ಕೃತಿ ಅವಲೋಕನ- ಬಿಸಿಲು ಬಿದ್ದ ರಾತ್ರಿ: ಬಿಸಿಲು ಬಿದ್ದ ರಾತ್ರಿಯಲ್ಲರಳಿದ ಗುಲ್ ಮೊಹರ್

ಬಿಸಿಲು ಬಿದ್ದ ರಾತ್ರಿ : ಬಿಸಿಲು ಬಿದ್ದ ರಾತ್ರಿಯಲ್ಲರಳಿದ ಗುಲ್ ಮೊಹರ್

ಲೇಖಕ: ಮಂಡಲಗಿರಿ ಪ್ರಸನ್ನ, ರಾಯಚೂರು
.
ಕವಿಮಿತ್ರ ಮಹಾದೇವ ಪಾಟೀಲ ವೃತ್ತಿಯಿಂದ ಪೊಲೀಸ್‌ ಪೇದೆ, ಪ್ರವೃತ್ತಿಯಿಂದ ಸೂಕ್ಷ್ಮ ಸಂವೇದನೆಯ ಕವಿ, ಅದಕೆಂದೆ ಅವರಿಗೆ ಕಾವ್ಯಕನ್ನಿಕೆ ಒಲಿದಿರಬಹುದು. ಪೊಲೀಸರನ್ನು ʻಒರಟು ಹೃದಯಿಗಳುʼ ಎನ್ನುತ್ತವೆ ಅರ್ಥಮಾಡಿಕೊಳ್ಳದ ಕೆಲ ಮನಸುಗಳು! ಒರಟು ಹೃದಯಗಳಲ್ಲೂ ಹೂವಿನ ಕೋಮಲತೆ, ಸುಗಂಧ ಇರುವುದಾದರೆ ಅಂತಹವರ ಸಾಲಿಗೆ ಸೇರುವ ಸಹೃದಯಿ ಕವಿ ಮಹಾದೇವ ಪಾಟೀಲರು. ಇಂಥಹ ಕಾರಣಕ್ಕಾಗಿಯೆ ಕಾವ್ಯಮೋಹಕ್ಕೆ ಒಳಗಾಗಿ ಗಜಲ್ ರಾಣಿಯ ಬಿಗಿ ಪಾಶದಲ್ಲಿ ಸಿಕ್ಕಿಹಾಕಿಕೊಂಡ ಪಾಟೀಲರಿಂದ ʻಬಿಸಿಲು ಬಿದ್ದ ರಾತ್ರಿʼ ಯ ೫೦ ಗಜಲ್‌ಗಳು ರಚನೆಗೊಳ್ಳಲು ಸಾಧ್ಯವಾಗಿರಬೇಕು. ಬಿಸಿಲು ನಾಡಿನ ಈ ಕವಿಯ ವೃತ್ತಿ ಮತ್ತು ಪ್ರವೃತ್ತಿ ಕುರಿತು ಮಾತನಾಡುತ್ತಿರುವ ಈ ಸಂದರ್ಭದಲ್ಲಿ ನನ್ನ ನೆಚ್ಚಿನ ಕಥನ ಕವಿ ಸು.ರಂ.ಎಕ್ಕುಂಡಿ ಅವರ ಕವಿತೆಯೊಂದರ ಸಾಲು ನೆನಪಾದವು.
