ಆ ತಂದೆ ತನ್ನ ಮಗನ ಜೀವನದ ಕುರಿತು ಚಿಂತಿತರಾಗಿದ್ದರು. ಈ ನಡುವೆ ಹುಡುಗ ತನ್ನ ಮಿತಿ ಮೀರುತ್ತಿದ್ದದ್ದು ಗಮನಕ್ಕೆ ಬಂತು. ಇವನನ್ನು ಏನಾದರೂ ಮಾಡಿ, ಸರಿದಾರಿಗೆ ತರಬೇಕೆಂದು ನಿರ್ಧರಿಸಿದ ತಂದೆ. ಮಗನನ್ನು ಕರೆದು, ‘ಇನ್ನು ನೀನು ಕೆಲಸಕ್ಕೆ ಹೋಗಬೇಕು. ಯಾವ ಕೆಲಸವಾದರೂ ಸರಿ. ಚೆನ್ನಾಗಿ ದುಡಿದು, ಸಂಜೆಯೊಳಗೆ ಹಣದೊಂದಿಗೆ ವಾಪಾಸ್ ಬರಬೇಕು. ಇಲ್ಲವಾದಲ್ಲಿ ನಿನ್ನನ್ನು ಮನೆಯೊಳಗೆ ಬಿಡುವುದಿಲ್ಲ‘ ಎಂದು ಸೂಚನೆಯೊಂದಿಗೆ ಎಚ್ಚರಿಕೆಯನ್ನೂ ನೀಡಿದ.

ಈ ಹುಡುಗ ಕೆಲಸಕಳ್ಳನಲ್ವಾ? ಹಾಗಾಗಿ ಹೊರಗೆ ಹೋಗಿ ದುಡಿಯಲು ಇಷ್ಟವಿಲ್ಲದೇ, ಅವನು ತನ್ನ ತಾಯಿಯ ಬಳಿ ಹೋಗಿ ನಡೆದ ವಿಚಾರವನ್ನೆಲ್ಲಾ ತಿಳಿಸಿದ. ಆಗ ಆ ತಾಯಿ ಮಗನಿಗೆ ಸ್ವಲ್ಪ ಹಣ ನೀಡಿದರು. ದಿನದ ಕೆಲಸವನ್ನೆಲ್ಲಾ ಮುಗಿಸಿ ತಂದೆ ಮನೆಗೆ ಬಂದಾಗ, ಹುಡುಗ ತಾಯಿ ಕೊಟ್ಟ ಹಣವನ್ನೇ ತಂದೆಯ ಕೈಗಿಟ್ಟ. ತಂದೆಗೆ ಈ ವಿಚಾರ ಚೆನ್ನಾಗಿಯೇ ಗೊತ್ತಿತ್ತು. ಆದರೂ ಅವರು ಈ ಬಗ್ಗೆ ಏನೂ ಕೇಳಲಿಲ್ಲ. ಬದಲಾಗಿ, ಮಗನಿಗೆ ಆ ಹಣವನ್ನು ಬಾವಿಗೆ ಹಾಕಿ ಬರುವಂತೆ ಹೇಳಿದರು. ಮಗ ಮರು ಯೋಚನೆ ಮಾಡದೇ, ತಂದೆ ಹೇಳಿದಂತೆ ಹಣವನ್ನು ಬಾವಿಗೆ ಹಾಕಿದ. ನಂತರ ತಂದೆ ತನ್ನ ಹೆಂಡತಿಯನ್ನು ಸ್ವಲ್ಪ ದಿನದ ಮಟ್ಟಿಗೆ ತನ್ನ ತಾಯಿಯ ಮನೆಗೆ ಹೋಗಿ ಬರುವಂತೆ, ಹೇಳಿ ಸ್ವಲ್ಪ ಹಣದೊಂದಿಗೆ ಅವಳನ್ನು ತವರು ಮನೆಗೆ ಕಳುಹಿಸಿದ.

