ಉಡದಾರವೆಂಬ ‘ನಡು’ವಿನ ದಾರದ ಪುರಾಣ-ಶರಣಬಸವ ಕೆ.ಗುಡದಿನ್ನಿ

ಉಡದಾರವೆಂಬ ‘ನಡು’ವಿನ ದಾರದ ಪುರಾಣ..

ಲೇಖಕ:ಶರಣಬಸವ ಕೆ.ಗುಡದಿನ್ನಿ

ನಾನು ಉಡದಾರ ಹಾಕಿಕೊಳ್ಳದೆ ಇಪ್ಪತ್ತು ವರ್ಷದ ಮೇಲಾಯ್ತು.
ಮೊದಲೆಲ್ಲ ಅವ್ವ ಬೈತಿದ್ಲು
“ಹೇಣ್ತಿ ಸತ್ತವರಂಗ ಯಾಕ ಖಾಲಿ ಕುಂಡೀಲಿ ಇರತಿದ್ದ್ಯಲೋ ಒಂದು ಉಡದಾರ ಕಟಿಗ್ಯಾ ನಡುವಿಗಿ” ಅಂತ.
ತುಂಬ ತೆಳ್ಳಗಿದ್ದ ನನ್ನ ನಡುವಿಗೆ ದಾರ ನೆಟ್ಟಗೆ ನಿಲ್ಲುತ್ತಿರಲಿಲ್ಲ.
ಆದರೆ ಉಟ್ಟುಕೊಂಡ ಚೆಡ್ಡಿ, ಚೂರು ಬೆಳೆದ ಮೇಲೆ ಲುಂಗಿ ಉದುರಿ ಬೀಳದೆ ಚೂರೊತ್ತು ನಿಲ್ಲಲು ಉಡದಾರ ಆಧಾರವಾಗಿತ್ತು.ಅದಾದರೂ ಸುಮ್ಮನೆ ನಿಲ್ಲದೆ ಅದಕ್ಕೊಂದು ಚಿಕ್ಕ ಕಟಿಗಿ ತುಂಡನ್ನು ‘ಬಿರಲು’ ಆಗಿ ಸುತ್ತಿ ಬಿಗಿಗೊಳಿಸುತ್ತಿದ್ದೆ.
ಅಷ್ಟು ಮಾಡಿದರೂ ಕೆಲವೊಮ್ಮೆ
ಹಳ್ಳ,ಬಾವಿಯಲ್ಲಿ ಈಜಾಡಲು ಹೋದಾಗ ಅವಸರದಲ್ಲಿ ಚಣ್ಣ,ಲುಂಗಿಯನ್ನ ಬಿಚ್ಚಿದರೆ ಅದರ ಜೊತೆ ಅಲಾಕ್ ದಾರವೂ ಬಂದುಬಿಟ್ಟು ಸುತ್ತಲಿದ್ದವರು ನಕ್ಕು ಬಿಡುತ್ತಿದ್ದರು.
“ಮೈಯಿ ಈಟು ಸಾಪಿದ್ರ ಏನ ನಿಂತ್ಗಂತವಲೇ” ಅಂತ ಮಾವ ಆಗೋರು ಆಡಿಸ್ಯಾಡತಿದ್ರು.
ಆವಾಗೆಲ್ಲ ಉಡದಾರದ ಮೇಲೆ ಅದನ್ನು ಕಟ್ಟಿಕೊಳ್ಳಲು ಗಂಟುಬೀಳುವ ಅವ್ವನ ಮೇಲೆ ಸಿಟ್ಟು ಬರುತ್ತಿತ್ತು.

