‘ಎಲ್ಲಾ ಮುಗಿಯಿತು ಅನ್ನುವ ಮೊದಲು – ಜಸ್ಟ್ ಟೇಕ್ ಕೇರ್…..’

‘ಎಲ್ಲಾ ಮುಗಿಯಿತು ಅನ್ನುವ ಮೊದಲು – ಜಸ್ಟ್ ಟೇಕ್ ಕೇರ್…..’

ಲೇಖಕ: ದೀಪಕ್ ಶಿಂಧೆ

ಅವರು ನಿನ್ನೆ ಇದ್ರು ಇವತ್ತು ಇಲ್ಲ, ಅವರ ಮನೇಲಿ ರಾತ್ರಿ ಏನಾಯ್ತೊ ಗೊತ್ತಿಲ್ಲ,ಆಸಾಮಿ ಯಾರ ಜೊತೆನೂ ಮಾತಾಡ್ತಾನೆ ಇರಲಿಲ್ಲ ಸಾರ್…ಅಯ್ಯೋ ಪಾಪ ಕಣ್ರಿ, ಒಂದೇ ಮನೇಲಿ ಐದು ಜನ ಒಂದೇ ದಿನ ಸೂಸೈಡು….!!! ಮಗಳ ಮೇಲಿನ ಮಮಕಾರ ಓಡಿಹೋದಳು ಅನ್ನುವ ಚಿಂತೆಯಲ್ಲಿ ಚಿತೆ ಏರಿದ ಅಪ್ಪ,ಪತ್ನಿಯ ಶೀಲ ಶಂಕಿಸಿ ಅವಳನ್ನ ಕೊಂದು ಗಂಡನೂ ಸತ್ತ,ಪ್ರೀತಿಯಲ್ಲಿ ಆದ ಮೋಸಕ್ಕೆ ಟಿಪ್ಪು ಡ್ರಾಪ್ ಇಂದ ಜಿಗಿದು ಈ ಜಗತ್ತಿನಿಂದಲೇ ಡ್ರಾಪ್ ಔಟ್! ಹೀಗೆ ದಿನ ಬೆಳಗಾದರೆ ಪತ್ರಿಕೆಗಳಲ್ಲಿ, ಟೀವಿಗಳಲ್ಲಿ ನೂರಾರು ವರದಿಗಳು.ಸತ್ತವರಲ್ಲಿ ಹದಿಹರೆಯದವರು,ಯುವಕರು,ನವ-ವಿವಾಹಿತರು, ನಿರುದ್ಯೋಗಿಗಳು,ಮಧ್ಯವಯಸ್ಕರು,
ಆದರೆ ಇವರೆಲ್ಲ ಯಾರದೋ ಹತ್ತಿರದ ಬಂಧುಗಳು,ಮತ್ಯಾರದೋ ಮನೆಯ ನಂದಾದೀಪಗಳು,
ಇನ್ಯಾರದೋ ಮನೆಯ ಮಕ್ಕಳು….. ಏನಾಗಿದೆ ಇವರಿಗೆಲ್ಲ?? ಜಗತ್ತಿನಲ್ಲಿ ಪ್ರತಿ ನಲವತ್ತು ಸೆಕೆಂಡಿಗೆ ಒಂದರಂತೆ ಆತ್ಮಹತ್ಯೆಗಳು ಆಗುತ್ತಿವೆ.ಐದು ವರ್ಷದ ಹುಡುಗನೊಬ್ಬ ಟೀಚರ್ ಹೆಂಗ್ ಸತ್ರು ಗೊತ್ತಾ?? ಅನ್ನುತ್ತ ಶಾಲೆಯ ಕಿಟಕಿಗೆ ತನ್ನ ಪುಟ್ಟ ಸೊಂಟದ ಬೆಲ್ಟು ಹಾಕಿ ನೇತು ಬಿದ್ದರೆ ಫಿನಿಷ್…! “ಆಡಿಸಿದಾತ ಬೇಸರ ಮೂಡಿ ಆಟ ಮುಗಿಸಿದಾ…..