ಪುರಾತನ ದೇಗುಲಗಳು : ಶೈವ ಸಂಸ್ಕೃತಿಯ ಶ್ರೀಮಂತ ಪರಂಪರೆಯ ಸಂಕೇತ ‘ ಕಡೆಚೂರು ಸೋಮೇಶ್ವರ’

ಪುರಾತನ ದೇಗುಲಗಳು

ಶೈವ ಸಂಸ್ಕೃತಿಯ ಶ್ರೀಮಂತ ಪರಂಪರೆಯ ಸಂಕೇತ ‘ ಕಡೆಚೂರು ಸೋಮೇಶ್ವರ’

ಲೇಖಕರು: ಮುಕ್ಕಣ್ಣ ಕರಿಗಾರ

ಇಂದು ಅಂದರೆ ದಿನಾಂಕ ೨೨.೦೯.೨೦೨೧ ರಂದು ಸರಕಾರಿ ಕಾರ್ಯನಿಮಿತ್ತವಾಗಿ ಗುರುಮಿಠಕಲ್ ತಾಲೂಕಾ ಪಂಚಾಯತಿಯ ಪ್ರವಾಸದಲ್ಲಿದ್ದಾಗ ಕಡೆಚೂರು ಗ್ರಾಮಕ್ಕೆ ತೆರಳಿದ್ದೆ– ಅಲ್ಲಿನ ಸೋಮೇಶ್ವರ ದೇವಸ್ಥಾನದ ಬಗ್ಗೆ ಅಧ್ಯಯನ ಮಾಡಲು.ಇತ್ತೀಚೆಗೆ ಜೈಗ್ರಾಮ ಪಂಚಾಯತಿಯ ಇಡ್ಲೂರು ಶಂಕರಲಿಂಗ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಕಡೆಚೂರಿನಲ್ಲಿ ಪುರಾತನ ಸೋಮೇಶ್ವರ ದೇವಸ್ಥಾನ ಇರುವ ಮಾಹಿತಿ ಸಿಕ್ಕಿತ್ತು.ಇಂದು ಗುರುಮಿಠಕಲ್ ತಾಲೂಕಿನ ವ್ಯಾಪ್ತಿಗೆ ಸೇರುವ ತೆಲಂಗಾಣರಾಜ್ಯದ ಗಡಿಗೆ ಹೊಂದಿಕೊಂಡಿರುವ ಹಲವಾರು ಗ್ರಾಮಗಳಲ್ಲಿ ಪುರಾತನ ಕಾಲದ ಶಿವಾಲಯಗಳು ಇರುವುದನ್ನು ಗಮನಿಸಿದರೆ ಈ ಪ್ರದೇಶವು ಹಿಂದೆ ಪ್ರಸಿದ್ಧ ಶೈವ ಸಂಸ್ಕೃತಿಯ‌ ಪ್ರದೇಶವಾಗಿತ್ತು ಎಂದು ಊಹಿಸಲವಕಾಶವಿದೆ.ಕಡೆಚೂರು ಗ್ರಾಮದಲ್ಲಿ ಸೋಮೇಶ್ವರ ಹೆಸರಿನ ಶಿವಾಲಯವಿರುವುದು ಈ ಹಿಂದೆ ಈ ಊರಿನ ಗ್ರಾಮಸ್ಥರು ಸೌರಾಷ್ಟ್ರ ಸೋಮನಾಥ ಜ್ಯೋತಿರ್ಲಿಂಗದ ಪ್ರಭಾವಕ್ಕೊಳಗಾಗಿದ್ದರ ಪ್ರಭಾವ.