ʻಹಸಿದವರು ಕೂಡ ಬದುಕ ಬೇಕಲ್ಲವೆ
ಮತ್ತೆ, ಪ್ರೀತಿಯೂ ಬೇಕಲ್ಲ ದುಡಿವ ಜನಕೆ?ʼ  (ರೊಟ್ಟಿ ಮತ್ತು ಕೋವಿ)
ಹಸಿವು ಮತ್ತು ಪ್ರೀತಿ ಮನುಷ್ಯ ಸಹಜ ಅವಿರ್ಭವಿತ ಕ್ರೀಯೆ. ಮಹಾದೇವ ಪಾಟೀಲರು ಎಲ್ಲರಂತೆ ಹಸಿವಿವಾಗಿ ರೊಟ್ಟಿಯನ್ನು ನಂಬಿದ್ದರೂ ಪ್ರೀತಿಗಾಗಿ ಕಾವ್ಯವನ್ನು ನೆಚ್ಚಿಕೊಂಡಂತಿದೆ. ಹಾಗಾಗಿ ಹಸಿವು ಮತ್ತು ಪ್ರೀತಿಗಳೆರಡೂ ಮಹಾದೇವ ಪಾಟೀಲರ ಗಜಲ್‌ಗಳಲ್ಲಿ ವಿವಿಧ ಮುಖಗಳಲ್ಲಿ ಸಮ್ಮಿಳಿತಗೊಂಡು ಒಡಮೂಡಿವೆ. ಪ್ರೀತಿ, ವಿರಹ, ತಾಯ ಮಮತೆ, ಸಮಾಜ ಕಾಳಜಿ, ಹಂಬಲ, ಜಾತಿ-ಧರ್ಮಗಳ ಸೂಕ್ಷ್ಮ ಚಿಂತನೆ, ಬದುಕಿನ ಒಳನೋಟಗಳಂತಹ ವಿಷಯ, ವೈವಿಧ್ಯಗಳು ಪಾಟೀಲರ ವೃತ್ತಿಜೀವನದಲ್ಲಿ ಎದುರಾಗುವ ಕೋವಿ, ಬೆತ್ತ ಮತ್ತು ಗಡುಸಾದ ಮಾತುಗಳಿಂದ ಕೆಲಕ್ಷಣಗಳಾದರೂ ಸಹ್ಯವಾಗಿರುವಂತೆ ಮಾಡಿ, ಸುಕೋಮಲ ಮನಸಿನ ಕವಿ ಹುಟ್ಟಿಗೆ ಸಾಕ್ಷಿಯಾಗಿವೆ ಎಂಬುದೇ ಅಚ್ಚರಿಯ ಸಂಗತಿ! ಈ ಕವಿಯ ಕೈಯಲ್ಲಿ ಲೇಖನಿ ಬಂದು, ಪ್ರೇಮ, ಶೃಂಗಾರ, ಸಾಮಾಜಿಕ ಕಳಕಳಿ ಕುರಿತ ಕಾವ್ಯ, ಅದೂ ಗಜಲ್‌ ಮೂಲಕ ಹರಿದು ಬರುತ್ತದೆಂದರೆ ಅದು ಅಚ್ಚರಿ ಮತ್ತು ವಾಸ್ತವಗಳೆರಡೂ ಏಕಕಾಲಕ್ಕೆ ಕಾಣುವ ವಿಸ್ಮಯ. ಸಾತ್ವಿಕ ಬದುಕನ್ನು ಕಾವ್ಯದ ಮೂಲಕ ಪ್ರಚುರ ಪಡಿಸಲು ಹಾತೊರೆವ ಮಹಾದೇವ ಪಾಟೀಲ ಅದನ್ನು ಗಜಲ್‌ ಮೂಲಕ ತಣಿಸಿಕೊಂಡಿದ್ದಾರೆ.
ʻನಿನ್ನ ಪ್ರೀತಿಗಾಗಿ ಕೋಟೆ ಕೊತ್ತಲ ಸುತ್ತಿ ಬಂದವನು ನಾನು
ಹಜಾರದ ಬಾಗಿಲು ಕಾಣದೆ ಬೀದಿಯಲಿ ನಿಂತವನು ನಾನುʼ (ಗಜಲ್‌-2)
ಇಂತಹ ಸಾಲುಗಳನ್ನು ನೀಡುವ ಮಹಾದೇವ ಪಾಟೀಲ ಖಾಕಿಯೊಳಗಿನ ಸಾವಿರಾರು ಕನಸುಗಳನ್ನು ತುಂಬಿಕೊಂಡು ಅವನ್ನು ವರ್ತಮಾನದ ಜಗತ್ತಿಗೆ ಬೆಳಕಾಗಿಸುವ ಹಂಬಲದ ಕನಸುಗಾರ ಎಂದೆನಿಸುತ್ತದೆ.
ರಾತ್ರಿಯ ನೀರವತೆಗೂ ಎದೆಯ ಬಿಸುಪಿಗೂ ಅದೇನು ಅನ್ಯೂನ್ಯತೆಯೋ ತಿಳಿಯದು. ಬಿಸಿಲು ಇಳಿದು, ಸಂಜೆ ಸರಿದು, ನಿಶೆ ಆವರಿಸುತ್ತಲೆ ಹೃದಯಾಂತರಾಳ ಕುಲುಮೆಯಾಗುತ್ತದೆ, ಪ್ರೇಮಿಗಳ ಎದೆ. ಈ ಸಂದರ್ಭದಲ್ಲೆ ಮನಸು ತನ್ನೊಳಗೆ ತಾನು ಮೋಹಕತೆಯ ಕುರಿತು ಮಾತನಾಡಿಕೊಳ್ಳಲು ಶುರುವಿಟ್ಟುಕೊಳ್ಳುತ್ತದೆ. ರಾತ್ರಿ ಕತ್ತಲಾವರಿಸಿದರೂ ಹೃದಯ ಇನ್ನಷ್ಟು ಬಿಸಿಯಾಗಿ ಮಧ್ಯಾಹ್ನದ ಏರು ಬಿಸಿಲಾಗಿ ಕಾಡುತ್ತದೆ.
