“ಎ ದೋಸ್ತ…ಪಿಕ್ಚರ್ ಅಭೀ ಬಾಕಿ ಹೇ”-ದೀಪಕ್ ಶಿಂಧೆ

ಸಾಧನೆಗೆ ಸಾಕು ಈ ನಾಲ್ಕು ಸಾಲು…

“ಎ ದೋಸ್ತ…ಪಿಕ್ಚರ್ ಅಭೀ ಬಾಕಿ ಹೇ”
ಲೇಖಕ: ದೀಪಕ್ ಶಿಂಧೆ, ಅಥಣಿ.

ಅಯ್ಯೋ ನಮಗೆ ಗೊತ್ತಿತ್ತು ಇದು ಹಿಂಗೇ ಆಗುತ್ತೆ, ಒಂದಲ್ಲ ಒಂದಿನಾ ಇದೆಲ್ಲ ಮುಗಿದು ಹೋಗುತ್ತೆ, ಅವತ್ತು ನಾನು ಎಷ್ಟು ಹೇಳಿದ್ರೂ ಕೇಳಿಲ್ಲ. ಈಗ ಅನುಭವಿಸಲಿ ಬಿಡಿ….ಯಸ್! ಇಂತಹದ್ದೊಂದು ಮಾತು ಎಲ್ಲರ ಬದುಕಿನಲ್ಲೂ ಒಂದಲ್ಲ ಒಂದು ದಿನ ಒಂದಲ್ಲ ಒಂದು ಸಾರಿ ಬಂದೇ ಬಂದಿರುತ್ತದೆ. ಸರಿಯಾಗಿ ನಾವು ನಮ್ಮತನವನ್ನ ಕಳೆದುಕೊಳ್ಳುತ್ತಿರುವ ಕೊನೆಯ ಕಾಲಘಟ್ಟದಲ್ಲಿ, ನಮ್ಮವರು ಅಂತ ಇನ್ನು ಯಾರೂ ಇಲ್ಲ ಅಂತ ಅನ್ನಿಸುವ ಸಮಯದಲ್ಲಿ ಅಥವಾ ನಮ್ಮದೇ ಬದುಕಿನ ಬಗ್ಗೆ ನಮಗೆ ಜಿಗುಪ್ಸೆ ಹುಟ್ಟಿಸುವ ರೀತಿ ಸಮಯ ಮತ್ತು ಸಂದರ್ಭಗಳು ಎದುರಾದ ಕ್ಷಣದಲ್ಲಿ ಹೀಗೆ ಆಡಿಕೊಳ್ಳುವದು ಖಾಸಾ ಖಾಸಾ ನಮ್ಮ ಸ್ನೇಹಿತರೋ, ಬಂಧುಗಳೋ ಅಥವಾ ಅಣ್ಣತಮ್ಮಂದಿರೇ ಆಗಿರುತ್ತಾರೆ. ಒನ್ಸ್ ಅಗೇನ್, ಆಳಕ್ಕೆ ಬಿದ್ದ ಆನೆಗೆ ಆಳಿಗೊಂದು ಕಲ್ಲು ಅನ್ನುವ ಹಾಗೆ. ಇದು ಯಾವದು ಇಲ್ಲವಾದರೆ ಕೇವಲ ತಮ್ಮ ಬಾಯಿ ಚಪಲಕ್ಕಾಗಿ, ಸಮಯ ಕಳೆಯುವದಕ್ಕಾಗಿಯೋ ಆಡಿಕೊಳ್ಳುವ ಜನರಿಗೆನೂ ನಮ್ಮ ದೇಶದಲ್ಲಿ ಕಡಿಮೆ ಅಂತೂ ಖಂಡಿತ ಇಲ್ಲ.