ದ್ವಾದಶ ಜ್ಯೋತಿರ್ಲಿಂಗಗಳ ಹೆಸರುಗಳಲ್ಲಿ ದೇಶದಲ್ಲಿ ಸಾವಿರಾರು ಲಿಂಗಗಳು ಸ್ಥಾಪಿಸಲ್ಪಟ್ಟಿವೆ.ಅವುಗಳ ಹಿನ್ನೆಲೆಯನ್ನು ಪರಿಶೀಲಿಸಿದಾಗ ಆ ಗ್ರಾಮಗಳ ಯಾರೋ ಹಿರಿಯರೋ ಅಥವಾ ಭಕ್ತರೋ ಮೂಲ ಜ್ಯೋತಿರ್ಲಿಂಗ ದರ್ಶನ ಪಡೆದು ಆ ಜ್ಯೋತಿರ್ಲಿಂಗದ ಪ್ರೇರಣೆ ಮತ್ತು ಪ್ರಭಾವದಂತೆ ತಮ್ಮ ಗ್ರಾಮಗಳಲ್ಲಿ ಆ ಜ್ಯೋತಿರ್ಲಿಂಗವೇ ಇದು ಎಂಬಂತೆ ಉಪಲಿಂಗವಾಗಿ ಮೂಲ ಜ್ಯೋತಿರ್ಲಿಂಗದ ಹೆಸರಿನಲ್ಲಿ ಶಿವಲಿಂಗ ಸ್ಥಾಪಿಸಿ,ಶಿವಾಲಯ ಕಟ್ಟಿಸಿರುತ್ತಾರೆ.ಕಡೆಚೂರು ಗ್ರಾಮದ ಸೋಮೇಶ್ವರ ಅಥವಾ ಸೋಮನಾಥನ ದೇವಸ್ಥಾನವು ಸಹ ಹಾಗೆ ಸೌರಾಷ್ಟ್ರ ಸೋಮನಾಥನ ದರ್ಶನ ಪಡೆದ ಶಿವಭಕ್ತರ ಇಚ್ಛೆ,ಭಕ್ತಿಯಂತೆ ನಿರ್ಮಾಣವಾಗಿರಬಹುದು.ಇನ್ನೊಂದು ಸೋಜಿಗದ ಸಂಗತಿ ಎಂದರೆ ಕಡೆಚೂರಿಗೆ ಉತ್ತರಕ್ಕೆ ಏಳು ಕಿಲೋಮೀಟರ್ ಗಳ ದೂರದಲ್ಲಿ ಸೌರಾಷ್ಟ್ರಹಳ್ಳಿ ಎನ್ನುವ ಗ್ರಾಮವಿದ್ದು ಅಲ್ಲಿಯೂ ಸೋಮನಾಥ ದೇವಸ್ಥಾನ ಮತ್ತು ಚೌಡೇಶ್ವರಿ ದೇವಸ್ಥಾನಗಳಿವೆ.ಸೌರಾಷ್ಟ್ರ ಹಳ್ಳಿಯಿಂದ ಬಂದ ವರ್ತಕರು ಕಡೆಚೂರಿನಲ್ಲಿ ಸೋಮೇಶ್ವರ ದೇವಸ್ಥಾನ ನಿರ್ಮಿಸಿ,ಚೌಡೇಶ್ವರಿ ಮೂರ್ತಿಯನ್ನು ಸ್ಥಾಪಿಸಿದ್ದಾರೆ ಎಂಬ ಅಭಿಪ್ರಾಯವೂ ಇದೆ.