ʻನನ್ನ ಹೃದಯ ತಿಜೋರಿಯಲಿ ಜತನವಾಗಿವೆ ನಿನ್ನ ನೆನಪುಗಳು
ಪ್ರೇಮಾಂಕುರದಿ ಬರೆದ ಓಲೆಗಳಲಿ ಭದ್ರವಾಗಿವೆ ನಿನ್ನ ನೆನಪುಗಳು‌ʼ (ಗಜಲ್-27)
ಎನ್ನುವಲ್ಲಿ ಪ್ರೀತಿಯ ಉತ್ಕಟತೆ ತೊಟ್ಟಿಕ್ಕುತ್ತದೆ. ಪಾಟೀಲರ ಗಜಲ್‌ಗಳಲ್ಲೆ ಉತ್ಕೃಷ್ಟ ಕಾವ್ಯದ ಸಾಲುಗಳನ್ನು ಹೊಂದಿರುವ ಗಜಲ್-11 ವಿವಿಧ ಮಜಲುಗಳಲ್ಲಿ ಗುರುತಿಸಿಕೊಳ್ಳುವ ಗಜಲ್‌:
ʻಈ ದೇಶದ ಕೋಟೆ ಕೊತ್ತಲಗಳಲಿ ರಕ್ತದ ಕಲೆಯು ಇನ್ನೂ ಹಸಿಯಾಗಿದೆ
ಯುದ್ಧದಲಿ ಮಡಿದ ಸಿಪಾಯಿಗಳ ಮನಸ್ಸು ಇನ್ನೂ ಜೀವಂತವಾಗಿದೆʼ (ಗಜಲ್-11)
ಎಂದು ಆರಂಭವಾಗುವ ಒಂದು ಗಜಲ್‌ನ ಮತ್ಲ, ಮುಂದುವರೆದ ಅದೇ ಗಜಲ್ ನ ಶೇರ್‌ ಅಷ್ಟೇ ಉತ್ತಮ ಧ್ವನಿಪೂರ್ಣವಾಗಿದೆ:
ʻಕೈಕಾಲು ಕಳೆದುಕೊಂಡವರ ಬದುಕಲಿ ಶೌರ್ಯ ಇನ್ನೂ ಬಿಸಿಯಾಗಿದೆ
ರಣರಂಗದಲಿ ಉರುಳಿದ ರುಂಡ-ಮುಂಡ ಇನ್ನೂ ಉಸಿರಾಡುತ್ತಿದೆʼ
ಎನ್ನುವ ಭಾವತೀವ್ರತೆಯಲ್ಲಿ ಉಸಿರಾಡುವ ರುಂಡಮುಂಡಗಳ ರೂಪಕ, ಯುದ್ಧದ ಕ್ರೂರತೆಯನ್ನು, ಹಿಂಸೆಯನ್ನೂ ಮತ್ತೆ ಮತ್ತೆ ನೆನಪಿಸುವಂತಿವೆ.
ʻಗುಡಿಗೋಪುರಗಳಲಿ ಕೆತ್ತಿದ ಶಿಲಾಶಾಸನಗಳು ಇನ್ನೂ ಚರಿತ್ರೆಯಾಗಿದೆ
ವಿರೋಧಿಗಳ ಎದೆಗೆ ಬಿದ್ದ ಮದ್ದು-ಗುಂಡು ಇನ್ನೂ ಹೊಗೆಯಾಡುತ್ತಿದೆʼ
ಜಗತ್ತಿನ ಚರಿತ್ರೆ, ಇತಿಹಾಸದ ಅಟ್ಟಹಾಸಗಳು ಮತ್ತು ಶಿಲಾಶಾಸನಗಳಲ್ಲಿ ಜೀವಂತವಾಗಿರುವ ನೋವಿನ ಕಥೆಗಳಿಂದ ಜಗತ್ತು ಪಾಠ ಕಲಿತಿಲ್ಲ ಎನ್ನುವ ಭಾವುಕತೆ ಎದ್ದು ಕಾಣುತ್ತದೆ.