ಊರೊಳಗಿನ ಮಲ್ಲಯ್ಯ ತಾತನ ಜಾತ್ರೆ,ನೀರಮಾನ್ವಿಯ ಯಲ್ಲಮ್ಮನ ಜಾತ್ರೆ,ಊರ ಮುಂದಿನ ದರಗಾದ ದವಲಸಾಬನ ಉರುಸುಗಳಿಗೆ ಹೋದಾಗ ಅವ್ವ ಮಾಡುತ್ತಿದ್ದ ಮೊದಲ ಶಾಪಿಂಗ್ ಎಂದರೆ ಉಡದಾರದ ಖರೀದಿ.
ಎಲ್ಡು-ಮೂರು ರೂಪಾಯಿಗೆ ಮಾರುದ್ದ ಬರುತ್ತಿದ್ದುದಕೊ,
ಜಾತ್ರೇಲಿ ಏನ ತಂದ್ವಿ ಅನ್ನೊ ಅಸ್ತಿತ್ವದ ಪ್ರಶ್ನೆಗೊ ಏನೊ ಅವ್ವ ಜಾತ್ರೆ ಹೊಕ್ಕರೆ ಸಾಕು ರಸ್ತೆಯ ಬದಿಯಲಿ ಅಂಗಡಿ ಹಾಕಿರುತ್ತಿದ್ದ ಜೋಗೇರ ಮುಂದೆ ಕುಳಿತು ಗಂಟೆಗಟ್ಟಲೆ ಚೌಕಾಸಿ ಮಾಡಿ ಬಣ್ಣ,ಬಣ್ಣದ ಉಡದಾರ ಆಯ್ದುಕೊಳ್ಳುತ್ತಿದ್ದಳು.
ಕೆಂಪು,ನಿಂಬುಳಿ,ಕೆಂಪುದಾರದ ಮೇಲೆ ಕಪ್ಪು ಎಳೆ,ಹರಿಶಿಣದ
ದಾರ ಮುಂತಾದವಗಳ ಮದ್ಯೆ ಕೆಂಪುದಾರವನ್ನೆ ಫೈನಲ್ ಮಾಡುತ್ತಿದ್ದಳು.ಕರೀ ದಾರದ ಬಗ್ಗೆ ಹೆಚ್ಚು ಒಲವಿದ್ದ ನಾನು
“ಬರೀ ಇದೇ ಏನಂಗೆ ಬ್ಯಾರಿ ಬಣ್ಣದ್ ತಗಾ,ಕರೀದ ತಗಾ” ಅಂತ ಪ್ರತಿಭಟಿಸುತ್ತಿದ್ದೆ.
ಬಗಲು ಮನೆಯ ಶಿವ್ಯ
“ಬ್ಲಾಕು ಬಣ್ಣದ್ದು ಎಲ್ಲದಕೂ ಸೂಟ್ ಆಗುತ್ತ, ಯಾವ್ದಂಗ್ಯರ ಇರಲಿ ಇನ್-ಶೆರ್ಟ ಮಾಡ್ಬೋದು” ಅಂತ ಆಸೆ ಹಚ್ಚಿದ್ದು ಮನಸಲಿ ಗಟ್ಟಿ ಕುಂತಿರುತ್ತಿತ್ತು.
ನನ್ನ ಆಸೆಯನ್ನ ನಿಧಾನಕ್ಕೆ ಸೈಡಿಗೆ ಸರಿಸುತ್ತಿದ್ದ ಅವ್ವ
“ಬ್ಯಾಡಪ ಕರೀ ಬಣ್ಣದ್ದು ನಮಗ ಆಗಿ ಬಂದಿಲ್ಲ, ಸಣ್ಣತಿದ್ದಾಗ ಒಂದ್ಸಲಾ ದಾವಲಸಾಬನ ಉರುಸಿನ್ಯಾಗ ಕರಿದಾರ ತಂದು ಕಟ್ಟಿದ್ಯಾ, ಸಂಜೆನತೀಗಿ ಮೂರುಸಲ ಬಿದ್ದಿದೆಪೋ” ಅಂತ ಹಳೆಯ ಕತೆ ಹೇಳಿ ಕಕ್ಕುಲಾತಿಯಿಂದ ಕಟ್ಟಿ ಹಾಕುತ್ತಿದ್ದಳು.