ಕಡೆಚೂರು ಸೋಮೇಶ್ವರ ದೇವಸ್ಥಾನದ ವೈಶಿಷ್ಟ್ಯವೆಂದರೆ ಸೋಮೇಶ್ವರ ಲಿಂಗದ ಜೊತೆಗೆ ಚೌಡೇಶ್ವರಿ ದೇವಿಯ ಮೂರ್ತಿಯು ಶಿವಾಲಯದಲ್ಲಿ ಇರುವುದು.ಇದನ್ನು ಗಮನಿಸಿದಾಗ ಚೌಡೇಶ್ವರಿ ದೇವಿಯನ್ನು ಒಂದೆರಡು ಶತಮಾನಗಳ ಹಿಂದಷ್ಟೇ ಸೋಮೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿರಬೇಕು ಎನ್ನಿಸುತ್ತದೆ.ಯಾಕೆಂದರೆ ಶಿವಾಲಯದಲ್ಲಿ ಪಾರ್ವತಿ,ದುರ್ಗಾ,ಕಾಳಿ,ಅನ್ನಪೂರ್ಣಾ ಮೊದಲಾದ ಶಿವನ ಪತ್ನಿ ಪಾರ್ವತಿಯ ಹೆಸರಿನ ದೇವಿಯರುಗಳನ್ನು ಪ್ರತಿಷ್ಠಾಪಿಸಲಾಗಿರುತ್ತದೆ.ಸೌರಾಷ್ಟ್ರ ಹಳ್ಳಿಯಲ್ಲಿ ಚೌಡೇಶ್ವರಿಯು ಪ್ರತ್ಯೇಕ ದೇವಸ್ಥಾನದಲ್ಲಿ ಇದ್ದರೆ ಕಡೆಚೂರಿನಲ್ಲಿ ಶಿವಲಿಂಗದ ಬಲಬದಿ ಸೋಮನಾಥನ ಉತ್ಸವ ಮೂರ್ತಿಯ ಬಳಿ ಚೌಡೇಶ್ವರಿಯ ಮೂರ್ತಿ ಇದೆ.ಇದು ಅಧ್ಯಯನಾಸಕ್ತರಲ್ಲಿ ಸಾಕಷ್ಟು ಕುತೂಹಲ ಮೂಡಿಸುವುದರೊಂದಿಗೆ ಚೌಡೇಶ್ವರಿ ಶಿವ ಸಂಬಂಧದ ಕುರಿತು ಅಧ್ಯಯನಕ್ಕೆ ಪ್ರೇರಣೆ ನೀಡುತ್ತದೆ.ಕರ್ನಾಟಕದಲ್ಲಿ ಅಲ್ಲಲ್ಲಿ ಚೌಡೇಶ್ವರಿ ದೇವಸ್ಥಾನಗಳಿದ್ದು ಸಿಗಂದೂರಿನ ಚೌಡೇಶ್ವರಿ ದೇವಸ್ಥಾನವು ಪ್ರಸಿದ್ಧವಾಗಿದೆ.ಪಾರ್ವತಿಯ ಗಣದೇವಿಯರಲ್ಲಿ ಒಬ್ಬಳಾಗಿರುವ ಚೌಡೇಶ್ವರಿಯು ತನ್ನ ವಿಶಿಷ್ಟ ಮಹಿಮೆಯಿಂದ ಹೆಸರಾಗಿರುವ ಶಕ್ತಿದೇವಿ.ಆದರೆ ಶಾಕ್ತಪರಂಪರೆಯಲ್ಲಿ ಬರುವ ಶಕ್ತಿ ದೇವಿಯಲ್ಲ.ಶಾಕ್ತಪರಂಪರೆಯಲ್ಲಿ ಶಿವನ ಸತಿಯಾದ ಪಾರ್ವತಿಯನ್ನು ದುರ್ಗಾ,ಕಾಳಿ,ಪಾರ್ವತಿ,ಅನ್ನಪೂರ್ಣಾ ಇವೇ ಮೊದಲಾದ ರೂಪಗಳಲ್ಲಿ ಆರಾಧಿಸಲಾಗುತ್ತದೆ.ಅಷ್ಟಾದಶ ಶಕ್ತಿ ದೇವಿಯರು,ನವದುರ್ಗೆಯರು ಮತ್ತು ಸಪ್ತ ಮಾತೃಕೆಯರು,ದಶ ಮಹಾವಿದ್ಯೆಯರು ಶಾಕ್ತ ಪರಂಪರೆಯ ದೇವಿಯರು.’ ದುರ್ಗಾಸಪ್ತಶತಿ’ಯು ದೇವಿ ದುರ್ಗೆಯನ್ನು ಮಹಾಕಾಲಿ,ಮಹಾಲಕ್ಷ್ಮೀ ಮತ್ತು ಮಹಾಸರಸ್ವತಿ ಎನ್ನುವ ತ್ರಿಗುಣಾತ್ಮಿಕೆ ದುರ್ಗೆಯನ್ನಾಗಿ ಪರಿಕಲ್ಪಿಸಿದೆ.ಆದರೆ ಚೌಡೇಶ್ವರಿಯು ಪ್ರತ್ಯೇಕವಾಗಿಯೇ ಪೂಜೆಗೊಳ್ಳುವ ದೇವಿ.ಕೆಲವು ಕಡೆ ಗ್ರಾಮದೇವಿಯಾಗಿ ಮತ್ತೆ ಕೆಲವು ಕಡೆಗಳಲ್ಲಿ ಮುಖ್ಯದೇವಿಯಾಗಿ ಪೂಜಿಸಲ್ಪಡುತ್ತಿರುವ ಚೌಡೇಶ್ವರಿಯು ಕಡೆಚೂರಿನಲ್ಲಿ ಶಿವನೊಂದಿಗೆ ಪೂಜೆಗೊಳ್ಳುತ್ತಿರುವುದು ವಿಶೇಷ.