ಆದರೆ ಎಲ್ಲ ಮುಗಿದೇ ಹೋಯಿತಾ?? ಹಣ ಮತ್ತು ಅಧಿಕಾರಗಳು ಜೊತೆಗಿದ್ದಾಗಲೋ ನಮ್ಮಿಂದ ಯಾವದೋ ಕೆಲಸ ಆಗಬೇಕಾಗಿದ್ದಾಗಲೋ ಅಥವಾ ನಮ್ಮ ಅವಶ್ಯಕತೆ ಅವರಿಗೆ ಇದ್ದಾಗಲೋ ಜೊತೆಗೆ ಇದ್ದವರೆಲ್ಲ ಕೈ ಬಿಡುವ ಕೊನೆಯ ಕ್ಷಣದಲ್ಲಿ ಅವರ ಬಾಯಿಂದಲೂ ಖಂಡಿತ ಇಂತಹದ್ದೊಂದು ಮಾತು ಬಂದೇ ಬರುತ್ತದೆ. ಆದರೆ ನೆನಪಿನಲ್ಲಿ ಇರಬೇಕಾದ ಒಂದೇ ಒಂದು ವಿಷಯವೆಂದರೆ ಹಣವಾಗಲಿ, ಪ್ರತಿಷ್ಠೆಯಾಗಲಿ ಅಥವಾ ಅಧಿಕಾರವಾಗಲಿ ಎಲ್ಲರ ಬದುಕಿನಲ್ಲೂ ತಿರುಗುವ ಗಡಿಯಾರದಂತೆ ಕಂಡುಬರುತ್ತದೆ. ಆದರೂ ಒಂದಷ್ಟು ಧಾವಂತಕ್ಕೆ ಬೀಳುವ ಅಥವಾ ಎನೋ ಒಂದನ್ನು ಸಾಧಿಸಿಬಿಟ್ಟೆವು, ಇನ್ನು ನಮ್ಮನ್ನು ತಡೆಯುವವರೇ ಯಾರೂ ಇಲ್ಲ ಎಂದು ಭಾವಿಸುವವರಷ್ಟೇ ಇಂತಹ ಇಕ್ಕಟ್ಟಿಗೆ ಸಿಲುಕುತ್ತಾರೆ. ಒಂದು ಸಣ್ಣ ಗೆಲುವನ್ನು ದೊಡ್ಡದಾಗಿ ಸಂಭ್ರಮಿಸುವದರಿಂದಲೇ ಸಾಕಷ್ಟು ಎಡವಟ್ಟುಗಳು ಆಗಿಬಿಡುತ್ತವೆ. ವರ್ಷಗಟ್ಟಲೆ ಬೈಕು ಖರೀದಿಸುವದಕ್ಕಾಗಿ ಕೂಡಿಟ್ಟ ಹಣದಿಂದ ಕೊಂಡು ತಂದ ಬೈಕು ನಮ್ಮ ಜೊತೆಗಾತಿಯಾಗಿ ಒಂದಷ್ಟು ಸಂತಸದ ಸಂಗತಿಯಾಗಿ ಮುಂದುವರೆಯಬೇಕಷ್ಟೇ ಹೊರತು ಐವತ್ತರಲ್ಲಿ ಓಡಬೇಕಾದ ಬೈಕು ಎಂಬತ್ತು-ನೂರರ ಸ್ಪೀಡಿನಲ್ಲಿ ಚಲಿಸುವಾಗ ಕಂಟ್ರೋಲ್ ತಪ್ಪಿ ಅಪಘಾತವಾಗಬಾರದು ಅನ್ನುವ ಕಾಮನ್ ಸೆನ್ಸ್ ನಮ್ಮೊಂದಿಗೆ ಇರಲೇಬೇಕು. ಗೆದ್ದಾಗ ಕೊಬ್ಬುವದು ಸೋತಾಗ ಕೊರಗುವದು ಎರಡನ್ನೂ ಮಾಡದೆ ಮುಂದೇನು ಅಂತ ಯೋಚಿಸಿ ಅಡಿ ಇಡಬೇಕು ಅಷ್ಟೇ. ಕೈಗೆ ಸಿಕ್ಕ ಆಂಡ್ರಾಯ್ಡ್ ಮೊಬೈಲಿನಲ್ಲಿ ಓಡುವ ಬೆರಳುಗಳು ಯಾವುದು ಆರೋಗ್ಯಕರ ವಾತಾವರಣ ಸೃಷ್ಟಿಸುತ್ತದೆಯೋ, ಮಾನಸಿಕ ಮತ್ತು ಬೌದ್ಧಿಕ ವಿಕಸನಕ್ಕೆ ಸಹಕಾರಿ ಆಗುತ್ತದೆಯೋ ಅಂತಹ ವಿಷಯಗಳ ಸುತ್ತ ಗಿರಕಿ ಹೊಡೆಯಬೇಕೆ ಹೊರತು ಬೇರೆ ವಿಷಯಗಳ ಕಡೆಗೆ ಖಂಡಿತ ಅಲ್ಲ. ಬದುಕು ಮಾಗುತ್ತ ಹೊದಂತೆಲ್ಲ ದೇಹ ಬಾಗುತ್ತ ಹೋಗುತ್ತದೆ. ಆದರೂ ಬದುಕಿನ ಅನುಭವಗಳು ನಮ್ಮನ್ನು ಉತ್ತುಂಗಕ್ಕೆ ಏರಿಸಬೇಕು. ಎಲ್ಲೋ ಒಂದು ಕಡೆ, ಯಾವತ್ತೋ ಒಂದು ದಿನ ನಾವು ಯಾರ ಮೇಲೋ ಕೋಪಿಸಿಕೊಂಡ ಮಾತ್ರಕ್ಕೆ ಅಥವಾ ಯಾರದೋ ಕಷ್ಟಕ್ಕೆ ಕೈಚಾಚಿ ಸಹಾಯ ಮಾಡಲಿಲ್ಲ ಅನ್ನುವ ಕಾರಣಕ್ಕೆ ಮುಂದೆ ನಮಗೆ ಅವರಿಂದ ಎನೂ ಸಿಗುವದಿಲ್ಲ ಅಂದುಕೊಳ್ಳುವದಕ್ಕೂ, ಅದನ್ನೆಲ್ಲ ಮರೆತು ಈಗ ಒಂದು ಮಾತು ಕೇಳಿಬಿಡೋಣ ಅಂದುಕೊಳ್ಳುವದಕ್ಕೂ ಇರುವ ವ್ಯತ್ಯಾಸದ ಹೆಸರೇ ಅನುಭವ. ಇಂದಿನ ನಮ್ಮ ಏಕಾಂತ ನಾಳೆಯ ಸಂತನ ಸಂತೆಯಾಗಿ ರೂಪುಗೊಳ್ಳಬೇಕು.ಇಂದಿನ ನಮ್ಮ ಸೋಲು ನಾಳೆಯ ಗೆಲುವಿನ ಮೆಟ್ಟಿಲಾಗಬೇಕು. ಇಂದಿನ ಅಪಮಾನವನ್ನು ಮುಂದಿನ ಸನ್ಮಾನವಾಗಿಸಿಕೊಳ್ಳುವತ್ತ ನಮ್ಮ ಚಿತ್ತ ಹರಿಯಬೇಕು. ಹೇಗೆ ಕರೆಂಟು ಹೋದ ಕ್ಷಣದಲ್ಲಿ ಕಡ್ಡಿ ಪೆಟ್ಟಿಗೆಗಾಗಿ ಕೈಗಳು ತಡಕಾಡುತ್ತವೆಯೋ, ಝಗಮಗಿಸುವ ಬೆಳಕು ಕೊಡದಿದ್ದರೂ ಕತ್ತಲೆಯಲ್ಲಿ ಕ್ಯಾಂಡಲ್ಲಿನ ಅಗತ್ಯ ಕಂಡುಬರುತ್ತದೆಯೋ ಹಾಗೆ ಎಲ್ಲರ ಅಗತ್ಯವೂ ಒಂದಲ್ಲ ಒಂದು ದಿನ ಖಂಡಿತ ಬಂದೇ ಬರುತ್ತದೆ. ಕನ್ನಡ ಶಾಲೆಯ ಮೇಷ್ಟ್ರು ಮಾಡದ ತಪ್ಪಿಗೆ ಅಮಾನತ್ತುಗೊಂಡು ಅವಮಾನಿತರಾಗಿ ಬದುಕೇ ಮುಗಿತು ಹೋಯಿತು ಅನ್ನುವ ಕಾಲಕ್ಕೆ ಬಡ ವಿದ್ಯಾರ್ಥಿ ಒಬ್ಬ ತಾನು ಕೂಡಿಟ್ಟ ಚಿಲ್ಲರೆ ಕಾಸಿನಲ್ಲಿ ಬ್ಲಾಕ್ ಬೋರ್ಡ ಕೊಡಿಸಿ ಟ್ಯೂಷನ್ ಹೇಳಿ ಮೇಸ್ಟ್ರೇ ನಾವ್ ಬರ್ತೀವಿ ಅಂತ ದೈರ್ಯ ತುಂಬಬಲ್ಲ ಅನ್ನುವದಾದರೆ ತನ್ನ ಮೇಲಿನ ಅಪವಾದ ತೊಲಗಿಸಲು ಆ ಮೇಷ್ಟ್ರು ಖಾಸಗಿ ಶಾಲೆ ತೆರದು ಉಚಿತ ಶಿಕ್ಷಣ ಕೊಡುವಷ್ಟರ ಮಟ್ಟಿಗೆ ತನ್ನ ಚಾಣಾಕ್ಷತನ ಮೆರೆಯುವದನ್ನು