ಪ್ರೈಮರಿಯಲ್ಲಿನ ದೊಡ್ಡ ಕ್ಲಾಸುಗಳಿಗೆ ಬರುವ ಹೊತ್ತಿಗೆ ರವಿವಾರದ ಸಿನೀಮಾಗಳನ್ನ ನೋಡುತ್ತ,ನೋಡುತ್ತ ನಮ್ಮಲ್ಲೂ ಕೆಲವು ಬದಲಾವಣೆಗಳಾಗಿದ್ದವು.
ಹಿಪ್ಪಿ ಶೈಲಿಯಲ್ಲಿ ಕೂದಲು ಬಿಡುವುದು ಮೊದಲನೆಯದಾದರೆ ಎರಡನೆಯದು ಅಂಗಿಯನ್ನ ಪ್ಯಾಂಟಿನೊಳಗೆ ಸೇರಿಸುವ ಇನ್-ಶರ್ಟ ಎಂಬ ಹೊಸ ಪ್ಯಾಷನ್ನು!
ಪಟ್ಟಣದ ಗಂಧ ಗಾಳಿ ಇದ್ದವರು,ಇಲ್ಲವೇ ಅವರ ಮನೆಯಲ್ಲಿ ಆಗಲೇ ಕಲಿತು ಪ್ಯಾಂಟಾಕವರು ಇದ್ದರೆ ಇನ್-ಶರ್ಟ ಮಾಡಿ ನಡುವಿಗೆ ಬೆಲ್ಟ್ ಹಾಕಿಕೊಳ್ಳುತ್ತಿದ್ದರು.
ಆದರೆ ನಾವು ಪಕ್ಕಾ ನೆಲದ ಕುಳಗಳು!
ಪ್ಯಾಂಟಿನ ಮೇಲೆ ಬೆಲ್ಟಿನ ಜಾಗದಲ್ಲಿ ಮುಲಾಜಿಲ್ಲದೆ ಉಡುದಾರ ಎಳೆದು, ಲೂಜಾದರೆ ಅದಕ್ಕೊಂದು ಬಿರಲು ಸುತ್ತಿ ರಾಜಾರೋಷವಾಗಿ ತರಗತಿ ಕೋಣೆಯೊಳಗೆ ಕಾಲಿಡುತ್ತಿದ್ದೆವು.
ಕೆಲವರು ಕಿಸಕ್ಕನೆ ನಕ್ಕು ನಮ್ಮ ಜಂಘಾಬಲ ಉಡುಗಿಸುವ ಯತ್ನ ಮಾಡುತ್ತಿದ್ದರಾದರೂ
“ಇಂತಾ ಕಲರ್ರ್ ಉಡ್ದಾರ ಯಾವನ್ದೈತೆ” ಎಂಬ ಆತ್ಮವಿಶ್ವಾಸ ನಮ್ ಎದೆಯಲ್ಲಿ ಭದ್ರವಾಗಿ ನೆಲೆಯೂರಿರುವದರಿಂದ ನಾವ್ಯಾರು “ಕ್ಯಾರೆ” ಅನ್ನುತ್ತಿರಲಿಲ್ಲ.

ಉಡುದಾರದ ಕುರಿತು ನಮ್ಮೂರಲ್ಲಿ ಹಲವಾರು ಕತೆಗಳಿದ್ದವು.
ಅವುಗಳಲ್ಲಿ ತುಂಬಾ ಮುಖ್ಯಾವಾದುದು ಮತ್ತು ಹುಡುಗರು ಉಡದಾರ ವಲ್ಲೆಂದು ಹಠ ಹಿಡಿದರೆ ಹೇಳುವಂತಹದು ಎಂದರೆ ದ್ಯಾವಪ್ಪನ ಮಗ ರಾಮಣ್ಣನದು.
ಅತ್ಯಂತ ಮುಗ್ದನೂ ಮಾತಾಡಲು ತೊದಲುವ ಅಮಾಯಕನೂ ಆಗಿದ್ದ ರಾಮಣ್ಣನಿಗೆ ಮದುವೆಯಾಗಿ ಹತ್ತು ವರುಷವೇ ಆದರೂ ಆತನ ಹೆಂಡತಿ ಆತನೊಡನೆ ಬಾಳುವೆ ಮಾಡದೆ ತವರು ಮನೆಯಲ್ಲಿಯೇ ಉಳಿದಿದ್ದಳು.
(ತವರೇನು ಬೇರೆ ಇರಲಿಲ್ಲ ಅದೇ ಊರಿನ ಆ ಕೊನೆಗಷ್ಟೆ)
ಒಂದೆರಡು ಸಲ ರಾಮಣ್ಣ ಕರೆಯಲು ಹೋದನಾದರೂ ಆಕೆ ಕದಲದಿದ್ದುರಿಂದ ವಾಪಸ್ಸು ಬಂದು ಕುರಿಕಾಯುತ್ತ ಒಂಟಿಯಾಗಿ ಬದುಕುತ್ತಿದ್ದ.
ಒಂದು ದಿನ ಊರ ಹಳ್ಳದಲ್ಲಿ ಆತ ಮೈತೊಳೆದುಕೊಳ್ಳುತ್ತಿದ್ದರೆ ಆತನ ನಡುವಿಗಿದ್ದ ಉಡದಾರ ಕಿತ್ತು ನೀರಲಿ ಹರದು ಹೊಂಟಿತ್ತು!
ಅದನ್ನು ನೋಡಿದ ಬಟ್ಟೆ ಹೊಗೆಯುವ ಹೆಣ್ಣು ಮಕ್ಕಳು
“ಯಪ್ಪ ರಾಮಣ್ಣ ನಿನ್ ಉಡದಾರ ಹರದು ಹೊಂಟಾದ ನೋಡು ” ಅಂತ ಕೂಗಿದರು.
“ಹೌದಂಗೆ ನಿನ್ನೆ ತಂಗಂಡೀನಿ ಹೊಸಾದು ಅದೆಂಗ ಹರೀತೇನು” ಅನಕಾಂತ ಆತ ನೀರಲಿ ಒಂದು ಸಲ ಮುಳುಗಿ ಏಳೋವತ್ತಿಗೆ ಊರೊಳಗಿನಿಂದ ತಳವಾರ ದ್ಯಾವಪ್ಪ ಮಾವ ಓಡುತ್ತ ಬಂದು
“ನಿನ್ನ ಹೇಣ್ತಿ ಸತ್ತಾಳಂತಪೋ ರಾಮಣ್ಣ”
ಅಂತ ಸುದ್ದಿ ತಂದಿದ್ದ.
ಇದು ಊರಲ್ಲಿ ದೊಡ್ಡ ಸೆನ್ಸೇಷನಲ್ ಸುದ್ದಿಯಾಗಿತ್ತು.
ಹೆಂಡತಿ ಸತ್ತ ಸಂಗತಿ ಉಡದಾರ ಹರಿಯುವ ಮೂಲಕ ರಾಮಣ್ಣನಿಗೆ ವೇದ್ಯವಾಗಿದ್ದು ದೊಡ್ಡ ಮಾತಾಗಿ
“ಅದ್ಕಾ ಉಡದಾರನ ಗಂಡಸ್ರ ತಾಳಿ ಅನ್ನೋದು ಸರೀಗಿ ಜ್ವಾಪಾನ ಮಾಡಕ್ಯಾಬೇಕು ” ಎಂಬ ಉಪದೇಶಗಳು ಎಲ್ಲಾ ಕಡೆ ಕೇಳತೊಡಗಿ ನಮ್ಮ ಮನೆಗಳಲ್ಲಿ ಹಿಡಿದಿಡಿದು ಕಟ್ಟಿ
“ಬಿಚಿಗ್ಯಬ್ಯಾಡಲೊ ಮುಂದ ಮದುವ್ಯಾಗಾಕಿ ಈಗಲೇ ಸತ್ತು ಅಡ್ಡಗುಣಿಗಿ ಹೋತಿರಿ ನೋಡ್” ಅಂತ ಬ್ಲಾಕ್ ಮೇಲ್ ಮಾಡುತ್ತಿದ್ದರು.