ಮರುದಿನ ಮಗನನ್ನು ಕರೆದು, ‘ನೀನು ಇಂದು ಪುನಃ ಹೊರಗೆ ಹೋಗಿ, ದುಡಿದು ಹಣ ತೆಗೆದುಕೊಂಡು ಬರಬೇಕು. ಯಾವುದೇ ಕಾರಣಗಳನ್ನು ಹೇಳುವಂತಿಲ್ಲ’ ಎಂದು ತಂದೆ ಕಳಿಸಿದ. ಅದಕ್ಕೆ ಮಗ ಈ ಬಾರಿ ತನ್ನ ಅಕ್ಕನ ಹತ್ತಿರ ಹೋಗಿ, ನಡೆದುದನ್ನೆಲ್ಲಾ ತಿಳಿಸುತ್ತಾನೆ. ಆಗ ತನ್ನ ತಮ್ಮನ ಮೇಲಿನ ಮಮಕಾರದಲ್ಲಿ ಅಕ್ಕ ಸ್ವಲ್ಪ ಹಣ ನೀಡುತ್ತಾಾಳೆ. ಸಂಜೆಯಾಗುತ್ತಿದ್ದಂತೆ ಹುಡುಗ ಮನೆಗೆ ಹೋಗಿ, ಅದೇ ಹಣವನ್ನು ತಂದೆಗೆ ನೀಡಿ, ‘ಅಪ್ಪಾ, ಇವತ್ತಿನ ಸಂಬಳ.‘ ಎನ್ನುತ್ತಾನೆ. ಅದನ್ನು ಕೇಳಿದ ತಂದೆ, ‘ಹೌದಾ? ಇದನ್ನು ತೆಗೆದುಕೊಂಡು ಹೋಗಿ ಮತ್ತೆ ಬಾವಿಗೆ ಎಸೆದು ಬಾ!’ ಎಂದು ಹೇಳುತ್ತಾನೆ. ತಂದೆಗೆ ಈ ವಿಚಾರ ಗೊತ್ತಾಗಿ, ಅವನು ಅವಳನ್ನು ಕೂಡಾ ತನ್ನ ಅಜ್ಜಿ ಮನೆಗೆ ಕಳುಹಿಸುತ್ತಾಾನೆ.

ಮುಂದಿನ ದಿನ ಮತ್ತೆ ಮಗನನ್ನು ಕರೆದು, ‘ಇಂದೂ ಕೂಡಾ ನೀನು ದುಡಿಯಲು ಹೋಗಬೇಕು. ಇಡೀ ದಿನದ ಸಂಬಳ ತೆಗೆದುಕೊಂಡೇ ಮನೆಗೆ ಬರಬೇಕು’ ಎಂದು ಆಜ್ಞಾಪಿಸಿದ. ಈ ದಿನ ಮಗನ ಬಳಿ ಬೇರೆ ದಾರಿಯೇ ಇರಲಿಲ್ಲ. ಹಾಗಾಗಿ ಅವನು ಕೆಲಸದ ಹುಡುಕಾಟದಲ್ಲಿ ಹೊರಗೆ ಹೊರಟು ಹೋದ. ಎಷ್ಟೇ ಹುಡುಕಿದರೂ ಯಾರೂ ಕೆಲಸ ಕೊಡುತ್ತಿರಲಿಲ್ಲ. ಕೊನೆಗೂ ಅವನಿಗೆ ಅಂಗಡಿಯ ಟ್ರಕ್‌ಗೆ ಸಾಮಾನು ಸಾಗಿಸುವ ಕೆಲಸ ಸಿಕ್ಕಿತು. ಮನಸಿಟ್ಟು ಕೆಲಸ ಮಾಡಿದ ಇವನು ತೀರಾ ದಣಿದು ಹೋಗಿದ್ದ. ಬಹಳ ಹೆಮ್ಮೆಯಿಂದ ತನ್ನ ಪ್ರಥಮ ದುಡಿಮೆಯೊಂದಿಗೆ ಮನೆಗೆ ಹೋಗಿ, ಆ ಹಣವನ್ನು ಮತ್ತೆ ತನ್ನ ತಂದೆಗೆ ನೀಡಿದ. ತಂದೆ ಆ ಹಣವನ್ನು ಮಗನ ಕೈಗಿತ್ತು, ‘ಹೋಗಿ ಈ ಹಣವನ್ನು ಹೊರಗಿರುವ ಬಾವಿಗೆ ಎಸೆದು ಬಾ’ ಎಂದರು. ತಂದೆಯ ಈ ಮಾತನ್ನು ಕೇಳಿದ ಹುಡುಗನಿಗೆ ಕೋಪ ನೆತ್ತಿಗೇರಿತು. ‘ಅಲ್ಲಪ್ಪಾ, ಈ ಹಣ ಸಂಪಾದನೆ ಮಾಡಬೇಕಾದರೆ ನಾನು ಎಷ್ಟು ಕಷ್ಟಪಟ್ಟಿದ್ದೇನೆ ಗೊತ್ತಾ, ಎಷ್ಟೇ ಹುಡುಕಿದರೂ ಕೆಲಸ ಸಿಗದಿದ್ದಾಗ, ಕೊನೆಗೆ ಯಾವುದೋ ಒಂದು ಅಂಗಡಿಯ ಸಾಮಾನನ್ನು ಟ್ರಕ್‌ಗೆ ಸಾಗಿಸುವ ಕೆಲಸ ಸಿಕ್ಕಿತು. ಅದನ್ನು ಮಾಡುವಾಗ ಬಹಳ ಶ್ರಮಪಟ್ಟಿದ್ದೇನೆ. ಈ ರೀತಿ ಬೆವರು ಸುರಿಸಿ ದುಡಿದಿರುವ ಹಣವನ್ನು ಬಾವಿಗೆ ಹಾಕು ಎನ್ನುತ್ತೀರಲ್ಲಾ! ನಿಮಗೆ ಏನು ಹೇಳಬೇಕು?’ ಎಂದು ದುರುಗುಟ್ಟಿದ.