ಕಡೆಚೂರಿನ ಸೋಮೇಶ್ವರವು ಶಿವಲಿಂಗವಾಗಿದ್ದು ಈಗ ಇರುವ ಲಿಂಗವು ಮೂಲ ಲಿಂಗವಲ್ಲ.ಮೂಲ ಲಿಂಗವು ಭಿನ್ನವಾಗಿತ್ತು( ಒಡೆದಿತ್ತು) ಎಂದು ಹತ್ತು ವರ್ಷಗಳ ಕೆಳಗೆ ಈಗಿನ ಶಿವಲಿಂಗವನ್ನು ಕಾಶಿಯಿಂದ ತಂದು ಪ್ರತಿಷ್ಠಾಪಿಸಿದ್ದಾರಂತೆ.ಶಿವಲಿಂಗದ ಎದುರು ಇರುವ ನಂದಿಯನ್ನು ನೋಡಿದಾಗ ಈಗ ಇರುವ ಶಿವಲಿಂಗವು ಇತ್ತೀಚಿನದು ಎನ್ನುವುದು ಮೇಲು ನೋಟಕ್ಕೆ ಗೊತ್ತಾಗುತ್ತದೆ.ನಂದಿಯ ಕೊಂಬುಗಳ ಮೂಲಕ ಶಿವನ ಕಣ್ಣುಗಳನ್ನು ದರ್ಶಿಸುವಂತೆ ಹಿಂದೆ ಶಿವಾಲಯಗಳಲ್ಲಿ ಬೃಹತ್ ಶಿವಲಿಂಗಗಳನ್ನು ಸ್ಥಾಪಿಸಲಾಗುತ್ತಿತ್ತು.ಕಡೆಚೂರಿನ ಸೋಮೇಶ್ವರ ದೇವಸ್ಥಾನದಲ್ಲಿ ಇತ್ತೀಚೆಗೆ ಸ್ಥಾಪಿಸಿರುವ ಶಿವಲಿಂಗ ಮತ್ತು ನಂದಿಯರ ನಡುವೆ ಪೀಠ ಮತ್ತು ದೃಷ್ಟಿಗಳ ನಡುವೆ ವ್ಯತ್ಯಾಸವಿದೆ. ಪುರಾತನ ದೇವಸ್ಥಾನಗಳ ಲಿಂಗ ಅಥವಾ ಮೂರ್ತಿ ಭಿನ್ನವಾಗಿದೆ ಎಂದು ಸ್ಥಳೀಯರು ಹೀಗೆ ಆಧುನೀಕರಣಗೊಳಿಸುತ್ತಿರುವುದು ಧಾರ್ಮಿಕ ಪರಂಪರೆಯ ಅಧ್ಯಯನಕ್ಕೆ ತೊಡಕು ಆಗುತ್ತದೆ.ಭಿನ್ನವಾದ ಲಿಂಗ- ಮೂರ್ತಿಗಳನ್ನು ಪೂಜಿಸಬಾರದು ಎನ್ನುವ ನಂಬಿಕೆಯಲ್ಲಿ ಜನರು ಅವಿಚ್ಛಿನ್ನವಾಗಿ ನಡೆದುಕೊಂಡು ಬಂದ ಪರಂಪರೆಗೆ ಧಕ್ಕೆ ತರುತ್ತಿದ್ದಾರೆ.ಇತಿಹಾಸ,ಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವ ಪುರಾತನ ಮೂರ್ತಿ,ವಿಗ್ರಹಗಳು ಭಿನ್ನವಾಗಿದ್ದರೂ ಸರಿಯೆ ಅವುಗಳ ಅದೇ ಸ್ಥಿತಿಯಲ್ಲಿ ಕಾಪಾಡಿಕೊಂಡು ಬರುವ ಅಗತ್ಯವಿದೆ.