ನಾನು ಚೂರು ಬೆಳೆದು ಕಾಲೇಜು ಮೆಟ್ಟಿಲು ಹತ್ತುವ ಹೊತ್ತಿಗೆ ನನ್ನ ನಡುವಿನ ಉಡುದಾರ ಮಾಯವಾಗಿತ್ತು.
ಪದೇ ಪದೇ ಉಚ್ಚುತ್ತಿದ್ದುದಕ್ಕೊ ಕಿರಿಕಿರಿ ಅನಿಸಿದ್ದರಿಂದಲೊ ನಾನು ಧರಿಸುವದನ್ನೇ ಬಿಟ್ಟೆ.
ಅದರಿಂದಾಗಿ ಅದೇಟು ಜನ ಸತ್ತರೊ ನನಗೆ ಗೊತ್ತಾಗಲಿಲ್ಲ!
ಒಮ್ಮೆ ಪತ್ರಿಕೆಯ ಕಾಲಂ ಒಂದರಲ್ಲಿ ಒಂದು ಸ್ವಾರಸ್ಯಕರ ಸಂಗತಿ ಓದಿದೆ.
ಅಲ್ಲಿದ್ದ ಪ್ರಶ್ನೋತ್ತರ ಮಾತ್ರ ನನಗೆ ಅಲ್ಪ-ಸ್ವಲ್ಪ ನೆನಪಿದೆ.
ಅದು ಉಡದಾರದ ಕುರಿತಾಗಿತ್ತು ಎಂಬುದಕ್ಕಾಗಿ ಇಲ್ಲಿ ಪ್ರಸ್ತಾಪಿಸುತ್ತಿದ್ದೇನೆ.
“ಗುರುಗಳೇ,ಹೆಣ್ಮಕ್ಕಳ ನಡುವಿನ ಮ್ಯಾಲ ಕೊಡ ನಿಂದ್ರತಾವು,ಗಣ್ಮಕ್ಳ ನಡುವಿನ ಮ್ಯಾಲ ಯಾಕ ನಿಂದ್ರದಿಲ್ಲ” ಅಂತ ಪ್ರಶ್ನೆ ಇತ್ತು.
ಅದಕ್ಕೆ ಆ ಸಂಪಾದಕ ಮಹಾಶಯ
” ಗಣ್ಮಕ್ಳಿಗೆ ಉಡದಾರ ಇಲ್ಲಂದ್ರೆ ಚಣ್ಣನೇ ನಿಂದ್ರಾಕಿಲ್ಲ ಇನ್ನ ನಡುವಿನ ಮ್ಯಾಲ ಕೊಡ ಹೆಂಗ ನಿಂದ್ರಾತಾವು” ಅಂತ ನಗೆ ಪಟಾಕಿ ಹಾರಿಸಿದ್ದ.ಹೌದಲ್ಲಾ ಅನಿಸಿ ನಕ್ಕು ಸುಮ್ಮನಾಗಿದ್ದೆ.