ಸೂತ್ರವ ಹರಿದ ಗೊಂಬೆಯ ಮುರಿದ ಮಣ್ಣಾಗಿಸಿದಾ” ಎಸ್ ಎಸ್ ಎಲ್ ಸಿ ಪರೀಕ್ಷೆಲಿ ಮಾರ್ಕ್ಸ ಕಡಿಮೆ ಬಂತು ನಾನ್ ಫೇಲಾದೆ, ಆರನೆ ಕ್ಲಾಸಿನ ಹುಡುಗ ಅಮ್ಮ ಬೈದಳು ಅಂತ ಪಾಲಿಡಾಲ್ ಕುಡಿದ,ಎಂಟನೆ ಕ್ಲಾಸಿನ ಹುಡುಗಿ ಪ್ರೀತಿಗಾಗಿ ಪ್ರಾಣ ಬಿಟ್ಟಳು,ಗಣೀತದ ಮೇಷ್ಟ್ರು ಹೊಡೀತಾರೆ ಅಂತ ಏಳನೆ ಕ್ಲಾಸಿನ ಹುಡುಗ ಸ್ಕೂಲಿನ ಮೂರನೆ ಮಹಡಿಯಿಂದ ಜಿಗಿದುಬಿಟ್ಟ.ವಿಧಿ ಅವನನ್ನ ವಂಚಿಸಿ ಬಿಟ್ಟಿತು,ಮೇಲಾಧಿಕಾರಿಯ ಲೈಂಗಿಕ ಕಿರುಕುಳ ಇತ್ತಂತೆ,ನಮ್ದು ಇಂಟರ್ ಕ್ಯಾಸ್ಟ್ ಮ್ಯಾರೇಜು ಅಂತ ಪ್ರೇಮಿಗಳಿಬ್ಬರು ಚಲಿಸುವ ರೈಲಿಗೆ ತಲೆ ಕೊಟ್ರು,ಅವನಿಗೆ ಕುಡಿಬೇಡ ಅಂತ ಬುದ್ದಿ ಹೇಳಿದ್ವಿ ಅಷ್ಟೇ,ಎನ್ ಮಾಡೋದು ಸ್ವಾಮಿ?? ಪಾಪ ಹೊಟ್ಟೆ ನೋವಂತೆ,ಮೈ ತುಂಬಾ ಸಾಲ…
ಅಮ್ಮಾ ನನ್ನ ಗಂಡಾ ಕುಡೀತಾನೆ,ಸಾಲದ್ದಕ್ಕೆ ಅತ್ತೆ ಕಾಟ ಅಂತ ತವರಿಗೆ ಬಂದ ಮಗಳು ರಾಜಿ ಪಂಚಾಯತಿ ಆದ ಮರುದಿನವೇ ಬಾವಿಗೆ ಬಿದ್ದಳು….ಜೊತೆಗೆ ಮೂರು ತಿಂಗಳ ಪುಟ್ಟಮಗು…ಅರೇ ಏನಾಗಿದೆ ಇವರಿಗೆಲ್ಲ?? ಇವೆಲ್ಲ ಸಾಯುವದಕ್ಕೆ ಕಾರಣಗಳಾ??ಸುಮ್ಮನೆ ಒಮ್ಮೆ ಯೋಚಿಸಿ ನೋಡಿ.ಇಲ್ಲಿರುವ ಒಂದೊಂದು ಕಾರಣಗಳೂ ಸಾವಿರಾರು ಜೀವಗಳನ್ನ ಬಲಿ ತೆಗೆದುಕೊಂಡವುಗಳು,ಆದರೆ ಹಾಗೆ ಮುಗಿದು ಹೋದ ಜೀವಗಳಿಗೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ.ಸಾವು ಅಂದರೆ ಈ ಭೂಮಿಯ ಮೇಲಿನ ನಮ್ಮ ಬದುಕನ್ನ ಅಂತ್ಯಗೊಳಿಸುವ ಒಂದು ಪುಲ್ ಸ್ಟಾಫ್ ಅಷ್ಟೇ… ಆದರೆ ಆತ್ಮಹತ್ಯೆ ಎನ್ನುವದು ನಮ್ಮ ಪ್ರೀತಿ ಪಾತ್ರರಿಂದ, ನಮಗೆ ಬೇಕಾದವರಿಂದ,ನಮ್ಮದೇ ಆದ ಪುಟ್ಟ ಪ್ರಪಂಚದಿಂದ ಯಾರಿಗೂ ಹೇಳದೆ ನಾವೇ ಹೊರಟು ಬಿಡೋದು.ಇಟ್ಸ ನಾಥಿಂಗ್ ಅದು ನಮಗೆ ನಾವೇ ಮಾಡಿಕೊಳ್ಳುವ ವಂಚನೆ ಮತ್ತು ಮೋಸ.