ಗ್ರಾಮೀಣ ಜನರಿಗೆ ಇತಿಹಾಸ- ಪರಂಪರೆಗಳ ಜ್ಞಾನ ಇರುವುದಿಲ್ಲ.ಯಾರದೋ ಪುಣ್ಯಾತ್ಮರುಗಳ ಮಾತುಗಳನ್ನು ಕೇಳಿ ಪುರಾತನ ಶಿವಲಿಂಗಗಳ ಬದಲು ಆಧುನಿಕ ಲಿಂಗಗಳನ್ನು ಸ್ಥಾಪಿಸುತ್ತಿದ್ದಾರೆ.

ಕಡೆಚೂರು ಸೋಮೇಶ್ವರ ಲಿಂಗದ ಜೊತೆಗೆ ಸೋಮೇಶ್ವನ ಉತ್ಸವ ಮೂರ್ತಿಯೂ ಇರುವುದು ವಿಶೇಷವಾದುದು.ಪ್ರತಿ ವರ್ಷ ಮಕರ ಸಂಕ್ರಾಂತಿಯಂದು ಸೋಮೇಶ್ವರನ ರಥೋತ್ಸವದ ಮೂಲಕ ಪ್ರಾರಂಭವಾಗುವ ಜಾತ್ರೆಯುಮೂರು ದಿನಗಳ ಕಾಲ ನಡೆಯುತ್ತದಂತೆ.ಸಂಗಮೇಶ್ವರನ ಉತ್ಸವ ಮೂರ್ತಿಯನ್ನು ಗಂಗಾಸ್ನಾನಕ್ಕೆಂದು ಸಂಗಮಕ್ಷೇತ್ರಕ್ಕೆ ಕರೆದುಕೊಂಡು ಹೋಗುತ್ತಾರಂತೆ.

ಸಂಗಮೇಶ್ವರ ಲಿಂಗದ ಬಲತುದಿಯಲ್ಲಿ ಉತ್ಸವ ಮೂರ್ತಿ ಸಂಗಮೇಶ್ವರ ಮತ್ತು ಚೌಡೇಶ್ವರಿ ದೇವಿಯ ಕಟ್ಟಿಗೆಯ ಮೂರ್ತಿಗಳಿವೆ.ಸಂಗಮೇಶ್ವರನ ಉತ್ಸವ ಮೂರ್ತಿಯು ಮನುಷ್ಯಾಕಾರವನ್ನು ಹೋಲುವ ಉತ್ಸವ ಮೂರ್ತಿಯಾಗಿದ್ದು ಆತನಿಗೆ ಕನಿಕಮ್ಮ ಮತ್ತು ಮಾಣಿಕಮ್ಮ ಎನ್ನುವ ಇಬ್ಬರು ಪತ್ನಿಯರಿರುವುದು ಇನ್ನೂ ವಿಶೇಷ.ಯಾದವರ ಮನೆತನದವರು ಮೂರು ತಲೆಮಾರುಗಳಿಂದ ದೇವಸ್ಥಾನದ ಪೂಜಾರಿಗಳಾಗಿ ಪೂಜೆ ಸಲ್ಲಿಸುತ್ತಿದ್ದಾರೆ.ಚೌಡೇಶ್ವರಿ ದೇವಿಯನ್ನು ಪ್ರತಿ ಮೂರುವರ್ಷಗಳಿಗೊಮ್ಮೆ ದೇವಸ್ಥಾನದ ಹೊರಭಾಗದಲ್ಲಿಟ್ಟು ಪೂಜಿಸುತ್ತಾರಂತೆ.ಆ ಸಮಯದಲ್ಲಿ ದೇವಿಗೆ ಕೋಳಿ ಮೊದಲಾದ ಬಲಿ ನೀಡಲಾಗುತ್ತದೆಯಂತೆ.