ಈ ಉಡದಾರ ನನಗಂತೂ ಯಾವಾಗಲೂ ಕುತೂಹಲದ ಸರಕೇ!
ಉಡದಾರದ ಕುರಿತು ಕೆದಕಿದಾಗೆಲ್ಲ ಅಚ್ಚರಿಯ ಸಂಗತಿಗಳು ಹೊರಬೀಳುತ್ತಿದ್ದವು.
ಆವಾಗೆಲ್ಲ ನಾನು ಅವ್ವನಿಗೆ ಗಂಟು ಬೀಳುತ್ತಿದ್ದೆ.ನನ್ನೆಲ್ಲ ಪ್ರಶ್ನೆಗಳಿಗೆ ಚೂರು ಬ್ಯಾಸರ ಮಾಡಿಕೊಳ್ಳದೆ ಅವ್ವ ಸಮಾಧಾನದ ಉತ್ತರ ನೀಡುತ್ತಿದ್ದಳು.
“ಯವ್ವ ಗಣ್ಮಕ್ಳು ಅಷ್ಟೇ ಯಾಕ ಹಾಕ್ಯಂತಾರ ಉಡದಾರ?!
ಅಂತ ಹೊಲದಲ್ಲಿ ಕಳೆ ಕೀಳುವುದರ ಮದ್ಯೆ ಒಂದು ಸಲ ಕೇಳಿಬಿಟ್ಟಿದ್ದೆ.
ಹತ್ತಿಹೊಲದಲ್ಲಿ ಕಳೇವು ತೆಗೆಯುವಾಗ ಅದೂ ಅಂತಹ ಮಟಮಟ ಮದ್ಯಾಹ್ನದಲ್ಲಿ ಎಲ್ಲವನ್ನು ಬಿಟ್ಟು ಉಡದಾರದ ಮಾತು ಎತ್ತಿದ್ದಕ್ಕೆ ಏನಾತಿವಿನಿಗಿ ಎಂಬಂತೆ ನೋಡಿ
“ಅದರಾಗ ಏನಾದ ಗಣಮಕ್ಳಿಗೆ ಉಡದಾರ ಇದ್ರೆ ಹೆಣ್ಮಕ್ಳಿಗೆ ಡಾಬು ಅದ್ಯಾವ, ಅದಲ್ದ ಹೆಣ್ಮಕ್ಳೇನು ಕೀಲಿ-ಗೀಲಿ ಇಟ್ಗಂತಿವೇನ್ ಎಲ್ಲಾ ಗಣ್ಮಕ್ಳ ಕೈಯಾಗ ಇರತದ ಅವುನ್ನ ಕಟ್ಗೆಳ್ಳಾಕರ ಬೇಕಲ್ಲ ಉಡದಾರ” ಅಂತ ಉಡದಾರದ ಹುಟ್ಟಿಗೆ ಕಾರಣವಾದ ಪುರುಷ ಪ್ರಧಾನ ಕುಟುಂಬ ವ್ಯವಸ್ಥೆಯನ್ನು ನೆನಪಿಸಿದ್ದಳು.
ಅಧಿಕಾರವೆಲ್ಲ ಮನೆಯ ಗಂಡಸೇ ನೋಡಿಕೊಳ್ಳುವ ಆ ಕಾಲದಲ್ಲಿ ಟ್ರಂಕು,ತಿಜೋರಿ,ಮನೆಯ ಕೀಲಿ ಕೈಗಳನ್ನ ದಾರಕ್ಕೆ ಕಟ್ಟಿ ಆ ದಾರವನ್ನು ಕಟ್ಟಲು ಈ ಉಡದಾರ ಹುಟ್ಟಿರಬಹುದಾ? ಏನು ಇದರ ಇತಿಹಾಸ ಇನ್ನು ಒಳ್ಯಾಕ ಐತೇನು ಎಂಬ ಗೊಂದಲಕ್ಕೆ ಬೀಳುತ್ತಿದ್ದೆ.
ಹಾಗೆ ಉಡದಾರಕ್ಕೆ ಕೀಲಿ ಕೈಗಳ ಗೊಂಚಲು ಸಿಗಾಕಿಕೊಳ್ಳುವದು ಒಂದು ಕಾಲಕ್ಕೆ ಪ್ರೆಸ್ಟೇಜಿನ ವಿಷಯವಾಗಿತ್ತು!
ಹಲವರು ತಮ್ಮ ನಡುವಿನ ಉಡದಾರಕ್ಕೆ ಇಷ್ಟಿಷ್ಟು ದಪ್ಪದ ಕೀ ಗೊಂಚಲು ಕಟ್ಟಿಕೊಂಡು ಥೇಟ್ ಬೆಲ್ಟಿನ ಬಗಲು ಪಿಸ್ತೂಲು ನೇತಾಕಿಕೊಂಡ ಆರಕ್ಷನ ಗತ್ತಿನಲ್ಲಿ ತಿರಗಾಡುತಿದ್ದರು.
ಅದಲ್ಲದೆ
ಮದುವೆಯಲ್ಲಿ ಬೀಗರು ಹಾಕುವ ‘ಅಕ್ಕಿಯುಂಗ’ರ
(ಬೆಳ್ಳಿಯದು) ಕೆಲವೇ ದಿನಗಳಲ್ಲಿ ಬೆರಳಿಂದ ಉಡದಾರಕ್ಕೆ ಶಿಫ್ಟಾಗುತ್ತಿತ್ತು,
ಜ್ವರ ಬಂದರೆ ಕಟ್ಟುವ ಅಕ್ಕಿ-ಅರಿಶಿಣದ ಪುಟ್ಟ ಗಂಟು, ಹೆಚ್ಚಾದರೆ ಮಂತ್ರಿಸಿ ಕಟ್ಟುವ ಲಿಂಬೆಕಾಯಿ,ಐನೇರು ಮಂತ್ರಿಸಿ ಕೊಡುವ ಆಯತಾಕಾರದ ತಾಯತ,ಮುಲ್ಲಾಸಾಬನ ಛೂ ಮಂತ್ರದ ಸುರುಳಿಯಾಕಾರದ ತಾಯತ ಈ ಸಕಲಕ್ಕೂ ಉಡದಾರ ಖಾಯಂ ಆಧಾರ ಒದಗಿಸುತ್ತಿತ್ತು.