‘ನೂರಾರು ಗಾಯ’ ಎನ್ನುವ ರದೀಫ್‌ ಮೂಲಕ ರಚನೆಗೊಂಡ ಈ ಗಜಲ್‌ ಸಹ ತುಂಬಾ ಸೊಗಸಾದ ರಚನೆ. ಇಲ್ಲಿ ವ್ಯಕ್ತವಾಗುವ ಭಾವವೂ ಅಂತರಂಗದ ಗೊಂದಲಗಳ, ತಳಮಳಗಳ ಚಿತ್ರಣವನ್ನೆ ನೀಡುವಲ್ಲಿ ಸಾರ್ಥಕ್ಯ ಕಂಡಿದೆ.
ʻಪರಚಿದ ಮನದ ನಯನಗಳಿಗೆ ಈಗ ನೂರಾರು ಗಾಯ
ಮನದಿ ಮಿಡಿಯುವ ನನ್ನ ಎದೆಗೆ ಈಗ ನೂರಾರು ಗಾಯʼ
….
ʻಮನದ ಮಡಿಕೆಯಲಿ ಸದಾ ನೆನಪುಗಳ ಕನವರಿಕೆಯ ಕನಸು
ಮೌನದ ಎದುರಲಿ ನೊಂದ ಬಯಕೆಗಳಿಗೆ ಈಗ ನೂರಾರು ಗಾಯ’ (ಗಜಲ್‌-15)
ಮನಸೆಂಬುದು ಎಷ್ಟೊಂದು ಸೂಕ್ಷ್ಮವೆಂದರೆ, ಅದು ಹಲವು ಕಾರಣಗಳಿಗೆ ನೊಂದಾಗೊಮ್ಮೆ ಬಲೂನಿನಂತೆ ಚುಚ್ಚಿಸಿಕೊಂಡು ಒಡೆಯುತ್ತದೆ. ಉತ್ತಮ ಕಾಫಿಯಾಗಳನ್ನು ಸೊಗಸಾಗಿ ನೀಡಿರುವ ಪಾಟೀಲರು ಈ ಗಜಲ್‌ನ್ನು ಇನ್ನೂ ಉತ್ತಮ ಮಾಡುವತ್ತ ಪ್ರಯತ್ನಿಸಬಹುದಿತ್ತು. ಇದೆ ಮಾದರಿಯ ಇನ್ನೊಂದು ಗಜಲ್‌ ಸಹ ಉತ್ಕೃಷ್ಟವಾದುದು:
ʻಕಾಲಿಗೆ ಚುಚ್ಚಿದ ಮುಳ್ಳಿಗಿಂತ ಮನಕೆ ಚುಚ್ಚಿದ ಮಾತಿನ ಇರಿತವು ಬಲುಕೇಡು
ದೇಹಕ್ಕಾದ ಗಾಯಕ್ಕಿಂತ ಮನಸ್ಸಿಗಾದ ಮಾಯದ ಗಾಯವು ಬಲುಕೇಡುʼ (ಗಜಲ್-49)
….