ನನಗೆ ಎಲ್ಲರೂ ಮೋಸಾ ಮಾಡಿದ್ರು,ಹೀಗೆ ಆಗುತ್ತೆ ಅಂತ ಅಂದುಕೊಂಡಿರಲಿಲ್ಲ, ಯಾಕೋ ನನಗೆ ಈ ಜೀವನಾನೇ ಬೇಜಾರು,ನನ್ನನ್ನ ಒಬ್ಬಂಟಿಯಾಗಿ ಬಿಡ್ತೀರಾ?? ಪ್ಲೀಜ್ ಲೀವ್ ಮಿ ಅಲೋನ್,ನಾನು ಬದುಕಲ್ಲಿ ಸೋತಿದಿನಿ ನಾನೊಬ್ಬ ಪೂವರ್ ಪೆಲೋ,ಐ ಕಾಂಟ್ ವಿನ್ ಎನಿ ಮೋರ್,ಅಬ್ಬಾ ನಾನು ತುಂಬಾ ಲಕ್ಕಿ ಈ ಬದುಕಲ್ಲಿ ಇನ್ನು ಮಾಡಬೇಕಾದ್ದು ಏನೂ ಇಲ್ಲ ಈ ಮೇಲಿನ ಎಲ್ಲಾ ಹೇಳಿಕೆಗಳು ಆತ್ಮಹತ್ಯೆಯ ಮುನ್ಸೂಚನೆ ಗಳು ಅನ್ನೋದು ನಿಮಗೆ ನೆನಪಿರಲಿ.ಆದರೆ ಇಂತಹ ಆತ್ಮಹತ್ಯೆಗಳನ್ನ ನಾವು ನೀವೆಲ್ಲ ಹಂಡ್ರೆಡ್ ಯಾಂಡ್ ಒನ್ ಪರ್ಸೆಂಟ್ ತಡೆಯೋಕೆ ಖಂಡಿತ ಸಾಧ್ಯ.ನೀವು ಸ್ವಲ್ಪ ಕಾಳಜಿ ವಹಿಸಿದರೂ ಸಾಕು ನಿಮ್ಮ ಪ್ರೀತಪಾತ್ರರನ್ನ ಅವರ ಅಮೂಲ್ಯ ಜೀವಗಳನ್ನು ಉಳಿಸಿಕೊಳ್ಳಬಹುದು.ಮೇಲಿನ ಮುನ್ಸೂಚನೆಗಳು ಕಂಡ ತಕ್ಷಣವೇ ಸಾಯುವ ವ್ಯಕ್ತಿಯನ್ನ ನೀವು ಈಜಿಯಾಗಿ ಗುರುತಿಸಿಬಿಡಬಹುದು.ಅಂತಹವರೊಂದಿಗೆ ಆದಷ್ಟೂ ಬೆರೆಯುವ ಪ್ರಯತ್ನ ಮಾಡಿ,ಒಂದು ಪುಟ್ಟ ಕೌನ್ಸೆಲಿಂಗ್ ಮಾಡಿಸಿ,ಅವರ ಆಪ್ತರಿಗೆ ಹೇಳಿ ಮಾತನಾಡಿಸಿ,ಅವರ ಸಮಸ್ಯೆ ಬಗೆಹರಿಸೋದಕ್ಕೆ ಸಾಧ್ಯವಾ ಒಮ್ಮೆ ಪ್ರಯತ್ನಿಸಿ ನೋಡಿ.