ಉಳಿದ ದಿನಗಳ ದೇವಿಗೆ ಸಿಹಿ ನೈವೇದ್ಯದ ಸಮರ್ಪಣೆಯ ಮೂಲಕ ಪೂಜಿಸಲಾಗುತ್ತದೆ.ನವರಾತ್ರಿಯ ದಿನಗಳಲ್ಲಿ ಕುಂಕುಮಾರ್ಚನೆ ಮಾಡಲಾಗುತ್ತದೆ.ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಸೋಮೇಶ್ವರನನ್ನು ರುದ್ರ ಮಂತ್ರಗಳಿಂದ ಅಭಿಷೇಕ ಮಾಡುವ ರುದ್ರಾಭಿಷೇಕ ನೆರವೇರಿಸಲಾಗುತ್ತದೆ.

ಕಡೆಚೂರು ಸೋಮೇಶ್ವರ ದೇವರಿಗೆ ವಿಜಯಪುರ ಮತ್ತು ಸೊಲ್ಲಾಪುರ ,ಆಂಧ್ರಪ್ರದೇಶದ ಭಕ್ತರುಗಳಿದ್ದಾರೆ ಎಂದು ಮಾಹಿತಿ ನೀಡಿದ ಗ್ರಾಮಸ್ಥರು ಕಡೆಚೂರು ಸೋಮೇಶ್ವರನು ವಿಜಯಪುರ ಜಿಲ್ಲೆಯ ಸಾಕಷ್ಟು ಸಂಖ್ಯೆಯ ಭಕ್ತರುಗಳ ‘ ಮನೆಯ ದೇವರು’ ಇಲ್ಲವೆ ‘ ಕುಲದೇವರು’ ಆಗಿದ್ದಾನಂತೆ.
ದೇವಸ್ಥಾನದ ಹಿಂದುಗಡೆ ಸುಮಾರು ಆರುನೂರು ಎಕರೆಗಳಷ್ಟು ವಿಸ್ತೀರ್ಣದ ದೊಡ್ಡ ಕೆರೆ ಇದ್ದರೆ ದೇವಸ್ಥಾನದ ಮುಂಭಾಗದಲ್ಲಿ ಸೋಮೇಶ್ವರನ ಪೂಜೆ- ಅಭಿಷೇಕಗಳಿಗಾಗಿ ನಿರ್ಮಿಸಿದ ಕಲ್ಯಾಣಿ ಇದೆ.ಕಡೆಚೂರಿನಿಂದ ಎರಡು ಕಿಲೋಮೀಟರ್ ಗಳ ಅಂತರದಲ್ಲಿ ‘ ಸೋಮೇಶ್ವರ ಹೊಂಡ’ ಇದ್ದು ಬಾಯಾರಿಕೆಯಲ್ಲಿ ಬಳಲಿದ ಸೋಮೇಶ್ವರನ ಪತ್ನಿಯರಾದ ಕನಿಕಮ್ಮ ಮತ್ತು ಮಾಣಿಕಮ್ಮ ಅವರಿಬ್ಬರು ತಮ್ಮ ಆಯುಧಗಳಿಂದ ಬಂಡೆಯನ್ನು ಹೊಡೆದು ನೀರು ತರಿಸಿದರಂತೆ.ಇಂದಿಗೂ ಆ ಕಲ್ಲುಹೊಂಡದಲ್ಲಿ ಸದಾ ನೀರು ಇರುವುದಾಗಿ ಎಷ್ಟೇ ನೀರನ್ನು ಬಳಸಿದರೂ ತುಂಬಿದ ಹೊಂಡ ತುಂಬಿದ ಹಾಗೆಯೇ ಇರುತ್ತದೆಯಂತೆ.