ಮಹಾದೇವ ಪಾಟೀಲ ಗಜಲ್‌ಗೆ ಬೇಕಾದ ಎಲ್ಲ ಛಂದೋಲಕ್ಷಣಗಳನ್ನು ಅರಗಿಸಿಕೊಂಡು ಇಲ್ಲಿ ಬಹುತೇಕ ಗಜಲ್‌ ರಚಿಸಿದ್ದಾರೆ. ಆದರೆ, ಕಾವ್ಯದ ರೂಪಧಾರಣೆಯಿಲ್ಲದ ಗುಣದಿಂದಾಗಿ ಕೆಲ ಗಜಲ್‌ಗಳು ಸೋಲುತ್ತವೆ. ಪ್ರೇಮ, ವಿರಹದ ಸಂದರ್ಭಗಳನ್ನು, ಮನದ ವೇದನೆಯನ್ನು, ಸಾಮಾಜಿಕ ತುಡಿತವನ್ನು ಹೇಳುವ ದಾರಿಯನ್ನು ಕಂಡುಕೊಂಡಿರುವ ಪಾಟೀಲರ ಇಲ್ಲಿನ ಎಲ್ಲ ಗಜಲ್‌ಗಳು ಶ್ರೇಷ್ಠಮಟ್ಟದ ಗಜಲ್‌ ಆಗಿರದಿದ್ದರೂ ಪ್ರೀತಿಯ ತುಡಿತ, ಸಮಾಜಮುಖಿ ಚಿಂತನೆ ಅವರನ್ನು ಒಬ್ಬ ಉತ್ತಮ ಗಜಲ್ ಬರಹಗಾರನ ಸಾಲಿಗೆ ಸೇರಿಸುವ ಸಾಂಕೇತಿಕತೆಯನ್ನು ಹೊಂದಿವೆ. ಅಲ್ಲಲ್ಲಿ ವಾಚ್ಯತೆ, ನೇರವಾಗಿ ವಿಷಯ ಪ್ರಸ್ತುತ ಪಡಿಸುವಿಕೆಯನ್ನು ಬಿಟ್ಟು ವಿಶಿಷ್ಟ ರದೀಫ್‌ ಮತ್ತು ಕಾಫಿಯಾ ಮೂಲಕ ಪಾಟೀಲರು ಗಜಲ್ ರಚನೆ ಮಾಡಿದ್ದೆ ಆದಲ್ಲಿ ಅವರಿಂದ ಮತ್ತಷ್ಟು ಹೊಸತನವನ್ನು ನಿರೀಕ್ಷಿಸಬಹುದು. ಗಜಲ್‌ ಏಕಾಂತದಲ್ಲಿ ರಚಿತಗೊಳ್ಳುವ ಕಾವ್ಯವೇನೂ ನಿಜ, ಆದರೆ ಲೋಕಾಂತದ ಅನುಭವವಿಲ್ಲದೆ ಕಾವ್ಯ ಬರೆಯಿಸಿಕೊಳ್ಳದು. ಮಹಾದೇವ ಪಾಟೀಲರಿಗೆ ಏಕಾಂತದ ಅನುಭವ ಮತ್ತು ಲೋಕಾಂತದ ಅನುಭಾವ ಮೇಳೈಸಿದಲ್ಲಿ ಸಹಜ ಸ್ವರೂಪದ ಸಂಗತಿಗಳ ಜೊತೆಗೆ ಇಲ್ಲಿನ ಕೆಲ ಗಜಲ್ ನಲ್ಲಿ ಕಂಡಿರುವ ಆಧ್ಯಾತ್ಮ, ವೈಚಾರಿಕತೆ ಗುಣವೂ ಅವರ ಕಾವ್ಯ ಮನೋಭೂಮಿಕೆಯನ್ನು ಶ್ರೀಮಂತಗೊಳಿಸಬಹುದು. ತಮ್ಮ ಮೊದಲ ಗಜಲ್‌ ಸಂಕಲನ ʻಬಿಸಿಲು ಬಿದ್ದ ರಾತ್ರಿʼ ಯ ಮೂಲಕ ಉತ್ತಮ ಗಜಲ್‌ ಕವಿಯಾಗಿ ಹೊರಹೊಮ್ಮುವ ಹತ್ತಾರು ಅಂಶಗಳನ್ನ ಮಹಾದೇವ ಪಾಟೀಲರು ಸೂಚಿಸಿರುವುದರಿಂದ ಅವರು ಮುಂದಿನ ಗಜಲ್‌ ಸಂಕಲನದಲ್ಲಿ ಗಜಲ್‌ ಪ್ರೀಯರನ್ನು ನಿರಾಸೆಗೊಳಸಲಾರರು ಎಂಬ ಆಶಯ ನನ್ನದು.

*ಬಿಸಿಲು ಬಿದ್ದ ರಾತ್ರಿ*
ಗಜಲ್ ಗಳು
ಲೇಖಕ: ಮಹಾದೇವ ಎಸ್.ಪಾಟೀಲ
ಕಂಠಿ ಬಸವ ಪ್ರಕಾಶನ
ಭೂಪೂರ-584122
ತಾ.ಲಿಂಗಸೂಗೂರ
ಜಿ.ರಾಯಚೂರು

ಪುಸ್ತಕದ ಬೆಲೆ: 100/-

ಸಂಪರ್ಕ: ಮಹಾದೇವ ಪಾಟೀಲ್ ಸಂಪರ್ಕ:
ಮೊ:7411140065

ಮಂಡಲಗಿರಿ ಪ್ರಸನ್ನ, ರಾಯಚೂರು.(ಮೊ:9449140580)