ಒಂದಲ್ಲ ಒಂದು ದಿನ ನೀನು ಗೆದ್ದೇ ಗೆಲ್ತಿಯಾ ಅನ್ನುವ ಭರವಸೆ ತುಂಬಿ.ಇಷ್ಟಾದರೂ ಅವರ ಕಣ್ಣಾಲಿಗಳಲ್ಲಿ ನೀರಿದೆಯಾ?? ಒಂದು ಪುಟ್ಟ ಪ್ರವಾಸ ತೆಗೀರಿ,ಅವರು ಮರೆತು ಹೋದ ಬರ್ತಡೆ ಅಥವಾ ಅನಿವರ್ಸರಿಗೊಂದು ಸರ್ಪ್ರೈಜ್ ವಿಷ್ ಮಾಡಿ.ನೀನಿಲ್ದೆ ನಾವಿಲ್ಲ ಅಂತ ಅವರಿಗೆ ಮನವರಿಕೆ ಮಾಡಿ.ಇಷ್ಟೆಲ್ಲ ಆದ ಬಳಿಕವೂ ಅವರ ಖಿನ್ನತೆ ದೂರವಾಗಲಿಲ್ಲವಾ??ಜಗತ್ತಿನಲ್ಲಿ ಪರಿಹಾರ ಇಲ್ಲದ ಯಾವ ಸಮಸ್ಯೆಯೂ ಇಲ್ಲ ಎಲ್ಲ ಸಮಸ್ಯೆಗೂ ಒಂದು ಪರಿಹಾರ ಖಂಡಿತ ಇರುತ್ತೆ ಅನ್ನುವ ಕೊನೆಯ ಮಂತ್ರಪಠಿಸಿ.ಇವೆಲ್ಲದರ ನಡುವೆ ಮಾರಣಾಂತಿಕ ಗಾಯ ಮಾಡುವ ವಸ್ತುಗಳಾದ ಹಗ್ಗ,ಬ್ಲೇಡು,ಸೀಮೆ ಎಣ್ಣೆ,ಸ್ಲೀಪಿಂಗ್ ಟ್ಯಾಬ್ಲೆಟ್,ಪಾಲಿಡಾಲ್ ಮತ್ತು ಇತರೆ ಕೀಟ ನಾಶಕಗಳು ಸುಲಭವಾಗಿ ಅವರ ಕೈಗೆ ಸಿಗದಂತೆ ದೂರವಿಡಿ.ಈ ಜಗತ್ತಿನಲ್ಲಿ ಯಾರ ಜೀವವೂ ತುಚ್ಛವಲ್ಲ,ಯಾರ ಬದುಕೂ ವೇಸ್ಟ ಅಲ್ಲ.ಒಂಟಿತನ ನಿಮ್ಮನ್ನ ಕಾಡುತ್ತಿದೆಯಾ?? ಪುಟ್ಟದೊಂದು ಪಾರ್ಟಿ ಅರೇಂಜ್ ಮಾಡಿ,ಗೆಳೆಯರನ್ನ ಕರೀರಿ,ಸಂತಸದ ಕ್ಷಣಗಳನ್ನ ಮೆಲುಕು ಹಾಕಿ.