ಸೋಮೇಶ್ವರನ ಇಬ್ಬರು ಪತ್ನಿಯರಾದ ಕನಿಕಮ್ಮ ಮತ್ತು ಮಾಣಿಕಮ್ಮ ಅವರು ಗಂಗೆ ಗೌರಿಯರ ಸ್ವರೂಪಿಗಳಾಗಿದ್ದು ಈ ಪ್ರದೇಶವು ಶಿವ ಮತ್ತು ಶಿವನ ಪರಿವಾರ ದೇವತೆಗಳನ್ನು ಪೂಜಿಸುತ್ತಿದ್ದ ಶೈವಾರಾಧನೆಯ ಕೇಂದ್ರವಾಗಿತ್ತು ಎಂದು ಊಹಿಸಬಹುದು.ದೇವಸ್ಥಾನದ ಮುಂಭಾಗದಲ್ಲಿ ವೀರಗಲ್ಲುಗಳಿವೆ.ನಾಗ ದೇವತೆಯೂ ಇದೆ.ಮುಂಭಾಗದಲ್ಲಿ ನೂರಿನ್ನೂರು ವರ್ಷಗಳ ಬಂಡೆ ಆಂಜನೇಯನ ಮೂರ್ತಿಯೂ ಇದೆ.ಕಡೆಚೂರು ಸೋಮೇಶ್ವರ ದೇವಸ್ಥಾನದ ಬಗ್ಗೆ ಅಧ್ಯಯನ ಮಾಡಿದರೆ ಹಿಂದಿನ ಕಾಲದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅರ್ಥ ಮಾಡಿಕೊಳ್ಳಬಹುದು.ಸೌರಾಷ್ಟ್ರಹಳ್ಳಿಯ ಬಗ್ಗೆಯೂ ಅಧ್ಯಯನದ ಅಗತ್ಯವಿದೆ.ಸಂಶೋಧಕರು ಮತ್ತು ಅಧ್ಯಯನಾಸಕ್ತರಿಗೆ ಸ್ಫೂರ್ತಿ,ಪ್ರೇರಣೆಗಳನ್ನು ನೀಡುವ ಕ್ಷೇತ್ರ ಕಡೆಚೂರು ಸೋಮನಾಥ ದೇವಸ್ಥಾನ.

ಕಡೆಚೂರು ಗ್ರಾಮ ಪಂಚಾಯತಿಯ ಪಿಡಿಒ ಶ್ರೀಮತಿ ಜಯಲಕ್ಷ್ಮೀ ಮತ್ತು ಕಂಪ್ಯೂಟರ್ ಆಪರೇಟರ್ ಬನ್ನಪ್ಪ ಹಾಗೂ ಜೈಗ್ರಾಮ ಗ್ರಾಮ ಪಂಚಾಯತಿಯ ಕಾರ್ಯದರ್ಶಿ ಸಿದ್ದಯ್ಯಸ್ವಾಮಿ ಅವರುಗಳು ಗ್ರಾಮಸ್ಥರು,ಗ್ರಾಮದ ಮುಖಂಡರುಗಳನ್ನು ಸೋಮೇಶ್ವರ ದೇವಸ್ಥಾನಕ್ಕೆ ಕರೆಯಿಸಿ ನನಗೆ ಮಾಹಿತಿ ಕೊಡಿಸಿದ್ದಕ್ಕೆ ಅವರುಗಳಿಗೆ ಧನ್ಯವಾದಗಳನ್ನು ಹೇಳುತ್ತಾ ‘ ಪುರಾತನ ದೇಗುಲಗಳ ದರ್ಶನ’ ಮಾಲಿಕೆಯ ಕಡೆಚೂರು ಸೋಮನಾಥನ ಕುರಿತ ಈ ಲೇಖನ ಮುಗಿಸುವೆ.

22.09.2021