ಕಾಲವಷ್ಟೇ ನಿರ್ಧರಿಸಬಲ್ಲದು. ನಾನು ಸೋತೆ ಅಂದು ಕೊಂಡರೆ ಖಂಡಿತ ಸೋಲುಗಳ ಸರಮಾಲೆ ಅನುಭವಿಸುತ್ತೇವೆ. ಆದರೆ ಯಾಕೆ ಸೋತೆ ಅನ್ನುವದನ್ನು ತಿದ್ದಿಕೊಂಡರೆ ಗೆಲುವಿನ ಶಿಖರವನ್ನು ಖಂಡಿತ ಏರುತ್ತೇವೆ. ಸಣ್ಣ ಮೀನು ಕೂಡ ಪ್ರವಾಹದ ವಿರುದ್ದವೇ ಈಜಿ ದಡ ಸೇರುತ್ತದೆಯೇ ಹೊರತು ಹರಿಯುವ ನೀರಿನ ಜೊತೆಗೆ ಎಲ್ಲೋ ತೇಲಿ ಹೋಗುವದಿಲ್ಲ. ಬೆನ್ನ ಹಿಂದೆ ಆಡಿಕೊಳ್ಳುವವರು ನೋಡುತ್ತ ನಿಲ್ಲುವ ಹಾಗೆ, ಸೋಲಿಸಲು ಪ್ರಯತ್ನಿಸುವವರು ಸೋತು ಹೋಗುವ ಹಾಗೆ, ನಮ್ಮ ಪ್ರಯತ್ನಗಳು ನಿರಂತರವಾಗಿರಲಿ. ಎಲ್ಲಾ ಮುಗಿಯಿತು ಅನ್ನುವಾಗಲೇ ಮತ್ತೊಂದು ಪ್ರಯತ್ನವನ್ನ ಆರಂಭಿಸಿಬಿಡೋಣ. ನೆನಪಿರಲಿ, ಬದುಕು ಅಂದರೆನೆ ಏರಿಳಿತಗಳನ್ನು ಕಾಣುವುದು, ಜೀವನ ಅಂದರೆನೆ ಕಷ್ಟ ಸುಖಗಳನ್ನು ಅನುಭವಿಸುವದು. ಹಾಡು ಅಂದರೆ ಒಲಿದಂತೆ ಹಾಡುವದೆ ಹೊರತು ಸುಮ್ಮನಿರುವದು ಖಂಡಿತ ಅಲ್ಲ. ಊರಿನ ಗಲ್ಲಿಗಳಲ್ಲಿ ತಿರುಗಿ ವ್ಯಾನಿಟಿ ಬ್ಯಾಗು ಮಾರಿದ ಹುಡುಗನೊಬ್ಬ ತನ್ನದೆ ಆದ ಎರಡುಮೂರು ಗಾರ್ಮೆಂಟ್ಸ್ ಆರಂಭಿಸುವಷ್ಟು ಬೆಳೆಯಬಲ್ಲ. ಫುಟ್ ಪಾತಿನ ಯಾವುದೋ ಮೂಲೆಯಲ್ಲಿ ತಳ್ಳುವ ಗಾಡಿಯಲ್ಲಿ ಇಡ್ಲಿ ಸಾಂಬಾರ್ ಮಾರಿದ ವ್ಯಕ್ತಿಯೊಬ್ಬ ಫೈವ್ ಸ್ಟಾರ್ ಹೋಟೆಲ್ ಆರಂಭಿಸಬಲ್ಲ. ಎಲ್ಲದಕ್ಕೂ ಕಾಲ ಕೂಡಿ ಬರುತ್ತದೆ. ಆದರೆ ಪರಿಶ್ರಮ ನಮ್ಮದಾಗಿರಬೇಕೆ ಹೊರತು ಆಡಿಕೊಳ್ಳುವವರ ಮತ್ತು ಕಾಲೆಳೆಯುವವರ ಬಗ್ಗೆ ಯೋಚಿಸುತ್ತ, ಅಂತಹವರಿಗೆ ಪ್ರತಿಕ್ರಿಯಿಸುತ್ತ ಕುಳಿತರೆ ನಾವೂ ಅವರೊಂದಿಗೆ ಇದ್ದಲ್ಲೆ ಇದ್ದು ಬಿಡುತ್ತೇವೆ ಅಲ್ಲವಾ??

ದೀಪಕ್ ಶಿಂಧೆ, ಪತ್ರಕರ್ತ
ನಿಂಬಾಳಕರ ಪ್ಲಾಟ್,
ಶಾಂತಿ ನಗರ, ಅಥಣಿ-591304
ಜಿಲ್ಲಾ: ಬೆಳಗಾವಿ
ಮೊಬೈಲ್: 9482766018