ಪ್ರೀತಿ ಪಾತ್ರರಿಗೊಂದು ಪೋನ್ ಮಾಡಿ,ಯಾರನ್ನಾದರೂ ನೋಡಬೇಕು ಅನ್ನಿಸಿತಾ?? ಡೋಂಟ್ ವೇಯ್ಟ….ಹೊರಟುಬಿಡಿ.ಈ ಜಗತ್ತಿನಲ್ಲಿ ಯಾವಾಗ ಬೇಕಾದರೂ ಯಾವುದಕ್ಕೆ ಬೇಕಾದರೂ ರಾಜಿಯಾಗಿ ಆದರೆ ಒಂಟಿತನಕ್ಕೆ ಮಾತ್ರ ಗೋಲಿ ಹೊಡೀರಿ.ಮಾತಾಡೋಕೆ ಯಾರೂ ಸಿಗಲಿಲ್ಲವಾ?? ಒಂದು ಒಳ್ಳೆಯ ಸಿನೆಮಾ ನೋಡಿ,ಬದುಕು ಗೆದ್ದವರ ಆತ್ಮಚರಿತ್ರೆ ಓದೋಕೆ ಶುರುಮಾಡಿ,ಭಜನೆ,ಕೀರ್ತನೆ,ಸುಗಮ ಸಂಗೀತ,ನಿಮಗೆ ಯಾವುದು ಇಷ್ಟವೋ ಅದನ್ನ ಅಪ್ಪಿಕೊಳ್ಳಿ.ನಿಮ್ಮಿಂದ ಬರೆಯೋಕೆ ಸಾಧ್ಯಾನಾ?? ಆತ್ಮಹತ್ಯೆ ಪತ್ರ ಒಂದನ್ನ ಹೊರತುಪಡಿಸಿ ಕಥೆ,ಕಾದಂಬರಿ,ಕವಿತೆ,ಪ್ರಭಂಧ,ಏನಾದರೂ ಸರಿ ಟ್ರೈ ಮಾಡಿ.ಕಾರು ಇದ್ರೆ ಒಂದು ಲಾಂಗ್ ಡ್ರೈವ್,ಇಲ್ಲವಾ ಹತ್ತಿರದ ದೇವಸ್ಥಾನ, ಪಾರ್ಕು,ಮಾರ್ಕೆಟ್ಟು,ಸುಮ್ಮನೆ ಒಂದು ಪುಟ್ಟ ವಾಕ್ ಮಾಡಿ.ವಾಕಿಂಗ್ ಅಂತ ಸುಮ್ಮನೆ ತಲೆ ತಗ್ಗಿಸಿ,ಹೊರಟು ಬಿಡಬೇಡಿ.ಅತ್ತಿತ್ತ ಸ್ವಲ್ಪ ಕಣ್ಣು ಹಾಯಿಸಿ ಈ ಜಗತ್ತಿನಲ್ಲಿ ಎಂಥೆಂಥ ಜನಾ ಬದುಕಿದಾರೆ ನನಗೇನಾಗಿದೆ ಅನ್ನಿಸಿತಾ ಎಂಜಾಯ್…..