“ನಿನ ಉಡದಾರ ಹರೀಲಿ” ಅಂತನ್ನುವದು ನಮ್ಮ ಕಡೆ ಸಾಮಾನ್ಯ ಬೈಗುಳ.
ಉಡದಾರ ಹರೀಲಿ ಎಂಬುದು ಬರೀ ದಾರಕ್ಕೆ ಮಾತ್ರ ಸೀಮಿತವಾಗದೆ ನೀನು ಕಟ್ಟಿಕೊಂಡ ಹೆಂಡತಿ ಸಾಯ್ಲಿ ಎಂಬದು ಬೆಚ್ಚಿಬೀಳಿಸುವ ಬೈಗುಳದ ಒಳಾರ್ಥವಾಗಿತ್ತು ಎಂಬುದು ಇತ್ತೀಚಿಗೆ ತಾನೆ ನನಗೆ ಗೊತ್ತಾಗಿದ್ದು.
ಜಗಳದ ಸಂದರ್ಭದಲ್ಲಿ
“ಬಾರಲೇ ಮಗನೇ ನಿನ್ ಉಡದಾರ ಏಟು ಗಟ್ಟೈತೆ ನೋಡಾಮು” ಎಂದು ಸವಾಲು ಹಾಕುವುದು ಕೂಡ ಸಾಮಾನ್ಯವಾಗಿದ್ದು ಇಲ್ಲಿ ಉಡದಾರ ತಾಕತ್ತಿನ ಬಿಂಬಿತವಾಗುತ್ತಿತ್ತು.
ಅಲ್ಲದೆ ಸಾಲು,ಸಾಲು ಹೆಣ್ಣು ಹಡೆದು ಹತಾಶರಾದ ಕೆಲವರು ಗಂಡು ಹುಟ್ಟಲಿ ಎಂದು
ಈ ಮೊದಲು ಹುಟ್ಟಿದ ಹೆಣ್ಣು ಮಗುವಿನ ನಡುವಿಗೆ ಉಡದಾರ ಕಟ್ಟುತ್ತಿದ್ದರು.
ಹಾಗೆ ಕಟ್ಟಿದ ಮೇಲೆ ಅದೆಷ್ಟು ಜನರಿಗೆ ಗಂಡು ಮಕ್ಕಳಾದವೊ ಗೊತ್ತಿಲ್ಲ ಆದರೆ ಅಂತಹದೊಂದು ನಂಬಿಕೆಯಂತೂ ಈಗಲೂ ಜೀವಂತವಿದೆ.

ಈ ಉಡದಾರವೆಂಬುದು ರಜಾಕಾರರ ಕಾಲದಲ್ಲಿ ಹಲವರ ಪ್ರಾಣ ತೆಗೆದಿತ್ತು ಮತ್ತು ಹಲವರ ಪ್ರಾಣ ಉಳಿಸಿತ್ತು ಎಂಬುದಕ್ಕೆ ನಮ್ಮ ಹೈದ್ರಾಬಾದ್ ಕರ್ನಾಟಕದಲ್ಲಿ ಹಲವು ಕತೆಗಳಿವೆ.
ಹೈದರಾಬಾದ್ ನಿಜಾಮನ ಕಾಲಕ್ಕೆ ಭರ್ಜರಿ ವಯಸ್ಸಿನಲ್ಲಿದ್ದ ನಮ್ಮ ತಾತ ಆ ಕುರಿತು ಯಾವಾಗಲೂ ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಳ್ಳುತ್ತಿದ್ದರು.
“ರಜಾಕಾರರ ಹಾವಳಿ ಹೆಚ್ಚಾದಾಗ ಅವ್ರು ಹಳ್ಳಳ್ಳಿಗೆ ಬಂದು ದರೋಡೆ,ಅತ್ಯಾಚಾರ ಮಾಡುತ್ತಿದ್ದರು ಮನೆ ಹೊಕ್ಕಾಗ ಮುಸ್ಲಿಂ ಎಂದರೆ ಬಿಡುತ್ತಿದ್ದರು,
ಹಿಂದುಗಳು ಅಂದರೆ ಅಲ್ಲಿ ದೌರ್ಜನ್ಯ ಭುಗಿಲೇಳುತ್ತಿತ್ತು.
ಹಾಗೆ ಹೊಕ್ಕ ಮನೆಯೊಳಗಿನವರು ಹಿಂದುಗಳೋ? ಮುಸ್ಲಿಮರೊ ಎಂಬುದನ್ನ ಪತ್ತೆಹಚ್ಚುವ ಸುಲಭ ಸಾಧನವಾಗಿ ಉಡದಾರ ಕೆಲಸ ಮಾಡುತ್ತಿತ್ತು!
ಕೆಲವರು ಅನಿವಾರ್ಯವಾಗಿ ಉಡದಾರ ಬಿಚ್ಚಿಟ್ಟು ಬಚಾವಾಗುತ್ತಿದ್ದರು!
ಒಮ್ಮೆ ನಿಜಾಮನ ಆಡಳಿತ ಮುಗಿದು ಭಾರತ ಸ್ವತಂತ್ರವಾದ ಸುದ್ದಿ ತಿಳಿಯಿತು ನೋಡಿ ಹಿಂದುಗಳು ರಜಾಕಾರರ , ಮುಸ್ಲಿಮರ ಮನೆಗಳಿಗೆ ಪ್ರತಿದಾಳಿ ಮಾಡಿ ದಾಂಗುಡಿ ಇಡತೊಡಗಿದರು ಆ ಸಂಧರ್ಭದಲ್ಲಿ ಹಲವು ಹಿಂದುಗಳು ಮುಸ್ಲಿಂರನ್ನ ತಮ್ಮ ಮನೆಯೊಳಗೆ ಕರೆದುಕೊಂಡು ಅವರಿಗೆ ಉಡದಾರ ಕಟ್ಟಿ ಜೀವ ಉಳಿಸಿದರು” ಅಂತ ನಮ್ಮ ತಾತ ಸುದೀರ್ಘವಾದ ಇತಿಹಾಸವನ್ನೇ ಹೇಳುತ್ತಿದ್ದ.
ಶಾಂತರಸರ ಬಡೇಸಾಬು ಪುರಾಣದ ಕತೆ ಓದಿದಾಗ ನನಗದು ಪೂರಾ ಮನವರಿಕೆಯೂ ಆಯಿತೆನ್ನಿ.
ಅದ್ಯಾಕೆ ಮುಸ್ಲಿಂರು ಉಡದಾರ ಧರಿಸುವುವದಿಲ್ಲವೊ ನಾ ಕಾಣೆ.
ಬಹುಷಃ ಅರಬ್ಬರ ಉಡುಗೆ-ತೊಡುಗೆಗಳ ರೀತಿಗೆ ಉಡದಾರದ ಅವಶ್ಯಕತೆ ಬಿದ್ದಂತಿಲ್ಲ. ಪಾಯಿಜಾಮಕ್ಕಿರುವ ಲಾಡಿ ಎಂಬೊ ದಾರದ ಎಳೆ ಆ ಪಾತ್ರವನ್ನ ಯಶಸ್ವಿಯಾಗಿ ನಿಭಾಸುವದರಿಂದ ಉಡದಾರದ ಪ್ರಶ್ನೆ ಬಾರದಿರಬಹುದು.
ಆಡಂಬರದ ವಸ್ತುಗಳನ್ನು ಕೊಳ್ಳುವಷ್ಟು ಆರ್ಥಿಕ ಚೈತನ್ಯ ಇಲ್ಲದಿರುವದೂ ಕೂಡ ಅವರು ಉಡದಾರದಿಂದ ವಿಮುಖರಾಗಲೂ ಕಾರಣವಾಗಿರಬಹುದು ಎಂಬುದು ನಾನು ಕಂಡುಕೊಂಡಂತಹ ವಿಚಾರಗಳಷ್ಟೆ, ಅವುಗಳಿಗೆ ಅಂತಹ ಆಧಾರಗಳೇನಿಲ್ಲ.