ಆಗ ತಂದೆ ಮುಗುಳ್ನಗುತ್ತಾ, ‘ಯಾರಾದರೂ ನಿನ್ನ ಬೆವರಿನ ದುಡಿಮೆಯನ್ನು ಹಾಳುಮಾಡಿದಾಗ ನಿನಗೆ ಬಹಳ ನೋವಾಗುತ್ತದಲ್ವಾ? ಹಾಗೆಯೇ ನೀನು ಬೇರೆಯವರ ಸಂಪಾದನೆಯನ್ನು ನೀರಿನಂತೆ ಪೋಲು ಮಾಡುವಾಗ ಅದೇ ರೀತಿ ದುಃಖವಾಗುತ್ತದೆ. ಇನ್ನಾದರೂ ನಿನ್ನನ್ನು ನೀನು ತಿದ್ದಿಕೋ’ ಎನ್ನುತ್ತಾನೆ. ಆಗ ಮಗನಿಗೆ ತಾನು ಮಾಡುತ್ತಿದ್ದ ತಪ್ಪೇನು ಎಂದು ತಿಳಿಯುತ್ತದೆ. ಅವನು ತನ್ನ ದುಡಿಮೆಯನ್ನು ತಾನೇ ಮಾಡಿಕೊಂಡು, ಮನೆ ನಡೆಸುವಲ್ಲಿ ತನ್ನ ತಂದೆಗೆ ಜತೆಯಾಗುತ್ತಾನೆ.

ಹೀಗೆ ಇನ್ನೊಬ್ಬರು ಅನುಭವಿಸುವ ಕಷ್ಟ ಏನೆಂದೇ ತಿಳಿಯದೇ ನಾವು ಅವರನ್ನು ಹೀಯಾಳಿಸುತ್ತಿರುತ್ತೇವೆ. ಆದರೆ ಅವರ ಸ್ಥಳದಲ್ಲಿ ನಮ್ಮನ್ನೇ ನಾವು ಹಾಕಿಕೊಂಡಾಗ ಅವರು ಅನುಭವಿಸಿದ್ದು ಏನೆಂದು ಗೊತ್ತಾಗುತ್ತದೆ. ಆಗ ಇನ್ನೊಬ್ಬರನ್ನು ಅವಮಾನಿಸುವ, ಅವರನ್ನು ಕೀಳಾಗಿ ಕಾಣುವ ಕುರಿತು ನಾವು ಯೋಚನೆ ಕೂಡಾ ಮಾಡುವುದಿಲ್ಲ.

ರವಿ ಜಾನೇಕಲ್
ಮೊ:8310271403