ಅದು ಯಾರೋ ಕೈ ಕೊಟ್ರು,ಒಂದಷ್ಟು ದುಡ್ಡು ಕಳಕೊಂಡ್ ಬಿಟ್ಟೆ,ಮಾರ್ಕ್ಸು ಕಡಿಮೆ ಬಂತು,ನಾಡಿದ್ದು ನನ್ನ ಹುಡುಗಿ ಮದುವೆ,ನನ್ ಹತ್ರ ಕಾರಿಲ್ಲ,ನನ್ನಿಂದ ಎಲ್ರಿಗೂ ತೊಂದರೆ,ನಾನೆನ್ ಕರ್ಮ ಮಾಡಿದೀನಿ?? ಇದೆಲ್ಲ ಬಿಟ್ಹಾಕಿ.ರಾತ್ರಿ ಒಬ್ಬರೆ ಇದ್ದಾಗ ಟೆರೆಸ್ ಮೇಲೆ ಹೊಗಿ ನಿಮಗಿಷ್ಟವಾದ ಹಾಡು ಹಾಕಿ ಮನಸಿಗೆ ಬಂದ ಸ್ಟೆಪ್ ಹಾಕಿ.ಇವನಯ್ಯನ್ ಇವತ್ತಿಂದ ಹೆಂಗ್ ಬದುಕ್ತೀನಿ ನೋಡು ಅಂತಾ ಕನ್ನಡಿ ಮುಂದೆ ನಿಂತು ನಿಮಗೆ ನೀವೆ ಚಾಲೆಂಜ್ ಹಾಕಿಕೊಳ್ಳಿ.ಅವತ್ತಿನಿಂದಲೇ ನಿಮ್ಮ ದಿನಚರಿಯಲ್ಲಿ ಪುಟ್ಟ ಬದಲಾವಣೆ-ದಿಟ್ಟ ಹೆಜ್ಜೆ ಇಟ್ಟುಕೊಂಡು ಸಾಧ್ಯವಾದರೆ ಬದುಕುವ ಶೈಲಿಯನ್ನೇ ಬದಲಿಸಿಕೊಂಡು ನೂರು ವರ್ಷ ಚೆನ್ನಾಗಿ ಬದುಕಿ.ಈ ಬದುಕಲ್ಲಿ ಬಂದದ್ದು ಬರಲಿ ದೇವರ ದಯೆಯೊಂದು ಇರಲಿ ಅಂತ ಮುನ್ನುಗ್ಗಿ.ಅರ್ಧ ದಾರಿಯಲ್ಲಿ ಸೋತೆ ಅಂತ ನಿಂತು ಬದುಕನ್ನ ಮುಗಿಸಿಕೊಳ್ಳುವ ಮುನ್ನ ನಿಮ್ಮ ಸಾವಿನಿಂದ ನಿಮ್ಮ ಸಮಸ್ಯೆ ಮುಗಿದುಹೋಗುತ್ತಾ?? ನಿಮ್ಮನ್ನು ನಂಬಿದವರಿಗೆ ನಾವು ಕೊಡುವ ಕೊನೆಯ ಗಿಪ್ಟು ಸಂತಸ ಕೊಡುತ್ತಾ?? ನಿಮಗಾದ ನೋವು,ಹತಾಶೆ,ಮೋಸಗಳಿಗೆ ನೀವು ನೊಂದಿದ್ದೀರಿ ಅನ್ನುವದೆ ನಿಜವಾಗಿದ್ದರೆ?? ಉಳಿದವರಿಗೂ ನೋವು ಕೊಡೋದು ಸರಿಯಾ??ಒಂದು ಸಲ ಯೋಚಿಸಿ ನೋಡಿ.ಕೈ ಕೊಟ್ಟ ಹುಡುಗಿಯ ಮುಂದೆ,ಮೋಸ ಮಾಡಿದ ಗೆಳೆಯನ ಮುಂದೆ,ಆಡಿಕೊಂಡ ಬಂಧುವಿನ ಮುಂದೆ,ಕಳೆದುಹೋದ ಸಂಭಂಧದ ಮುಂದೆ,ಛಲದಿಂದ ಬದುಕಿ ತೋರಿಸಿ.ಇಂದು ನಮ್ಮ ಪಾಲಿಗೆ ಸೂರ್ಯ ಮುಳುಗುತ್ತಿರಬಹುದು ಆದರೆ ಬರುವ ನಾಳೆ ನಮ್ಮದು ಅನ್ನುವ ನಂಬಿಕೆ ಇರಲಿ.ಟೇಕ್ ಕೇರ್….

ದೀಪಕ್ ಶಿಂಧೆ, ಪತ್ರಕರ್ತ
ನಿಂಬಾಳಕರ ಪ್ಲಾಟ್,
ಶಾಂತಿ ನಗರ, ಅಥಣಿ-591304
ಜಿಲ್ಲಾ: ಬೆಳಗಾವಿ
ಮೊಬೈಲ್: 9482766018