ಅಚ್ಚರಿ ಹೇಗಿದೆ ನೋಡಿ ಈಗ ಮಗನೂ ಉಡದಾರವೆಂದರೆ ಮಾರು ದೂರ ಓಡುತ್ತಾನೆ.
ಆತನ ನಡುವಿಗೂ ದಾರ ನಿಲ್ಲುವದು ಅನುಮಾನ.
ಆದರೆ ಆತನ ಸಂಗ್ರಹದಲ್ಲಿ ಆಗಲೇ ಎರಡು ಬೆಳ್ಳಿಯ ಉಡದಾರಗಳಿವೆ!
ಮದುವೆ, ಮುಂಜಿ ಮುಂತಾದ ಸಮಾರಂಭಗಳಿಗೆ ಹೊರಟಾಗ ಅವನ ಅವ್ವ ಹೆಚ್ಚು ಮುದ್ದಿನಿಂದಲೇ ಬೆಳ್ಳಿಯ ಉಡುದಾರ ಹಾಕುತ್ತಾಳೆ.
“ಪ್ಯಾಂಟಿನೊಳಗ ಚುಚ್ಚಿದಂಗಾತದ” ಅನ್ನುತ್ತಲೇ ಅಭಿಮಾನದಿಂದ ಧರಿಸುತ್ತಾನೆ.
ಕಾರ್ಯಕ್ರಮ ಮುಗಿದ ಮರುಕ್ಷಣ ಬಿಚ್ಚಿ ಒಗೆಯುವನು.
ಆವಾಗೆಲ್ಲ ನನಗೆ ನನ್ನ ಅವ್ವ ನೆನಪಾಗುತ್ತಾಳೆ ಆಕೆ ಕೊಡಿಸುತ್ತಿದ್ದ ತರಾವರಿ ಉಡದಾರಗಳು ಕಣ್ಣಮುಂದೆ ಬರುತ್ತವೆ.ಆಕೆ ಅವುಗಳನ್ನ ಆಯುವಾಗ ಆಕೆಯ ಕಣ್ಣಲಿ ಇರುತ್ತಿದ್ದ ಕಾಳಜಿ ಎದೆ ತುಂಬಿಕೊಳ್ಳುತ್ತದೆ.
ಬಹುಷಃ ಈ ಭಾವ ಬೆಳ್ಳಿ ಉಡದಾರ ಧರಿಸುವ ನನ್ನ ಮಗನ ಎದೆಯಲಿ ಮೂಡದೇನೊ?
ಚೂರು ದೊಡ್ಡವನಾಗಲಿ ಕೇಳಿದರಾಯಿತು ಅಂದುಕೊಳ್ಳುತ್ತೇನೆ..

ಶರಣಬಸವ ಕೆ.ಗುಡದಿನ್ನಿ

 

One thought on “ಉಡದಾರವೆಂಬ ‘ನಡು’ವಿನ ದಾರದ ಪುರಾಣ-ಶರಣಬಸವ ಕೆ.ಗುಡದಿನ್ನಿ

Comments are closed.